ನಾಳೆಯೇ ಅರಮನೆಯಲ್ಲಿ ಸಿಂಹಾಸನ ಜೋಡಣೆ: ಸಿಂಹಾಸನಕ್ಕಿದೆ ಪೌರಾಣಿಕ ನಂಟು!
ಮೈಸೂರು, ಸೆಪ್ಟೆಂಬರ್ 26: ಮೈಸೂರು ದಸರಾ ವೇಳೆ ಅರಮನೆಯಲ್ಲಿ ನಡೆಯುವ ಪ್ರಮುಖ ಆಚರಣೆಯಾಗಿರುವ ಖಾಸಗಿ ದರ್ಬಾರ್ ಗೆ ಸಿಂಹಾಸನ ಜೋಡಣೆ ಕಾರ್ಯವು ಸೆ.27ರಂದು ಅರಮನೆಯಲ್ಲಿ ನಡೆಯಲಿದ್ದು, ಸಂಪ್ರದಾಯದಂತೆ ಈ ಕಾರ್ಯವನ್ನು ಬಿಗಿಪೊಲೀಸ್ ಬಂದೋಬಸ್ತ್ ನಲ್ಲಿ ಗೆಜ್ಜಗಳ್ಳಿಯ ನುರಿತರು ಜೋಡಣೆ ಮಾಡಲಿದ್ದಾರೆ. ಈ ಕಾರ್ಯ ಮುಗಿಯುತ್ತಿದ್ದಂತೆಯೇ ಅರಮನೆಗೆ ದಸರಾ ಕಳೆ ಬರಲಿದೆ. ಅಷ್ಟೇ ಅಲ್ಲದೆ ವಿವಿಧ ಧಾರ್ಮಿಕ ಕಾರ್ಯಗಳಿಗೆ ಚಾಲನೆ ಸಿಗಲಿದೆ.
ಅತ್ತ ಚಾಮುಂಡಿಬೆಟ್ಟದಲ್ಲಿ ದಸರಾಕ್ಕೆ ಚಾಲನೆ ನೀಡುತ್ತಿದ್ದಂತೆಯೇ ಇತ್ತ ಅರಮನೆಯಲ್ಲಿ ಶರನ್ನವರಾತ್ರಿ ಆಚರಣೆ ಆರಂಭವಾಗಲಿದ್ದು ಖಾಸಗಿ ದರ್ಬಾರ್ ಆರಂಭವಾಗಲಿದೆ. ಈ ಬಾರಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಂಸದರಾದ ಬಳಿಕ ಮೊದಲ ಬಾರಿಗೆ ಸಿಂಹಾಸನವನ್ನೇರಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಅದಕ್ಕಾಗಿ ಅರಮನೆ ನೆಲಮಾಳಿಗೆಯ ಸ್ಟ್ರಾಂಗ್ ರೂಂನಿಂದ ರತ್ನ ಖಚಿತ ಸಿಂಹಾಸನವನ್ನು ಪೊಲೀಸ್ ಬಿಗಿಭದ್ರತೆಯಲ್ಲಿ ಹೊರತೆಗೆದು ದರ್ಬಾರ್ ಹಾಲ್ನಲ್ಲಿ ಜೋಡಿಸಲಾಗುತ್ತದೆ. ಅ.27ರಂದು ಸಿಂಹಾಸನ ವಿಸರ್ಜನೆ ಕಾರ್ಯ ನಡೆಯಲಿದೆ.

ಸಿಂಹಾಸನದ ಜೋಡಣೆಗೂ ಮುನ್ನ ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಗಳು ಅರಮನೆ ಪಂಚಾಂಗದಂತೆ ನಡೆಯಲಿವೆ. ಬೆಳಗ್ಗೆ 7.30ಕ್ಕೆ ನವಗ್ರಹ ಪೂಜೆ, ಗಣಪತಿ ಹೋಮ, ಚಾಮುಂಡೇಶ್ವರಿ ಪೂಜೆ, ಶಾಂತಿಹೋಮ ಸೇರಿದಂತೆ ವಿವಿಧ ಪೂಜೆಗಳು ಜರುಗಲಿವೆ. ಬೆಳಗ್ಗೆ 9.55 ರಿಂದ 10.25ರೊಳಗೆ ಶುಭ ಲಗ್ನದಲ್ಲಿ ಸಿಂಹಾಸನ ಜೋಡಣೆ ಕಾರ್ಯ ನಡೆಯಲಿದೆ. ಗೋಶಾಲೆಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಆಗಮಿಸಲಿವೆ. ಆ ಸಮಯದಲ್ಲಿ ದರ್ಬಾರ್ ಹಾಲ್ನಲ್ಲಿ ಸಿಂಹಾಸನದ ಜೋಡಣೆ ಪ್ರಕ್ರಿಯೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹಾಗೂ ಜಿಲ್ಲಾಡಳಿತದ ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ನಡೆಯಲಿದೆ.
ಸಿಂಹಾಸನದಲ್ಲಿ ಮೂರು ಭಾಗಗಳಿವೆ
ಸಿಂಹಾಸನ ಜೋಡಣೆ ನಂತರ ಅದನ್ನು ಪರದೆಯಿಂದ ಮುಚ್ಚಲಾಗುತ್ತದೆ. ಭದ್ರತಾ ದೃಷ್ಟಿಯಿಂದ ಸಿಂಹಾಸನ ಜೋಡಣೆ ಸಂದರ್ಭ ಅರಮನೆ ಸಿಬ್ಬಂದಿಗೂ ಅಲ್ಲಿಗೆ ಪ್ರವೇಶ ಇರುವುದಿಲ್ಲ. ಅಲ್ಲದೆ ಎಲ್ಲ ಸಿಬ್ಬಂದಿ ಮೊಬೈಲ್ ಫೋನ್ಗಳನ್ನು ಭದ್ರತಾ ಸಿಬ್ಬಂದಿಗೆ ಒಪ್ಪಿಸಬೇಕು. ಅರಮನೆಯ ಭದ್ರಕೋಣೆಯಲ್ಲಿ ಸಿಂಹಾಸನ ಇರಿಸಲಾಗಿರುತ್ತದೆ.

ಕೋಣೆಯ ತಲಾ ಒಂದು ಕೀ ಅರಮನೆ ಆಡಳಿತ ಮಂಡಳಿ ಹಾಗೂ ರಾಜವಂಶಸ್ಥರ ಬಳಿ ಇರುತ್ತದೆ. ಉಭಯರ ಸಮ್ಮುಖದಲ್ಲಿ ಸಿಂಹಾಸನವನ್ನು ಹೊರ ತೆಗೆದು, ಟ್ರ್ಯಾಲಿ ಮೂಲಕ ದರ್ಬಾರ್ ಹಾಲ್ಗೆ ತರಲಾಗುತ್ತದೆ. ಇದಕ್ಕೂ ಮುನ್ನ ಈ ಸಭಾಂಗಣವನ್ನು ಸ್ವಚ್ಛಗೊಳಿಸಲಾಗುವುದು.
ಈ ಸಿಂಹಾಸನದಲ್ಲಿ ಮೂರು ಭಾಗಗಳಿವೆ. ಒಂದು ಮುಖ್ಯ ಆಸನ, ಇನ್ನೊಂದು ಮೆಟ್ಟಿಲು ಮತ್ತು ಬಂಗಾರದ ಛತ್ರಿಯಿದೆ. ಅಂಜೂರ ಮರದಿಂದ ತಯಾರಿಸಲಾಗಿರುವ ಈ ರಾಜಗದ್ದುಗೆಗೆ ಆನೆಯ ದಂತದ ಪಟ್ಟಿಗಳನ್ನು ಅಳವಡಿಸಲಾಗಿದೆ. ಈ ಭಾಗಗಳನ್ನು ಬೇರ್ಪಡಿಸಿ ಮತ್ತೆ ಜೋಡಣೆ ಮಾಡುವ ತಾಂತ್ರಿಕತೆ ಇದಕ್ಕೆ ಇದೆ. ಇದರ ಜೋಡಣೆ ಕಾಯಕವೂ ಒಂದು ಕಲೆಯಾಗಿದೆ.
ಸಿಂಹಾಸನಕ್ಕೂ ಇದೆ ಪೌರಾಣಿಕ ನಂಟು
ಇನ್ನು ಸಿಂಹಾಸನದ ಬಗ್ಗೆ ಹೇಳುವುದಾದರೆ ಇದರ ಹಿಂದೆ ಪೌರಾಣಿಕ ಇತಿಹಾಸವಿದೆ. ಹಸ್ತಿನಾವತಿಪುರದ ರಾಜರಾದ ಪಾಂಡವರ ಕಾಲದಲ್ಲಿ ಕಂಪುಲ ರಾಜನು ಇದನ್ನು ತಂದು ಪೆನಗೊಂಡದಲ್ಲಿ ಹೂತಿಟ್ಟಿದ್ದನು ಎನ್ನಲಾಗಿದೆ. 1338ರಲ್ಲಿ ಮಹರ್ಷಿ ವಿದ್ಯಾರಣ್ಯರು ಧ್ಯಾನದೃಷ್ಠಿಯಿಂದ ಇದನ್ನು ಅರಿತು ವಿಜಯನಗರದ ಚಕ್ರಾಧಿಪತ್ಯದ ಸ್ಥಾಪಕ ಹರಿಹರನಿಗೆ ತಿಳಿಸಿದರೆಂದು ಅದರಂತೆ ಭೂಮಿಯನ್ನು ಅಗೆದು ಅದನ್ನು ಹೊರತೆಗೆಯಲಾಯಿತೆಂದು ಹೇಳಲಾಗಿದೆ ಬಳಿಕ ಸುಮಾರು ನೂರೈವತ್ತು ವರ್ಷಗಳ ಕಾಲ ಆನೆಗೊಂದಿಯಲ್ಲಿ ಇದು ಇತ್ತೆಂದು ಹೇಳಲಾಗಿದೆ.
ವಿಜಯನಗರದ ಅವನತಿಯ ವೇಳೆಗೆ ಶ್ರೀರಂಗಪಟ್ಟಣದಲ್ಲಿದ್ದ ವಿಜಯನಗರದ ರಾಯಬಾರಿ ಶ್ರೀರಂಗರಾಯನ ಅರಮನೆಗೆ ಸಾಗಿಸಲಾಯಿತೆಂದು ಆ ನಂತರ ಅದನ್ನು 1609ರಲ್ಲಿ ಆಗಿನ ಮೈಸೂರು ಅರಸರಾದ ರಾಜಒಡೆಯರ್ ಶ್ರೀರಂಗಪಟ್ಟಣದ ಶ್ರೀರಂಗರಾಯನಿಂದ ವಶಪಡಿಸಿಕೊಂಡು 1610ರಲ್ಲಿ ತಮ್ಮ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬದಲಾಯಿಸಿದಾಗ ಸಿಂಹಾಸನವನ್ನು ಮೈಸೂರಿನ ಅರಮನೆಗೆ ಸಾಗಿಸಿ ಸಿಂಹಾರೋಹಣ ಮಾಡಿದರೆಂದು ಹೇಳಲಾಗುತ್ತಿದೆ.
ವೈಶಿಷ್ಟ್ಯಪೂರ್ಣ ರತ್ನ ಖಚಿತ ಸಿಂಹಾಸನ
ಸಿಂಹಾಸನವು ರತ್ನ ಖಚಿತವಾಗಿದ್ದು ಹಲವು ವೈಶಿಷ್ಟ್ಯತೆ ಹೊಂದಿರುವುದನ್ನು ಕಾಣಬಹುದಾಗಿದೆ. ಮೇಲ್ನೋಟಕ್ಕೆ ಇದು ಚಿನ್ನದ ಬಾಳೆಯ ಕಂಬ ಮತ್ತು ಚಿನ್ನದ ಮಾವಿನ ಎಲೆಗಳಿಂದ ಅಲಂಕರಿಸಲ್ಪಟ್ಟಿದ್ದು, ಛತ್ರಿಯ ತುದಿಯಲ್ಲಿ ಒಡವೆಗಳಿಂದ ಅಲಂಕರಿಸಿದ ಪಕ್ಷಿಯನ್ನು ಕೂರಿಸಲಾಗಿದೆ. ಸಿಂಹಾಸನವನ್ನೇರುವ ಎರಡು ಬದಿಯಲ್ಲೂ ಸ್ತ್ರೀಪುತ್ಥಳಿಯನ್ನು ನಿರ್ಮಿಸಲಾಗಿದೆ. ಜೊತೆಗೆ ಛತ್ರಿಯ ಸುತ್ತಲೂ ಮುತ್ತಿನ ಕುಚ್ಚುಗಳನ್ನು ಕಟ್ಟಲಾಗಿದೆ.
ಸಿಂಹಾಸನ ಕೂರ್ಮರೂಪದ ಆಸನ ಹೊಂದಿದ್ದು ಉಭಯ ಪಾರ್ಶ್ವಗಳಲ್ಲಿ ಯಾಳಿಗಳನ್ನು ಮತ್ತು ನಾಲ್ಕು ಕಡೆಗಳಲ್ಲಿ ಬಳ್ಳಿಯ ಲತೆಗಳನ್ನು ಮತ್ತುಪೂರ್ವ ಮುಖಭಾಗದಲ್ಲಿ ಆನೆಗಳನ್ನೂ, ದಕ್ಷಿಣ ಭಾಗದಲ್ಲಿ ಕುದುರೆಗಳನ್ನು, ಪಶ್ಚಿಮದಲ್ಲಿ ಕಾಲುದಳವನ್ನು, ಉತ್ತರದಲ್ಲಿ ರಥಗಳನ್ನು ಕೆತ್ತಲಾಗಿದೆ.
ಸಿಂಹಾಸನದ ದಕ್ಷಿಣದಲ್ಲಿ ಬ್ರಹ್ಮ, ಉತ್ತರದಲ್ಲಿ ಶಿವ, ಮಧ್ಯದಲ್ಲಿ ವಿಷ್ಣುವನ್ನು ನಿಲ್ಲಿಸಲಾಗಿದೆ. ವಿಜಯ ಸೂಚಕ ನಾಲ್ಕು ಸಿಂಹಗಳನ್ನು ಇಡಲಾಗಿದೆ. ಮೂರು ಕೋನಗಳಲ್ಲೂ ರಾಕ್ಷಸ ಶರೀರ, ಎರಡು ಕುದುರೆಗಳು ಮತ್ತು ನಾಲ್ಕು ಹಂಸಪಕ್ಷಿಗಳನ್ನಿಡಲಾಗಿದೆ. ನಾಗದೇವತೆಗಳ ಚಿತ್ರಗಳು, ಸ್ವಸ್ತಿಕ ಆಕೃತಿ ಮತ್ತು ಮುತ್ತಿನ ಹಡಗು ಮೇಲಿನ ಗುಡಾರಗಳ ಚಿತ್ರಣಗಳಿವೆ. ಸಿಂಹಾಸನವನ್ನು ನಾಲ್ಕು ದಿಕ್ಕುಗಳಲ್ಲಿ ತೆರೆಯಲಾಗಿದೆ. ಸಿಂಹಾಸನದ ಛತ್ರಿಯ ಮೇಲೆ ಸಂಸ್ಕೃತದ 96 ಸಾಲುಗಳ ಆಶೀರ್ವಾದ ಪೂರ್ವಕ ಶ್ಲೋಕಗಳಿವೆ.












Click it and Unblock the Notifications