ಜಂಬೂ ಸವಾರಿಗೆ ಮೈಸೂರು ನಗರಿ ಸಜ್ಜು: ಮಧ್ಯಾಹ್ನ ನಂದಿಪೂಜೆ, ಸಂಜೆ ಮೆರವಣಿಗೆ, ಹೆಜ್ಜೆ ಹಾಕಲಿವೆ 9 ಆನೆಗಳು
ಮೈಸೂರು, ಅ.5: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಜಯದಶಮಿ ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನ ಉತ್ಸುಕರಾಗಿದ್ದಾರೆ. ಅ.5ರಂದು (ಇಂದು) ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದು ಭಕ್ತಿಭಾವದಲ್ಲಿ ಮಿಂದೇಳಲು ಎಲ್ಲರೂ ತುದಿಗಾಲ ಮೇಲೆ ನಿಂತಿದ್ದಾರೆ.
ಮಂಗಳವಾರ ಆಯುಧಪೂಜೆ ಸಂಭ್ರಮ ಮುಗಿದಿದೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ನೇತೃತ್ವದಲ್ಲಿ ಅರಮನೆ ಒಳಗೆ ಇರುವ ಆಯುಧಗಳಿಗೆ ಪೂಜೆ ನೆರವೇರಿಸಲಾಗಿದೆ. ಸದ್ಯ ಬುಧವಾರ ಮಧ್ಯಾಹ್ನ 2.36ರಿಂದ 2.50ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದ ಬಳಿ ನಂದಿಧ್ವಜ ಪೂಜೆ ಪೂಜೆ ನಡೆಯಲಿದೆ. ಬಳಿಕ ವಿಜಯದಶಮಿ ಮೆರವಣಿಗೆ ಆರಂಭವಾಗಲಿದೆ. ಅಂಬಾರಿಯಲ್ಲಿ ಪ್ರತಿಷ್ಠಾಪನೆಯಾಗುವ ದೇವಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಸಂಜೆ 5.07ರಿಂದ 5.18ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುಷ್ಪಾರ್ಚನೆ ಮಾಡಲಿದ್ದಾರೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮೇಯರ್ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಎಸ್.ಎ.ರಾಮದಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಎ.ಸುನಿಲ್ ಕುಮಾರ್ ಭಾಗವಹಿಸಲಿದ್ದಾರೆ.

25 ಸಾವಿರ ಆಸನ ವ್ಯವಸ್ಥೆ:
ನಂದಿಧ್ವಜ, ವೀರಗಾಸೆ, ನಾದಸ್ವರ, ನೌಪತ್, ನಿಶಾನೆ ಆನೆಗಳು, ಎನ್‌ಸಿಸಿ, ಸೈಟ್ಸ್, ಗೈಡ್ಸ್, ವಿವಿಧ ಪೊಲೀಸ್ ತುಕಡಿಗಳು, ನಾಡಿನ ಕಲೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ 44 ಸ್ತಬ್ಧಚಿತ್ರಗಳು, 50ಕ್ಕೂ ಹೆಚ್ಚು ಕಲಾತಂಡಗಳು ಒಟ್ಟು 9ರಿಂದ 10 ಆನೆಗಳು ಜಂಬೂಸವಾರಿಗೆ ಸಾಥ್ ನೀಡಲಿವೆ. ಅರಮನೆಯೊಳಗೆ 25 ಸಾವಿರ ಮಂದಿಗೆ ಆಸನ ವ್ಯವಸ್ಥೆ ಹಾಗೂ ಅಂಬಾರಿ ಸಾಗುವ ಎರಡೂ ಬದಿಯಲ್ಲಿ ಶಾಮಿಯಾನ ವ್ಯವಸ್ಥೆ ಮಾಡಲಾಗಿದೆ. ಅಂದು ರಾತ್ರಿ 7.30ಕ್ಕೆ ಬನ್ನಿಮಂಟಪದಲ್ಲಿ ಪಂಜಿನ ಕವಾಯತಿಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ಗೌರವ ವಂದನೆ ಸ್ವೀಕರಿಸಲಿದ್ದಾರೆ. ನಂತರ ಬಗೆಬಗೆಯ ಸಾಹಸ ಪ್ರದರ್ಶನ ನಡೆಯಲಿದೆ. ಆ ಮೂಲಕ ಹತ್ತು ದಿನ ದಸರಾ ಮಹೋತ್ಸವಕ್ಕೆ ತೆರೆಬೀಳಲಿದೆ.

9ರಿಂದ 10 ಆನೆಗಳು ಭಾಗಿ:
ಎಲ್ಲಾ ಆನೆಗಳು ಆರೋಗ್ಯವಾಗಿದ್ದು, 9ರಿಂದ 10 ಆನೆಗಳು ಜಂಬೂಸವಾರಿಯಲ್ಲಿ ಹೆಜ್ಜೆ ಹಾಕಲಿವೆ. ಈ ಬಾರಿ ಸಂಜೆ ಜಂಬೂಸವಾರಿ ಹೊರಡುವ ಹಿನ್ನೆಲೆಯಲ್ಲಿ ಬನ್ನಿಮಂಟಪ ತಲುಪಲು ಗಜಪಡೆಗೆ ಹೆಚ್ಚು ಸಮಯ ಬೇಕಾಗಬಹುದು. ಸ್ತಬ್ಧಚಿತ್ರ ಹಾಗೂ ಕಲಾತಂಡಗಳು ಇರುವುದರಿಂದ 9ರಿಂದ 10 ಆನೆಗಳನ್ನು ಮಾತ್ರ ಮೆರವಣಿಗೆಗೆ ಬಳಲಾಸಲಾಗುತ್ತಿದೆ.

"ಅಭಿಮನ್ಯು ಅಂಬಾರಿ ಹೊತ್ತರೆ, ಚೈತ್ರಾ ಹಾಗೂ ಕಾವೇರಿ ಕುಮ್ಮಿ ಆನೆಗಳಾಗಿ ಮೆರವಣಿಗೆಯಲ್ಲಿ ಸಾಗಲಿವೆ. ಈ ಬಾರಿ ಸಂಜೆ ಜಂಬೂಸವಾರಿಗೆ ನಡೆಯುತ್ತಿರುವುದರಿಂದ ರಾತ್ರಿ ತಡವಾಗಬಹುದೆಂದು 9 ಆನೆಗಳನ್ನು ಆಯ್ಕೆ ಮಾಡಿದ್ದೇವೆ. ಅರ್ಜುನ ನಿಶಾನೆ ಯಾದರೆ, ನೌತ್ ಆನೆಯಾಗಿ ಮಹೇಂದ್ರ, ಸಾಲಾನೆ ಯಾಗಿ ಭೀಮ, ಗೋಪಾಲಸ್ವಾಮಿ ಹಾಗೂ ಧನಂಜಯ್, ಗೋಪಿ ಹೆಜ್ಜೆಹಾಕಲಿವೆ. ಕೊನೆಗಳಿಗೆಯಲ್ಲಿ ವಿಜಯ್ ಕೂಡ ಟೀಂ ಸೇರಬಹುದು. ಧನಂಜಯ್ ಹಾಗೂ ಭೀಮ ಪಟ್ಟನೆ ಆನೆಯಾಗಿದ್ದಾನೆ,'' ಎಂದು ಡಿಸಿಎಫ್ ಕರಿಕಾಳನ್ ತಿಳಿಸಿದ್ದಾರೆ.












Click it and Unblock the Notifications