Siddaramaiah: ಸಿಎಂ ಸಿದ್ದರಾಮಯ್ಯ ಬೆಂಬಲಿಸಿ ಆಗಸ್ಟ್ 19ರಂದು ಮೈಸೂರು ಬಂದ್‌ಗೆ ನಿರ್ಧಾರ
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಹಿಂಪಡೆಯುವಂತೆ ಒತ್ತಾಯಿಸಿ ಆಗಸ್ಟ್ 19 ಮೈಸೂರು ಬಂದ್ ಆಚರಿಸಲು ಕರ್ನಾಟಕ ಪ್ರದೇಶ ಕುರುಬರ ಸಂಘ ಹಾಗೂ ಪ್ರಗತಿಪರ ಸಂಘಟನೆ, ಸಿದ್ದರಾಮಯ್ಯ ಅಭಿಮಾನಿಗಳು ಕರೆ ನೀಡಿದ್ದಾರೆ. ರಾಜ್ಯಪಾಲರ ನಡೆ ಖಂಡಿಸಿ ಶನಿವಾರ ಕೂಡ ನಗರದಲ್ಲಿ ಭಾರಿ ಪ್ರತಿಭಟನೆ ನಡೆಸಲಾಗಿದೆ.
ಶನಿವಾರ ಮೈಸೂರಿನ ಜಲದರ್ಶಿನಿಯಲ್ಲಿ ಸಭೆ ನಡೆಸಿದ ಪ್ರಗತಿಪರ ಸಂಘಟನೆ, ಸಿದ್ದರಾಮಯ್ಯ ಅಭಿಮಾನಿಗಳು ರಾಜ್ಯಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿಯು ರಾಜ್ಯಪಾಲರನ್ನು ಕೈಗೊಂಬೆ ಮಾಡಿಕೊಂಡಿದೆ. ಮುಡಾ ಹಗರಣದಲ್ಲಿ ನೇರ ಆರೋಪಿಯಲ್ಲದ ಸಿಎಂ ಸಿದ್ದರಾಮಯ್ಯ ಅವರನ್ನು ಉದ್ದೇಶಪೂರ್ವಕವಾಗಿ ಪ್ರಕರಣದಲ್ಲಿ ಸಿಲುಕಿಸಿ ಅವರ ರಾಜಕೀಯ ಜೀವನವನ್ನು ಮುಗಿಸಲು ಹೊರಟಿದ್ದು ಇದನ್ನು ಖಂಡಿಸಿ ಆಗಸ್ಟ್ 19 ರಂದು ಮೈಸೂರು ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದರು.

ಸಭೆಯಲ್ಲಿ ಹಾಜರಿದ್ದ 150 ಕ್ಕೂ ಹೆಚ್ಚು ಮಂದಿ ಸೋಮವಾರ ಮೈಸೂರು ಬಂದ್ ಆಚರಿಸಲು ಒಪ್ಪಿಗೆ ನೀಡಿದರು. ಇತರೆ ಪ್ರಮುಖ ಸಂಘ, ಸಂಸ್ಥೆಗಳ ಬೆಂಬಲ ಪಡೆಯುವ ಬಗ್ಗೆ ಕೂಡ ಚರ್ಚಿಸಲಾಗಿದೆ.
ಶನಿವಾರ ಮೈಸೂರಿನಲ್ಲಿ ಪ್ರತಿಭಟನೆ
ಕಾಂಗ್ರೆಸ್ ಕಾರ್ಯಕರ್ತರು ಇಂದು ಟೈರ್ ಸುಟ್ಟು ಪ್ರತಿಭಟನೆ ನಡೆಸಿದರು. ನ್ಯಾಯಾಲಯದ ಮುಂಭಾಗದಲ್ಲಿ ಸೇರಿದ ಮುಖಂಡರು ರಾಜ್ಯಪಾಲರ ನಡೆಯನ್ನು ಖಂಡಿಸಿ ಘೋಷಣೆ ಕೂಗಿದರು. ಬಳಿಕ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯಪಾಲರ ಭಾವಚಿತ್ರ ಸುಟ್ಟು ವಿರೋಧ ವ್ಯಕ್ತಪಡಿಸಿದರು. ಕೂಡಲೇ ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ನೀಡಿರುವುದನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ಪ್ರತಿಭಟನೆ ವೇಳೆ ಪೋಲಿಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಕೆಲವರು ತೀವ್ರ ಬೇಸರಗೊಂಡು ಬಟ್ಟೆಯನ್ನು ಬಿಚ್ಚಿ ಬೆತ್ತಲೆಯಾಗುವ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಿದರು. ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸರು ಟಿಯರ್ ಗ್ಯಾಸ್ ಸಿಡಿಸಿ ಗುಂಪು ಚದುರಿಸಲು ಪ್ರಯತ್ನಿಸಿದರು. ಆದರೆ ಪ್ರತಿಭಟನಾಕಾರರು ಅದಕ್ಕೆ ಜಗ್ಗದೇ ಪ್ರತಿಭಟನೆ ಮುಂದುವರಿಸಿದರು.
ಸಿದ್ದರಾಮಯ್ಯ ಅವರ ವಿರುದ್ಧ ಇದೇ ರೀತಿ ರಾಜಕೀಯ ಹುನ್ನಾರ ಮಾಡಿದಲ್ಲಿ ಬಿಜೆಪಿ, ಜೆಡಿಎಸ್, ರಾಜ್ಯಪಾಲರ ವಿರುದ್ಧ ರಾಜ್ಯದ ಜನತೆ ದಂಗೆ ಏಳಲಿದ್ದಾರೆ. ಮಾತ್ರವಲ್ಲದೇ ಬಾಂಗ್ಲಾ ದೇಶದಲ್ಲಿ ಅಧ್ಯಕ್ಷರ ಮನೆಗೆ ನುಗ್ಗಿ ಅರಾಜಕತೆ ವಾತಾವರಣ ಸೃಷ್ಟಿಯಾದಂತೆ ರಾಜ್ಯದಲ್ಲಿಯೂ ಅದೇ ಸನ್ನಿವೇಶ ಸೃಷ್ಟಿಯಾಗಲಿದೆ ಎಂದು ಎಚ್ಚರಿಕೆ ನೀಡಿದರು.
ನ್ಯಾಯಾಲಯದ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದವರು ಇದ್ದಕ್ಕಿದ್ದಂತೆ ಬಿಜೆಪಿ ಕಚೇರಿ ಮುತ್ತಿಗೆ ಹಾಕಲು ಮುಂದಾದರು. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಮಾರ್ಗ ಮಧ್ಯೆ ತಡೆದು ಬಿಜೆಪಿ ಕಚೇರಿ ಮುತ್ತಿಗೆ ಹಾಕದಂತೆ ಮನವೊಲಿಸಿದರು.












Click it and Unblock the Notifications