ಮೈಸೂರು ದಸರಾ 2023: ಕೊಡಗಿನ ಪುಂಡಾನೆ ಅಭಿಮನ್ಯು ಈಗ ಗಜಪಡೆಯ ಕ್ಯಾಪ್ಟನ್ ಆಗಿದ್ದೇಗೆ..?
ಮೈಸೂರು, ಅಕ್ಟೋಬರ್ 14: ಇದುವರೆಗೆ ಸಾವಿರಾರು ಸಾಕಾನೆಗಳು ಮೈಸೂರು ದಸರಾದ ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದರೂ ಕೂಡ ಅವುಗಳ ಪೈಕಿ ಕೆಲವೇ ಕೆಲವು ಆನೆಗಳಿಗೆ ಮಾತ್ರ ಚಿನ್ನದ ಅಂಬಾರಿ ಹೊರುವ ಅವಕಾಶ ದೊರೆತಿದ್ದು ಅದರಲ್ಲಿ ಈಗ ಅಂಬಾರಿ ಹೊರುವ ಅಭಿಮನ್ಯು ಕೂಡ ಒಂದಾಗಿದೆ.
ಇತಿಹಾಸದ ಪುಟಗಳನ್ನು ಕೆದಕಿದರೆ ಅಂಬಾರಿ ಹೊತ್ತ ಹಲವು ಆನೆಗಳ ಪಟ್ಟಿಗಳು ಸಿಗುತ್ತವೆ. ಜೊತೆಗೆ ಅವುಗಳ ಸಾಮರ್ಥ್ಯದ ಬಗೆಗೂ ಮಾಹಿತಿಗಳು ದೊರೆಯುತ್ತವೆ. ಎಲ್ಲ ಆನೆಗಳಿಗೂ ಅಂಬಾರಿ ಹೊರಲಾಗುವುದಿಲ್ಲ. ಅವು ಅದಕ್ಕೆ ತಕ್ಕಂತ ಮೈಕಟ್ಟು ಹೊಂದಿರಬೇಕು. ಬಲಾಢ್ಯನಾಗಿರಬೇಕು. ಮಾವುತರ ಮಾತುಗಳನ್ನು ಚಾಚುತಪ್ಪದೆ ಪಾಲಿಸುವಂತಿರಬೇಕು.

ಇಷ್ಟೇ ಅಲ್ಲದೆ ಇತರೆ ಆನೆಗಳನ್ನು ನಿಯಂತ್ರಿಸುವಂತಿರಬೇಕು. ಸದ್ಯ ಅಂತಹ ಎಲ್ಲ ಗುಣಲಕ್ಷಣಗಳನ್ನು ಹೊಂದಿರುವ ಕಾರಣದಿಂದಲೇ ಅಭಿಮನ್ಯುಗೆ ಕಳೆದ ಮೂರು ವರ್ಷಗಳಿಂದ ಗಜಪಡೆಯ ಕ್ಯಾಪ್ಟನ್ ಆಗಿ ಚಿನ್ನದ ಅಂಬಾರಿ ಹೊರುವ ಜವಬ್ದಾರಿಯನ್ನು ನೀಡಲಾಗಿದೆ. ಕಳೆದ ಮೂರು ವರ್ಷಗಳ ಕಾಲವೂ ಯಶಸ್ವಿಯಾಗಿ ತನ್ನ ಕಾರ್ಯವನ್ನು ನಿರ್ವಹಿಸಿ ಇದೀಗ ನಾಲ್ಕನೇ ವರ್ಷದ ಜವಬ್ದಾರಿ ನಿಭಾಯಿಸಲು ಸಿದ್ದನಾಗಿರುವುದು ಎದ್ದು ಕಾಣಿಸುತ್ತಿದೆ.
ಕೊಡಗಿನಲ್ಲಿ ಸೆರೆ ಸಿಕ್ಕ ಆನೆ
ಈ ಬಾರಿ ಅಭಿಮನ್ಯು ಚಿನ್ನದ ಅಂಬಾರಿ ಹೊರಲು ಬೇಕಾದ ಎಲ್ಲ ಕಠಿಣ ತಾಲೀಮುಗಳು ಮುಗಿಯುತ್ತಾ ಬಂದಿದೆ. ಸದ್ಯ ಮರದ ಅಂಬಾರಿ ಹೊರುವ ಮತ್ತು ಸಿಡಿಮದ್ದಿನ ತಾಲೀಮು ನಡೆಯುತ್ತಿದೆ. ಜಂಬೂಸವಾರಿಗೆ ಇನ್ನು ಹತ್ತು ದಿನಗಳಷ್ಟೆ ಬಾಕಿಯಿದ್ದು ಅಭಿಮನ್ಯು ಸೇರಿದಂತೆ ಗಜಪಡೆ ಸರ್ವ ರೀತಿಯಲ್ಲಿ ಸಜ್ಜಾಗುತ್ತಿದೆ. ಇದೆಲ್ಲದರ ನಡುವೆ ಕ್ಯಾಪ್ಟನ್ ಅಭಿಮನ್ಯು ಬಗ್ಗೆಯೂ ಹೇಳಲೇ ಬೇಕು.

1977ಕ್ಕೂ ಹಿಂದೆ ಎಲ್ಲ ಆನೆಗಳಂತೆ ಇದು ಕೂಡ ಪುಂಡಾನೆಯಾಗಿತ್ತು. ಕೊಡಗಿನ ಅರಣ್ಯದಲ್ಲಿ ಅಂಡಲೆಯುತ್ತಾ ಪುಂಡಾಟ ನಡೆಸುತ್ತಿತ್ತು. ಹೀಗಾಗಿ ಇದನ್ನು 1977 ರಲ್ಲಿ ಕೊಡಗಿನ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿದು ಪಳಗಿಸಿ ಅಭಿಮನ್ಯು ಎಂದು ನಾಮಕರಣ ಮಾಡಲಾಯಿತು.
ಜವಾಬ್ದಾರಿ ನಿಭಾಯಿಸುವುದರಲ್ಲಿ ಎತ್ತಿದ ಕೈ
ಸದ್ಯ ಅಭಿಮನ್ಯು ವಯಸ್ಸು 58 ಆಗಿದ್ದು ಕಳೆದ 26 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದೆ. 2.74 ಮೀಟರ್ ಎತ್ತರ ಹಾಗೂ 3.51ಮೀಟರ್ ಉದ್ದವನ್ನು ಹೊಂದಿದ್ದು ಈಗ 5,300 ಕೆಜಿಯಷ್ಟು ತೂಕವಿದೆ. ಮುಂದಿನ ಜಂಬೂಸವಾರಿ ವೇಳೆಗೆ ಇನ್ನಷ್ಟು ತೂಕ ಜಾಸ್ತಿಯಾದರೂ ಅಚ್ಚರಿಯಿಲ್ಲ.
ವರ್ಷಪೂರ್ತಿ ಕೊಡಗಿನ ಮತ್ತಿಗೋಡು ಶಿಬಿರದಲ್ಲಿರುವ ಅಭಿಮನ್ಯುನನ್ನು ಮಾವುತ ಜೆ.ಎಸ್.ವಸಂತ ಮತ್ತು ಕಾವಾಡಿ ಜೆ.ಕೆ.ರಾಜು ನೋಡಿಕೊಳ್ಳುತ್ತಾರೆ. ಮೊದಲಿಗೆ ಜಂಬೂಸವಾರಿಯಲ್ಲಿ ಮಾಮೂಲಿ ಆನೆಯಾಗಿ ಭಾಗವಹಿಸಿ ಬಳಿಕ ಆರೇಳು ವರ್ಷಗಳ ಕಾಲ ಸಂಗೀತ ಗಾಡಿಯನ್ನು ಎಳೆಯುವ ಜವಾಬ್ದಾರಿ ಹೊತ್ತಿದ್ದ ಈತನಿಗೆ 2020ರಲ್ಲಿ ಅರಣ್ಯಾಧಿಕಾರಿಗಳು ಅಂಬಾರಿ ಹೊರುವ ಜವಾಬ್ದಾರಿ ವಹಿಸಿದ್ದರು. ಅಲ್ಲಿಂದ ಇಲ್ಲಿವರೆಗೆ ಅದನ್ನು ಯಶಸ್ವಿಯಾಗಿ ಪೂರೈಸುತ್ತಾ ಬಂದಿದ್ದಾನೆ.

ಬಲಶಾಲಿ, ಧೈರ್ಯಶಾಲಿ, ಪರಾಕ್ರಮಿ ಅಭಿಮನ್ಯು
ಅಭಿಮನ್ಯು ಬಗ್ಗೆ ಇನ್ನಷ್ಟು ಹೇಳಬೇಕೆಂದರೆ ಈತ ಕಾಡಾನೆ ಸೆರೆ ಹಿಡಿಯುವುದು, ಕಾಡಿಗೆ ಹಿಮ್ಮೆಟ್ಟಿಸುವುದರಲ್ಲಿ ನಿಸ್ಸೀಮ. ಅಷ್ಟೇ ಅಲ್ಲದೆ ಹುಲಿ ಸೆರೆ ಕಾರ್ಯಾಚರಣೆಯಲ್ಲೂ ಈತ ಎತ್ತಿದ ಕೈ. ಇದುವರೆಗೆ ಈತ 200ಕ್ಕೂ ಹೆಚ್ಚು ಪುಂಡಾನೆ ಸೆರೆ ಮತ್ತು 40ಕ್ಕೂ ಹೆಚ್ಚು ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವುದು ಆತನ ಕಾರ್ಯವೈಖರಿಗೆ ಸಾಕ್ಷಿಯಾಗಿದೆ.
ಅಭಿಮನ್ಯು ಎಷ್ಟು ಬಲಶಾಲಿಯೋ ಅಷ್ಟೇ ಧೈರ್ಯಶಾಲಿ, ಪರಾಕ್ರಮಿಯೂ ಹೌದು. ಇದಕ್ಕೆ ಉದಾಹರಣೆ ಎಂದರೆ ಕೆಲ ವರ್ಷಗಳ ಹಿಂದೆ ರಾಮನಗರ ಜಿಲ್ಲೆಯ ಮಾಗಡಿಯ ಸಾವನದುರ್ಗ ಅರಣ್ಯದಲ್ಲಿ ಈತನ ಮೇಲೆ ಎರಡು ಕಾಡಾನೆಗಳು ದಾಳಿ ಮಾಡಿದರೂ ಧೃತಿಗೆಡದೆ ಅವುಗಳನ್ನು ಹಿಮ್ಮೆಟ್ಟಿಸಿ ಪರಾಕ್ರಮ ಮೆರೆದಿದ್ದನು. ಮೈಸೂರು ಮಾತ್ರವಲ್ಲದೆ ಶ್ರೀರಂಗಪಟ್ಟಣದಲ್ಲಿ ನಡೆಯುವ ದಸರಾದ ವೇಳೆ ಮೂರು ಬಾರಿ ಅಂಬಾರಿ ಹೊತ್ತಿರುವುದು ವಿಶೇಷವಾಗಿದೆ.
ಜಂಬೂ ಸವಾರಿಯ ಆಕರ್ಷಣೆ
ಒಟ್ಟಾರೆಯಾಗಿ ಹೇಳಬೇಕೆಂದರೆ ಪುಂಡಾನೆಯಾಗಿದ್ದ ಅಭಿಮನ್ಯು ಮೈಸೂರು ದಸರಾದಲ್ಲಿ ಭಾಗವಹಿಸಲು ಆರಂಭಿಸಿದ ಬಳಿಕ ಹಂತಹಂತವಾಗಿ ತನಗೆ ನೀಡಿದ ಜವಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುತ್ತಾ ಇವತ್ತು ದಸರಾ ಜಂಬೂಸವಾರಿಯ ಪ್ರಮುಖ ಆಕರ್ಷಣೆಯಾಗಿ ಚಾಮುಂಡೇಶ್ವರಿ ವಿರಾಜಿತ ಚಿನ್ನದ ಅಂಬಾರಿಯನ್ನು ಹೊತ್ತು ಸಾಗುತ್ತಿರುವುದು ಖುಷಿಯ ವಿಚಾರವಾಗಿದೆ.












Click it and Unblock the Notifications