ಮೈಸೂರು ಮಹಾಸಂಸ್ಥಾನದ ಉದಯವಾಗಿದ್ದು ಹೇಗೆ..? ರಾಜರು ಯಾರು..?

ಮೈಸೂರು, ಸೆಪ್ಟೆಂಬರ್‌ 30: ಐತಿಹಾಸಿಕ ವಿಶ್ವ ವಿಖ್ಯಾತ ದಸರಾ ಮೂಲಕ ಗಮನಸೆಳೆದಿರುವ ಮೈಸೂರು ಸಂಸ್ಥಾನ ಈ ನಾಡಿಗೆ ನೀಡಿದ ಕೊಡುಗೆಗಳು ಅಪಾರವಾಗಿವೆ. ಇವತ್ತು ಹಳೆ ಮೈಸೂರು ಸಮೃದ್ಧಿಯಾಗಿದ್ದರೆ ಅದಕ್ಕೆ ಮೈಸೂರು ಮಹಾರಾಜರೇ ಕಾರಣರಾಗಿದ್ದಾರೆ. ಇತಿಹಾಸದ ಮೆಲುಕು ಹಾಕಿದರೆ ಸುಧೀರ್ಘ 550 ವರ್ಷಗಳ ಕಾಲ ಸುಮಾರು 25 ಮಹಾರಾಜರು ಸಂಸ್ಥಾನವನ್ನು ಆಳಿದ್ದು ವಿಶೇಷವೇ.

ಇವತ್ತು ಮೈಸೂರಿನಲ್ಲಿ ಅಡ್ಡಾಡಿದರೆ ರಸ್ತೆ, ಕಟ್ಟಡ, ಅರಮನೆ ಹೀಗೆ ಎಲ್ಲವೂ ಇತಿಹಾಸ ಕಥೆ ಹೇಳುತ್ತವೆ. ಅಷ್ಟೇ ಅಲ್ಲದೆ ಹಲವು ಬದಲಾವಣೆಗಳಿಗೂ ಮಹಾರಾಜರು ಸಾಕ್ಷಿಯಾಗಿದ್ದಾರೆ. ಇವರ ಕಾಲದಲ್ಲಿ ಸಾಮ್ರಾಜ್ಯ ವಿಸ್ತರಣೆ ಜತೆ ಜತೆಯಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು, ಯೋಜನೆಗಳು ಜಾರಿಗೆ ಬಂದಿದ್ದಲ್ಲದೆ, ದೇಶ ವಿದೇಶಗಳಲ್ಲಿ ಮೈಸೂರಿನ ಹೆಸರು ರಾರಾಜಿಸುವಂತಾಯಿತು ಎನ್ನುವುದು ಅಷ್ಟೇ ಸತ್ಯ.

Mysuru Dasara 2024 Here Is The History Of mysore Dynasty And Kings Victory

ಸುಮಾರು 550 ವರ್ಷಗಳ ಒಂದು ರಾಜವಂಶ ಆಡಳಿತ ನಡೆಸುವುದು ಸುಲಭದ ಮಾತಲ್ಲ. ಆದರೂ ಶತ್ರುಗಳೊಂದಿಗೆ ಹೋರಾಡುತ್ತಾ ಮೈಸೂರು ರಾಜ್ಯವನ್ನು ಕಟ್ಟಿ ಬೆಳೆಸಿದ್ದಲ್ಲದೆ, ಸಮೃದ್ಧ ನಾಡನ್ನಾಗಿ ಮಾಡಿದ್ದು, ರಾಜರ ಆಡಳಿತದ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ. 550 ವರ್ಷಗಳು 25 ಮಹಾರಾಜರು ಸಂಸ್ಥಾನವನ್ನು ಶತ್ರುಗಳ ನಡುವೆ ಕೊನೆ ತನಕವೂ ಉಳಿಸಿಕೊಂಡು ಬಂದಿದ್ದು ಹೆಮ್ಮೆ ಪಡುವ ವಿಚಾರವೇ...

ಯದುರಾಯ ಯದುವಂಶದ ಸ್ಥಾಪಕ

ಮೈಸೂರು ಸಂಸ್ಥಾನದ ಕುರಿತಂತೆ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಒಂದಷ್ಟು ಮಾಹಿತಿಗಳು ಸಿಗುತ್ತವೆ. ಅದರ ಪ್ರಕಾರ ಹೇಳುವುದಾದರೆ ಮೈಸೂರು ರಾಜರ ಆಡಳಿತವು 1399ರಿಂದ ಆರಂಭವಾಗಿರುವುದು ತಿಳಿಯುತ್ತದೆ. ಯದುರಾಯರನ್ನು ಯದುವಂಶದ ಸ್ಥಾಪಕರೆಂದು ಹೇಳಲಾಗುತ್ತದೆ. ಉತ್ತರದ ದ್ವಾರಕಾಪಟ್ಟಣದ ರಾಜದೇವನ ಮಗನೇ ಯದುರಾಯ. ಯದುರಾಯರು ತನ್ನ ಸಹೋದರ ಕೃಷ್ಣರಾಯರೊಂದಿಗೆ ಚೆಲುವನಾರಾಯಣಸ್ವಾಮಿಯ ದರ್ಶನ ಮಾಡುವ ಸಲುವಾಗಿ ಮೇಲುಕೋಟೆ ಬರುತ್ತಾರೆ. ಅಲ್ಲಿಂದ ಹಿಂತಿರುಗಿ ಕಾವೇರಿ ನದಿ ದಾಟಿ ಮೈಸೂರನ್ನು ಸೇರುತ್ತಾರೆ.

Mysuru Dasara 2024 Here Is The History Of mysore Dynasty And Kings Victory

ಈ ಸಮಯದಲ್ಲಿ ಮೈಸೂರನ್ನು ಆಳುತ್ತಿದ್ದ ಪಾಳೆಗಾರರಾಗಿದ್ದ ಚಾಮರಾಜ ತೀರಿಕೊಂಡಿದ್ದರಿಂದ ಅವರ ಹೆಂಡತಿ ಹಾಗೂ ಸುಂದರ ಮಗಳಿಗೆ ಮೈಸೂರು ಸೀಮೆಯ ದಳವಾಯಿಯಾಗಿದ್ದ ಕೊರಗಳ್ಳಿ ಮಾರನಾಯಕ ಹಿಂಸೆ ನೀಡುತ್ತಿದ್ದುದಲ್ಲದೆ, ಪುತ್ರಿ ದೇವಾಜಮ್ಮಣಿಯನ್ನು ತನಗೆ ವಿವಾಹ ಮಾಡಿಕೊಡುವಂತೆ ಪೀಡಿಸುತ್ತಿದ್ದನು. ಇದನ್ನು ತಿಳಿದ ಯದುರಾಯರು ಮಹಾರಾಣಿಯ ಸಹಾಯಕ್ಕೆ ಬರುವುದರೊಂದಿಗೆ ಮಾರನಾಯಕನನ್ನು ಕೊಲ್ಲುತ್ತಾರೆ. ಈ ವೇಳೆ ಮಹಾರಾಣಿ ತನ್ನ ಪುತ್ರಿ ದೇವಾಜಮ್ಮಣಿಯನ್ನು ಯದುರಾಯರಿಗೆ ಕೊಟ್ಟು ಮದುವೆ ಮಾಡುತ್ತಾರೆ. ಹೀಗೆ ಮೈಸೂರಿನಲ್ಲಿ ಯದುವಂಶದ ಆಡಳಿತ ಆರಂಭವಾಯಿತು ಎಂದು ಹೇಳಲಾಗುತ್ತಿದೆ.

ವೈರಾಗ್ಯದಿಂದ ಆಡಳಿತ ಬಿಟ್ಟರು

ಯದುರಾಯರ ಬಳಿಕ 1423 ರಿಂದ 1459ರವರೆಗೆ ಒಂದನೇ ಹಿರಿಯ ಬೆಟ್ಟದ ಚಾಮರಾಜ ಒಡೆಯರ್, 1459ರಿಂದ 1478ರವರೆಗೆ ಹಿರಿಯ ಬೆಟ್ಟದ ಚಾಮರಾಜ ಒಡೆಯರ್ ಪುತ್ರ ತಿಮ್ಮರಾಜ ಒಡೆಯರ್ ಆಡಳಿತ ನಡೆಸಿದರೆ, ನಂತರ 1478ರಿಂದ 1513ರವರೆಗೆ ಎರಡನೇ ಹಿರಿಯ ಚಾಮರಾಜ ಒಡೆಯರ್, 1513 ರಿಂದ 1553ರವರೆಗೆ ಮೂರನೇ ಹಿರಿಯ ಬೆಟ್ಟದ ಚಾಮರಾಜ ಒಡೆಯರ್ ಆಡಳಿತ ನಡೆಸಿದರು.

Mysuru Dasara 2024 Here Is The History Of mysore Dynasty And Kings Victory

1553ರಿಂದ 1572ರವರೆಗೆ ಆಡಳಿತ ನಡೆಸಿದ ಎರಡನೆಯ ತಿಮ್ಮರಾಜ ಒಡೆಯರ್ ಮೈಸೂರನ್ನು ವಿಸ್ತರಿಸಿದರು. 1572ರಿಂದ1576ರವರೆಗೆ ನಾಲ್ಕನೇ ಬೋಳಚಾಮರಾಜ ಒಡೆಯರ್ ಆಡಳಿತ ನಡೆಸಿದರು. ಐದನೇ ಬೆಟ್ಟದ ಚಾಮರಾಜ ಒಡೆಯರ್ 1576ರಿಂದ 1578ರವರೆಗೆ ಕೇವಲ ಎರಡು ವರ್ಷಗಳ ಕಾಲ ಆಡಳಿತ ನಡೆಸಿದರಲ್ಲದೆ, ವೈರಾಗ್ಯ ತಾಳಿದ ಅವರು ಆಡಳಿತವನ್ನು ತನ್ನ ಸಹೋದರರಿಗೆ ವಹಿಸಿಕೊಟ್ಟರು.

ವೀರರಾಗಿದ್ದ ಇಮ್ಮಡಿರಾಜ ಒಡೆಯರ್

ಆ ನಂತರ ಆಡಳಿತ ವಹಿಸಿಕೊಂಡ ಒಂದನೇ ರಾಜ ಒಡೆಯರ್ 1578ರಿಂದ 1617ರವರೆಗೆ ಆಡಳಿತ ನಡೆಸಿದರು. ಇವರ ಕಾಲದಲ್ಲಿ ಅಂದರೆ 1610ರಲ್ಲಿ ರಾಜಧಾನಿಯನ್ನು ಮೈಸೂರಿನಿಂದ ಶ್ರೀರಂಗಪಟ್ಟಣಕ್ಕೆ ವರ್ಗಾಯಿಸಲಾಯಿತಲ್ಲದೆ, ದಸರಾ ಆಚರಣೆಯೂ ಜಾರಿಗೆ ಬಂದಿತು. 1617ರಿಂದ 1637ರವರೆಗೆ ಆರನೇ ಚಾಮರಾಜ ಒಡೆಯರ್ ಆಡಳಿತ ನಡೆಸಿದರು. ಇವರ ಕಾಲದಲ್ಲಿ ಮೈಸೂರು ರಾಜ್ಯ ಇನ್ನಷ್ಟು ವಿಸ್ತಾರಗೊಂಡಿತು.

1637ರಲ್ಲಿ ಪಟ್ಟಕ್ಕೆ ಬಂದ ಇಮ್ಮಡಿರಾಜ ಒಡೆಯರ್ ವೀರರಾಗಿದ್ದರಲ್ಲದೆ ಒಂದೇ ವರ್ಷದಲ್ಲಿ ಮಲೆವರಗಂಡ, ಸಂಗೀತಲೋಲ, ವೀರ ಶೂರ, ಸಾಹಿತ್ಯ ರತ್ನಾಕರ, ಅಭಯ ಪ್ರತಾಪಾಧೀಶ್ವರ ಮುಂತಾದ ಬಿರುದು ಪಡೆದರಾದರೂ 1638ರಿಂದ 1659 ರಣಧೀರ ಕಂಠೀರವ ನರಸರಾಜ ಒಡೆಯರ್ ಆಡಳಿತ ನಡೆಸಿದರು. ಸುಮಾರು 20ವರ್ಷಗಳ ಕಾಲ ಆಡಳಿತ ನಡೆಸಿದರು.

ಬಿರುದಾಂಕಿತ ದೊಡ್ಡ ದೇವರಾಜ ಒಡೆಯರ್

1659ರಿಂದ 1672ರವರೆಗೆ ಆಡಳಿತ ನಡೆಸಿದ ದೊಡ್ಡ ದೇವರಾಜ ಒಡೆಯರ್ ಪರಾಕ್ರಮಿಯಾಗಿದ್ದು, ರಾಜಕುಲತಿಲಕ, ರಾಜಮಾರ್ತಾಂಡ, ರಾಜಾಧಿರಾಜ, ಪರಮೇಶ್ವರ ಮುಂತಾದ ಬಿರುದು ಪಡೆದುಕೊಂಡರು. 1672ರಿಂದ 1704ರವರೆಗೆ ರಾಜ್ಯಭಾರ ಮಾಡಿದ ಚಿಕ್ಕದೇವರಾಜ ಒಡೆಯರ್ ಪಂಡಿತರೂ, ಮಹಾಪರಾಕ್ರಮಿಯೂ ಆಗಿದ್ದರು. ಇವರು ಶಿವಾಜಿ ಮತ್ತು ಔರಂಗಜೇಬನ ಸಮಕಾಲೀನರಾಗಿದ್ದರು. ರಾಜ್ಯಭಾರ ವಹಿಸಿಕೊಂಡ ಐದು ದಿನದಲ್ಲಿ ದಂಡೆತ್ತಿ ಬಂದ ಮಧುರೆಯ ಚೊಕ್ಕನಾಯಕನೆಂಬ ಪಾಳೇಗಾರನನ್ನು ಎದುರಿಸಿ ಜಯಪಡೆದರಲ್ಲದೆ, ಸತ್ಯಮಂಗಲ ಮತ್ತು ಧರ್ಮಪುರಂ ಎಂಬ ಎರಡು ಚಿಕ್ಕ ರಾಜ್ಯವನ್ನು ತಮ್ಮ ವಶ ಮಾಡಿಕೊಂಡರು.

ಚಿಕ್ಕದೇವರಾಜ ಒಡೆಯರ್ ಪುತ್ರರಾದ ಕಂಠೀರವ ಮಹಾರಾಜ ಒಡೆಯರ್ 1704ರಿಂದ 1713ರವರೆಗೆ ಆಡಳಿತ ನಡೆಸಿದರು ಇವರ ಪುತ್ರ ದೊಡ್ಡ ಕೃಷ್ಣರಾಜ ಒಡೆಯರ್ ಕೇವಲ ಹನ್ನೆರಡು ವರ್ಷಕ್ಕೆ ಪಟ್ಟಕ್ಕೇರಿದರು. 1714ರಿಂದ 1732ರವರೆಗೆ ಆಡಳಿತ ನಡೆಸಿದರು. ದೊಡ್ಡ ಕೃಷ್ಣರಾಜ ಒಡೆಯರ್ ಮಕ್ಕಳಿಲ್ಲದ ಕಾರಣ ಚಾಮರಾಜ ಒಡೆಯರ್ ಅವರನ್ನು ದತ್ತು ತೆಗೆದುಕೊಂಡರು. ಚಾಮರಾಜ ಒಡೆಯರ್ 1732ರಿಂದ 1734ರವರೆಗೆ ರಾಜ್ಯವಾಳಿದರು.

ಸ್ವಾತಂತ್ರ್ಯ ನಂತರ ರಾಜಾಡಳಿತ ಅಂತ್ಯ

ಇವರ ಬಳಿಕ ಎರಡನೇ ಇಮ್ಮಡಿ ಕೃಷ್ಣರಾಜ ಒಡೆಯರ್ ಪಟ್ಟಕ್ಕೆ ಬಂದು 1734ರಿಂದ 1766ರವರೆಗೆ ರಾಜ್ಯಾಭಾರ ನಡೆಸಿದರು ಇಮ್ಮಡಿ ಕೃಷ್ಣರಾಜ ಒಡೆಯರ್ ನಂತರ ನವಾಬ್ ಹೈದರಾಲಿ ಖಾನರ ಸಲಹೆ ಮೇರೆಗೆ ಚಲುವಾಜಮ್ಮಣ್ಣಿ ಅವರು ನಂಜರಾಜ ಒಡೆಯರ್ ಗೆ ಪಟ್ಟ ಕಟ್ಟಿದರು ಅವರು 1766ರಿಂದ 1770ರವರೆಗೆ ರಾಜಭಾರ ನಡೆಸಿದರು. 1770 ರಿಂದ 1776ರವರೆಗೆ ಎಂಟನೇ ಬೆಟ್ಟದ ಚಾಮರಾಜ ಒಡೆಯರ್ ಆಡಳಿ ನಡೆಸಿದರಾದರೂ ಹೈದರಾಲಿಯೇ ಸರ್ವಾಧಿಕಾರಿಯಾಗಿದ್ದನು. 1776ರಿಂದ 1796ರವರೆಗೆ ಒಂಬತ್ತನೇ ಖಾಸಾ ಚಾಮರಾಜ ಒಡೆಯರ್ ಆಡಳಿತ ನಡೆಸಿದರು. ಇವರ ಕಾಲದಲ್ಲಿ ಬಹಳಷ್ಟು ಐತಿಹಾಸಿಕ ಘಟನೆಗಳು ನಡೆದವು.

ಮೂರನೇ ಮುಮ್ಮಡಿ ಕೃಷ್ಣರಾಜ ಒಡೆಯರ್ 1799ರಿಂದ 1863ರವರೆಗೆ ಆಡಳಿತ ನಡೆಸಿದರು. ಇವರ ಹುಟ್ಟು ಹೆಸರು ನಂಜರಾಜ ಒಡೆಯರ್. ನಂಜುಂಡೇಶ್ವರ ಅನುಗ್ರಹದಿಂದ ಜನಿಸಿದ್ದರಿಂದ ಆ ಹೆಸರು ಇಡಲಾಯಿತು. 1863ರಿಂದ 1894ರವರೆಗೆ ರಾಜ್ಯವಾಳಿದ ಚಾಮರಾಜೇಂದ್ರ ಒಡೆಯರ್ ಅವರು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ದತ್ತುಪುತ್ರರಾಗಿದ್ದು, 18ನೇ ವಯಸ್ಸಲ್ಲೇ ರಾಜ್ಯಭಾರವನ್ನು ವಹಿಸಿಕೊಂಡಿದ್ದರು. 1884ರಲ್ಲಿ ಜನಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ 1940ರಲ್ಲಿ ಕಾಲವಾದರು. 1919ರಲ್ಲಿ ಜನಿಸಿದ ಜಯಚಾಮರಾಜೇಂದ್ರ ಒಡೆಯರ್ಗೆ 1940ರಲ್ಲಿ ಪಟ್ಟಾಭಿಷೇಕ ನಡೆಯಿತು. ಇವರು ರಾಜ್ಯಭಾರ ವಹಿಸಿಕೊಂಡ ಏಳು ವರ್ಷಕ್ಕೆ ಭಾರತ ಸ್ವಾತಂತ್ರ್ಯವಾಯಿತು. ಅಲ್ಲಿಗೆ ರಾಜಾಡಳಿತ ಕೊನೆಗೊಂಡಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+