ನಂದಿಪೂಜೆ ನೆರವೇರಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ಹೀಗೆ ಹೇಳ್ಬಿಟ್ರು
ಮೈಸೂರು, ಅಕ್ಟೋಬರ್, 12: ಐತಿಹಾಸಿಕ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿಗೆ ಸಂಪ್ರದಾಯದಂತೆ ಸಿಎಂ ಸಿದ್ದರಾಮಯ್ಯನವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ನಂತರ ಜಂಬೂಸವಾರಿಗೆ ಚಾಲನೆ ಸಿಕ್ಕಿದೆ. ಸುರಿಯುವ ಮಳೆಯಲ್ಲಿ ಜನಸಾಗರ ಜಂಬೂಸವಾರಿಯನ್ನು ವೀಕ್ಷಿಸಿ ಸಂತೃಪ್ತಗೊಂಡರು.
ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ಮಧ್ಯಾಹ್ನ 1:55ರ ಸುಮಾರಿಗೆ ನಂದಿ ಧ್ವಜ ಪೂಜೆಯನ್ನು ಸಿಎಂ ಸಿದ್ದರಾಮಯ್ಯ ಅವರು ನೆರವೇರಿಸಿದರು. ಈ ಮೂಲಕ ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಿದರು. ಇವರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಮಹದೇವಪ್ಪ, ಶಿವರಾಜ ತಂಗಡಗಿ, ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಕೆಲ ಶಾಸಕರು ಸಾಥ್ ನೀಡಿದರು.

ನಂದಿಪೂಜೆ ಸಲ್ಲಿಸಿ ಮುಖ್ಯಮಂತ್ರಿಗಳು ಸಂದೇಶ ರವಾನಿಸುವುದು ಹಿಂದಿನಿಂದಲೂ ನಡೆದು ಬಂದಿದ್ದು, ಅದರಂತೆಯೇ ಈ ಬಾರಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ನಾಡಿನ ಜನತೆಗೆ ಶುಭಾಶಯ ಕೋರಿ ರಾಜ್ಯ ಸುಭೀಕ್ಷೆಯಾಗುವಂತೆ ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿದರು. ದುಷ್ಟರ ಸಂಹಾರ, ಶಿಷ್ಟರ ರಕ್ಷಣೆಯೇ ದಸರಾದ ಸಂಕೇತ ಎಂದು ತಿಳಿಸಿದರು.
ಈ ಶುಭ ಸಂದರ್ಭದಲ್ಲಿ ನಾಡಿನ ಹಾಗೂ ದೇಶದ ಜನರಿಗೆ ದಸರಾ ಉತ್ಸವದ ಶುಭಾಶಯಗಳನ್ನು ಕೋರುತ್ತೇನೆ. ಈ ಬಾರಿ ಉತ್ತಮ ಮಳೆ ಹಾಗೂ ಬೆಳೆಯಾಗಿದ್ದು, ಇದು ನಾಡಿನ ರೈತರಲ್ಲಿ ಸಂತಸ ಮನೆಮಾಡಿದೆ. ರಾಜ್ಯದ ಎಲ್ಲಾ ಜಲಾಶಯಗಳು ತುಂಬಿರುವುದು ಸಂತಸದ ವಿಚಾರ. ದುಷ್ಟರ ಸಂಹಾರ, ಶಿಷ್ಟರ ರಕ್ಷಣೆಯೇ ದಸರಾದ ಸಂಕೇತ. ರಾಜ್ಯದಲ್ಲಿ ಅಶಾಂತಿ ಮೂಡಿಸಿ, ಬದುಕುಗಳನ್ನು ಹಾಳುಮಾಡಲು ಸಂಚು ರೂಪಿಸುವವರಿಗೆ ದೇವರು ಸದ್ಭುದ್ಧಿ ನೀಡಲಿ ಎಂದು ತಿಳಿಸಿದರು
ಇದಕ್ಕೂ ಮುನ್ನ ಲಲಿತ್ ಮಹಲ್ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ, ಸಚಿವರಾದ ಶಿವರಾಜ ತಂಗಡಗಿ, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಹಲವರು ಐರಾವತ ಬಸ್‌ನಲ್ಲಿ ಅರಮನೆ ಆವರಣಕ್ಕೆ ಆಗಮಿಸಿ ಬಳಿಕ ನಂದಿ ಪೂಜೆ ಸಲ್ಲಿಸಿದರು.












Click it and Unblock the Notifications