Mysore Palace: ಮೈಸೂರು ಅರಮನೆ ಅಗ್ನಿಗಾಹುತಿಯಾಗಿದ್ದು ಹೇಗೆ?

ಮೈಸೂರು ಅರಮನೆ ಬಗ್ಗೆ ಹೇಳಿದಷ್ಟೂ ಮುಗಿಯುವುದಿಲ್ಲ. ಏಕೆಂದರೆ ಈ ಅರಮನೆ ನಿರ್ಮಾಣದ ಹಿಂದೆ ಹಲವು ವಿಶೇಷತೆಗಳು ಅಡಗಿವೆ. ಇವತ್ತು ನಾವು ನೋಡುವ ಅರಮನೆ ಹಗಲು ಹೊತ್ತಿನಲ್ಲಿ ಸುಂದರವಾಗಿಯೂ ರಾತ್ರಿಯಾಗುತ್ತಿದ್ದರೆ ವಿದ್ಯುದ್ದೀಪದಿಂದ ಜಗಮಗಿಸಿ ಪುರಾಣದ ಇಂದ್ರನ ಅಮರಾವತಿಯೇ ಧರೆಗಿಳಿದಂತೆ ಗೋಚರಿಸಬಹುದು. ಆದರೆ ಬಹುಶಃ ಅವತ್ತು ಅದೊಂದು ದುರ್ಘಟನೆ ನಡೆಯದಿದ್ದರೆ ಇವತ್ತಿನ ಭವ್ಯ ಅರಮನೆ ನಿರ್ಮಾಣವಾಗುತ್ತಿರಲಿಲ್ಲವೇನೋ?.

ಮಹಾರಾಜರ ಆಡಳಿತಾವಧಿಯಲ್ಲಿ ನಡೆದ ಆ ದುರ್ಘಟನೆ ಯಾವುದು? ಅವತ್ತು ಆಗಿದ್ದು ಏನು? ಇವತ್ತಿನ ಅರಮನೆ ನಿರ್ಮಾಣಕ್ಕೆ ಅದು ಹೇಗೆ ಕಾರಣವಾಯಿತು ಎಂಬುದನ್ನು ನೋಡುತ್ತಾ ಹೋದರೆ ಇವತ್ತಿನ ಅಂಬಾವಿಲಾಸ ಅರಮನೆ ನಿರ್ಮಾಣಕ್ಕೆ ಮೊದಲೇ ಅಲ್ಲಿ ಅರಮನೆಯಿತ್ತು ಎನ್ನುವುದು ಅಷ್ಟೇ ಸತ್ಯ. ಇಷ್ಟಕ್ಕೂ ಮೈಸೂರಿನ ಮಹಾರಾಜರಿಗೆ ಅರಮನೆ ಕಟ್ಟುವುದು ಕಷ್ಟದ ಕೆಲಸವೇನಾಗಿರಲಿಲ್ಲ. ಬಹುಶಃ ಮೈಸೂರಿನಲ್ಲಿರುವಷ್ಟು ಅರಮನೆ ಬೇರೆಲ್ಲೂ ಇಲ್ಲವೇನೋ? ಹೀಗಾಗಿಯೇ ಅರಮನೆ ನಗರಿ ಎಂಬ ಹೆಸರು ಬಂದಿದೆ.

Mysuru Dasara 2024 How Did Mysore Palace Burnt What Happened Next

ಮೈಸೂರು ನಗರಕ್ಕೊಂದು ಸುತ್ತುಹೊಡೆದರೆ ಇಲ್ಲಿರುವ ಇನ್ನಿತರೆ ಅರಮನೆಗಳ ಬಗ್ಗೆ ಮಾಹಿತಿ ಸಿಗುತ್ತವೆ. ಈ ಅರಮನೆಗಳು ಇವತ್ತು ಹಲವು ರೀತಿಯಲ್ಲಿ ಬಳಕೆಯಾಗುತ್ತಿವೆ. ಆದರೆ ಮೈಸೂರಿನ ಆಕರ್ಷಣೆಯಾಗಿರುವುದು ಅಂಬಾವಿಲಾಸ ಅರಮನೆ ಅರ್ಥಾತ್ ಮೈಸೂರು ಅರಮನೆಯೇ... ಈ ಅರಮನೆಗೆ ತೆರಳಿದವರಿಗೆ ಮೈಸೂರು ಮಹಾರಾಜರ ವೈಭವ ಹೇಗಿತ್ತು ಎಂಬುದನ್ನು ಸಾರಿ ಹೇಳುತ್ತದೆ. ಅಷ್ಟೇ ಅಲ್ಲದೆ ಈ ಅರಮನೆ ಮೈಸೂರು ಮಹಾರಾಜರ ಇತಿಹಾಸದ ಕಥೆ ಹೇಳಲು ನಿಂತಿದೆ ಎಂಬಂತೆ ಭಾಸವಾದರೂ ಅಚ್ಚರಿಯಿಲ್ಲ.

ಕಟ್ಟಿಗೆಯಿಂದ ನಿರ್ಮಾಣವಾಗಿದ್ದ ಅರಮನೆ

ಮೈಸೂರಿನ ಹೃದಯಭಾಗದಲ್ಲಿ ಕಂಗೊಳಿಸುವ ಅರಮನೆ ಸುಂದರವಾಗಿ ನಿರ್ಮಾಣವಾಗಿದ್ದು, ಇದರ ಸೌಂದರ್ಯ ನೋಡುಗರ ಮನಸೆಳೆಯುತ್ತದೆ. ಆದರೆ ಇವತ್ತು ನಿರ್ಮಾಣವಾಗಿರುವ ಅರಮನೆಗೂ ಮೊದಲು ಇಲ್ಲೊಂದು ಅರಮನೆಯಿತ್ತು ಎನ್ನುವುದು ಇತಿಹಾಸವನ್ನು ತಿಳಿದವರಿಗೆ ಮಾತ್ರ ಗೊತ್ತಾಗುತ್ತದೆ. ಉಳಿದಂತೆ ಈ ಅರಮನೆಗೂ ಮುನ್ನ ಇಲ್ಲೊಂದು ಅರಮನೆಯಿತ್ತು ಎಂಬುದೇ ಹೆಚ್ಚಿನವರಿಗೆ ತಿಳಿದಿಲ್ಲ. ಆದರೆ ಆ ಅರಮನೆಯು ಭವ್ಯವಾಗಿತ್ತಂತೆ ಅಷ್ಟೇ ಅಲ್ಲದೆ ಕಟ್ಟಿಗೆಯಿಂದ ನಿರ್ಮಾಣವಾಗಿತ್ತು ಎನ್ನುವುದು ಅದರ ವಿಶೇಷತೆಯಾಗಿತ್ತು.

Mysuru Dasara 2024 How Did Mysore Palace Burnt What Happened Next

ಇಂತಹ ಅರಮನೆ ಆಕಸ್ಮಿಕ ಬೆಂಕಿಗೆ ಆಹುತಿಯಾಗಿದ್ದರಿಂದ ಬಳಿಕ ಅದೇ ಅರಮನೆಯ ಮಾದರಿಯಲ್ಲಿ ಈಗಿನ ಅರಮನೆಯನ್ನು ನಿರ್ಮಿಸಲಾಗಿದೆ ಎನ್ನುವುದು ಇತಿಹಾಸದಿಂದ ತಿಳಿದು ಬರುತ್ತದೆ. ಹಾಗಾದರೆ ಆ ಅರಮನೆ ಹೇಗೆ ಅಗ್ನಿಗೆ ಆಹುತಿಯಾಯಿತು ಎಂಬುದನ್ನು ನೋಡುತ್ತಾ ಹೋದರೆ ಅದೊಂದು ದುರಂತದ ಕಥೆ ಎನ್ನುವುದು ಅಷ್ಟೇ ಸತ್ಯ. ಅದಕ್ಕೂ ಮೊದಲು ಮೊದಲಿನ ಕಟ್ಟಿಗೆಯ ಅರಮನೆ ಹೇಗಿತ್ತು ಎಂಬುದನ್ನು ತಿಳಿದುಕೊಳ್ಳುವುದು ಬಹುಮುಖ್ಯ.

ನಡೆಯ ಬಾರದ ದುರ್ಘಟನೆ ನಡೆದಿತ್ತು

1800 ರಿಂದ 1804ರ ಅವಧಿಯಲ್ಲಿ ಕಟ್ಟಲಾಗಿದ್ದ ಕಟ್ಟಿಗೆಯ ಸುಂದರ ಅರಮನೆಯಲ್ಲಿ ರಾಜಪರಿವಾರದವರು ವಾಸವಾಗಿದ್ದರು.. ಈ ಅರಮನೆಯು ಅವತ್ತಿನ ಕಾಲಕ್ಕೆ ಅರಮನೆ ಹೇಗಿರಬೇಕೋ ಹಾಗೆಯೇ ವೈಭವದಿಂದ ಕೂಡಿತ್ತು. ಅರಮನೆ ನಿರ್ಮಾಣಕ್ಕೆ ಇಟ್ಟಿಗೆಯೊಂದಿಗೆ ಹೆಚ್ಚಿನ ಕಟ್ಟಿಗೆಯನ್ನು ಬಳಸಲಾಗಿತ್ತು. ಹಿಂದೂ ವೈಖರಿಯಲ್ಲಿದ್ದ ಅರಮನೆಯ ಪೂರ್ವಕ್ಕೆ ಮೊದಲನೇ ಅಂತಸ್ತು ಮತ್ತು ಉತ್ತರ ಭಾಗಕ್ಕೆ ದರ್ಬಾಲ್ ಹಾಲ್ ಇತ್ತು.

Mysuru Dasara 2024 How Did Mysore Palace Burnt What Happened Next

ಅವತ್ತಿನ ಕಾಲದಲ್ಲಿ ಇದೇ ಅರಮನೆ ಆವರಣದಲ್ಲಿ ದಸರಾವನ್ನು ಆಚರಿಸಲಾಗುತ್ತಿತ್ತು. ದರ್ಬಾರ್ ಕೂಡ ಇಲ್ಲಿಯೇ ನಡೆಯುತ್ತಿತ್ತು. ರಾಜಪರಿವಾರಗಳಿಂದ, ಸೇವಕರಿಂದ ಕೂಡಿದ ಅರಮನೆಯಲ್ಲಿ ಸದಾ ವೈಭವ ಮೇಳೈಸುತ್ತಿತ್ತು. ಬಹುಶಃ ಅದೊಂದು ದುರ್ಘಟನೆ ನಡೆಯದೆ ಹೋಗಿದ್ದರೆ, ಇವತ್ತಿನ ಸುಂದರ ಅಂಬಾವಿಲಾಸ ಅರಮನೆ ನಿರ್ಮಾಣವಾಗುತ್ತಿರಲಿಲ್ಲವೇನೋ? ಅಥವಾ ಅದೇ ಹಳೇ ಅರಮನೆ ಇವತ್ತಿಗೂ ಹಾಗೆಯೇ ಉಳಿಯುತ್ತಿತ್ತೇನೋ? ಆದರೆ ಅದೊಂದು ನಡೆಯ ಬಾರದ ದುರ್ಘಟನೆ ನಡೆದು ಹೋಗಿತ್ತು.

ಅರಮನೆ ಸಂಪೂರ್ಣ ನಾಶವಾಗಿತ್ತು

ಇದೆಲ್ಲದರ ನಡುವೆ ಒಂದು ಘಟನೆ ನಡೆದು ಹೋಯಿತು. ಅದು 1897 ಫೆಬ್ರವರಿ 28ರ ಭಾನುವಾರದ ದಿನ. ಇಡೀ ಅರಮನೆ ಸಡಗರ ಸಂಭ್ರಮದಿಂದ ತೇಲಾಡುತ್ತಿತ್ತು. ಕಾರಣ ಚಾಮರಾಜೇಂದ್ರ ಒಡೆಯರ್ ಮತ್ತು ವಾಣಿವಿಲಾಸ ಸನ್ನಿಧಾನದವರ ಹಿರಿಯ ಪುತ್ರಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಹೋದರಿ ಜಯಲಕ್ಷ್ಮಮ್ಮಣ್ಣಿಯವರ ವಿವಾಹ ಸರ್ದಾರ್ ಕಾಂತರಾಜೇ ಅರಸ್ ಅವರೊಂದಿಗೆ ಜರುಗುತ್ತಿತ್ತು. ಈ ವಿವಾಹದ ಸಡಗರ ಅರಮನೆಯನ್ನು ಆವರಿಸಿ ಎಲ್ಲರೂ ಖುಷಿಯಾಗಿಯೇ ಇದ್ದರು.

ಈ ನಡುವೆ ವಧು ಜಯಲಕ್ಷ್ಮಮ್ಮಣ್ಣಿಯವರ ಕೂದಲಿಗೆ ಸಾಂಬ್ರಾಣಿ ಹೊಗೆ ಕೊಡುವ ಸಂದರ್ಭ ಪರಿಚಾರಕರಿಗೆ ಕೆಂಡವೊಂದು ಕೆಳಗೆ ಬಿದ್ದದ್ದು ಗೊತ್ತಾಗಲೇ ಇಲ್ಲ. ಆ ಕೆಂಡದಿಂದ ಉರಿದ ಬೆಂಕಿ ತೇಗದ ಮರಕ್ಕೆ ತಾಗಿ ಹತ್ತಿ ಉರಿಯತೊಡಗಿತ್ತು. ಇದ್ದಕ್ಕಿದ್ದಂತೆಯೇ ಬೆಂಕಿ ಅರಮನೆಯನ್ನು ಆವರಿಸಿತು. ಅರಮನೆಯಲ್ಲಿದ್ದ ಸೇವಕರು ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಅರಮನೆಯಿಂದ ಹೊರ ಓಡಿದರಲ್ಲದೆ, ಅರಮನೆಯಲ್ಲಿದ್ದ ರಾಜವಂಶಸ್ಥರನ್ನು ಹಾಗೂ ವಿವಾಹಕ್ಕೆ ಆಗಮಿಸಿದ್ದ ದೇಶವಿದೇಶಗಳ ಅತಿಥಿಯನ್ನು ಯಾವುದೇ ಪ್ರಾಣಾಪಾಯವಾಗದಂತೆ ಕಾಪಾಡಿದರು.

ಜನ ಕಣ್ಣೀರಿಡುತ್ತಾ ರೋದಿಸಿದ್ದರು

ಜಾಗೃತಗೊಂಡ ಅಲ್ಲಿದ್ದ ಸೈನಿಕರು ಮತ್ತು ಸೇವಕರು ಬೆಂಕಿಯನ್ನು ನಂದಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲಿಲ್ಲ. ಅದೇ ಸಮಯಕ್ಕೆ ಯಂತ್ರ ಕೆಟ್ಟು ಹೋಗಿದ್ದರಿಂದ ನಲ್ಲಿಯಲ್ಲಿ ನೀರು ಬರುತ್ತಿರಲಿಲ್ಲ. ಹೀಗಾಗಿ ನೀರನ್ನು ಹುಡುಕಿ ತಂದು ಆರಿಸುವ ಕೆಲಸ ಮಾಡುವುದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ. ಹೀಗಾಗಿ ನಾಲ್ಕು ದಿಕ್ಕಿಗೂ ಬೆಂಕಿಯ ಜ್ವಾಲೆ ಹರಡಿ ವಿರಾಟ ಸ್ವರೂಪ ತಾಳಿತ್ತು. ರಾತ್ರಿಯಿಂದ ಬೆಳಿಗ್ಗೆ ತನಕವೂ ಅರಮನೆ ಹೊತ್ತಿ ಉರಿದಿತ್ತು. ಬೆಂಕಿಯನ್ನು ನಂದಿಸಲು ಸುತ್ತಮುತ್ತಲಿನ ಜನ ಸೇರಿದಂತೆ ಸುಮಾರು 8000 ಮಂದಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರಾದರೂ ಸಂಪೂರ್ಣವಾಗಿ ನಂದಿಸಲು ಸಾಧ್ಯವಾಗಲಿಲ್ಲ.

ಇದರ ಪರಿಣಾಮ ಅರಮನೆ ಉರಿದು ಬೂದಿಯಾಗಿತ್ತು. ಇದನ್ನು ನೋಡಿದ ರಾಜಪರಿವಾರ ಮಾತ್ರವಲ್ಲ ಪ್ರಜೆಗಳು ಕಣ್ಣೀರಿಟ್ಟಿದ್ದರು. ಅರಮನೆ ಬೆಂಕಿಗೆ ಆಹುತಿಯಾದ ಕಾರಣ ರಾಜಪರಿವಾರದ ವಾಸ್ತವ್ಯವನ್ನು ಸಮೀಪದ ಜಗನ್ಮೋಹನ ಅರಮನೆಗೆ ಸ್ಥಳಾಂತರಿಸಲಾಯಿತು. ಇದೇ ಸಮಯದಲ್ಲಿ ಅರಮನೆಯಲ್ಲಿದ್ದ ರತ್ನಾಭರಣ, ಬೆಳ್ಳಿ ಬಂಗಾರದ ಪದಾರ್ಥ, ಮುತ್ತಿನ ಹಾರ ಸೇರಿದಂತೆ ವಿವಿಧ ಬಗೆಯ ಬೆಲೆಬಾಳುವ ಪದಾರ್ಥಗಳನ್ನು ಹೊರಕ್ಕೆ ತಂದು ಬಯಲಲ್ಲಿ ರಾಶಿ ಹಾಕಿದ್ದರು. ಅದೇ ಸಮಯಕ್ಕೆ ಅರಮನೆಯ ಪಂಚಕಳಶವೂ ಮೇಲಿಂದ ಬಿದ್ದಿತು. ಇದನ್ನು ಕಂಡ ಜನ ಕಣ್ಣೀರಿಡುತ್ತಾ ರೋದಿಸಿದ್ದರು.

ಅರಮನೆಯ ನಕಾಶೆ ರೂಪಿಸಿದ ಹೆನ್ರಿ

ಅರಮನೆ ಅಗ್ನಿಗಾಹುತಿ ಆದ ಬಳಿಕ ರಾಜಪರಿವಾರ ಜಗನ್ಮೋಹನ ಅರಮನೆಯಲ್ಲಿ ಉಳಿಯಿತು. ಅಲ್ಲಿದ್ದುಕೊಂಡೇ ಹೊಸ ಮಾದರಿಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದರೂ ಏನೂ ಆಗದ ರೀತಿಯಲ್ಲಿ ಹಿಂದೆಯಿದ್ದ ಕಟ್ಟಿಗೆಯ ಅರಮನೆಯ ವಿನ್ಯಾಸದಲ್ಲಿ ಹೊಸ ಮಾದರಿಯಲ್ಲಿ ಅರಮನೆಯನ್ನು ನಿರ್ಮಿಸಲು ನಾಲ್ವಡಿ ಕೃಷ್ಣರಾಜ ಒಡೆಯರ್ ತೀರ್ಮಾನಿಸಿದರು. ಅದರ ನಕಾಶೆ ತಯಾರಿಸಲು ಜವಬ್ದಾರಿಯನ್ನು ಮದ್ರಾಸ್ ಸರ್ಕಾರದ ಸಲಹೆಗಾರ ಇಂಜಿನಿಯರಾದ ಹೆನ್ರಿಇರ್ವಿನ್ ಅವರಿಗೆ ನೀಡಲಾಯಿತು. ಅವತ್ತು ಅಗ್ನಿಗಾಹುತಿಯಾದ ಅರಮನೆಯ ನೀಲಿ ನಕ್ಷೆ ಇರಲಿಲ್ಲ. ಅದಕ್ಕಾಗಿ ಹುಡುಕಾಟ ನಡೆಸಲಾಯಿತು.

ಕೊನೆಗೆ ಬ್ರಿಟಿಷ್ ಸೈನಿಕನೊಬ್ಬ ತನ್ನ ಕ್ಯಾಮರಾದಲ್ಲಿ ಸೆರೆಹಿಡಿದಿದ್ದ ಫೋಟೋ ಅಧಿಕಾರಿಗಳಿಗೆ ಸಿಕ್ಕಿತ್ತು. ಅದನ್ನು ಪಡೆದುಕೊಂಡ ಹೆನ್ರಿ ಇರ್ವಿನ್ ಅದರಂತೆ ಈಗಿನ ಅರಮನೆಯ ನಕಾಶೆ ರೂಪಿಸಿದ್ದು, ಅರಮನೆಯ ನಕಾಶೆ ರೂಪಿಸಿದ ಹೆನ್ರಿಇರ್ವಿನ್ ಅವರಿಗೆ ಅವತ್ತು ಮಹಾರಾಜರು ಶುಲ್ಕವಾಗಿ 12 ಸಾವಿರ ರೂಪಾಯಿಯನ್ನು ನೀಡಿದ್ದರಂತೆ.

ಅರಮನೆಯ ಇಂಜಿನಿಯರ್ ಆಗಿ ಬಿ.ಪಿ.ರಾಘವಲುನಾಯಿಡು ಕೆಲಸ ಮಾಡಿದರೆ, ಅರಮನೆಯಲ್ಲಿ ಚಿತ್ರರಚಿಸಲು ನಾಗರಾಜು ಎಂಬ ಕಲಾವಿದನನ್ನು ಚಿತ್ರರಚನೆಯ ಅಧ್ಯಯನಕ್ಕಾಗಿ ಯುರೋಪಿನ ರಾಜ್ಯಗಳಿಗೆ ಕಳುಹಿಸಲಾಯಿತು ಇದಕ್ಕಾಗಿ ಒಡೆಯರ್ ಮಾಡಿದ ಖರ್ಚು 2437 ರೂಪಾಯಿ 4 ಆಣೆ 8 ಕಾಸಂತೆ. 1897ರಿಂದಲೇ ಆರಂಭಗೊಂಡ ಅರಮನೆಯ ನಿರ್ಮಾಣ ಕಾರ್ಯ 1911-12ರಲ್ಲಿ ಸುಮಾರು 41,47,912 ರೂಪಾಯಿ ವೆಚ್ಚದಲ್ಲಿ ಪೂರ್ಣಗೊಂಡಿತು. ಇವತ್ತು ಈ ಅರಮನೆ ಜಗದ್ವಿಖ್ಯಾತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+