ಜುಲೈನಿಂದ ಮೈಸೂರು ದಸರಾ ಸಿದ್ಧತೆ ಆರಂಭ
ಮೈಸೂರು, ಜೂನ್ 10: ಅದ್ಧೂರಿ ಮೈಸೂರು ದಸರಾ- 2019ರ ಮಹೋತ್ಸವವು ಈ ಬಾರಿ ಸೆಪ್ಟೆಂಬರ್ 28ರಿಂದ ಆರಂಭವಾಗಲಿದೆ. ಪ್ರತಿ ವರ್ಷ ಅಕ್ಟೋಬರ್ ಮೂರನೇ ಅಥವಾ ನಾಲ್ಕನೇ ವಾರ ದಸರಾ ಉತ್ಸವ ನಡೆಯುತ್ತಿತ್ತು. ಆದರೆ ಈ ವರ್ಷ 10 ದಿನ ಮುಂಚೆಯೇ ನಡೆಯುತ್ತಿದ್ದು, ಸಿದ್ದತೆಗಳ ಕುರಿತೂ ಚರ್ಚೆ ನಡೆದಿದೆ.
ಸಿದ್ದರಾಮಯ್ಯನವರ ಕಾಲದಲ್ಲಿ ಗಿರೀಶ್ ಕಾರ್ನಾಡ್ ದಸರಾ ಉದ್ಘಾಟಿಸಿದಾಗ
ಮುಂದಿನ ತಿಂಗಳ ಜುಲೈ ಮೊದಲ ವಾರದಲ್ಲೇ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ದಸರಾ ಉನ್ನತ ಮಟ್ಟದ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಲು ಸರ್ಕಾರ ಚಿಂತನೆ ನಡೆಸಿದೆ. ಈ ವರ್ಷದ ಅಕ್ಟೋಬರ್ 8ರಂದು ವೈಭವೋಪೇತ ವಿಜಯದಶಮಿ ಮೆರವಣಿಗೆ ನಡೆಯಲಿದೆ. ಸಭೆಯ ತೀರ್ಮಾನದಂತೆ ಮೈಸೂರು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಪ್ರಾಚ್ಯವಸ್ತು ಮತ್ತು ಪರಂಪರೆ ಇಲಾಖೆ, ಮೈಸೂರು ಮಹಾನಗರಪಾಲಿಕೆ, ಮುಡಾ ಅಧಿಕಾರಿಗಳು ದಸರೆಗೆ ಸಿದ್ಧತೆ ಮಾಡಿಕೊಳ್ಳಲು ಚಿಂತನೆ ನಡೆಸುತ್ತಿದ್ದಾರೆ.
ದಸರಾ ಹಿನ್ನೆಲೆ ಪೂರ್ವಭಾವಿಯಾಗಿ ಟೆಂಡರ್ ಕರೆಯುವುದು, ಹಲವು ಕಾಮಗಾರಿ ಕೆಲಸಗಳು, ಜಿಲ್ಲೆಯ ಪ್ರಮುಖ ಕಟ್ಟಡಗಳಿಗೆ ಪೇಂಟ್ ಮಾಡುವ ಪ್ರಕ್ರಿಯೆಯ ಕೆಲಸವನ್ನು ಆದಷ್ಟು ಬೇಗನೆ ಈ ಬಾರಿ ಕೈಗೆತ್ತಿಕೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.