Mysuru Dasara 2024: ಮೈಸೂರು ದಸರಾ 2024ರ ವೇಳಾಪಟ್ಟಿ ಬಿಡುಗಡೆ-ಮಾಹಿತಿ ಇಲ್ಲಿದೆ ತಿಳಿಯಿರಿ
ಮೈಸೂರು, ಸೆಪ್ಟೆಂಬರ್, 28: ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭ ಆಗಿದೆ. ಬರೀ ರಾಜ್ಯ ಅಲ್ಲದೆ, ದೇಶ, ವಿದೇಶಗಳಿಂದಲೂ ಈ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಾರೆ. ಈ ಅದ್ದೂರಿ ದಸರಾ ಆಚರಣೆಗೆ ಸರ್ಕಾರ, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಜಿಲ್ಲಾಡಳಿತ 2024ರ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಹಾಗಾದರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ದಸರಾ ಉದ್ಘಾಟನೆ, ಕಾರ್ಯಕ್ರಮಗಳು, ಜಂಬೂಸವಾರಿ ದಿನಾಂಕಗಳನ್ನು ಜಿಲ್ಲಾಡಳಿತ ಘೋಷಣೆ ಮಾಡಿದೆ. ಅಕ್ಟೋಬರ್ 3ರಂದು ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9.15ರಿಂದ 9.45ರ ನಡುವೆ ವೃಶ್ಚಿಕ ಲಗ್ನದಲ್ಲಿ ಮೈಸೂರು ದಸರಾಗೆ ಚಾಲನೆ ಸಿಲಗಲಿದೆ. ಸಾಹಿತಿ ಹಂ.ಪ.ನಾಗರಾಜಯ್ಯ ಅವರು ದಸರಾ ಉದ್ಘಾಟನೆ ಮಾಡಲಿದ್ದಾರೆ.

* ಅಕ್ಟೋಬರ್ 3ರಿಂದ 11ರವರೆಗೂ ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಯಲಿದೆ.
* ಅಕ್ಟೋಬರ್ 12ರ ಶನಿವಾರ ಜಂಬೂ ಸವಾರಿ ನಡೆಯಲಿದೆ.
* ಮಧ್ಯಾಹ್ನ 1.41ರಿಂದ 2.10ರ ನಡುವೆ ಶುಭ ಮಕರ ಲಗ್ನದಲ್ಲಿ ನಂದಿ ಧ್ವಜಪೂಜೆ ನೆರವೇರಲಿದೆ. ಸಂಜೆ 4 ಗಂಟೆಯಿಂದ 4:30ರ ನಡುವೆ ಕುಂಭ ಲಗ್ನದಲ್ಲಿ ವಿಜಯದಶಮಿ ಮೆರವಣಿಗೆ ಜಂಬೂ ಸವಾರಿಗೆ ಚಾಲನೆ ದೊರೆಯಲಿದೆ. ಅಂದು ಸಂಜೆ 7ಗಂಟೆಗೆ ಬನ್ನಿಮಂಟಪ ಆವರಣದಲ್ಲಿ ಪಂಜಿನ ಕವಾಯತು ನಡೆಯಲಿದೆ. ಪಂಜಿನ ಕವಾಯತ್ ಅನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ.
* ಇನ್ನು ಯುವ ದಸರಾವನ್ನು ಮಾನಸಗಂಗೋತ್ರಿ ವಿಶ್ವವಿದ್ಯಾಲಯದ ಮುಕ್ತ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಪ್ರತಿದಿನ ಸಂಜೆ 5 ಗಂಟೆಯಿಂದ ಕಾರ್ಯಕ್ರಮಗಳು ಪ್ರಾರಂಭವಾಗುತ್ತವೆ.
ಯುವ ದಸರಾಗೆ ಹೋಗಲು ನಗರದ ಪ್ರಮುಖ ಸ್ಥಳಗಳಿಂದ ಆಟೋ ರಿಕ್ಷಾ ಮತ್ತು ಟ್ಯಾಕ್ಸಿಗಳ ಸೇವೆ ಲಭ್ಯವಿವೆ. ಸಾರ್ವಜನಿಕ ಬಸ್‌ಗಳು ನಿಯಮಿತವಾಗಿ ತೆರಳುತ್ತವೆ. ಖಾಸಗಿ ವಾಹನದಲ್ಲಿ ಹೋಗುವವರಿಗೆ ಕಾರ್ಯಕ್ರಮ ನಡೆಯವ ಸಮೀಪ ಪಾರ್ಕಿಂಗ್ ವ್ಯವಸ್ಥೆ ಇದೆ. ಇನ್ನು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಅಧಿಕೃತ ದಸರಾ 2024ವೆಬ್‌ಸೈಟ್ ಅಥವಾ ಮೈಸೂರಿನ ಸ್ಥಳೀಯ ಪ್ರವಾಸೋದ್ಯಮ ಕಚೇರಿಗಳಿಗೆ ಭೇಟಿ ನೀಡಬಹುದಾಗಿದೆ.
ಮಹಿಷ ಸಾಂಸ್ಕೃತಿಕ ಹಬ್ಬಕ್ಕೆ ಆಯೋಜನೆ: ಈಗಾಗಲೇ ನಾಡಹಬ್ಬ ದಸರಾಗೆ ಭಾರೀ ಸಿದ್ಧತೆ ನಡೆದಿವೆ. ಇನ್ನು ವಿವಿಧ ಸಂಘಟನೆ ವತಿಯಿಂದ ಮೈಸೂರಿನಲ್ಲಿ ಸೆಪ್ಟೆಂಬರ್ 29ರಂದು ಮಹಿಷ ಮಂಡಲೋತ್ಸವ ಹಾಗೂ ರಾಜ್ಯದ ಮೂಲ ನಿವಾಸಿಗಳಿಂದ ಮಹಿಷ ಸಾಂಸ್ಕೃತಿಕ ಹಬ್ಬಕ್ಕೆ ಆಯೋಜನೆ ಮಾಡಲಾಗುತ್ತದೆ. ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕೆಂದು ದಲಿತ ಸಂಘರ್ಷ ಸಮಿತಿಯ ಮುಖಂಡ ಕೆ.ಎಂ.ನಾಗರಾಜು ಮನವಿ ಮಾಡಿದರು.
ಮೈಸೂರಿನಿಂದ ಅಂದು ಬೆಳಗ್ಗೆ 8:30ಕ್ಕೆ ಬೈಕ್ ಜಾಥಾದ ಮೂಲಕ ಚಾಮುಂಡಿ ಬೆಟ್ಟಕ್ಕೆ ತೆರಳಿ ಅಲ್ಲಿರುವ ಮಹಿಷ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಲಾಗುವುದು. ಬಳಿಕ 10:30ಕ್ಕೆ ಮೈಸೂರಿನ ಪುರಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಗುರುವಾರ (ಸೆಪ್ಟೆಂಬರ್ 26) ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿದರು.












Click it and Unblock the Notifications