ಚುಂಚನಕಟ್ಟೆ ಜಾನುವಾರು ಜಾತ್ರೆಯಲ್ಲೀಗ ಸಂಭ್ರಮವೋ ಸಂಭ್ರಮ!

ಮೈಸೂರು, ಜನವರಿ 06: ಸದಾ ಹೊಲಗದ್ದೆಗಳಲ್ಲಿ ದುಡಿದು ಬೆಂಡಾಗಿದ್ದ ರೈತಾಪಿ ವರ್ಗ ಸುಗ್ಗಿಯ ಖುಷಿಯನ್ನು ಸಂಭ್ರಮಿಸುವ ಸಲುವಾಗಿ ಆಯಾಯ ಊರಿನಲ್ಲಿ ಜಾತ್ರೆಗಳನ್ನು ಆರಂಭಿಸಿದ್ದು, ಈ ಜಾತ್ರೆಗಳು ಒಂದು ಊರಿನಿಂದ ಮತ್ತೊಂದು ಊರಿಗೆ ಭಿನ್ನ ವಿಶಿಷ್ಟ ಮತ್ತು ಅದ್ಧೂರಿಯಾಗಿ ನಡೆಯುತ್ತಾ ಬರುತ್ತಿವೆ. ಮೊದಲು ಹತ್ತು ಹಳ್ಳಿಗೆ ಹೆಸರಾಗಿದ್ದ ಜಾತ್ರೆಗಳು ಹಳ್ಳಿಗಳ ಗಡಿಮೀರಿ ಜಿಲ್ಲೆ, ರಾಜ್ಯಗಳನ್ನು ದಾಟಿ ತನ್ನ ಖ್ಯಾತಿಯನ್ನು ಪಸರಿಸಿದೆ. ಇದಕ್ಕೆ ಮೈಸೂರು ಜಿಲ್ಲೆಯ ಕೆ.ಆರ್.ನಗರ ಬಳಿಯ ಚುಂಚನಕಟ್ಟೆ ಜಾತ್ರೆ ಸಾಕ್ಷಿಯಾಗಿದೆ.

ಸಾಮಾನ್ಯವಾಗಿ ಜಾತ್ರೆಗಳೆಂದರೆ ಮಕ್ಕಳಿಂದ ವೃದ್ಧರವರೆಗೆ ಸಂಭ್ರಮ ಮನೆ ಮಾಡುತ್ತದೆ. ಜಾತ್ರೆಗೆ ತೆರಳುವುದೇ ಒಂಥರಾ ಸಂಭ್ರಮ ಸಡಗರ, ಜಾತ್ರೆಯಲ್ಲಿ ಜನರೊಂದಿಗೆ ಬೆರೆತು ಎಲ್ಲೆಂದರಲ್ಲಿ ಓಡಾಡಿ ಮಹಿಳೆಯರು ಮನೆಗೆ ಬೇಕಾದ ವಸ್ತುಗಳನ್ನು ಬೇಕಾಗಿದ್ದನ್ನು ಖರೀದಿಸಿದರೆ, ಮಕ್ಕಳು ಆಹಾರ ಪದಾರ್ಥಗಳನ್ನು ಸೇವಿಸುವುದರ ಮೂಲಕ ಆನಂದಿಸುವುದು ಕಾಣಿಸುತ್ತದೆ. ಇದೆಲ್ಲದರ ನಡುವೆ ಪುರುಷರು ಮುಂದಿನ ಉಳುಮೆಗೆ ಬೇಕಾದ ವಸ್ತುಗಳು ಮಾತ್ರವಲ್ಲದೆ ಹೆಗಲುಕೊಟ್ಟು ದುಡಿಯಬಲ್ಲ ಎತ್ತುಗಳನ್ನು ಖರೀದಿಸುವುದು, ತಮಗೆ ಬೇಡದ ಎತ್ತುಗಳನ್ನು ಮಾರಾಟ ಮಾಡುವುದರಲ್ಲಿ ತಲ್ಲೀನರಾಗಿರುತ್ತಾರೆ.

Mysuru KR Nagar Chunchanakatte Livestock Fair Specialty

ಕೃಷಿಯೇ ಜೀವಾಳವಾಗಿದ್ದ ಕಾಲದಲ್ಲಿ ಕೃಷಿಗೆ ಜಾನುವಾರುಗಳೇ ಪ್ರಮುಖ ಆಧಾರವಾಗಿದ್ದ ಕಾರಣ ಜಾತ್ರೆಗಳಲ್ಲಿ ಜಾನುವಾರು ಜಾತ್ರೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿತ್ತು. ಈ ಜಾನುವಾರು ಜಾತ್ರೆಗಳಲ್ಲಿ ರೈತರು ತಮಗೆ ಬೇಡದ ಎತ್ತು ಹಸು ಕರುಗಳನ್ನು ತಂದು ಜಾತ್ರೆಯಲ್ಲಿ ಮಾರಾಟ ಮಾಡಿ ತಮಗೆ ಬೇಕಾದ ಜಾನುವಾರುಗಳನ್ನು ಖರೀದಿ ಮಾಡುತ್ತಿದ್ದರು. ಈ ಜಾತ್ರೆಗಳಲ್ಲಿ ಲಕ್ಷಾಂತರ ರೂಪಾಯಿಗಳ ವಹಿವಾಟುಗಳು ನಡೆಯುತ್ತಿದ್ದವು. ಅವತ್ತಿನ ದಿನಗಳಲ್ಲಿ ಇಂತಹ ಜಾನುವಾರು ಜಾತ್ರೆಗೆ ಚುಂಚನಕಟ್ಟೆ ಹೆಸರುವಾಸಿಯಾಗಿತ್ತು. ಅದರಲ್ಲೂ ಈ ಜಾತ್ರೆ ಎತ್ತುಗಳಿಗೆ ಹೆಸರುವಾಸಿಯಾಗಿದ್ದು, ಇಲ್ಲಿಗೆ ತರಾವರಿಯ ಎತ್ತುಗಳ ಬರುವುದು ವಿಶೇಷವಾಗಿದೆ.

ಲಕ್ಷಾಂತರ ರೂಪಾಯಿ ಬೆಲೆಬಾಳುವ ಎತ್ತುಗಳು

ದಕ್ಷಿಣ ಭಾರತದಲ್ಲಿಯೇ ತನ್ನದೇ ಆದ ಖ್ಯಾತಿ ಪಡೆದಿದ್ದರಿಂದ ಚುಂಚನಕಟ್ಟೆ ಜಾತ್ರೆಗೆ ಜಿಲ್ಲೆ ಮಾತ್ರವಲ್ಲದೆ, ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಮಾರಾಟಗಾರರು, ಖರೀದಿದಾರರು ಬರುತ್ತಿದ್ದರು. ಅವತ್ತಿನ ದಿನಗಳಲ್ಲಿ ಚುಂಚನಕಟ್ಟೆ ಜಾತ್ರೆ ಬಂತೆಂದರೆ ರೈತರು ಮತ್ತು ಜನರಲ್ಲಿ ಒಂಥರಾ ಪುಳಕ. ಅದರಲ್ಲೂ ರೈತಾಪಿ ವರ್ಗಕ್ಕಂತು ಹೊಸ ಜಾನುವಾರುಗಳನ್ನು ಖರೀದಿಸಿ ಮನೆಗೆ ತರುವ ಸಂಭ್ರಮ ಮನೆಮಾಡುತ್ತಿತ್ತು. ಜಾತ್ರೆ ಇವತ್ತಿಗೂ ಮುಂದುವರೆದು ಬಂದಿದ್ದರೂ ಅವತ್ತಿನಷ್ಟು ಸಂಭ್ರಮವಿಲ್ಲ ಎಂಬ ಕೊರಗಿತ್ತು. ಅದಕ್ಕಿಂತ ಹೆಚ್ಚಾಗಿ ಈ ಹಿಂದೆ ಕಾಣಿಸಿದ ಕೊರೋನಾ, ಗಂಟುರೋಗಗಳ ಕಾರಣದಿಂದ ಜಾತ್ರೆಗೆ ನಿರ್ಬಂಧ ಹೇರಲಾಗಿತ್ತು. ಹೀಗಾಗಿ ಕಳೆಗುಂದು ಭಯವೂ ಇತ್ತು. ಆದರೆ ಈ ಬಾರಿಯ ಜಾತ್ರೆ ಅದೆಲ್ಲವನ್ನು ಮೀರಿ ನಡೆಯುತ್ತಿದೆ.

Mysuru KR Nagar Chunchanakatte Livestock Fair Specialty

ಇವತ್ತಿನ ಪರಿಸ್ಥಿತಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರುಗಳನ್ನು ಸಾಕುವುದು ಕಷ್ಟವಾಗುತ್ತಿದೆ. ಕೃಷಿ ಚಟುವಟಿಕೆಗೆ ಯಂತ್ರಗಳು ಬಂದಿವೆ. ಹೀಗಾಗಿ ತಮಗೆ ಅಗತ್ಯವಿರುವಷ್ಟೇ ಜಾನುವಾರುಗಳನ್ನು ಸಾಕಲಾಗುತ್ತಿದೆ. ಉಳುಮೆಗೆ ಎತ್ತಿನ ಬದಲಾಗಿ ರೈತರು ಯಂತ್ರಗಳಿಗೆ ಮಾರು ಹೋಗಿರುವುದರಿಂದ ಬಹುತೇಕ ರೈತರಿಗೆ ಎತ್ತುಗಳ ಅವಶ್ಯಕತೆ ಇಲ್ಲದಾಗಿದೆ. ಹಾಲಿಗಾಗಿ ಹಸುಗಳನ್ನು ಸಾಕಲಾಗುತ್ತಿದೆ. ಹೀಗಾಗಿ ಎತ್ತುಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ ಕೆಲವರು ಇವತ್ತಿಗೂ ಕೃಷಿ ಚಟುವಟಿಕೆಗೆ ಎತ್ತುಗಳನ್ನು ಸಾಕುತ್ತಿದ್ದಾರೆ. ಇದರ ನಡುವೆ ಹವ್ಯಾಸಕ್ಕಾಗಿ ಎತ್ತುಗಳನ್ನು ಸಾಕುವವರು ಸಂಖ್ಯೆ ಹೆಚ್ಚಾಗಿದ್ದು, ಈ ಎತ್ತುಗಳ ಪೋಷಣೆಗಾಗಿಯೇ ಸಹಸ್ರಾರು ರೂಪಾಯಿ ಹಣವನ್ನು ಖರ್ಚು ಮಾಡುತ್ತಿದ್ದಾರೆ. ಇವುಗಳ ಬೆಲೆಯೂ ಲಕ್ಷಾಂತರ ರೂಪಾಯಿ ಇರುವುದು ಗಮನಾರ್ಹವಾಗಿದೆ.

ಚುಂಚನಕಟ್ಟೆಗೆ ಕಳೆಕಟ್ಟಿದ ಜಾನುವಾರು ಜಾತ್ರೆ

ಈ ಬಾರಿ ಚುಂಚನಕಟ್ಟೆ ಜಾನುವಾರು ಜಾತ್ರೆ ಜನವರಿ 5ರಿಂದ ಆರಂಭವಾಗಿದ್ದು, ಜಾತ್ರೆಗೆ ಬಂದಿರುವ ಜಾನುವಾರುಗಳನ್ನು ಗಮನಿಸಿದರೆ, ಜಾನುವಾರು ಜಾತ್ರೆ ಕಳೆಗುಂದಿಲ್ಲ. ರೈತರು ಇಂದಿಗೂ ಜಾನುವಾರುಗಳ ಒಡನಾಟದಲ್ಲಿಯೇ ಇದ್ದಾರೆ ಎಂಬುದನ್ನು ಸೂಚಿಸುವುದರ ಜತೆಗೆ ಜಾನುವಾರು ಜಾತ್ರೆಗೆ ಕಳೆಕಟ್ಟಿದೆ. ಕಣ್ಣು ಹಾಯಿಸಿದುದ್ದಕ್ಕೂ ಜಾನುವಾರುಗಳೇ ಕಂಡು ಬರುತ್ತಿದ್ದು, ಖುಷಿಕೊಡುತ್ತದೆ. ಜತೆಗೆ ಜಾನುವಾರು ಜಾತ್ರೆಯನ್ನು ರೈತರು ಸಡಗರ ಸಂಭ್ರಮದಿಂದಲೇ ಆರಂಭಿಸಿದ್ದು, ಲಕ್ಷಾಂತರ ಬೆಲೆ ಬಾಳುವ ದುಬಾರಿ ಎತ್ತುಗಳು ಜಾತ್ರೆಗೆ ಮೆರುಗು ತಂದಿವೆ.

ಜಾನುವಾರು ಜಾತ್ರೆಗೆ ಹೋದವರಿಗೆ ರೈತರು ಮತ್ತು ಜಾನುವಾರುಗಳ ಒಡನಾಟ ಕಣ್ಣಿಗೆ ಕಟ್ಟುತ್ತಿದೆ. ಅಷ್ಟೇ ಅಲ್ಲದೆ, ಗ್ರಾಮೀಣ ಸೊಗಡು, ಕಲೆ ಸಂಸ್ಕೃತಿ ಎಲ್ಲವೂ ಮೇಳೈಸುತ್ತಿದೆ. ರೈತರು ಮನೆಮಕ್ಕಳಿಗಿಂತಲೂ ಹೆಚ್ಚು ಜೋಪಾನ ಮಾಡಿ ಬೆಳೆಸಿದ ಎತ್ತುಗಳು ದಷ್ಠಪುಷ್ಠವಾಗಿದ್ದು ಎಲ್ಲರ ಆಕರ್ಷಿಸುತ್ತಿವೆ. ಅವುಗಳ ಕ್ಯಾಟ್ ವಾಕ್ ಗಮನಸೆಳೆಯುತ್ತಿವೆ. ಇನ್ನು ಜಾತ್ರೆಗೆ ರೈತರು ಎತ್ತುಗಳನ್ನು ಒಡ್ಡೋಲಗದ ಮೂಲಕ ತಂದಿರುವುದು ವಿಶೇಷವಾಗಿದೆ. ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ಭತ್ತ ಬೆಳೆದು ಅದನ್ನು ಕೊಯ್ಲು ಮಾಡಿ ನೆಮ್ಮದಿಯುಸಿರು ಬಿಟ್ಟಿರುವ ರೈತರು ಜಾತ್ರೆಯನ್ನು ಸಂಭ್ರಮಿಸುತ್ತಿದ್ದಾರೆ. ಜತೆಗೆ ಕೋಟ್ಯಂತರ ರೂಪಾಯಿ ವ್ಯಾಪಾರ ವಹಿವಾಟು ನಡೆಯುವ ಸಾಧ್ಯತೆಯೂ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+