6 ತಿಂಗಳಲ್ಲಿ ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ- ಸಂಸದ ಪ್ರತಾಪ್ ಸಿಂಹ
ಮೈಸೂರು, ಜೂನ್ 3: ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ ಬೇಕಾದ ಎಲ್ಲಾ ತಯಾರಿ ಮಾಡಿಕೊಳ್ಳಲಾಗುತ್ತಿದೆ. 6 ತಿಂಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಸ್ತುತ ಏರ್‌ಪೋರ್ಟ್ 1.75 ಕಿ.ಮೀ. ರನ್ ವೇ ಹೊಂದಿದೆ. ಇದನ್ನು 2.75 ಕಿ.ಮೀ.ಗೆ ಏರಿಸಲಾಗುತ್ತಿದೆ. ಇದಕ್ಕಾಗಿ 240 ಎಕರೆ ಭೂಮಿ ಅವಶ್ಯಕತೆ ಇದೆ. 209 ಎಕರೆಯನ್ನು ಸ್ವಾಧೀನಪಡಿಸಿಕೊಳ್ಳಬೇಕಿತ್ತು. ಭೂ ಸ್ವಾಧೀನಕ್ಕೆ ಕೆಐಎಡಿಬಿ ಪ್ರೊಸೆಸಿಂಗ್ ಶುಲ್ಕ ಸೇರಿ 319 ಕೋಟಿ ರೂ. ಬೇಕಿತ್ತು. ಅದನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಡುಗಡೆ ಮಾಡಿದ್ದಾರೆ ಎಂದರು.

ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು 2ನೇ ಹಂತದಲ್ಲಿ ನಮ್ಮ ಮೈಸೂರು ವಿಮಾನ ನಿಲ್ದಾಣದ ರನ್ ವೇಯನ್ನು 3.5 ಕಿ. ಮೀ. ವರೆಗೆ ವಿಸ್ತರಣೆ ಮಾಡಬೇಕೆಂದು ಕೆಎಐಡಿಬಿಯನ್ನು ಮನವಿ ಮಾಡಿಕೊಳ್ಳಲಾಗಿತ್ತು. ಅವರು ಅದಕ್ಕಾಗಿ 91 ಎಕರೆಯನ್ನು ಗುರುತು ಮಾಡಿದ್ದಾರೆ. ವಿಮಾನ ನಿಲ್ದಾಣ ಅಭಿವೃದ್ಧಿ ಪ್ರಾಧಿಕಾರದಿಂದ ಕೆಎಐಡಿಬಿಗೆ ಅಧಿಕೃತವಾಗಿ ಒಂದು ಮನವಿ ಸಲ್ಲಿಕೆಯಾಗಬೇಕಿದೆ. ಸದ್ಯದಲ್ಲಿಯೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ರಾಜ್ಯ ಸರ್ಕಾರದ ಸಹಕಾರ ಬೇಕು ಎಂದ ಸಂಸದ ಪ್ರತಾಪ್ ಸಿಂಹ
ಟರ್ಮಿನಲ್ ನಿರ್ಮಾಣದ ಬಳಿ ಬೇಕಾಗಿದ್ದ ಇನ್ನುಳಿದ 46 ಎಕರೆ ಜಮೀನನ್ನು ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಇದಕ್ಕೆ ಬೇಕಾದ ಹಣಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನೂ ಸಲ್ಲಿಸಲಾಗುತ್ತದೆ. ಅದಕ್ಕೆ ಬೇಕಾಗುವ ಅನುದಾನವನ್ನು ರಾಜ್ಯ ಸರ್ಕಾರ ನೀಡಬೇಕಿದೆ. ಅದಕ್ಕಾಗಿ ಪತ್ರ ವ್ಯವಹಾರ ನಡೆಸಲಾಗುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ ಆರು ತಿಂಗಳು ಬೇಕಾಗುತ್ತದೆ ಎಂದರು.
ಮೈಸೂರು-ನಂಜನಗೂಡು ನಡುವಿನ ರಸ್ತೆಯಲ್ಲಿ ಮೈಸೂರು ವಿಮಾನ ನಿಲ್ದಾಣ ರನ್‌ವೇ ವಿಸ್ತರಣೆಗೆ ಅಂಡರ್ ಪಾಸ್ ನಿರ್ಮಿಸುವ ಯೋಜನೆಯನ್ನು ಕೈಬಿಡಲಾಗಿದೆ. ಅದಕ್ಕೆ ಬದಲಾಗಿ ರಸ್ತೆಯನ್ನೇ ರನ್ ವೇ ಬರುವ ಜಾಗದಲ್ಲಿ ಬದಲಾವಣೆ ಮಾಡಲಾಗುವುದು. ಇದರಿಂದ ಮೈಸೂರು-ನಂಜನಗೂಡಿನ ನಡುವಿನ ಹೆದ್ದಾರಿಯು 7 ಕಿ.ಮೀ. ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ.
ಇದಲ್ಲದೇ ಮೈಸೂರು-ನಂಜನಗೂಡು ನಡುವಿನ ರಸ್ತೆಯನ್ನು 6 ಲೈನ್ ಹಾಗೂ ಸರ್ವಿಸ್ ರಸ್ತೆಯಾಗಿ ಪರಿವರ್ತಿನೆ ಮಾಡಬೇಕೆಂದು ಪ್ರಸ್ತಾವ ಸಲ್ಲಿಸಲಾಗಿತ್ತು. ಅದಕ್ಕೆ ಒಪ್ಪಿಗೆ ದೊರೆತು ಡಿಪಿಆರ್ ಸಿದ್ಧವಾಗಿತ್ತು. ಆದರೆ, ಈ ರಸ್ತೆಯಲ್ಲಿ ಅಂಡರ್ ಪಾಸ್‌ಗೆ ಬದಲಾಗಿ ಹೆಚ್ಚುವರಿ 7 ಕಿ. ಮೀ. ರಸ್ತೆ ನಿರ್ಮಿಸಬೇಕಾಗಿರುವುದರಿಂದ ಹೊಸ ಯೋಜನೆ ಸಿದ್ಧಗೊಳಿಸಬೇಕಿದೆ. ನಾನಾ ಇಲಾಖೆಗಳ ಭೂಸ್ವಾಧೀನ, ಕೆಇಬಿ ಲೈನ್ ಶಿಫ್ಟಿಂಗ್, ನಿರಾವರಿ ಇಲಾಖೆ, ಪವರ್‌ಗ್ರಿಡ್ ಅನುಮತಿ ತೆಗೆದುಕೊಳ್ಳಬೇಕಿದೆ. ಇದಾದ ನಂತರ ನಿರ್ಮಾಣ ಕಾರ್ಯ ಆರಂಭವಾಗಬೇಕಿದೆ. ಇದಕ್ಕೆ ರಾಜ್ಯ ಸರ್ಕಾರದ ಸಹಕಾರ ಬೇಕಿದೆ ಎಂದರು.












Click it and Unblock the Notifications