Mysuru Dasara: ಮೈಸೂರಿನಲ್ಲಿ ದಸರಾ ಗಜಪಡೆಗೆ ಈಗ ರಾಜಾತಿಥ್ಯ ಹೇಗಿದೆ ಗೊತ್ತಾ?
ಮೈಸೂರು, ಆಗಸ್ಟ್ 31: ವಿಶ್ವವಿಖ್ಯಾತ ನಾಡಹಬ್ಬ ದಸರಾಕ್ಕೆ ಮೈಸೂರು ನಗರ ನಿಧಾನವಾಗಿ ತೆರೆದುಕೊಳ್ಳುತ್ತಿದೆ. ಈಗಾಗಲೇ ನಗರಕ್ಕೆ ಬಂದಿರುವ ಅಭಿಮನ್ಯು ನೇತೃತ್ವದ ಗಜಪಡೆ ಪ್ರತಿದಿನವೂ ಬೆಳಿಗ್ಗೆ ಮತ್ತು ಸಂಜೆ ತಾಲೀಮು ನಡೆಸುತ್ತಿವೆ. ಆ ಮೂಲಕ ಜಂಬೂ ಸವಾರಿಗೆ ತಯಾರಿ ನಡೆಸುತ್ತಿದ್ದರೆ, ಅದರ ಜತೆಗೆ ಗಜಪಡೆಗೆ ಪೋಷಕಾಂಶವುಳ್ಳ ಆಹಾರ ನೀಡಿ ಆರೋಗ್ಯ ಕಾಪಾಡಿಕೊಂಡು ದಷ್ಠಪುಷ್ಠಗೊಳಿಸುವ ಮೂಲಕ ಶಕ್ತಿಶಾಲಿಗಳನ್ನಾಗಿ ಮಾಡಬೇಕಾಗಿರುವುದರಿಂದ ರಾಜಾತಿಥ್ಯ ನೀಡಲಾಗುತ್ತಿದೆ.
ಗಜಪಡೆಗೆ ರಾಜಾತಿಥ್ಯ ನೀಡುವುದು ಪ್ರತಿವರ್ಷವೂ ನಡೆಯುತ್ತದೆ. ಅದರಂತೆ ದಸರಾ ಜಂಬೂಸವಾರಿ ಹೊತ್ತಿಗೆ ಗಜಪಡೆ ತೂಕ ಹಚ್ಚಿಸಿಕೊಂಡು ದಷ್ಠಪುಷ್ಠವಾಗಿ ಕಾಣಿಸುವುದರೊಂದಿಗೆ ಜಂಬೂ ಸವಾರಿಯಲ್ಲಿ ಜನಮನಸೆಳೆಯುತ್ತವೆ. ಕಾಡಿನಲ್ಲಿ ಅವುಗಳಿಗೆ ಸೊಪ್ಪು ಹಾಗೂ ಹುರುಳಿ ಸೇರಿದಂತೆ ಕೆಲವೊಂದು ಪದಾರ್ಥಗಳನ್ನು ನೀಡಲಾಗುತ್ತದೆಯಾದರೂ ಭೂರಿ ಬೋಜನ ಸಿಗುವುದಿಲ್ಲ. ಹೀಗಾಗಿ ಕಾಡಿನಿಂದ ನಾಡಿಗೆ ಬರುವ ವೇಳೆ ಹೆಚ್ಚಿನ ತೂಕ ಕಡಿಮೆಯಿರುತ್ತದೆಯಾದರೂ ತದ ನಂತರ ಇಲ್ಲಿನ ಪೌಷ್ಠಿಕ ಆಹಾರವನ್ನು ಸೇವಿಸುವುದರಿಂದ ತೂಕ ಹೆಚ್ಚಾಗುತ್ತದೆ.

ಗಜಪಡೆ ಪೈಕಿ ಕ್ಯಾಪ್ಟನ್ ಆಗಿರುವ ಅಭಿಮನ್ಯು ಸಾವಿರ ಕೆಜಿಯಷ್ಟು ಇರುವ ಅಂಬಾರಿ ಹೊತ್ತು ಸುಮಾರು ಐದಾರು ಕಿ.ಮೀ. ನಡೆಯಬೇಕಾಗಿರುವುದರಿಂದ ಆರೋಗ್ಯಕಾರಿ ಮತ್ತು ಪೌಷ್ಠಿಕ ಆಹಾರವನ್ನೇ ನೀಡಬೇಕಾಗುತ್ತದೆ. ಅದರ ತೂಕ ಹೆಚ್ಚಿಸುವುದರ ಜತೆಗೆ ಶಕ್ತಿಶಾಲಿಯನ್ನಾಗಿ ಮಾಡಬೇಕಾಗುತ್ತದೆ. ಇದರ ಆರೋಗ್ಯ ನೋಡಿಕೊಂಡು ಪಶುವೈದ್ಯಾಧಿಕಾರಿಗಳ ಸಲಹೆಯಂತೆ ಆಹಾರವನ್ನು ನೀಡಬೇಕಾಗುತ್ತದೆ. ಹೀಗಾಗಿ ದಿನದಲ್ಲಿ ಯಾವ ಹೊತ್ತಿಗೆ ಯಾವ ಆಹಾರ ನೀಡಬೇಕು? ಎಷ್ಟು ಪ್ರಮಾಣದಲ್ಲಿ ನೀಡಬೇಕು ಎಂಬುದರ ಸಲಹೆಯಂತೆಯೇ ಆಹಾರ ನೀಡಲಾಗುತ್ತದೆ.
ಆನೆಗಳ ಉಪಚಾರ ಶ್ಲಾಘನೀಯ ಕಾರ್ಯ
ಇಲ್ಲಿ ಅರಣ್ಯಾಧಿಕಾರಿಗಳ ಜವಬ್ದಾರಿ, ಪಶುವೈದ್ಯಾಧಿಕಾರಿಗಳ ಸಲಹೆ ಮತ್ತು ಮಾವುತ, ಕಾವಾಡಿಗಳ ಉಪಚಾರದಿಂದಾಗಿ ಗಜಪಡೆಯಲ್ಲಿರುವ ಎಲ್ಲ ಆನೆಗಳು ಆರೋಗ್ಯವಾಗಿ, ಶಕ್ತಿಶಾಲಿಯಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ. ದಸರಾ ದಿನದಂದು ನಮಗೆ ಮೇಲ್ನೋಟಕ್ಕೆ ಬರೀ ಅಂಬಾರಿ ಹೊತ್ತು ಸಾಗುವ ಗಜಪಡೆ ಮಾತ್ರ ಕಾಣಿಸುತ್ತದೆ. ಆದರೆ ಅದರ ಹಿಂದಿನ ಪರಿಶ್ರಮ ಕಾಣಿಸುವುದೇ ಇಲ್ಲ. ಅದನ್ನು ಹತ್ತಿರದಿಂದ ನೋಡಿದರೆ ಅಚ್ಚರಿ ಮೂಡುತ್ತದೆ. ಅಷ್ಟೇ ಅಲ್ಲದೆ, ಅರಣ್ಯ ಅಧಿಕಾರಿಗಳು, ಮಾವುತ, ಕಾವಾಡಿ ಮತ್ತು ಅವರ ಕುಟುಂಬದವರ ಕಾರ್ಯವನ್ನು ಶ್ಲಾಘಿಸಲೇ ಬೇಕಾಗುತ್ತದೆ.

ಗಜಪಡೆ ವಾಸ್ತವ್ಯ ಹೂಡಿರುವ ಅರಮನೆ ಆವರಣಕ್ಕೆ ಹೋಗಿದ್ದೇ ಆದರೆ ದಿನನಿತ್ಯ ಅವುಗಳ ಪಾಲನೆ ಹೇಗಿರುತ್ತದೆ ಎಂಬುದು ಗೊತ್ತಾಗುತ್ತದೆ. ಬೆಳಿಗ್ಗೆ ಮತ್ತು ಸಂಜೆ ಅವುಗಳಿಗೆ ಪೌಷ್ಠಿಕ ಆಹಾರ ತಯಾರಿ ಮಾಡುವ ಮತ್ತು ಅದನ್ನು ತಿನ್ನಿಸುವ ಪರಿ ಎಲ್ಲವೂ ಕಣ್ಮುಂದೆ ಬರುತ್ತದೆ. ನಿಜಹೇಳಬೇಕೆಂದರೆ ಗಜಪಡೆಗೆ ಆಹಾರ ತಯಾರಿ ಮಾಡಿ ಅದನ್ನು ಅವುಗಳಿಗೆ ತಿನ್ನಿಸುವುದು ಸುಲಭದ ಕೆಲಸವೇ ಅಲ್ಲ. ಆದರೆ ಸದಾ ಆನೆಗಳ ಒಡನಾಟದಲ್ಲಿರುವ ಮಾವುತ ಮತ್ತು ಕಾವಾಡಿಗಳು ಅದನ್ನು ತುಂಬಾ ಪ್ರೀತಿಯಿಂದ ಮಾಡುತ್ತಾರೆ.
ಜೋರಾಗಿ ನಡೆಯುತ್ತಿರುವ ರಾಜಾತಿಥ್ಯ
ತಮ್ಮ, ತಮ್ಮ ಆನೆಗಳೊಂದಿಗಿದ್ದು, ಅವುಗಳ ಇಚ್ಛೆಯರಿತು ನೀರು, ಆಹಾರ ನೀಡುತ್ತಾ ಸಲಹುತ್ತಾರೆ. ಇನ್ನು ಮಕ್ಕಳಂತು ಸದಾ ಆನೆಗಳೊಂದಿಗೆ ಕಾಲ ಕಳೆಯುತ್ತಿರುತ್ತಾರೆ. ಹೀಗೆ ಆನೆಗಳ ಜತೆಗಿದ್ದುಕೊಂಡೇ ಅವುಗಳ ಪೋಷಣೆ ಮಾಡುವುದಲ್ಲದೆ, ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳುತ್ತಾರೆ. ಆನೆಗಳು ಕೂಡ ಮಾವುತರು, ಕಾವಾಡಿಗಳು ಹೇಳಿದಂತೆ ನಡೆದುಕೊಳ್ಳುತ್ತವೆ. ಕಾಡಿನಿಂದ ನಾಡಿಗೆ ಬಂದು ತಾಲೀಮಿನಲ್ಲಿ ತೊಡಗಿಸಿಕೊಂಡಿರುವ ಗಜಪಡೆಗೆ ರಾಜಾತಿಥ್ಯ ಜೋರಾಗಿಯೇ ನಡೆಯುತ್ತಿದೆ. ಇದು ಹೇಗಿದೆ ಎಂಬುದನ್ನು ನೋಡಿದ್ದೇ ಆದರೆ ಅಚ್ಚರಿ ಮೂಡುತ್ತದೆ.
ದಸರಾ ಗಜಪಡೆಗೆ ಪ್ರತಿನಿತ್ಯ ಎರಡು ಬಾರಿ 6ರಿಂದ 7 ಕೆ.ಜಿ.ಯಷ್ಟು ಪ್ರೋಟಿನ್ ಯುಕ್ತ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಇದರಲ್ಲಿ ಹೆಸರು ಕಾಳು, ಉದ್ದಿನ ಕಾಳು, ಗೋಧಿ, ಕುಸುಲಕ್ಕಿ, ಈರುಳ್ಳಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬೇಯಿಸಿದ ವಿಶೇಷ ಖಾದ್ಯ ನೀಡಲಾಗುತ್ತಿದೆ. ಜತೆಗೆ ಗೆಡ್ಡೆಕೋಸು, ಬೀಟ್ರೋಟ್, ಕ್ಯಾರೆಟ್, ಮೂಲಂಗಿ ಹಾಗೂ ಸೌತೆಯನ್ನು ನೀಡಲಾಗುತ್ತಿದೆ. ಇಷ್ಟೇ ಅಲ್ಲದೆ, ಪೌಷ್ಟಿಕ ಆಹಾರದ ಜತೆಗೆ ಹಸಿ ಹುಲ್ಲು, ಆಲ ಮತ್ತು ಗೋಣಿ ಸೊಪ್ಪನ್ನು ನೀಡಲಾಗುತ್ತಿದೆ.
ದಷ್ಠಪುಷ್ಠವಾಗಿ ಕಂಗೊಳಿಸಲಿರುವ ಗಜಪಡೆ
ಇದೆಲ್ಲದರ ನಡುವೆ ಭತ್ತದ ಹುಲ್ಲಿನಲ್ಲಿ ಭತ್ತ, ಬೆಲ್ಲ, ಹಿಂಡಿ, ಉಪ್ಪು ಮತ್ತು ತೆಂಗಿನ ಕಾಯಿ ಸೇರಿಸಿದ ಕುಸುರೆ ನೀಡಲಾಗುತ್ತಿದೆ. ಪ್ರತಿ ನಿತ್ಯ ಒಂದು ಗಂಡು ಆನೆಗೆ 650 ರಿಂದ 750 ಕೆ.ಜಿ.ಯಷ್ಟು ಆಹಾರ, ಹೆಣ್ಣು ಆನೆಗೆ 450 ರಿಂದ 500 ಕೆ.ಜಿ.ಯಷ್ಟು ಆಹಾರ ನೀಡಲಾಗುತ್ತದೆ. ಈ ಆಹಾರಗಳ ತಯಾರಿ ಅರಮನೆಯ ಆವರಣದಲ್ಲಿರುವ ಶ್ರೀ ಕೋಡಿ ಸೋಮೇಶ್ವರ ದೇವಾಲಯದ ಬಳಿ ಇರುವ ಅಡುಗೆ ಮನೆಯಲ್ಲಿ ನಡೆಯುತ್ತದೆ. ಆನೆಗಳು ಪ್ರತಿ ದಿನ ಮೂರು ಬಾರಿ ದಿನವೊಂದಕ್ಕೆ ಒಟ್ಟು 250ರಿಂದ 300ಲೀಟರ್ ನೀರು ಕುಡಿಯುತ್ತವೆ. ಮುಂಜಾನೆ 5.30ಕ್ಕೆ ಪೌಷ್ಟಿಕ ಆಹಾರ ಸೇವಿಸಿದ ನಂತರ ಒಮ್ಮೆ, ಮಧ್ಯಾಹ್ನ ಹಾಗೂ ಸಂಜೆ ತಾಲೀಮಿಗೆ ಹೋಗುವ ಮುನ್ನ ನೀರು ಕುಡಿಸಲಾಗುತ್ತದೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ತಾಲೀಮಿನಲ್ಲಿ ತೊಡಗಿಸಿಕೊಂಡಿರುವ ಗಜಪಡೆ ಈಗಾಗಲೇ ನಗರಕ್ಕೆ ಹೊಂದಿಕೊಂಡು ತಾಲೀಮಿನಲ್ಲಿ ಭಾಗಿಯಾಗುತ್ತಿವೆ. ಜತೆಗೆ ಕಾಡಿನಲ್ಲಿ ಸೇವಿಸುತ್ತಿದ್ದ ಆಹಾರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮತ್ತು ವಿವಿಧ ಬಗೆಯ ಆಹಾರಗಳನ್ನು ಸೇವಿಸುತ್ತಿವೆ. ಸದ್ಯ ಅವುಗಳ ಜೀವನ ಕ್ರಮವೇ ಬದಲಾಗಿದ್ದು, ಬೆಳಿಗ್ಗೆ ಸಂಜೆ ತಾಲೀಮು ಅದರ ನಡುವೆ ಮಹಾಮಜ್ಜನ, ವಿಶ್ರಾಂತಿ ಹೀಗೆ ನಡೆಯುತ್ತಿದ್ದು, ಸರ್ವ ರೀತಿಯಲ್ಲಿ ಗಜಪಡೆ ಸಜ್ಜಾಗುತ್ತಿವೆ. ಶೀಘ್ರದಲ್ಲಿಯೇ ಎರಡನೇ ತಂಡವು ಇದರ ಜತೆಗೆ ಸೇರ್ಪಡೆಗೊಳ್ಳಲಿದ್ದು, ತಾಲೀಮಿಗೆ ಇನ್ನಷ್ಟು ರಂಗು ಬರಲಿದೆ.












Click it and Unblock the Notifications