ನಂದಿನಿ ಸಿಹಿ ಉತ್ಸವ: ರಿಯಾಯಿತಿ ಮಾರಾಟ ಆರಂಭ
ಮೈಸೂರು, ಡಿಸೆಂಬರ್ 22: ಕೆಎಂಎಫ್ ಹಾಗೂ ಮೈಮುಲ್ ಗ್ರಾಹಕರಿಗೆ ನಂದಿನಿ ಉತ್ಪನ್ನಗಳನ್ನು ಶೇ. 20ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮೇಳವನ್ನು ಆಯೋಜಿಸಿದ್ದು, ಡಿ. 19ರಿಂದ ಜ.19ರವರೆಗೆ ನಂದಿನಿ ಸಿಹಿ ಉತ್ಸವ ನಡೆಯಲಿದೆ.
2023 ಹೊಸ ವರ್ಷ ಹಾಗೂ ಸಂಕ್ರಾಂತಿ ಹಬ್ಬ ಹಿನ್ನೆಲೆಯಲ್ಲಿ ಪ್ರತಿ ಬಾರಿಯಂತೆ ಈ ವರ್ಷವೂ ನಂದಿನಿ ಸಿಹಿ ಉತ್ಸವ ಆರಂಭಿಸಲಾಗಿದ್ದು, ಹಾಲು, ಮೊಸರು, ತುಪ್ಪ ಹೊರತುಪಡಿಸಿ 52 ಬಗೆಯ ನಂದಿನಿ ಸಿಹಿ ಉತ್ಪನ್ನಗಳ ದರದಲ್ಲಿ ಮೈಸೂರಿನಲ್ಲಿ ಶೇ.20ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದೆ.
ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ಅವರು ಕೆಆರ್‍ಎಸ್ ರಸ್ತೆಯಲ್ಲಿರುವ ನಂದಿನಿ ಪಾರ್ಲರ್ ನಲ್ಲಿ ಸಿಹಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಕೆಎಂಎಫ್ ಹಾಗೂ ಮೈಮುಲ್ ವತಿಯಿಂದ ಕಳೆದ 7 ವರ್ಷದಿಂದ 'ನಂದಿನಿ ಸಿಹಿ ಉತ್ಸವ' ನಡೆಸಿ, ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ನಂದಿನಿ ಉತ್ಪನ್ನಗಳನ್ನು ನೀಡಲಾಗುತ್ತಿದೆ. ಹಿಂದಿನ ವರ್ಷಗಳಲ್ಲಿ ಶೇ.10ರಷ್ಟು ರಿಯಾಯಿತಿಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈ ಬಾರಿ ಶೇ.20ರಷ್ಟು ರಿಯಾಯಿತಿ ದರದಲ್ಲಿ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದರು.

ನಂದಿನಿ ಉತ್ಪನ್ನಗಳ ತಯಾರಿಕೆಯಲ್ಲಿ ಯಾವುದೇ ರಾಸಾಯನಿಕ ವಸ್ತುಗಳನ್ನು ಬಳಸುವುದಿಲ್ಲ. ಖಾಸಗಿ ಸಂಸ್ಥೆಗಳ ತಯಾರಿಸುವ ಉತ್ಪನ್ನಗಳಲ್ಲಿ ರಾಸಾಯನಿಕ ವಸ್ತು ಬಳಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ವಿಶ್ವಾಸಾರ್ಹವಾದ ನಂದಿನಿ ಉತ್ಪನ್ನಗಳನ್ನೇ ಬಳಸಬೇಕು. ನಂದಿನಿ ಉತ್ಪನ್ನಗಳ ಬಳಕೆ ಹೆಚ್ಚಾದರೆ, ಅದರಿಂದ ರೈತರಿಗೆ ಲಾಭವಾಗಲಿದೆ. ಆ ನಿಟ್ಟಿನಲ್ಲಿ ನಮ್ಮ ರೈತರ ಹೈನುಗಾರಿಕೆಯಿಂದ ಉತ್ಪತ್ತಿಯಾಗುವ ಶುದ್ಧ ಹಾಲಿನಿಂದ ತಯಾರಾಗುವ ನಂದಿನಿ ಉತ್ಪನ್ನಗಳನ್ನೇ ಹೆಚ್ಚಾಗಿ ಬಳಸುವಂತೆ ಮನವಿ ಮಾಡಿದರು.
ಮಾರುಕಟ್ಟೆಯಲ್ಲಿ ನಂದಿನಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇದರಿಂದ ಕೆಎಂಎಫ್ ವತಿಯಿಂದ ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಿದೆ. ಈ ಬಾರಿ ನಂದಿನಿ ಸಿಹಿ ಉತ್ಸವದಲ್ಲಿ 52 ಪದಾರ್ಥಗಳನ್ನು ಶೇ.20ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಈಗಾಗಲೇ ಮೈಮುಲ್ ವತಿಯಿಂದ ಜಿಲ್ಲೆಯಲ್ಲಿ ಮಾರುಕಟ್ಟೆ ಅಭಿವೃದ್ಧಿಪಡಿ ಸಲಾಗಿದೆ. ಗ್ರಾಹಕರಿಗೆ ಸುಲಭವಾಗಿ ನಂದಿನಿ ಉತ್ಪನ್ನ ತಲುಪಿ ಸಲು ಕ್ರಮ ಕೈಗೊಳ್ಳಲಾಗಿದ್ದು, ನಗರ ಪ್ರದೇಶ ಮಾತ್ರವಲ್ಲದೆ ಗ್ರಾಮೀಣ ಭಾಗದಲ್ಲೂ ನಂದಿನಿ ಪಾರ್ಲರ್ ಹಾಗೂ ಗೆಲಾಕ್ಸಿ ತೆರೆಯಲಾಗಿದೆ. ಎಲ್ಲಾ ಕೇಂದ್ರಗಳಲ್ಲೂ ಗ್ರಾಹಕರು ಸಿಹಿ ಉತ್ಸವದ ಸದುಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.












Click it and Unblock the Notifications