ಮೈಸೂರಿನಲ್ಲಿ ಪಟಾಕಿ ಮಾರಾಟಕ್ಕೆ ಆರು ದಿನ ಮಾತ್ರ ಅವಕಾಶ: ಇಲ್ಲಿದೆ ಹೆಚ್ಚಿನ ವಿವರ
ಮೈಸೂರು, ಅಕ್ಟೋಬರ್ 31: ಮೊದಲೆಲ್ಲ ದೀಪಾವಳಿ ಎಂದರೆ ಪಟಾಕಿಗಳದ್ದೇ ಅಬ್ಬರ ಇರುತ್ತಿತ್ತು. ಅದರಲ್ಲೂ ಅರಮನೆ ನಗರಿ ಮೈಸೂರಿನ ಹಲವೆಡೆ ಪಟಾಕಿ ಮಾರಾಟ ನಡೆಯುವುದರೊಂದಿಗೆ ಹಬ್ಬಕ್ಕೆ ಮೆರಗು ತರುತ್ತಿತ್ತು. ಇತ್ತೀಚೆಗಿನ ವರ್ಷಗಳಲ್ಲಿ ಪಟಾಕಿ ಮೇಲೆ ಹತ್ತು ಹಲವು ನಿರ್ಬಂಧಗಳನ್ನು ತರಲಾಗಿದ್ದು, ಇದೀಗ ರಾಸಾಯನಿಕ ಮುಕ್ತ ಹಸಿರು ಪಟಾಕಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಪಟಾಕಿಯನ್ನು ನಿಷೇಧಿಸಬೇಕೆನ್ನುವ ಕೂಗಿನ ನಡುವೆಯೂ ಹಬ್ಬಾಚರಣೆ ನಡೆಯುತ್ತಿದೆ. ಮೊದಲಿಗೆ ಹೋಲಿಸಿದರೆ ಹಂತಹಂತವಾಗಿ ಪಟಾಕಿಯಿಂದ ಜನ ದೂರ ಸರಿಯುತ್ತಿದ್ದಾರೆ.
ಇದೀಗ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಪ್ರಯುಕ್ತ ಮೈಸೂರಿನಲ್ಲಿ ಪಟಾಕಿ ಮಾರಾಟ ಶುರುವಾಗಿದ್ದು, ಮಾರಾಟ, ಬಳಕೆಗೆ ಹಸಿರು ಪಟಾಕಿಯನ್ನು ಕಡ್ಡಾಯಗೊಳಿಸಲಾಗಿದೆ. 6 ದಿನ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಸಾಯನಿಕ ಪಟಾಕಿ ಮಾರಾಟ ಹಾಗೂ ಬಳಕೆ ನಿಷಿದ್ಧ.

ಹಸಿರು ಪಟಾಕಿ ಹೊರತಾಗಿ ಬೇರೆ ಹಾನಿಕಾರಕ ಪಟಾಕಿಗಳನ್ನು ಮಾರಾಟ ಮಾಡುವಂತಿಲ್ಲ. ಹಾಗೆ ಮಾರಾಟ ಮಾಡುತ್ತಿದ್ದರೆ ಅಥವಾ ಸೂಕ್ತವಲ್ಲದ ಸ್ಥಳದಲ್ಲಿ ನಿಯಮ ಬಾಹಿರವಾಗಿ ದಾಸ್ತಾನು ಮಾಡಿದ್ದರೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲೂ ಕಟ್ಟುನಿಟ್ಟಿನ ಕ್ರಮ ವಹಿಸಿರುವುದು ಕಂಡು ಬರುತ್ತಿದೆ.
ಸಾರ್ವಜನಿಕರು ಸಹ ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಹಚ್ಚಬಹುದು. ರಾತ್ರಿ 10 ಗಂಟೆ ಮೇಲೆ ಪಟಾಕಿ ಮಾರಾಟ ಹಾಗೂ ಬಳಕೆ ನಿರ್ಬಂಧಿಸಲಾಗಿದೆ. ಈ ನಡುವೆಯೇ ಬೆಳಕಿನ ಹಬ್ಬ ದೀಪಾವಳಿಗೆ ಹಸಿರು ಪಟಾಕಿ ಮಾರಾಟಕ್ಕೆ ಮಳಿಗೆಗಳು ಸಿದ್ಧಗೊಂಡಿದ್ದು, ವಿವಿಧ ಇಲಾಖೆಗಳಿಂದ ಅನುಮತಿ ಪಡೆದು ಪಟಾಕಿ ಮಾರಾಟಗಾರರು ವಿವಿಧ ಬಗೆಯ ಪಟಾಕಿ ಮಾರಾಟಕ್ಕೆ ಮುಂದಾಗಿದ್ದಾರೆ. ಈಗಾಗಲೇ ಸಾರ್ವಜನಿಕರು ತಮಗೆ ಬೇಕಾದ ಪಟಾಕಿ ಖರೀದಿಸುತ್ತಿದ್ದಾರೆ.

ಪ್ರತಿ ವರ್ಷದಂತೆ ಈ ಸಲವೂ ಮೈಸೂರು ಮಹಾನಗರ ಪಾಲಿಕೆ, ಪೊಲೀಸ್, ಅಗ್ನಿಶಾಮಕ, ಸೆಸ್ಕ್ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪಡೆದು, ಕೆಲ ನಿಬಂಧನೆಯೊಂದಿಗೆ ಮಳಿಗೆಗಳನ್ನು ಪಟಾಕಿ ಮಾರಾಟಗಾರರು ಸಜ್ಜುಗೊಳಿಸಿಕೊಂಡಿದ್ದಾರೆ.
ಪಟಾಕಿ ಮಾರಾಟ ಮಾರಾಟಕ್ಕೆ ಅನುಕೂಲವಾಗುವಂತೆ ನಗರದ ಜೆ.ಕೆ.ಮೈದಾನದಲ್ಲಿ 15, ಜೆಎಲ್‌ಬಿ ರಸ್ತೆಯಲ್ಲಿ 16, ಲಲಿತಮಹಲ್ ರಸ್ತೆಯಲ್ಲಿ 3, ಭೂತಾಳೆ ಪಿಚ್‌ನಲ್ಲಿ 1, ಕುವೆಂಪುನಗರದಲ್ಲಿ, ಹೆಬ್ಬಾಳು ಕೈಗಾರಿಕಾ ಬಡಾವಣೆಯಲ್ಲಿ ಸೇರಿದಂತೆ ನಗರದ ವಿವಿಧೆಡೆ ಮಳಿಗೆ ತೆರೆಯಲಾಗಿದೆ. ಅನುಮತಿ ಪಡೆದಿರುವ ವ್ಯಾಪಾರಸ್ಥರು ಇವುಗಳ ಮಾರಾಟಕ್ಕೆ ತಯಾರಿ ಮಾಡಿಕೊಂಡಿದ್ದಾರೆ.
ಪ್ಲಾಸ್ಟಿಕ್ ಬಳಕೆಯನ್ನೂ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಪಟಾಕಿ ಮಳಿಗೆಗೆ ಗಾಳಿ, ಬೆಳಕು ಉತ್ತಮವಾಗಿರಬೇಕು. ಅಗ್ನಿ ನಂದಿಸಲು 400 ಲೀಟರ್ ಸಾಮರ್ಥ್ಯದ ಎರಡು ಡ್ರಮ್‌ಗಳಲ್ಲಿ ನೀರನ್ನು ಸಂಗ್ರಹಿಸಿಟ್ಟು ಕೊಂಡಿರಬೇಕು. ವಾಟರ್ ಪ್ರೆಷರ್‌ಗಳನ್ನು ಕಡ್ಡಾಯವಾಗಿಟ್ಟುಕೊಂಡಿರಲು ಸೂಚನೆ ನೀಡಲಾಗಿದೆ.
ಈ ಬಾರಿ ಪಟಾಕಿ ಮಾರಾಟಕ್ಕೆ 6 ದಿನ ಮಾತ್ರ ಅವಕಾಶ ನೀಡಲಾಗಿದೆ. ಅ.28ರಿಂದ ನ.2ರವರೆಗೆ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ರಸ್ತೆ ಬದಿ ತೆರೆದಿರುವ ತಾತ್ಕಾಲಿಕ ತಗಡಿನ ಅಂಗಡಿ ನಿರ್ಮಾಣವಾಗಿವೆ. ಈಗಾಗಲೇ ಪಟಾಕಿ ಮಾರಾಟ ಆರಂಭವಾಗಿದ್ದು, ಸಾರ್ವಜನಿಕರು ಖರೀದಿ ಮಾಡುತ್ತಿದ್ದಾರೆ. ಪ್ರತಿ ಮಳಿಗೆಯೂ 10*10 ಅಡಿ ವಿಸ್ತೀರ್ಣ ಮೀರದಂತೆ, ಎತ್ತರ 3 ಮೀಟರ್‌ಗಿಂತ ಇರದಂತೆ ಹಾಗೂ ಮಳಿಗೆಯಿಂದ ಮಳಿಗೆಗೆ 6 ಮೀಟರ್ ಅಂತರವಿರುವAತೆ ನಿರ್ದೇಶಿಸಲಾಗಿದೆ.
ಪಟಾಕಿ ಶೆಡ್‌ನಲ್ಲಿ ಅಡುಗೆ, ಧೂಮಪಾನ ಮಾಡುವುದು, ಮಲಗುವುದನ್ನು ನಿರ್ಬಂಧಿಸಲಾಗಿದೆ. ಹಸಿರು ಪಟಾಕಿ ಹೊರತುಪಡಿಸಿ, ಪರಿಸರಕ್ಕೆ ಹಾನಿಯುಂಟು ಮಾಡುವ ಪಟಾಕಿ ಮಾರಾಟ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ಹಸಿರು ಪಟಾಕಿಗಳ ಬಾಕ್ಸ್ ಮೇಲೆ ಕಡ್ಡಾಯವಾಗಿ ಬಾರ್‌ಕೋಡ್ ಇರಬೇಕು. ಅದನ್ನು ಸ್ಕ್ಯಾನ್ ಮಾಡಿದಾಗ ಹಸಿರು ಪಟಾಕಿ ಎಂದು ಖಚಿತವಾಗದಿದ್ದರೆ, ಸ್ಥಳದಲ್ಲೇ ಲೈಸೆನ್ಸ್ ರದ್ದು ಮಾಡಲಾಗುತ್ತದೆ ಎಂಬ ಸೂಚನೆಯನ್ನು ಪಟಾಕಿ ಮಾರಾಟಗಾರರಿಗೆ ಸೂಚಿಸಲಾಗಿದೆ. ಒಟ್ಟಾರೆ ಹತ್ತು ಹಲವು ಸೂಚನೆಗಳ ನಡುವೆ ಪಟಾಕಿ ಮಾರಾಟ ನಡೆಯುತ್ತಿದ್ದು ಮಾರಾಟಗಾರರು ಮಳೆ ಬಾರದಿರಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ.












Click it and Unblock the Notifications