• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಿಳಾ ದಿನಾಚರಣೆ ವಿಶೇಷ:ಸ್ಮಶಾನದಲ್ಲಿ ಕೆಲಸ ಮಾಡುವ ನೀಲಮ್ಮನ ಸಾಹಸಗಾಥೆ

|

ಮೈಸೂರು, ಮಾರ್ಚ್ 8:ಸ್ಮಶಾನ ಅಂದ್ರೆ ಸಾಕು ಯಾರಾದರೂ ಸತ್ತರೆ ಮಾತ್ರ ಹೋಗುವ ಜಾಗ ಎಂಬ ಮಾತಿದೆ. ಆದರೆ ಅಲ್ಲಿ ಉಳಿದುಕೊಳ್ಳೋದು ಸಾಧ್ಯನಾ?. ರಾತ್ರಿ ಆ ಹೆಣಗಳ ಮಧ್ಯೆ ಯಾರು ತಾನೇ ಇರ್ತಾರೆ ಎಂಬ ಮಾತು ಯಾರಾದರೂ ಆಡದೆ ಇರಲಾರರು.

ಕಗ್ಗತ್ತಲ ರಾತ್ರಿಯಲ್ಲಿ, ಗೋರಿಗಳ ಮಧ್ಯದಲ್ಲಿ, ಕಾನನದ ನಡುವಿನಲಿ, ಹೆಣಗಳ ಅಸ್ಥಿ ಪಂಜರದ ಕಲ್ಪನೆಯನ್ನು ನೆನಪಿಸಿಕೊಂಡರೆ ಸಾಕು ಮೈಮನ ಒಮ್ಮೆ ರೋಮಾಂಚನಗೊಳ್ಳುತ್ತದೆ. ಅದರಲ್ಲೂ ಹೆಣ್ಣು ಮಕ್ಕಳು ಸ್ಮಶಾನಕ್ಕೆ ಮಧ್ಯ ರಾತ್ರಿ ಹೋಗುತ್ತಾರೆಂದರೆ ನಾವೆಲ್ಲರೂ ನೀನಗೇನೂ ದೆವ್ವ, ಭೂತ ಮೆಟ್ಕೊಂಡಿದ್ಯಾ? ಎಂದು ಹೇಳುತ್ತೇವೆ. ಆದರೆ ಇಲ್ಲಿ ನಾವು ವಿಶೇಷ ವ್ಯಕ್ತಿಯೊಬ್ಬರನ್ನು ಪರಿಚಯ ಮಾಡಿಕೊಡುತ್ತಿದ್ದೇವೆ.

ಕೃಷ್ಣನಗರಿಯಲ್ಲಿ ಈಗ ಮಹಿಳೆಯರೇ ಆಡಳಿತದ ಮುಖ್ಯಸ್ಥರು!

ಈಕೆ ನೀಲಮ್ಮ, ವಯಸ್ಸು 63. ವಾಸ ಮೈಸೂರಿನ ಲಿಂಗಾಂಬುದಿ ಪಾಳ್ಯದ ಸ್ಮಶಾನದಲ್ಲಿ ಅಂದಾಜು 3000 ಅಸ್ಥಿಪಂಜರದ ನಡುವೆ. ನೀಲಮ್ಮ ಇದುವರೆಗೂ ಸಾವಿರಾರು ದೇಹವನ್ನು ಮಣ್ಣು ಮಾಡಿದ್ದಾರೆ. ಗುಂಡಿ ತೋಡಿ, ಸತ್ತ ದೇಹಕ್ಕೆ ಮುಕ್ತಿ ನೀಡಿದ್ದಾರೆ. ಹೌದು, ಮಹಿಳಾ ದಿನಾಚರಣೆ ಅಂಗವಾಗಿ ಒನ್ ಇಂಡಿಯಾ ತಂಡ ವಿಶೇಷ ಮಹಿಳೆಯನ್ನು ಸಂದರ್ಶಿಸಬೇಕೆಂದು ಹುಡುಕಾಡ ತೊಡಗಿದಾಗ ಸಿಕ್ಕಿದ್ದೇ ನೀಲಮ್ಮ. ನೀಲಮ್ಮನ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ಈ ಲೇಖನ ಓದಿ...

 ಸ್ವಾವಲಂಬಿಯಾಗಿ ಬದುಕಬೇಕೆಂಬುದು ನನ್ನ ಇಚ್ಛೆ

ಸ್ವಾವಲಂಬಿಯಾಗಿ ಬದುಕಬೇಕೆಂಬುದು ನನ್ನ ಇಚ್ಛೆ

ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಎಂತಹದ್ದೋ ಕೆಲಸ ಮಾಡುವ ಸಂದರ್ಭಗಳು ಬದುಕಿನಲ್ಲಿ ಸಾಮಾನ್ಯ. ಆದರೆ ಎಂಥದ್ದೇ ಪರಿಸ್ಥಿತಿ ಬಂದರೂ ಅದನ್ನು ಧೈರ್ಯದಿಂದ ಮೆಟ್ಟಿನಿಂತ ಛಲಗಾತಿ ನೀಲಮ್ಮ. ಹಗಲು - ರಾತ್ರಿ ಎನ್ನದೆ ಬಡವ ಬಲ್ಲಿದನೆಂಬ ಭೇದವಿಲ್ಲದೆ ಸದಾ ಕಾಯಕದಲ್ಲಿ ನಿರತರಾಗಿರುವ ಈ ಮಹಿಳೆಯ ಛಲ ಎದೆಗಾರಿಕೆ ಅಂತರವನ್ನು ಅಚ್ಚರಿಗೊಳಿಸದೇ ಇರಲಾರದು. "ಎಲ್ಲರ ಬದುಕು ಇಲ್ಲಿಗೆ ಬಂದು ಮುಗಿದರೆ, ನನ್ನ ಬದುಕು ಇಲ್ಲಿ ನೆಲೆ ಕಟ್ಟಿಕೊಟ್ಟಿದೆ" ಎಂದು ಹೇಳುವ ನೀಲಮ್ಮ, ಸತ್ತವರಿಗೆ ಗುಂಡಿ ತೋಡುವ ಹೂಳುವ ಕೆಲಸದಲ್ಲಿ ಕಳೆದ ಎರಡು ದಶಕಗಳಿಂದೀಚೆಗೆ ನಿರತರಾಗಿದ್ದಾರೆ.

ಕಳೆದ 21 ವರ್ಷದ ಕೆಳಗೆ ಉದ್ಯೋಗ ಆರಂಭಿಸಿದ ಈಕೆಗೆ ಈ ಕೆಲಸ ಜೀವನದ ದಾರಿ ತೋರಿಸಿಕೊಟ್ಟಿದೆ. "ಸ್ಮಶಾನದಲ್ಲಿಯೇ ಜೀವನ ಮಾಡಿ ಇಬ್ಬರು ಗಂಡು ಮಕ್ಕಳನ್ನು ನೆಲೆಗೆ ತಂದಿದ್ದೇನೆ. ಅವರನ್ನು ಮದುವೆ ಮಾಡಿದ್ದೇನೆ. ಮೊಮ್ಮಕ್ಕಳು, ಸೊಸೆ ನನ್ನ ಜೊತೆಯಲ್ಲೇ ಇದ್ದಾರೆ. ಮಕ್ಕಳು ಈಗ ಈ ಕೆಲಸ ಬೇಡ ಬಂದು ನಮ್ಮೊಟ್ಟಿಗೆ ಇರು ಎಂದು ಹೇಳುತ್ತಾರೆ. ಆದರೆ ನಾನು ದುಡಿಯುತ್ತಿದ್ದೇನೆ, ನನ್ನ ಕೈಲಾಗುವವರೆಗೂ ಸ್ವಾವಲಂಬಿಯಾಗಿ ಬದುಕಬೇಕು ಎಂಬುದು ನನ್ನ ಇಚ್ಛೆ ಎಂದು ಹೇಳುತ್ತಾರೆ.

 ಯಾವ ಭಯವೂ ನನ್ನನ್ನು ಕಾಡುತ್ತಿಲ್ಲ

ಯಾವ ಭಯವೂ ನನ್ನನ್ನು ಕಾಡುತ್ತಿಲ್ಲ

ನೀಲಮ್ಮ ಮೂಲತಃ ಎಚ್ ಡಿ ಕೋಟೆ ತಾಲೂಕಿನ ಸರಗೂರು ಹೋಬಳಿಯ ಕೊತ್ತೇಗಾಲದವರು. ಮದುವೆಯಾಗಿ ಮೈಸೂರಿಗೆ ಬಂದರು. ಮೈಸೂರಿನಲ್ಲಿ ಗಂಡ ಮೊದಲು ಸಣ್ಣಪುಟ್ಟ ಕೆಲಸ ಮಾಡುತ್ತಿದ್ದರು. ಯಾವುದು ಅವರ ಕೈ ಹತ್ತಲಿಲ್ಲ. ಕಡೆಗೆ ಯಾರೋ ಈ ಸ್ಮಶಾನದಲ್ಲಿ ಕೆಲಸ ಹಚ್ಚಿದರು. ಪತಿಯ ಜೊತೆಗೆ ಬಂದ ನೀಲಮ್ಮ ಯಜಮಾನರು ಗುಂಡಿ ತೆಗೆಯುವ ಕೆಲಸ ಮಾಡಲು ಸಹಾಯ ಮಾಡಿದರು. ಹಾಗೆಯೇ ನನಗೂ ಈ ಉದ್ಯೋಗ ಕರಗತವಾಯಿತು. ಅವರು ಹೋಗಿ ದಶಕಗಳೇ ಕಳೆದಿವೆ. ಆದರೆ ನಾನು ಈ ಕಾಯಕ ಮುಂದುವರಿಸಿದೆ. ಇಲ್ಲಿ ಒಬ್ಬಳೇ ಇರುತ್ತೇನೆ. ರಾತ್ರಿ ಇರುತ್ತೇನೆ. ಯಾವ ಭಯವೂ ನನ್ನನ್ನು ಕಾಡುತ್ತಿಲ್ಲ ಎನ್ನುತ್ತಾರೆ ಗಟ್ಟಿಗಿತ್ತಿ ನೀಲಮ್ಮ. ನೀಲಮ್ಮ ಓದಿರುವುದು ಕೇವಲ 5ನೇ ತರಗತಿ ಮಾತ್ರ. ಆದರೆ ಅವರ ಮಾತು ಯಾವ ತತ್ತ್ವಜ್ಞಾನಿಗೂ ಕಡಿಮೆ ಇಲ್ಲದಂತಹದ್ದು. ಆಳವಾದ ಜೀವನ ಸಾರ ಇವರಲ್ಲಿ ಹುದುಗಿ ಹೋಗಿದೆ. ಬಾಯಿ ಬಿಟ್ಟರೆ ಸಾಕು ಬಸವಣ್ಣನವರು ಬೋಧಿಸುತ್ತಿದ್ದ ಸರಳತೆ, ಸಮಾನತೆ, ಸಾರ್ಥಕತೆ, ಕಾಯಕ ಮುಂತಾದ ತತ್ತ್ವಗಳೇ ಇವರ ಬಾಯಿಂದ ನುಡಿ ಮುತ್ತುಗಳಂತೆ ಹೊರಬರುತ್ತದೆ.

ಶಿವಮೊಗ್ಗ ಇತಿಹಾಸದಲ್ಲೇ ಮೊದಲ ಮಹಿಳಾ ಎಸ್.ಪಿ. ಎಂಬ ಹೆಗ್ಗಳಿಕೆಗೆ ಪಾತ್ರರಾದ ಅಶ್ವಿನಿ

 ಕಾಲವೇ ಎಲ್ಲದಕ್ಕೂ ಉತ್ತರ ನೀಡಿದೆ

ಕಾಲವೇ ಎಲ್ಲದಕ್ಕೂ ಉತ್ತರ ನೀಡಿದೆ

ನಾನು ಈ ಸ್ಮಶಾನದಲ್ಲಿ ಬದುಕುತ್ತಿರುವಾಗ ಈ ಹಿಂದೆ ಅವಮಾನ ಮಾಡಿದರು. ಎಲ್ಲವನ್ನೂ ಸಹಿಸಿಕೊಂಡು ನಾನು ಶಾಂತಿ ನೆಮ್ಮದಿಯ ಬದುಕಬೇಕಾಗಿತ್ತು. ಅದು ಸಿಕ್ಕಿದ್ದು ಈ ಸ್ಮಶಾನದಲ್ಲಿಯೇ. ಮೊದಲು ಎಲ್ಲರಂತೆ ಒಡವೆ ಹಾಕಿಕೊಳ್ಳಬೇಕು, ನಾನು ರೇಷ್ಮೆ ಸೀರೆಯುಟ್ಟು ತಿರುಗಬೇಕು ಎಂದೆನಿಸುತ್ತಿತ್ತು. ಆದರೆ ಈಗ ಆ ಭಾವನೆಯೇ ಇಲ್ಲ. ಎಲ್ಲವೂ ನಷ್ಟವೇ ಎನಿಸುತ್ತದೆ. ಎಲ್ಲದಕ್ಕೂ ಏಕೆ ಆಸೆ ಪಡಬೇಕು ? ಹಣಕ್ಕಾಗಿ, ಚೂರು ಜಾಗಕ್ಕಾಗಿ, ಹೆಣ್ಣಿಗಾಗಿ ಏಕೆ ಬಡಿದಾಡಬೇಕು ? ಕೊಲೆ ಮಾಡಬೇಕು. ಒಂದಲ್ಲ ಒಂದು ದಿನ ಈ ಜಾಗಕ್ಕೆ ಬರಲೇಬೇಕು ಎನ್ನುತ್ತಾರೆ. ನಾನು ಇರುವುದು ನನ್ನ ಸ್ವಂತ ಮನೆಯಲ್ಲಿ. ನನ್ನನ್ನು ಇಲ್ಲಿಂದ ಖಾಲಿ ಮಾಡು ಎಂದು ಯಾರೂ ಹೇಳುವುದಿಲ್ಲ. ನನ್ನನ್ನು ನೋಡಲು ಈಗ ಸಂಬಂಧಿಕರು, ಬಂಧು ಬಳಗದವರು ಸ್ಮಶಾನಕ್ಕೆ ಬರುತ್ತಾರೆ. ಇಲ್ಲಿಗೆ ಬಂದವರಿಗೆ ನಾನು ಇದನ್ನೇ ಹೇಳುತ್ತೇನೆ. ಅವರೆಲ್ಲರೂ ನನ್ನನ್ನು ದುರುಗುಟ್ಟಿಕೊಂಡು ನೋಡುತ್ತಿದ್ದರು. ಈ ಹಿಂದೆ ಹುಚ್ಚಿ ಎಂದು ಹೀಯಾಳಿಸುತ್ತಿದ್ದರು ಆದರೆ ಕಾಲವೇ ಎಲ್ಲದ್ದಕ್ಕೂ ಉತ್ತರ ನೀಡಿದೆ.

 ಜೆ ಎಸ್ಎಸ್ ಕಾಲೇಜಿನಲ್ಲಿ ದೇಹದಾನ

ಜೆ ಎಸ್ಎಸ್ ಕಾಲೇಜಿನಲ್ಲಿ ದೇಹದಾನ

ಮನುಷ್ಯ ಬದುಕಿದ್ದಾಗ ಕಾಡುವ ದೆವ್ವ, ಭೂತ ಈ ಸ್ಮಶಾನದಲ್ಲೆಲ್ಲೂ ನನಗೆ ಕಾಣಿಸಲೇ ಇಲ್ಲ. ಎಷ್ಟೋ ಬಾರಿ ಮಧ್ಯರಾತ್ರಿ ಹೆಣಕ್ಕೆ ಗುಂಡಿ ತೋಡಿದ್ದು ನೆನಪಿದೆ. ಯಾವುದಕ್ಕೂ ಹಿಂಜರಿಯುವುದಿಲ್ಲ. ಮಾನವ ಬದುಕಿದ್ದಾಗ ಹತ್ತಾರು ಕಾವಲುಗಾರರನ್ನು ಇಟ್ಟುಕೊಂಡಿರುತ್ತಾರೆ. ಆದರೆ ನನ್ನನ್ನು ಕಾಯಲು ನನ್ನ ಮನೆಯ ಮುಂದೆಯೇ ಸಾವಿರಾರು ಅಸ್ಥಿಪಂಜರಗಳು ಜೀವಂತವಾಗಿದೆ. ಶ್ರೀಮಂತೆ ಯಾರೆಂದು ನೀವೇ ಲೆಕ್ಕ ಹಾಕಿ. ನಾನು ಬದುಕಿರುವವರೆಗೂ ಈ ಕಾಯಕ ಮುಂದುವರೆಸಿಕೊಂಡು ಹೋಗಿಯೇ ತೀರುತ್ತೇನೆ. ಹೆಣ್ಣು ಎಂದು ಯಾರು ನನ್ನನ್ನು ಕೀಳಾಗಿ ನೋಡಿಲ್ಲ. ನನ್ನ ಬೆನ್ನ ಹಿಂದೆ ನೋಡಿದವರಿಗೂ ಸಹ ನಾನೇ ಗುಂಡಿ ತೋಡಿ ಮಣ್ಣು ಮಾಡಿದ್ದೇನೆ ಎಂದು ನಗುತ್ತಾರೆ ನೀಲಮ್ಮ. ಇನ್ನು ನೀಲಮ್ಮ ದೇಹವನ್ನು ಮಣ್ಣು ಮಾಡುವುದರೊಂದಿಗೆ ದೇಹದಾನ ಮಾಡುವಂತೆ ಪ್ರೇರೆಪಿಸುವವರಲ್ಲಿಯೂ ಮೊದಲಿಗರು. ಅಲ್ಲದೇ ತಮ್ಮ ಕುಟುಂಬದವರನ್ನು ಜೊತೆಗೂಡಿ ಮೈಸೂರಿನ ಜೆ ಎಸ್ಎಸ್ ಕಾಲೇಜಿನಲ್ಲಿ ದೇಹದಾನ ಮಾಡಿದ್ದಾರೆ.

ಒಂದು ದಿನದ ಮಟ್ಟಿಗೆ ಬ್ರಿಟಿಷ್ ಹೈ ಕಮಿಶನರ್ ಆದ ಇಶಾ ಬಹಾಳ್

 ಅನೇಕ ಪತ್ರಿಕೆಗಳಲ್ಲಿ ಇವರ ಕಥೆ ಪ್ರಕಟ

ಅನೇಕ ಪತ್ರಿಕೆಗಳಲ್ಲಿ ಇವರ ಕಥೆ ಪ್ರಕಟ

ನೀಲಮ್ಮ ಸತ್ಯ ಹರಿಶ್ಚಂದ್ರ ಸಿನಿಮಾದಲ್ಲಿ ವೀರಬಾಹುವಿನ ಪಾತ್ರ ಮಾಡಿದ ಎಂ.ಪಿ. ಶಂಕರ್ ಅವರ ದೈತ್ಯ ದೇಹವನ್ನು ಹೆಚ್ಚು ಸ್ಮರಣೆಗೆ ತಂದುಕೊಳ್ಳುತ್ತಾರೆ. ಆದರೆ ಯಾವುದೇ ಹಿನ್ನೆಲೆಯಿಲ್ಲದ, ನೀಲಮ್ಮನಂತಹ ಒಬ್ಬ ಸಾಧಾರಣ ಗೃಹಿಣಿ ಸ್ಮಶಾನ ಹೊಕ್ಕು ಗುಣಿ ತೋಡಲು ಗುದ್ದಲಿ ಹಿಡಿದಿರುವುದು ಒಂದು ಅದ್ಭುತವೇ ಸರಿ. ನೀಲಮ್ಮನ ನಿಷ್ಕಾಮ ಕರ್ಮವನ್ನು ಅರಸಿಕೊಂಡು ನಾಡಿನಾದ್ಯಂತ ಅನೇಕ ಪ್ರಶಸ್ತಿ ಪುರಸ್ಕಾರಗಳು ಬಂದಿವೆ. ಅನೇಕ ಪತ್ರಿಕೆಗಳು ಅವರ ಕತೆಯನ್ನು ಪ್ರಕಟಿಸಿವೆ.

ಸ್ವಾತಂತ್ರ್ಯ ಚಳವಳಿಯ ಪರೋಕ್ಷ ಹೋರಾಟಗಾರ್ತಿ: ಅಮ್ಮಕ್ಕ ಗಣಪತಿ ಭಟ್

 ಇಂದಿನ ಹೆಣ್ಣು ಮಕ್ಕಳಿಗೆ ಮಾದರಿಯಾಗಲಿ

ಇಂದಿನ ಹೆಣ್ಣು ಮಕ್ಕಳಿಗೆ ಮಾದರಿಯಾಗಲಿ

ಬದುಕಬೇಕು ಅಂತ ಬಂದೆ. ಬದುಕೋಕೆ ಸ್ಮಶಾನ ಆದ್ರೇನು, ಕಾಡಾದ್ರೇನು? ದೆವ್ವಗಳ ಜೊತೆ ಬೇಕಾದ್ರೂ ಬದುಕ್ತೀನಿ. ಗುಂಡಿ ತೋಡೋದು ಸ್ವಲ್ಪ ಕಷ್ಟನೇ. ದಪ್ಪಗಿರೋರು, ಸಣ್ಣಗಿರೋರು ಬೇರೆ ಬೇರೆ ಸೈಜಿನೋರು ಇರ್ತಾರಲ್ಲಾ? ಅವರ್ಗೆ ತಕ್ಕನಂಗೆ ವಡೀಬೇಕು ಅಲ್ವ್ರಾ? ಯಾವ ಸೈಜು ವಡೀಬೇಕಂತ, ಬಂದವರು ಹೇಳ್ತಾರೆ. ಹಂಗೆ ವಡೀತೀನಿ. ಒಂದೊಂದ್ ಸಲ ನನ್ನೆಷ್ಟೆತ್ತರ ವಡದ್ರೆ ಸಾಕಾ ಅಂತ ಕೇಳ್ತೀನಿ... ಆಗ ನಾನೇ ಗುಂಡಿ ಒಳಗೆ ಕುಂತು ನೋಡಿ, ಗುಂಡಿ ಎಷ್ಟು ಆಳಬೇಕು ಅಂತ ಅಂದಾಜು ಮಾಡ್ಕಂಡು ವಡೀತೀನಿ. ಗುಂಡಿ ಒಳಗೆ ಕೂತ್ರೆ ನಾನೇನು ಸತ್ತೋಯ್ತೀನಾ? ಹೂಳೋ ಆಳಿನ ಭುಜದೆತ್ತರ ಗುಂಡಿ ವಡೆದು ಅದರೊಳಗೆ ಇನ್ನೊಂದು ಗುಂಡಿ ವಡೀಬೇಕು. ಬ್ಯಾಡವ್ವೋ ನನ್ನ ಸ್ಥಿತಿ ಎನ್ನುತ್ತಾರೆ ನೀಲಮ್ಮ, ಈಕೆಯ ಸಾಧನೆಗೆ ಅದೆಷ್ಟೋ ಪ್ರಶಸ್ತಿಗಳು ಅರಸಿ ಬಂದಿದೆ. ನೀಲಮ್ಮನಂತಹ ಇಂತಹ ಸಾಧಕರು ನಮ್ಮ ಇಂದಿನ ಹೆಣ್ಣು ಮಕ್ಕಳಿಗೆ ಮಾದರಿಯಾಗಬೇಕೆಂಬುದೇ ನಮ್ಮ ಆಶಯ.

ವೈರಲ್ ವಿಡಿಯೋ:ರೈತರೂ ಕೋಟ್ಯಧಿಪತಿಗಳಾಗಬಹುದು ಅಂತಾರೆ ರಾಯಚೂರಿನ ಕವಿತಾ

English summary
One of the woman achiever in Mysuru city who digs pits in graveyard. A woman Neelamma, age 63, lives and works at Veerashaiva Rudrabhoomi in Vidyaranyapuram. She dig 2000 pits in graveyard till date.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X