ಮೈಸೂರು ಅರಮನೆಯ ಗೈಡ್ ಗಳು ಅತಂತ್ರ ಸ್ಥಿತಿಯಲ್ಲಿರುವುದಕ್ಕೆ ಕಾರಣ ಇದೇ!
Recommended Video

ಮೈಸೂರು, ಸೆಪ್ಟೆಂಬರ್. 26: ನಾವು ಮೈಸೂರು ಅರಮನೆಗೆ ಭೇಟಿ ನೀಡಿದಾಗ ಅರಮನೆಯ ಸಂಪೂರ್ಣ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವ ಏಕೈಕ ವ್ಯಕ್ತಿಯೆಂದರೆ ಗೈಡ್. ಅವರು ಅಷ್ಟಾಗಿ ವಿದ್ಯಾವಂತರಲ್ಲದಿದ್ದರೂ ಅರಳು ಹುರಿದ ಹಾಗೆ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಕನ್ನಡ ಎಲ್ಲಾ ಭಾಷೆಗಳನ್ನು ಮಾತನಾಡುತ್ತಾರೆ.
ಆದರೆ ಇಂದು ಅವರ ಸ್ಥಿತಿ ಶೋಚನೀಯವಾಗಿದೆ. ಹೌದು, ಅರಮನೆಯ ಸೌಂದರ್ಯವನ್ನು ಸವಿಯಲು ವರ್ಷದಿಂದ ವರ್ಷಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಅಧಿಕವಾಗುತ್ತಿದೆ. ಆದರೆ ಅರಮನೆಯ ಗೈಡ್(ಮಾರ್ಗದರ್ಶಕ)ಗಳ ಸ್ಥಿತಿ ಮಾತ್ರ ಆಶಾದಾಯಕವಾಗಿಲ್ಲ.
ಭಾರತ ದೇಶದಲ್ಲಿ ಆಗ್ರದ ತಾಜ್ ಮಹಲ್ ಹೊರತುಪಡಿಸಿದರೆ, ಅತೀ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಪ್ರವಾಸಿ ತಾಣವಾಗಿ ಮೈಸೂರು ಅರಮನೆ ಗುರುತಿಸಿಕೊಂಡಿದೆ. ಆದರೆ, ಅರಮನೆಯ ಗೈಡ್ ಗಳ ಸಹಾಯವನ್ನು ಯಾವೊಬ್ಬ ಪ್ರವಾಸಿಗರೂ ಕೇಳದಿರುವುದರಿಂದ ಗೈಡ್ ಗಳು ತಮ್ಮ ಜೀವನವನ್ನು ನಡೆಸಲು ಪರದಾಡುವಂತಾಗಿದೆ. ಹೀಗಾಗಲು ಕಾರಣವೇನು? ಮುಂದೆ ಓದಿ...

ಎಲ್ಲಾ ಭಾಷೆ ತಿಳಿದಂತವರು
ಅರಮನೆಗೆ ಬರುವ ಪ್ರವಾಸಿಗರಿಗೆ ಮಾಹಿತಿ ನೀಡಲೆಂದೇ 17 ಜನ ಗೈಡ್ ಗಳು ಇದ್ದಾರೆ. ಇವರಿಗೆ ಕನ್ನಡ, ಇಂಗ್ಲಿಷ್ , ಹಿಂದಿ, ತಮಿಳು, ತೆಲುಗು, ಮರಾಠಿ, ಉರ್ದು ಸೇರಿದಂತೆ ಹಲವು ಭಾಷೆಗಳು ತಿಳಿದಿವೆ.

ಅರಮನೆಗಳ ಪರಿಚಯ
ಅರಮನೆ ಹಾಗೂ ಮಹಾರಾಜರ ಕುರಿತು ಖಚಿತ ಮಾಹಿತಿಯೊಂದಿಗೆ ಪ್ರವಾಸಿಗರಿಗೆ, ಅದರಲ್ಲೂ ವಿದೇಶಿ ಪ್ರವಾಸಿಗರಿಗೆ ನಮ್ಮ ಕಲೆ ಸಂಸ್ಕೃತಿಯ ಬಗ್ಗೆ ಮಾಹಿತಿ ನೀಡಿ, ವಿದೇಶಗಳಿಗೂ ನಮ್ಮ ಸಂಸ್ಕೃತಿಯ ಪರಿಚಯ ಮಾಡಿಕೊಡುತ್ತಿದ್ದ ಇವರ ಜೀವನ ಇಂದು ದುಸ್ತರವಾಗಿದೆ.

ಗೈಡ್ ಗಳ ಅಳಲಿಗೆ ಕಾರಣ
ಗೈಡ್ ಗಳ ಈ ಪರಿಸ್ಥಿತಿಗೆ ಮುಖ್ಯ ಕಾರಣ ಕಳೆದ ಒಂದು ವರ್ಷದಿಂದ ಈಚೆಗೆ ಅರಮನೆ ಮಂಡಳಿ ಪ್ರಾರಂಭಿಸಿರುವ ಅರಮನೆಯ ಬಗ್ಗೆ ಮಾಹಿತಿ ನೀಡುವ ಉಚಿತ ಆಡಿಯೋ ಕಿಟ್.
ಹೌದು. ಈ ಆಡಿಯೋ ಕಿಟ್ ನಿಂದ ಪ್ರವಾಸಿಗರಿಗೆ ಉಚಿತವಾಗಿ ಅರಮನೆಯ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯುತ್ತದೆ. ಆದ್ದರಿಂದ ಪ್ರವಾಸಿಗರು ಅರಮನೆಯ ಬಗ್ಗೆ ತಿಳಿಯಲು ಗೈಡ್ ಗಳ ಮೇಲೆ ಅವಲಂಬಿತರಾಗುವುದಿಲ್ಲ ಎಂಬುದು ಗೈಡ್ ಗಳ ಅಳಲು.

ಜೀವನೋಪಾಯಕ್ಕೆ ಸಹಕರಿಸಿ
ಅರಮನೆಯ ಮಾಹಿತಿಯನ್ನು ನೀಡುವುದರಿಂದ ನಮಗೆ ನಾಲ್ಕು ಕಾಸಾದರೂ ಸಿಗುತ್ತಿತ್ತು. ಅದಕ್ಕೂ ಈಗ ಭಂಗ ತರುವಂತಿದೆ ಆಡಿಯೋ ಕಿಟ್ ಎಂದು ನೋವಿನಿಂದಲೇ ನುಡಿಯುತ್ತಾರೆ. ಇನ್ನಾದರೂ ಅರಮನೆ ಆಡಳಿತ ಮಂಡಳಿ ಇತ್ತ ಗಮನಹರಿಸಿ ಗೈಡ್ ಗಳ ಜೀವನೋಪಾಯಕ್ಕೆ ಸಹಕರಿಸಬೇಕಿದೆ.












Click it and Unblock the Notifications