Mysuru Dasara: ಗಮನಿಸಿ... ಈ ದಿನಗಳಲ್ಲಿ ಸಾರ್ವಜನಿಕರಿಗೆ ಮೈಸೂರು ಅರಮನೆ ಪ್ರವೇಶ ನಿರ್ಬಂಧ
ಮೈಸೂರು ಸೆಪ್ಟೆಂಬರ್ 26: ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನೆಲೆಯಲ್ಲಿ ಕೆಲ ದಿನಗಳ ಕಾಲ ಸಾರ್ವಜನಿಕರಿಗೆ ಮೈಸೂರು ಅರಮನೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ದಸರಾ ಅಂಗವಾಗಿ ಮೈಸೂರು ರಾಜವಂಶಸ್ಥರು ಅರಮನೆಯಲ್ಲಿ ಧಾರ್ಮಿಕ ಪೂಜಾ ಕೈಂಕಾರ್ಯಗಳನ್ನು ಕೈಗೊಳ್ಳುವರು. ಹೀಗಾಗಿ ನಿಗದಿತ ದಿನಗಳಲ್ಲಿ ಪ್ರವಾಸಿಗರಿಗೆ ಅರಮನೆ ಪ್ರವೇಶ ನಿರ್ಬಂಧಿಸಲಾಗಿದೆ. ಹಾಗಾದರೆ ಯಾವೆಲ್ಲಾ ದಿನ ಪ್ರವಾಸಿಗರಿಗೆ ಅರಮನೆ ಪ್ರವೇಶ ನಿಷೇಧಿಸಲಾಗಿದೆ ಎನ್ನುವುದನ್ನು ಈಗ ತಿಳಿಯೋಣ.
ನಾಡಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಅರಮನೆಯಲ್ಲಿ ದಸರಾ ಆಚರಣೆ ಹಾಗೂ ಖಾಸಗಿ ದರ್ಬಾರ್‌ಗೆ ಸಿದ್ಧತೆ ಪ್ರಾರಂಭವಾಗಿದ್ದು, ಸೆಪ್ಟೆಂಬರ್ 27 ರಂದು ಸಿಂಹಾಸನ ಜೋಡಣೆ ಕಾರ್ಯಕ್ರಮ ಇರುವುದರಿಂದ ಅಂದು ಬೆಳಗ್ಗೆ 10 ಗಂಟೆಯಿಂದ 1 ಗಂಟೆಯವರೆಗೆ ಅರಮನೆ ಪ್ರವೇಶ ಇರುವುದಿಲ್ಲ.

*ಅಕ್ಟೋಬರ್ 3ರಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸುವುದರಿಂದ ಅಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೂ ಸಾರ್ವಜನಿಕರಿಗೆ ಅರಮನೆ ಪ್ರವೇಶವಿರುವುದಿಲ್ಲ.
*ಅಕ್ಟೋಬರ್ 11ರಂದು ಇಡೀ ದಿನ ಅರಮನೆಯಲ್ಲಿ ಆಯುಧ ಪೂಜೆ (Ayudha Pooje at Palace) ನಡೆಯಲಿದ್ದು ಅರಮನೆ ಪ್ರವೇಶ ನಿರ್ಬಂಧಿಸಲಾಗುತ್ತದೆ.

*ಅಕ್ಟೋಬರ್ 12ರಂದು ವಿಜಯದಶಮಿ (ಜಂಬು ಸವಾರಿ) ಹಿನ್ನೆಲೆಯಲ್ಲಿ ಅಂದು ಇಡೀ ದಿನ ಸಾರ್ವಜನಿಕರಿಗೆ ಅರಮನೆ ಪ್ರವೇಶ ಅವಕಾಶ ಇರುವುದಿಲ್ಲ.
* ಇನ್ನೂ ಅಕ್ಟೋಬರ್ 27ರಂದು ಸಿಂಹಾಸನದ ವಿಯೋಜನೆ (Dissembling of Throne) ಇರುವುದಿಂದ ಬೆಳಗ್ಗೆ 10 ರಿಂದ ಮಧ್ಯಾಹ್ನ 1ರವರೆಗೆ ಪ್ರವಾಸರಿಗರಿಗೆ ಅರಮನೆ ಪ್ರವೇಶ ನಿಷೇಧಿಸಲಾಗಿದೆ.

ಈ ಮೇಲಿನ ಎಲ್ಲಾ ದಿನಗಳಂದು ಮೈಸೂರು ಅರಮನೆಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧ ಇರಲಿದ್ದು, ಇದಕ್ಕೆ ಪ್ರವಾಸಿಗರು ಸಹಕರಿಸಬೇಕೆಂದು ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕರು ಮನವಿ ಮಾಡಿದ್ದಾರೆ.
ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಅಕ್ಟೋಬರ್ 3ರಂದು ಬೆಳಗ್ಗೆ 9.15ರ ಶುಭ ಮುಹೂರ್ತದಲ್ಲಿ ಮೈಸೂರು ದಸರಾ ಮುಹೋತ್ಸವ ಉದ್ಘಾಟನೆಯಾಗಲಿದೆ. ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ದಸರಾ ಗಜಪಡೆ ಮತ್ತು ಅಶ್ವಗಳ ಸಮ್ಮುಖದಲ್ಲಿ ಇಂದು ಕುಶಾಲತೋಪು ಸಿಡಿಸುವ ಮೊದಲ ಹಂತದ ತಾಲೀಮು ನಡೆಯಿತು.

ಕುಶಾಲತೋಪು ಸಿಡಿಸುವ ತಾಲೀಮಿನಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 14 ಆನೆಗಳು ಭಾಗಿಯಾಗಿದ್ದವು. ಅಲ್ಲದೆ ಈ ವೇಳೆ ಅಶ್ವಾರೋಹಿ ದಳದ ಕುದುರೆಗಳು ಸಹ ಭಾಗಿಯಾಗಿದ್ದವು. ಕುಶಾಲತೋಪು ಸಿಡಿಸುವ ವೇಳೆ ಆನೆಗಳು ಬೆಚ್ಚಿಲ್ಲ.
ಏಕಲವ್ಯ ಮೊದಲ ಬಾರಿ ದಸರಾ ಜಂಬೂಸವಾರಿಗೆ ಆಗಮಿಸಿದ್ದರೂ ಬೆಚ್ಚದೇ ನಿಂತು ಎಲ್ಲರನ್ನೂ ಚಕಿತಗೊಳಿಸಿದ್ದಾನೆ. ಹೀಗಾಗಿ ಮುಂದಿನ ತಾಲೀಮಿನಲ್ಲೂ ಆನೆಗಳು ಬೆದರುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ. ಇದರೊಂದಿಗೆ ಕುಶಾಲತೋಪು ಸಿಡಿಸುವ ಮೊದಲ ಹಂತದ ತಾಲೀಮು ಯಶಸ್ವಿಯಾಗಿದೆ.












Click it and Unblock the Notifications