ದೇಶದ ಮುಂದೆ ಒಗ್ಗಟ್ಟು ಪ್ರದರ್ಶಿಸಿ: ರೈತ ವರ್ಗಕ್ಕೆ ಸಂಸದ ಯದುವೀರ್ ವಿಶೇಷ ಕರೆ
ಮೈಸೂರು, ಡಿಸೆಂಬರ್ 23: ರೈತರು ಮತ್ತು ಸಂಘಟನೆಗಳು ತಮ್ಮ ವೈಯುಕ್ತಿಕ ವಿಚಾರಗಳನ್ನು ವೇದಿಕೆಯೊಳಗೆ ಚರ್ಚಿಸಿಕೊಂಡು ದೇಶದ ಮುಂದೆ ಒಗ್ಗಟ್ಟು ಪ್ರದರ್ಶಿಸಿ ಒಂದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದರೆ ಮಾತ್ರ ದೇಶ ಮತ್ತು ರೈತ ಸಂಕುಲದ ಅಭಿವೃದ್ಧಿ ಸಾಧ್ಯ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ನಗರದ ಪುರಭವನದ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಮಹಾ ಒಕ್ಕೂಟದ ಆಶ್ರಯದಲ್ಲಿ ಮತ್ತು ಕರ್ನಾಟಕ ರಾಜ್ಯ ರೈತಸಂಘ(ರೈತಬಣ)ದ ನೇತೃತ್ವದಲ್ಲಿ ಏರ್ಪಡಿಸಿದ್ದ ವಿಶ್ವ ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ರೈತರ ಒಳಿತಿಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

ಪ್ರಮುಖವಾಗಿ ವಿಕಸಿತ ಭಾರತ ಪರಿಕಲ್ಪನೆ ಅಡಿಯಲ್ಲಿ ರೈತರ ಸಬಲೀಕರಣಕ್ಕೆ ಮುಂದಾಗಿ ಬಲಿಷ್ಠ ಭಾರತ ನಿರ್ಮಾಣ ಮಾಡುವ ಕನಸು ಹೊಂದಿದ್ದಾರೆ. ಅದರಂತೆ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳು, ಮಣ್ಣಿನ ಫಲವತ್ತತೆ ಕಾಪಾಡುವ ಗೊಬ್ಬರ, ಮಣ್ಣಿನ ಪರೀಕ್ಷೆ, ಹನಿ ನಿರಾವರಿ ಯೋಜನೆಗಳನ್ನು ರೂಪಿಸಿರುವುದಲ್ಲದೇ, ದೇಶಾದ್ಯಂತ ಅನೇಕ ಕೃಷಿ ಅಧ್ಯಯನ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ ಎಂದರು.
ಈ ಭಾಗದಲ್ಲಿ ಅನೇಕ ಕಡೆ ಶುಂಠಿ ಬೆಳೆಗೆ ವಿಪರೀತ ರಾಸಾಯನಿಕ ಗೊಬ್ಬರಗಳನ್ನು ಬಳಸಿರುವ ಕಾರಣ ಮಣ್ಣಿನ ಫಲವತ್ತತೆ ನಶಿಸಿದೆ. ಇದಕ್ಕೆ ಮತ್ತೇ ಜೀವ ಕೊಡುವ ಅವಶ್ಯಕತೆ ಇದ್ದು, ಬೇವಿನ ಹಿಂಡಿಯನ್ನು ಗೊಬ್ಬರವಾಗಿ ಬಳಸಿ ಮಣ್ಣಿನ ಫಲವತ್ತತೆಯನ್ನು ಕಾಪಾಡಬೇಕಿದೆ. ದೇಶದಲ್ಲಿ ಕೃಷಿ ಕ್ಷೇತದಲ್ಲಿ ಕ್ರಾಂತಿ ಮೂಡಿಸಿದ ಮಾಜಿ ಪ್ರಧಾನಿ ದಿ.ಚೌದರಿ ಚರಣ್ ಸಿಂಗ್ ಸ್ಮರಣಾರ್ಥ ವಿಶ್ವ ರೈತ ದಿನಾಚರಣೆ ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ನಾಯಕರು ಕೃಷಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ವಿಶ್ವ ರೈತದಿನಾಚರಣೆ ನಡೆಯುತ್ತಿರುವುದು ಅತ್ಯಂತ ಸಂತೋಷದ ವಿಷಯ ಎಂದರು.
ರೈತ ಸುಖವಾಗಿದ್ದರೆ ಮಾತ್ರ ದೇಶ ಸುಖವಾಗಿರುತ್ತದೆ. ಈ ನಿಟ್ಟಿನಲ್ಲಿ ರೈತಬಣದ ಅಧ್ಯಕ್ಷರಾದ ಇಂಗಲಗುಪ್ಪೆ ಕೃಷ್ಣೇಗೌಡ ಅವರು ತಮ್ಮ ಪ್ರಾಮಾಣಿಕ ಪ್ರಯತ್ನಗಳ ಮೂಲಕ ರೈತರನ್ನು ಸಂಘಟಿಸಿ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇಂತಹ ನಾಯಕತ್ವ ರೈತರಿಗೆ ಬೇಕಿದೆ ಎಂದು ಶ್ಲಾಘಿಸಿದರು.

ಕರ್ನಾಟಕ ರಾಜ್ಯ ರೈತಸಂಘ (ರೈತಬಣ)ದ ಅಧ್ಯಕ್ಷರಾದ ಇಂಗಲಗುಪ್ಪೆ ಕೃಷ್ಣೇಗೌಡ ಮಾತನಾಡಿ, ವಿಶ್ವ ರೈತ ದಿನಾಚರಣೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ರಾಜಕಾರಣಿಗಳಿಗೆ ಆಹ್ವಾನ ನೀಡಲಾಗಿತ್ತು ಆದರೇ, ಯಾರೂ ಬಂದಿಲ್ಲ. ರೈತರ ಸಮಸ್ಯೆ ಈಡೇರಿಸಿಲ್ಲ. ಒಂದು ವೇಳೆ ಕಾರ್ಯಕ್ರಮಕ್ಕೆ ಬಂದರೆ ರೈತರಿಗೆ ಉತ್ತರಿಸಬೇಕಾಗುತ್ತದೆ ಎಂಬ ಭಯದಿಂದ ರಾಜಕಾರಣಿಗಳು ಕಾರ್ಯಕ್ರಮಕ್ಕೆ ಬಂದಿಲ್ಲ. ಇದರಿಂದ ನಮಗೆ ಯಾವುದೇ ಬೇಸರವಿಲ್ಲ ಎಂದರು.
ಅವರದ್ದು, ಕೇವಲ ೫ ವರ್ಷದ ಆಟ, ನಮ್ಮದು ಶಾಶ್ವತ ಆಟ, ಮತ್ತೇ ಅವರು ನಮ್ಮ ಬಳಿ ಬರಬೇಕು. ಆಗ ನಾವು ರೈತ ಶಕ್ತಿಯನ್ನು ತೋರಿಸುತ್ತೇವೆ. ಇನ್ನು ಮುಂದೆ ಯಾವುದೇ ಕಾರ್ಯಕ್ರಮಕ್ಕೆ ರಾಜಕಾರಣಿಗಳಿಗೆ ಆಹ್ವಾನ ನೀಡುವುದಿಲ್ಲ ಎಂದ ಅವರು ಮುಂದಿನ ವಿಶ್ವ ರೈತ ದಿನಾಚರಣೆಯನ್ನು ಬೆಳಗಾವಿ ಜಿಲ್ಲೆಯಲ್ಲಿ ಆಚರಿಸುವುದಾಗಿ ಘೋಷಿಸಿದರು. ರೈತರನ್ನು ದೇಶದ ಬೆನ್ನೆಲುಬು ಎಂದು ರಾಜಕಾರಣಿಗಳು ಕೇವಲ ವೇದಿಕೆಗಳಲ್ಲಿ ಹೇಳುತ್ತಾರೆ. ಆದರೆ, ದೇಶಕ್ಕೆ ಅನ್ನ ನೀಡುವ ರೈತರನ್ನು ಸದಾ ಕಾಲ ನೆನೆಯಲು ವಿಶ್ವ ರೈತ ದಿನಾಚರಣೆಯನ್ನು ಸರ್ಕಾರವೇ ಆಚರಿಸಲಿ ಎಂದು ಹೇಳಿದರು.












Click it and Unblock the Notifications