• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು ದಸರಾ ಆಚರಣೆಗೆ ಈ ಬಾರಿ ವಿರೋಧ ಏಕೆ?

|

ಮೈಸೂರು, ಅಕ್ಟೋಬರ್ 9: ಐತಿಹಾಸಿಕ ಮೈಸೂರು ದಸರಾವನ್ನು ಸರ್ಕಾರ ಸರಳ ಮತ್ತು ಸಾಂಪ್ರದಾಯಿಕವಾಗಿ ಆಚರಿಸುವುದಾಗಿ ಹೇಳುತ್ತಾ, ಇದೀಗ ನಗರದಾದ್ಯಂತ ವಿದ್ಯುದ್ದೀಪಗಳ ಅಲಂಕಾರ ಮಾಡುತ್ತಿರುವುದು ಹಲವು ಸಂಘಟನೆಗಳ, ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ. ಇದುವರೆಗೆ ಸಡಗರ, ಸಂಭ್ರಮದಲ್ಲಿ ನಡೆಯುತ್ತಿದ್ದ ದಸರಾ ಈ ಬಾರಿ ಗೊಂದಲದ ಗೂಡಾಗಿರುವುದು ಎದ್ದು ಕಾಣುತ್ತಿದೆ.

ದಸರಾ ವಿಚಾರದಲ್ಲಿ ಸರ್ಕಾರ ತೆಗೆದುಕೊಳ್ಳುತ್ತಿರುವ ನಿಲುವುಗಳು ಕೂಡ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಸುಮಾರು ಹತ್ತು ಹದಿನೈದು ಕೋಟಿ ರೂಪಾಯಿ ವೆಚ್ಚದಲ್ಲಿ ದಸರಾ ಆಚರಣೆ ಮಾಡಲು ಸರ್ಕಾರ ಮುಂದಾಗಿದ್ದು, ಇಷ್ಟೊಂದು ಹಣ ಏಕೆ ಖರ್ಚು ಮಾಡಬೇಕು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಮುಂದೆ ಓದಿ...

 ಮೈಸೂರಿನಲ್ಲಿ ಆರ್ಭಟಿಸುತ್ತಿರುವ ಕೊರೊನಾ ಸೋಂಕು

ಮೈಸೂರಿನಲ್ಲಿ ಆರ್ಭಟಿಸುತ್ತಿರುವ ಕೊರೊನಾ ಸೋಂಕು

ಪ್ರತಿದಿನವೂ ಮೈಸೂರಿನಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಲಿದ್ದು ರಾಜ್ಯದಲ್ಲಿ ಬೆಂಗಳೂರು ಬಿಟ್ಟರೆ ಎರಡನೇ ಸ್ಥಾನ ಮೈಸೂರಿಗೆ ಸಲ್ಲುತ್ತದೆ. ಹೀಗಿರುವಾಗ ದಸರಾ ಆಚರಣೆ ಮಾಡಿದರೆ ಜನ ಗುಂಪು ಸೇರಿ ಸೋಂಕು ಉಲ್ಭಣಗೊಳ್ಳುವುದಿಲ್ಲವೆ? ಅರಮನೆ ಆವರಣದಲ್ಲಿ ಎರಡು ಸಾವಿರ ಜನರ ಸಮ್ಮುಖದಲ್ಲಿ ಜಂಬೂಸವಾರಿ ನಡೆಸುವುದಾಗಿ ಸರ್ಕಾರ ಹೇಳಿದ್ದು, ಒಂದು ವೇಳೆ ಇದೇ ರೀತಿ ನಡೆದರೂ ಸಾಮಾಜಿಕ ಅಂತರ ಕಾಪಾಡಿಕೊಂಡು ದಸರಾ ನಡೆಸಲು ಸಾಧ್ಯವೇ? ಒಂದು ವೇಳೆ ಕೊರೊನಾ ಸೋಂಕಿತರು ಬಂದರೆ, ಅದು ಸಮುದಾಯಕ್ಕೆ ಹರಡುವುದಿಲ್ಲವೆ? ಎಂಬಿತ್ಯಾದಿ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

"ಸರಳ ದಸರಾ ಆಚರಣೆಗೆ ಇಷ್ಟೊಂದು ಖರ್ಚು, ವೆಚ್ಚವೇಕೆ?"

 ಇಡೀ ನಗರಕ್ಕೆ ದೀಪಾಲಂಕಾರದ ಮೆರುಗು

ಇಡೀ ನಗರಕ್ಕೆ ದೀಪಾಲಂಕಾರದ ಮೆರುಗು

ಸರಳ ದಸರಾ ಎಂಬ ಘೋಷಣೆ ಮಾಡುತ್ತಾ ಇಡೀ ನಗರಕ್ಕೆ ವಿದ್ಯುದ್ದೀಪಗಳ ಅಲಂಕಾರ ಮಾಡಲು ಹೊರಟಿದೆ. ಇದನ್ನು ಖಂಡಿಸುತ್ತಿರುವ ಪ್ರಜ್ಞಾವಂತರು ನೀವು ನಗರಕ್ಕೆ ವಿದ್ಯುದ್ದೀಪ ಅಲಂಕಾರ ಮಾಡಿ ಯಾರೂ ಮನೆಯಿಂದ ಹೊರಬರಬೇಡಿ ಎಂದು ಕಟ್ಟಿ ಹಾಕಲು ಸಾಧ್ಯವೇ? ಜನ ರಾತ್ರಿಯಾಗುತ್ತಿದ್ದಂತೆಯೇ ವಿದ್ಯುದ್ದೀಪಗಳ ಅಲಂಕಾರವನ್ನು ನೋಡಲು ನೂಕು ನುಗ್ಗಲಿನಲ್ಲಿ ನಗರಕ್ಕೆ ಬಂದರೆ ನಿಯಂತ್ರಿಸುವುದು ಹೇಗೆ? ಇದು ಸೋಂಕು ಹರಡಲು ರಹದಾರಿ ಮಾಡಿಕೊಟ್ಟಂತಾಗುವುದಿಲ್ಲವೆ?ಎಂದು ಪ್ರಶ್ನಿಸುತ್ತಿದ್ದಾರೆ.

 ನಗರಕ್ಕೆ ದೀಪ ಅಳವಡಿಸಿದರೆ ಕಷ್ಟ

ನಗರಕ್ಕೆ ದೀಪ ಅಳವಡಿಸಿದರೆ ಕಷ್ಟ

ಈಗಾಗಲೇ ಈ ಕುರಿತಂತೆ ಹಲವು ಮುಖಂಡರು ತಮ್ಮ ಪ್ರತಿಕ್ರಿಯೆ ನೀಡಿದ್ದು, ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ಹೇಳುವುದೇನೆಂದರೆ ಜನಧ್ವನಿಯನ್ನು ಧಿಕ್ಕರಿಸಿ ದಸರಾ ಮಾಡಿದರೆ ಅಪಾಯವಾಗಲಿದ್ದು, ವಿಶ್ವವಿಖ್ಯಾತ ದಸರಾಕ್ಕೆ ಕಳಂಕ ಜೊತೆಗೆ ಮೈಸೂರಿಗೆ ಕಳಂಕ ಬರುವ ಸಾಧ್ಯತೆ ಹೆಚ್ಚಾಗಿದೆ. ಸಂಪ್ರದಾಯದಂತೆ ದಸರಾ ಮಾಡಲೇಬೇಕು. ಅದರಂತೆ ತಾಯಿ ಚಾಮುಂಡೇಶ್ವರಿಗೆ ಪೂಜೆಯೂ ನಡೆಯಲಿ. ಆದರೆ ನಗರಕ್ಕೆ ದೀಪ ಅಳವಡಿಸಿದರೆ ಕಷ್ಟ ಆಗುತ್ತದೆ. ಜನ ಮನೆಯಿಂದ ಆಚೆ ಬರುತ್ತಾರೆ ಇದರಿಂದ ಅಪಾಯವೇ ಹೆಚ್ಚು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಳಕಲಿ ಝಗಮಗಿಸುವ ಮೈಸೂರು ಅರಮನೆಯ ಚೆಂದದ ಚಿತ್ರಗಳು

ಶಾಸಕ ತನ್ವೀರ್ ಸೇಠ್ ಅವರು ಚಾಮುಂಡಿ ಬೆಟ್ಟ, ಅರಮನೆಯಲ್ಲಿ ಮಾತ್ರ ಕಾರ್ಯಕ್ರಮ ಮಾಡಿ ಅಂತ ಸಲಹೆ ಕೊಟ್ಟಿದ್ದೆ. ಆದರೆ ಊರ ತುಂಬೆಲ್ಲ ದೀಪಾಲಂಕಾರ ಮಾಡಿಕೊಂಡಿದ್ದಾರೆ. ಅದೆಲ್ಲವೂ ಬೇಕಿರಲಿಲ್ಲ. ದಸರಾ ತಾಯಿ ಚಾಮುಂಡೇಶ್ವರಿಯ ಹಬ್ಬ. ದಸರಾ ಅದ್ಧೂರಿಯಾಗಿ ಆಗಬೇಕೆಂಬುದು ಸರಿ. ಆದರೆ ಈ ವರ್ಷ ಜನ ಸೇರಿಸಿದರೆ ಸಮಸ್ಯೆ ಆಗುತ್ತೆ. ಆದ್ದರಿಂದ ಅತ್ಯಂತ ಸರಳವಾಗಿ ಆಚರಣೆ ಮಾಡಿ ಜನ ಸೇರುವುದಕ್ಕೆ ಅವಕಾಶ ನೀಡಬೇಡಿ ಎಂದಿದ್ದಾರೆ.

 ಕೇಸ್ ದಾಖಲಿಸುವ ಎಚ್ಚರಿಕೆ

ಕೇಸ್ ದಾಖಲಿಸುವ ಎಚ್ಚರಿಕೆ

ದಸರಾ ಆಚರಣೆಯಿಂದ ಅನಾಹುತ ಉಂಟಾದರೆ ಸರ್ಕಾರದ ಮೇಲೆ ನ್ಯಾಯಾಲಯದಲ್ಲಿ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿರುವ ಮೈಸೂರು ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷೆ ಭಾನುಮೋಹನ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ನಾಡಹಬ್ಬ ದಸರಾ ಅರಮನೆಯವರಿಗೆ ಸೀಮಿತವಾಗಿರಲಿ. ಇದರಲ್ಲಿ ಸರ್ಕಾರ ಮೂಗು ತೂರಿಸುವುದು ಸರಿಯಲ್ಲ. ದಸರಾ ಆಚರಣೆಯಿಂದ ಅನಾಹುತ ಉಂಟಾದರೆ ನೀವೇ ಹೊಣೆ ಹೊರಬೇಕಾಗುತ್ತದೆ. ಮೈಸೂರಿನಲ್ಲಿ ದಿನೇ ದಿನೇ ಕೊರೋನಾ ರಣಕೇಕೆ ಹಾಕುತ್ತಿದೆ. ಸುಮಾರು ಎಂಟು ಸಾವಿರದ ಆಸುಪಾಸಿನಲ್ಲಿ ಕೊರೊನಾ ಸಕ್ರಿಯ ಪ್ರಕರಣವಿದೆ. ಹೀಗಿರುವಾಗ ನಾಡಹಬ್ಬ ದಸರಾವನ್ನು ಅರಮನೆಯವರೇ ಸಾಂಪ್ರದಾಯಿಕವಾಗಿ ಆಚರಿಸಿಕೊಳ್ಳಲಿ. ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಜನ ಸೇರಿಸಿ ದಸರಾ ಆಚರಣೆ ಮಾಡುವುದು ಸೂಕ್ತವಲ್ಲ ಎಂಬುದನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತಂದಿದ್ದಾರೆ.

ಈಗಾಗಲೇ ಕೆಲವು ಸಂಘಟನೆಗಳು ಸರ್ಕಾರದ ನಡೆಯನ್ನು ವಿರೋಧಿಸಿ ಬೀದಿಗಿಳಿದು ಪ್ರತಿಭಟನೆಯನ್ನು ಕೂಡ ನಡೆಸಿದ್ದಾರೆ. ಇದೆಲ್ಲವನ್ನು ಗಮನಿಸುತ್ತಿದ್ದರೆ ಈ ಬಾರಿಯ ಮೈಸೂರು ದಸರಾ ಬರೀ ಗೊಂದಲದಲ್ಲಿಯೇ ಮುಗಿಯುತ್ತದೆಯೇ ಎಂಬ ಪ್ರಶ್ನೆಗಳು ಮೂಡುತ್ತಿವೆ.

English summary
The government has decided to celebrate mysuru Dasara in a simple way this time. But it has now led to the outrage of many organizations and leaders for decorating the city with lights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X