ಜನವರಿಗೆ ಮೈಸೂರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ: ಪ್ರತಾಪ್ ಸಿಂಹ
ಮೈಸೂರು, ಆಗಸ್ಟ್, 26: ಮೊದಲ ಹಂತದಲ್ಲಿ ಮಾಂಡಕಳ್ಳಿ ವಿಮಾನ ನಿಲ್ದಾಣದ ರನ್‌ವೇ 1.75 ಕಿ.ಮೀ.ನಿಂದ 2.75 ಕಿ.ಮೀ. ವಿಸ್ತರಣೆಯಾಗಲಿದ್ದು, ಜನವರಿಯಲ್ಲಿ ರನ್‌ವೇ ವಿಸ್ತರಣೆಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ತಿಳಿಸಿದ್ದಾರೆ.
ಮಂಡಕಳ್ಳಿ ವಿಮಾನ ನಿಲ್ದಾಣದ ಸಭಾಂಗಣದಲ್ಲಿ ನಡೆದ ವಿಮಾನ ನಿಲ್ದಾಣ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೆ ಕೊನೆಗೂ ಕಾಲ ಕೂಡಿ ಬಂದಿದೆ. ರನ್‌ವೇ ವಿಸ್ತರಣೆಗೆ 6 ತಿಂಗಳಲ್ಲಿ ಚಾಲನೆ ದೊರೆಯಲಿದೆ. ಎರಡನೇ ಹಂತದಲ್ಲಿ 3.5 ಕಿ.ಮೀ.ಗೆ ರನ್‌ವೇ ವಿಸ್ತರಣೆ ಮಾಡಲು ಮತ್ತೊಂದು ಯೋಜನೆ ರೂಪಿಸಲಾಗಿದೆ.

91 ಹೆಕ್ಟೇರ್ ಭೂ ಸ್ವಾಧೀನ ಪ್ರಕ್ರಿಯೆ ಕೈಗೊಳ್ಳುವಂತೆ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಪ್ರಸ್ತಾವನೆ ಕಳುಹಿಸಲಾಗುವುದು. ಈ ಹೆಚ್ಚುವರಿ ಅನುದಾನದ ಕಡತ ಹಣಕಾಸು ಇಲಾಖೆ ಮುಂದಿದ್ದು, ಹೆಕ್ಟೇರ್‌ಗೆ 1.5 ಕೋಟಿ ರೂಪಾಯಿ ಪರಿಹಾರ ನೀಡಲಾಗುವುದು. ಈ ಬಗ್ಗೆ ಫೈನಲ್ ನೋಟಿಫಿಕೇಶನ್ ಆಗಬೇಕಿದೆ ಎಂದರು.
2.75 ಕಿ.ಮೀ. ರನ್‌ವೇ ವಿಸ್ತರಣೆಗೆ 240 ಎಕರೆ ಖಾಸಗಿ ಹಾಗೂ ಸರ್ಕಾರಿ ಜಾಗವನ್ನು ಭೂ ಸ್ವಾಧೀನ ಪಡಿಸಿಕೊಳ್ಳಲು ಉದ್ದೇಶಿಸಲಾಗಿದ್ದು, ರಾಜ್ಯ ಸರ್ಕಾರ 150 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಇದರಿಂದ 160 ಎಕರೆ ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಉಳಿದ 46.22 ಎಕರೆ ಖಾಸಗಿ ಭೂಮಿ ಸ್ವಾಧೀನಕ್ಕೆ 90 ಕೋಟಿ ರೂಪಾಯಿ ಅವಶ್ಯಕತೆ ಇದೆ ಎಂದು ಹೇಳಿದರು.
ರನ್ ವೇ ವಿಸ್ತರಣೆಗೆ ಪೂರಕವಾಗಿ ಮೈಸೂರು-ನಂಜನಗೂಡು ಹೆದ್ದಾರಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಅಂಡರ್‌ಪಾಸ್ ಯೋಜನೆ ಕೈಬಿಟ್ಟು, ರಸ್ತೆ ತಿರುವು ಮಾಡಲು ತೀರ್ಮಾನಿಸಲಾಗಿದೆ ಎಂದರು. ನಗರದ ದಳವಾಯಿ ಕೆರೆ ಮುಂಭಾಗ ಹೆದ್ದಾರಿಯು ತಿರುವು ಪಡೆದು ಟೋಲ್ ಪ್ಲಾಜಾ ಬಳಿಯಲ್ಲಿ ಹಳೆಯ ಹೆದ್ದಾರಿಗೆ ಸೇರಿಕೊಳ್ಳಲಿದೆ. ಇದರಿಂದ ನಂಜನಗೂಡು ಪ್ರಯಾಣ 5 ಕಿಲೋ ಮೀಟರ್ ಹೆಚ್ಚಾಗಲಿದೆ ಎಂದು ಮಾಹಿತಿ ನೀಡಿದರು.
ಮೈಸೂರು-ನಂಜನಗೂಡು ಹೆದ್ದಾರಿಯನ್ನು 6 ಪಥದ ರಸ್ತೆಯಾಗಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ. 6 ಪಥದ ಜೊತೆಗೆ ಎರಡು ಬದಿಯಲ್ಲಿ ಸರ್ವೀಸ್ ರಸ್ತೆ ನಿರ್ಮಾಣಗೊಳ್ಳಲಿದೆ. ಅಂಡರ್‌ಪಾಸ್ ನಿರ್ಮಾಣಕ್ಕೆ ಮೀಸಲಿಟ್ಟಿದ್ದ 510 ಕೋಟಿ ರೂಪಾಯಿಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೀಡಲಾಗುವುದು ಎಂದರು.
ಈ ವೇಳೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಕೆಐಎಡಿಬಿ ಭೂ ಸ್ವಾಧೀನ ಅಧಿಕಾರಿ ಪ್ರಿಯದರ್ಶಿನಿ, ಶಾಸಕ ಜಿ.ಟಿ. ದೇವೇಗೌಡ, ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಅನೂಪ್ ಇದ್ದರು.












Click it and Unblock the Notifications