ಮೈಸೂರು ದಸರಾ 2023: ಭರದಿಂದ ಸಾಗಿದ ಅರಮನೆಯ ವಿದ್ಯುತ್ ದೀಪಗಳ ದುರಸ್ತಿ ಕಾರ್ಯ
ಮೈಸೂರು, ಅಕ್ಟೋಬರ್ 03: ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಯೇ ವಿದ್ಯುತ್ ದೀಪಗಳಿಂದ ಜಗಮಗಿಸುವ ಅರಮನೆ. ಈ ಅರಮನೆ ದಸರಾ ಮಾತ್ರವಲ್ಲದೆ ಎಲ್ಲ ದಿನಗಳಲ್ಲಿಯೂ ರಾತ್ರಿ ವೇಳೆ ನಿಗದಿತ ಅವಧಿಯಲ್ಲಿ ವಿದ್ಯುದ್ದೀಪಗಳಿಂದ ಮಿನುಗುತ್ತಾ ಗಮನಸೆಳೆಯುತ್ತದೆ. ಈ ಸುಂದರ ದೃಶ್ಯಗಳನ್ನು ಸವಿಯಲೆಂದೇ ಪ್ರವಾಸಿಗರು ಅರಮನೆಯತ್ತ ನೆರೆಯುತ್ತಾರೆ.
ಅರಮನೆಗೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ವಿದ್ಯುತ್ ಬಲ್ಬ್‌ಗಳಿಂದ ಅಲಂಕೃತಗೊಂಡಿದ್ದು, ಈ ಬಲ್ಬ್‌ಗಳು ಹಲವು ಕಾರಣಗಳಿಗೆ ಹಾಳಾಗುತ್ತವೆ. ಅಂತಹ ಬಲ್ಬ್‌ಗಳನ್ನು ತೆಗೆದು ಹೊಸ ಬಲ್ಬ್‌ಗಳನ್ನು ಅಳವಡಿಸುವ ಕಾರ್ಯ ಪ್ರತಿವರ್ಷವೂ ದಸರಾ ಸಂದರ್ಭ ನಡೆಯುತ್ತದೆ. ಅದರಂತೆ ಈ ಬಾರಿಯೂ ಅರಮನೆಯ ವಿದ್ಯುದ್ದೀಪಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದೆ. ಜೊತೆಗೆ ಅರಮನೆಗೆ ಸುಣ್ಣಬಣ್ಣ ಬಳಿಯುವ ಕೆಲಸವೂ ನಡೆಯುತ್ತಿದೆ.

ಅರಮನೆ ಕಟ್ಟಡಕ್ಕೆ ಅಳವಡಿಸಿರುವ ವಿದ್ಯುತ್ ದೀಪ ಇವತ್ತಿನದಲ್ಲ. ಅದು ಶಾಶ್ವತ ದೀಪಾಲಂಕಾರವಾಗಿದ್ದು, ಸದ್ಯ ಹಾಳಾಗಿರುವ 24,500ಕ್ಕೂ ಹೆಚ್ಚು ಬಲ್ಬ್‌ಗಳನ್ನು ಬದಲಿಸುವ ಕಾರ್ಯವನ್ನು ಕಳೆದ 15 ದಿನದಿಂದ ಅರಮನೆ ಸಿಬ್ಬಂದಿ ಒಳಗೊಂಡಂತೆ ಎಲೆಕ್ಟ್ರಿಷಿಯನ್‌ಗಳು ಮಾಡುತ್ತಿದ್ದಾರೆ. ಸದ್ಯ ಅರಮನೆ ಮುಖ್ಯ ಕಟ್ಟಡ, ಪ್ರವೇಶದ್ವಾರ, ವಿವಿಧ ಗೋಡೆ ಮೇಲೆ ಅಳವಡಿಸಿರುವ ಒಟ್ಟು ಒಂದು ಲಕ್ಷ ಬಲ್ಬ್ ಗಳನ್ನು ಪರೀಕ್ಷಿಸಿ ಕೆಟ್ಟುಹೋದ ಬಲ್ಭ್ ಗಳನ್ನು ತೆಗೆದು ಹೊಸದನ್ನು ಅಳವಡಿಸಲಾಗುತ್ತಿದೆ.
ದಸರಾ ವೇಳೆಗೆ ದುರಸ್ತಿ ಕಾರ್ಯ
ಪ್ರತಿ ವರ್ಷವೂ ಅರಮನೆಗೆ ಅಳವಡಿಸಿರುವ ಬಲ್ಬ್‌ಗಳು ಕೆಲವೊಮ್ಮೆ ಪ್ರತಿದಿನ ಪಾರಿವಾಳಗಳು ಹಾರಾಡುವಾಗ, ಜೋರಾಗಿ ಗಾಳಿ ಬೀಸಿದಾಗ, ದೀಪಾಲಂಕಾರದ ವೇಳೆ ಮಳೆ ಬಂದಾಗ ಹೀಗೆ ಹಲವು ಕಾರಣಗಳಿಗೆ ಸಮಾರು ಇಪ್ಪತ್ತು ಸಾವಿರದಷ್ಟು ಬಲ್ಬ್ ಗಳು ಹಾಳಾಗುತ್ತವೆ. ಹೀಗೆ ಹಾಳಾದ ಬಲ್ಬ್‌ಗಳನ್ನು ದಸರಾದ ವೇಳೆ ಸರಿಪಡಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದಕ್ಕಾಗಿ ದೆಹಲಿ, ಕೋಲ್ಕತ್ತದಿಂದ ಎಲ್ ಇಡಿ ಬಲ್ಬ್‌ಗಳನ್ನು ತರಿಸಲಾಗುತ್ತಿದೆ.
ಇನ್ನು ಅರಮನೆಗೆ ಅಳವಡಿಸಲಾಗಿರುವ ವಿದ್ಯುದ್ದೀಪಗಳ ದುರಸ್ತಿ ಕಾರ್ಯವು ಅಷ್ಟು ಸುಲಭದಲ್ಲ. ಕೆಟ್ಟ ಬಲ್ಬ್‌ಗಳನ್ನು ತೆಗೆದು ಹೊಸ ಬಲ್ಬ್‌ಗಳನ್ನು ಅಳವಡಿಸುವುದು ಸುಲಭದ ಕೆಲಸವಲ್ಲ. ಅದೊಂದು ದೊಡ್ಡ ಸಾಹಸ. ಅದರಲ್ಲೂ. ಜಯ ಮಾರ್ತಾಂಡ ಗೇಟ್ ಸೇರಿದಂತೆ 80 ಅಡಿ ಎತ್ತರದಲ್ಲಿರುವ ಅರಮನೆ ಗೋಪುರಗಳಿಗೆ ಬಲ್ಬ್‌ಗಳನ್ನು ಅಳವಡಿಸಲು ಕ್ರೇನ್ ಬಳಸಲಾಗುತ್ತದೆ. ಇನ್ನು ಅರಮನೆಗೆ ಮಾಡಲಾಗಿರುವ ವಿದ್ಯುತ್ ದೀಪದ ಬಗ್ಗೆ ತಿಳಿಯುತ್ತಾ ಹೋದರೆ ಕುತೂಹಲ ಮೂಡುತ್ತದೆ.

1942ರಲ್ಲಿ ವಿದ್ಯುತ್ ದೀಪ ಅಳವಡಿಕೆ
ಏಷ್ಯಾದಲ್ಲಿ ಮೊದಲ ಬಾರಿಗೆ ವಿದ್ಯುತ್‌ನ್ನು ಶಿವನಸಮುದ್ರದಲ್ಲಿ ತಯಾರಿಸಲಾಯಿತು ಎನ್ನುವುದು ಇತಿಹಾಸವಾದರೂ ಆಗ ಮೈಸೂರಿಗೆ ವಿದ್ಯುತ್ ಬಂದಿರಲಿಲ್ಲ. 1908ರಲ್ಲಿ ವಿದ್ಯುತ್ ದೀಪಗಳು ಮೈಸೂರಿಗೆ ಬಂದವು ಎಂದು ಹೇಳಲಾಗುತ್ತದೆ. 1942ರ ಆಸುಪಾಸಿನಲ್ಲಿ ಯದುವಂಶದ ಕೊನೆಯ ಅರಸ ಜಯಚಾಮರಾಜೇಂದ್ರ ಒಡೆಯರ್ ಅರಮನೆಗೆ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಿದರು. ತೇಗದ ಮರದ ಪಟ್ಟಿಗಳ ಮೇಲೆ ವೋಲ್ಡರ್‌ಗಳನ್ನು ಜೋಡಿಸಿ ಸುಮಾರು ಒಂದು ಲಕ್ಷ ಕ್ಯಾಂಡಿಸೆಂಟ್ ಬಲ್ಬ್‌ಗಳನ್ನು ಅಳವಡಿಸಿದ್ದರು. ಆರಂಭದಲ್ಲಿ 30 ವ್ಯಾಟ್‌ನ ಬಲ್ಬ್‌ಗಳನ್ನು ಅಳವಡಿಸಲಾಗಿತ್ತು. ನಂತರದ ದಿನಗಳಲ್ಲಿ 20 ವ್ಯಾಟ್‌ಗೆ ಇಳಿಸಲಾಯಿತು. ಪ್ರಸ್ತುತ ಎಲ್ ಇಡಿ ಬಲ್ಬ್‌ಗಳನ್ನು ಅಳವಡಿಸಲಾಗಿದೆ.
ಅರಮನೆ ದೀಪಾಲಂಕಾರದ ವ್ಯವಸ್ಥೆಗಾಗಿ ಹೆಚ್ಚು ಸಾಮರ್ಥ್ಯದ ಮೂರು ಟ್ರಾನ್ಸ್ ಫಾರ್ಮರ್ ಗಳನ್ನು ಅಳವಡಿಸಲಾಗಿದೆ. ಪ್ರತಿ ತಿಂಗಳು 10 ಲಕ್ಷ ರೂ.ಗಿಂತ ಹೆಚ್ಚಿನ ವಿದ್ಯುತ್ ಬಿಲ್ ಬರುತ್ತದೆ. ತಿಂಗಳಿಗೆ ಸರಾಸರಿ 88 ಸಾವಿರಕ್ಕೂ ಹೆಚ್ಚು ಯೂನಿಟ್ ವಿದ್ಯುತ್ ಬಳಸಲಾಗುತ್ತದೆ. ದಸರಾ ಸಂದರ್ಭದಲ್ಲಿ 1.2 ಲಕ್ಷ ಯೂನಿಟ್ ವಿದ್ಯುತ್ ಬಳಕೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ದೀಪಾಲಂಕಾರಗಳನ್ನು ನೋಡಿಕೊಳ್ಳಲೆಂದೇ ಅರಮನೆಯ ಪವರ್ ಹೌಸ್‌ನಲ್ಲಿ ಪ್ರತ್ಯೇಕ ಸಿಬ್ಬಂದಿಯಿದ್ದಾರೆ.
ಇನ್ನು ವಿದ್ಯುದ್ದೀಪಗಳನ್ನು ಉರಿಸಲು ಅರಮನೆ ಹಾಗೂ ಗೇಟ್‌ಗಳಿಗೆ ಪ್ರತ್ಯೇಕ ಮೂರು ಸ್ವಿಚ್ ಅಳವಡಿಸಲಾಗಿದ್ದು, ದೀಪಾಲಂಕಾರದ ವೇಳಾಪಟ್ಟಿಯಂತೆ ಇಲ್ಲಿರುವ ಸಿಬ್ಬಂದಿ ಸ್ವಿಚ್ ಆನ್ ಮಾಡುತ್ತಾರೆ. ಆಗ ಒಮ್ಮೆಲೆ ಅರಮನೆ ದೀಪದ ಬೆಳಕಿನಲ್ಲಿ ಮಿನುಗುತ್ತದೆ. ಅದನ್ನು ನೋಡುವುದೇ ಕಣ್ಣಿಗೊಂದು ಹಬ್ಬವಾಗುತ್ತದೆ.












Click it and Unblock the Notifications