ಚಾಮುಂಡಿ ಬೆಟ್ಟದ 1001 ಮೆಟ್ಟಿಲು ಹತ್ತಿ ಹರಕೆ ತೀರಿಸಿದ ನಾರಾಯಣ ಗೌಡ
ಮೈಸೂರು, ಡಿಸೆಂಬರ್ 20: ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಗೆಲುವು ಪಡೆದ ಕೃಷ್ಣರಾಜಪೇಟೆ ಬಿಜೆಪಿ ಶಾಸಕ ನಾರಾಯಣ ಗೌಡ ಅವರು ಇಂದು ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು.
ಬೆಟ್ಟದ ಪಾದದ ಬಳಿಯಿಂದ ಮೆಟ್ಟಿಲುಗಳ ಮೂಲಕ ತೆಂಗಿನ ಕಾಯಿ ಒಡೆಯುತ್ತಾ ತಾಯಿಯ ದರ್ಶನಕ್ಕೆ ತೆರಳಿದ ನಾರಾಯಣ ಗೌಡ ಅವರಿಗೆ ಪತ್ನಿ ಮತ್ತವರ ಬೆಂಬಲಿಗರು ಸಾಥ್ ನೀಡಿದರು. ಉಪ ಚುನಾವಣೆ ಗೆಲುವಿಗೆ ಹರಕೆ ಕೊಟ್ಟಿಕೊಂಡಿದ್ದ ಅವರು, 1001 ಮೆಟ್ಟಿಲುಗಳನ್ನು ಏರಿ ಹರಕೆ ತೀರಿಸಿದರು. ಮೆಟ್ಟಿಲುಗಳಲ್ಲಿ ಒಟ್ಟು ನೂರೊಂದು ತೆಂಗಿನ ಕಾಯಿಗಳನ್ನು ಒಡೆದರು. ಬಳಿಕ ತಾಯಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ನಾನು ಯಾವುದೇ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಮಂತ್ರಿ ಮಾಡಬೇಕೋ ಬೇಡವೋ ಎನ್ನುವುದು ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು. ಅವರೇ ನೋಡಿಕೊಳ್ಳುತ್ತಾರೆ" ಎಂದರು. "ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಮೈಸೂರಿಗೆ ಬಂದಿರಲಿಲ್ಲ. ಚುನಾವಣೆಯ ಗೆಲುವಿನ ಬಳಿಕ ಇಂದು ದೇವಿಯ ದರ್ಶನಕ್ಕೆ ಬಂದಿದ್ದೇನೆ" ಎಂದು ಹೇಳಿದರು.












Click it and Unblock the Notifications