Yuva Sambrama : ಮೈಸೂರಿನಲ್ಲಿ ಯುವ ದಸರಾ ಸಂಭ್ರಮಕ್ಕೆ ಚಾಲನೆ; ಹುಚ್ಚೆದ್ದು ಕುಣಿದ ಯುವಜನತೆ
ಮೈಸೂರು, ಸೆಪ್ಟೆಂಬರ್, 16: ಮೈಸೂರಿನಲ್ಲಿ 9 ದಿನಗಳ ಸಾಂಸ್ಕೃತಿಕ ಜಾತ್ರೆ ಹಮ್ಮಿಕೊಂಡಿದ್ದು, ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಬಿಳಿ ಪಂಚೆ, ಷರ್ಟ್‌ನಲ್ಲಿ ಚಲನಚಿತ್ರ ನಟ ಡಾಲಿ ಧನಂಜಯ್ ಮಿಂಚಿದ್ದಾರೆ. ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಡೊಳ್ಳು ಬಾರಿಸುವ ಮೂಲಕ 9 ದಿನಗಳ ಸಾಂಸ್ಕೃತಿಕ ಜಾತ್ರೆ ಯುವ ದಸರಾ ಸಂಭ್ರಮಕ್ಕೆ ಚಾಲನೆ ನೀಡಿದರು.
ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಭಾಗವಾಗಿ ಕಾಲೇಜು ವಿದ್ಯಾರ್ಥಿಗಳನ್ನು ಸಂಘಟಿಸಿ ನೀಡಲಾಗುವ ಈ ಅಭೂತ ಕಾರ್ಯಕ್ರಮಕ್ಕೆ ಅದ್ಧೂರಿ ಆರಂಭ ದೊರೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಈ ಬಗ್ಗೆ ಮಾತನಾಡಿ, ಸುಮಾರು 152 ಕಾಲೇಜಿನ ವಿದ್ಯಾರ್ಥಿಗಳು ಹಲವು ದಿನಗಳ ಕಾಲ ನಾನಾ ನೃತ್ಯಗಳನ್ನು ಅಭ್ಯಾಸ ಮಾಡಿದ್ದಾರೆ. ಅವರು ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಸಾವಿರಾರು ಜನರ ಮುಂದೆ ಪ್ರದರ್ಶನ ನೀಡುತ್ತಿದ್ದಾರೆ ಎಂದರು.
ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆ:
ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆ ಆಗಿದೆ. ಇಲ್ಲಿ ಉತ್ತಮ ಪ್ರದರ್ಶನ ನೀಡಿದವರು ಯುವ ದಸರಾದಂತಹ ಇನ್ನೂ ದೊಡ್ಡ ವೇದಿಕೆಯಲ್ಲಿ ಕಾರ್ಯಕ್ರಮವನ್ನು ನೀಡಲಿದ್ದಾರೆ. ದಸರಾ ನೆಪದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ತಮ್ಮ ಕಲಾ ಜೀವನ ಕಟ್ಟಿಕೊಳ್ಳಲು ಉತ್ತಮ ವೇದಿಕೆ ದೊರೆಯುತ್ತಿದೆ ಎಂದರು.

ವಿದ್ಯಾರ್ಥಿಗಳಿಗೆ ಡಾಲಿ ಧನಂಜಯ್ ಕಿವಿಮಾತು:
ಕಾರ್ಯಕ್ರಮದ ಕೇಂದ್ರಬಿಂದುವಾಗಿ ಆಗಮಿಸಿದ್ದ ನಟ ಡಾಲಿ ಧನಂಜಯ್ ಅವರು ಮಾತನಾಡಿ, ಇಂತಹ ಹಬ್ಬಗಳು ಪ್ರತಿನಿತ್ಯ ಇರಬೇಕು. ಹಬ್ಬಗಳನ್ನು ಜಾತಿ, ಮತ ಮರೆತು ಪ್ರತಿಯೊಬ್ಬರು ಆಚರಿಸಬೇಕು. ಹಬ್ಬಗಳಲ್ಲಿ ಗಲಾಟೆ ಇರಬಾರದು. ನಮ್ಮ ಗುರಿ ಮುಟ್ಟಿ ಸಾಧನೆ ಮಾಡಿದಾಗ ಇಂತಹ ಹಬ್ಬಕ್ಕೆ ಇನ್ನಷ್ಟು ಮೆರಗು ಬರುತ್ತದೆ. ಸಾಧನೆ ಮಾಡಲು ಸಮಯ ತೆಗೆದುಕೊಳ್ಳುತ್ತದೆ. ಸಾಧನೆಯ ಹಾದಿಯಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಾನು ಇದೇ ಗಂಗೋತ್ರಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಯುವ ದಸರಾ ಇಲ್ಲೆಯೇ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ನಾನೂ ಸಹ ಕಾರ್ಯಕ್ರಮಕ್ಕೆ ಬಂದು ಕುಣಿದಾಡಿದ ನೆನಪುಗಳು ಈಗಲೂ ಸಹ ನೆನಪಿಗೆ ಬರುತ್ತದೆ. ನಮ್ಮ ಮನಸ್ಥಿತಿಯನ್ನು ನಾವೇ ನಿಯಂತ್ರಣ ಮಾಡಿಕೊಳ್ಳಬೇಕು. ಸ್ವಾತಂತ್ರ್ಯವಾಗಿ ಆಲೋಚನೆ ಮಾಡುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಎಂದರು.

ನಟ ಡಾಲಿ ಧನಂಜಯ್ ವೇದಿಕೆಯತ್ತ ಬರುತ್ತಿದ್ದಂತೆ ಅಭಿಮಾನಿಗಳು ಅವರತ್ತ ಕೈ ಬಿಸಿ ಸಂಭ್ರಮಿಸಿದರು. ಧನಂಜಯ್ ಅವರು ಟಗರು, ಬಡವರಾಸ್ಕಲ್, ಮಾನ್ಸೂನ್ ರಾಗ ಚಿತ್ರದ ಡೈಲಾಗ್ ಹೊಡೆದು ಅಭಿಮಾನಿಗಳನ್ನು ರಂಜಿಸಿದರು.
ಯುವ ದಸರಾ ಸಂಭ್ರಮಕ್ಕೆ ಕೈಜೋಡಿಸಿದ ಅಧಿಕಾರಿಗಳು:
ದಸರಾ ವಿಶೇಷ ಸಂಸ್ಕೃತಿ ಆಗಿಯೇ ಬೆಳೆದು ಬಂದಿರುವ ಯುವ ದಸರಾ ಸಂಭ್ರಮದ ಪ್ರಾರಂಭೋತ್ಸವಕ್ಕೆ ಶಾಸಕ ಎಲ್.ನಾಗೇಂದ್ರ, ಮೇಯರ್ ಶಿವಕುಮಾರ್, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್, ಮೈಲ್ಯಾಕ್ ಅಧ್ಯಕ್ಷ ಆರ್. ರಘು, ಉಪ ಮೇಯರ್ ಜಿ.ರೂಪಾ, ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಹದೇವಯ್ಯ, ಪಾಲಿಕೆ ನಾಮ ನಿರ್ದೇಶಿತ ಸದಸ್ಯ ರಮೇಶ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಯುವ ಸಂಭ್ರಮ ಸಮಿತಿ ಕಾರ್ಯಾಧ್ಯಕ್ಷ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಪೂರ್ಣಿಮಾ ಕೈಜೋಡಿಸಿದರು.












Click it and Unblock the Notifications