ಮೈಸೂರಿನ ಪಾರಂಪರಿಕ ಕಟ್ಟಡಗಳ ನೆಲಸಮಕ್ಕೆ ವಿರೋಧ
ಮೈಸೂರು, ಫೆಬ್ರವರಿ 2 : ವಿರೋಧದ ನಡುವೆಯೂ ಮೈಸೂರಿನ ಪಾರಂಪರಿಕ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ ಡೌನ್ ಕಟ್ಟಡಗಳ ನೆಲಸಮಗೊಳಿಸಿ ಹೊಸದಾಗಿ ನಿರ್ಮಿಸಲು ಮೈಸೂರು ಮಹಾನಗರ ಪಾಲಿಕೆ ನಿರ್ಣಯ ಕೈಗೊಂಡಿದೆ.
ಈ ಕಟ್ಟಡಗಳನ್ನು ನೆಲಸಮಗೊಳಿಸಿದರೆ ಮೈಸೂರಿಗರು ಪಾರಂಪರಿಕ ನಗರ ಮನ್ನಣೆ ಹಾಗೂ ಘನತೆಯನ್ನು ನಾವು ಕಳೆದುಕೊಳ್ಳಬೇಕಾಗುತ್ತದೆ ಎಂದು ಜಿಲ್ಲಾ ಮಟ್ಟದ ಪಾರಂಪರಿಕ ತಜ್ಞರ ಸಮಿತಿ ಅಭಿಪ್ರಾಯಪಟ್ಟಿದ್ದು ಕಟ್ಟಡಗಗಳನ್ನು ರಿಪೇರಿ ಮಾಡಿಸಿ ಸಂರಕ್ಷಿಸಬೇಕೇ ಹೊರತು ಕೆಡವಬಾರದು ಎಂದು ಸಲಹೆ ನೀಡಿದ್ದಾರೆ.
ಇಂದು ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್ ಡೌನ್ ಕಟ್ಟಡಗಳನ್ನು ನೆಲಸಮಗೊಳಿಸಿದರೆ ನಾಳೆ ಮೈಸೂರಿನ ಇನ್ನಿತರ ಪಾರಂಪರಿಕ ಕಟ್ಟಡಗಳನ್ನು ಒಂದೊಂದಾಗಿ ಕೆಡವಲು ಪ್ರೇರೇಪಿಸಿದಂತಾಗುತ್ತದೆ. ಹೀಗಾದರೆ ಮೈಸೂರಿನ ಪಾರಂಪರಿಕ ನಗರವಾಗಿ ಉಳಿಯುವುದಾದರೂ ಹೇಗೆ ಎಂದು ಜಿಲ್ಲಾ ಪಾರಂಪರಿಕ ತಜ್ಞರ ಸಮಿತಿ ಸದಸ್ಯರು ಪ್ರಶ್ನಿಸಿದ್ದಾರೆ.

ಪಾರಂಪರಿಕ ಕಟ್ಟಡಗಳನ್ನು ಉಳಿಸಿ ಸಂರಕ್ಷಿಸುವ ದೃಷ್ಟಿಯಿಂದ ಚರ್ಚಿಸಲು ತಕ್ಷಣ ತಜ್ಞರ ಸಭೆ ಕರೆಯುವಂತೆ ಜಿಲ್ಲಾ ಮಟ್ಟದ ಪಾರಂಪರಿಕ ತಜ್ಞರ ಸಮಿತಿ ಅಧ್ಯಕ್ಷ ಪ್ರೊ. ರಂಗರಾಜು ಒತ್ತಾಯಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ರಂಗರಾಜು ಈ ಎರಡೂ ಕಟ್ಟಡಗಳನ್ನು ನೆಲಸಮಗೊಳಿಸಲು ಕೈಗೊಂಡಿರುವ ಪಾಲಿಕೆ ನಿರ್ಣಯ ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆಯೇ ಸಮಿತಿಯು ತನ್ನ ಅಭಿಪ್ರಾಯದೊಂದಿಗೆ ಲಿಖಿತ ವರದಿ ಸಲ್ಲಿಸಿದ್ದು, ಅದರಲ್ಲಿ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್ ಡೌನ್ ಕಟ್ಟಡಗಳನ್ನು ತಜ್ಞ ಕೆಲಸಗಾರರಿಂದ ಯಥಾವತ್ ನಿರ್ವಹಣೆ ಮಾಡಿಸಿ ಸಂರಕ್ಷಿಸಿಕೊಳ್ಳಬಹುದು. ಅವುಗಳನ್ನು ಹೊಡೆದು ಹಾಕಬಾರದು ಎಂದು ಸ್ಪಷ್ಟವಾಗಿ ತಿಳಿಸಿದ್ದೇವೆ ಎಂದರು.

ವಿಜಯಪುರದಲ್ಲಿ ಗೋಲ್ ಗುಂಬಜ್, ಹಂಪಿಯ ಲೋಟಸ್ ಮಾಲ್ ಕಟ್ಟಡಗಳು ಸುಮಾರು 500 ವರ್ಷಗಳ ಹಳೆಯ ನಿರ್ಮಾಣಗಳು ಸರಿಯಾಗಿ ನಿರ್ವಹಣೆ ಮಾಡಿದ್ದರಿಂದ ಅವು ಇನ್ನೂ ಸುಸ್ಥಿತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ. ಮೈಸೂರು ಮಹಾನಗರ ಪಾಲಿಕೆಯು ಲ್ಯಾನ್ಸ್ ಡೌನ್ ಮತ್ತು ದೇವರಾಜ ಮಾರುಕಟ್ಟೆ ಕಟ್ಟಡಗಳನ್ನು ಕೇವಲ ವಾಣಿಜ್ಯ ದೃಷ್ಟಿಯಿಂದ ನೋಡುತ್ತೇವೆಯೇ ಹೊರತು ಪಾರಂಪರಿಕ ಮೌಲ್ಯ ಕುರಿತು ದೂರದೃಷ್ಟಿಯಲ್ಲಿ ನೋಡುತ್ತಿಲ್ಲ.
ಈಗಾಗಲೇ ಅಪೇರಾ ಟಾಕೀಸ್, ರಣಜಿತ್ ಚಿತ್ರಮಂದಿರಗಳನ್ನು ಕಳೆದುಕೊಂಡ ಮೈಸೂರಿನಲ್ಲಿ ಸರ್ಕಾರವೇ ಪಾರಂಪರಿಕ ಕಟ್ಟಡಗಳನ್ನು ನೆಲಸಮಗೊಳಿಸಲು ಮುಂದಾದರೆ ಭವಿಷ್ಯದಲ್ಲಿ ನಗರದ ಇನ್ನಿತರ ಪಾರಂಪರಿಕ ಕಟ್ಟಡಗಳು ನಮ್ಮ ಅವಧಿಯಲ್ಲೇ ಕಣ್ಮರೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.












Click it and Unblock the Notifications