ಮೈಸೂರು ದಸರಾಕ್ಕೆ ಗುರುವಾರ ಕಾರ್ನಾಡ್‌ರಿಂದ ಚಾಲನೆ
ಮೈಸೂರು, ಸೆ. 24 : ಹತ್ತು ದಿನಗಳ ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಗುರುವಾರ ಚಾಲನೆ ದೊರೆಯಲಿದೆ. ಸಾಹಿತಿ ಗಿರೀಶ್ ಕಾರ್ನಾಡ್ ದಸರಾವನ್ನು ಉದ್ಘಾಟಿಸಲಿದ್ದಾರೆ. ಬೆಳಗ್ಗೆಯಿಂದ ಸಂಜೆಯ ತನಕ ಮೈಸೂರು ದಸರಾದ ವಿವಿಧ ಕಾರ್ಯಕ್ರಗಳು ಉದ್ಘಾಟನೆಗೊಳ್ಳಲಿವೆ.
ಗುರುವಾರ ಬೆಳಗ್ಗೆ ಚಾಮುಂಡಿ ಬೆಟ್ಟದಲ್ಲಿ 8.37 ರಿಂದ 9.05ರೊಳಗೆ ಸಲ್ಲುವ ಶುಭ ತುಲಾ ಲಗ್ನದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ದಸರಾವನ್ನು ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಸೇರಿದಂತೆ ಹಲವಾರು ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. [ಮೈಸೂರು ದಸರಾ ಚಿತ್ರಗಳು]

ದಸರಾ ಉದ್ಘಾಟನೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವಾಲಯದ ಬಳಿ ದಸರಾ ಕ್ರೀಡಾ ಜ್ಯೋತಿಗೆ ಚಾಲನೆ ನೀಡಲಿದ್ದಾರೆ. ಕಲಾ ಮಂದಿರದಲ್ಲಿ 10.30ಕ್ಕೆ ನಗರಾಭಿವೃದ್ಧಿ ಖಾತೆ ಸಚಿವ ವಿನಯ್ ಕುಮಾರ್ ಸೊರಕೆ ದಸರಾ ಕಲಾ ಪ್ರದರ್ಶನವನ್ನು ಉದ್ಘಾಟಿಸಲಿದ್ದು, ಬೆಳಗ್ಗೆ 11ಕ್ಕೆ ವಾರ್ತಾ ಸಚಿವ ರೋಷನ್ ಬೇಗ್ ದಸರಾ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. [ಹತ್ತು ದಿನಗಳ ಶಿವಮೊಗ್ಗ ದಸರಾಗೆ ಬನ್ನಿ]
ಕ್ರೀಡಾ ಸಚಿವ ಅಭಯ ಚಂದ್ರ ಜೈನ್ ವರುಣ ಕೆರೆಯಲ್ಲಿ 11.15ಕ್ಕೆ ಸಾಹಸ ಕ್ರೀಡೆಗಳಿಗೆ ಚಾಲನೆ ನೀಡಲಿದ್ದಾರೆ. ಮಹಾನಗರ ಪಾಲಿಕೆ ಸಭಾಂಗಣದಲ್ಲಿ 11.30ಕ್ಕೆ ಆರೋಗ್ಯ ದಸರಾಕ್ಕೆ ಸಚಿವ ಯು.ಟಿ.ಖಾದರ್ ಚಾಲನೆ ನೀಡಲಿದ್ದು, ಸಚಿವ ದಿನೇಶ್ ಗುಂಡೂರಾವ್ 12ಗಂಟೆಗೆ ಆಹಾರ ಮೇಳವನ್ನು ಸ್ಕೌಟ್ ಅಂಡ್ ಗೈಡ್ಸ್ ಮೈದಾನದಲ್ಲಿ ಉದ್ಘಾಟಿಸುವರು. [ಮೈಸೂರು ದಸರಾ, ಕಾರ್ನಾಡ್ ಗೆ ಅಧಿಕೃತ ಆಹ್ವಾನ]
ಗುರುವಾರ ಸಂಜೆ 4 ಗಂಟೆಗೆ ಸಿದ್ದರಾಮಯ್ಯ ಅವರು ಕುಪ್ಪಣ್ಣ ಪಾರ್ಕ್‍ನಲ್ಲಿ ದಸರಾ ಫಲಪುಷ್ಪ ಪ್ರದರ್ಶನವನ್ನು ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ ಅವರ ಜೊತೆ ಉದ್ಘಾಟಿಸಲಿದ್ದಾರೆ. ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ, ಸಂಜೆ 5 ಗಂಟೆಗೆ ಕನ್ನಡ ಪುಸ್ತಕ ಮೇಳವನ್ನು, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ಉಮಾಶ್ರೀ 6 ಗಂಟೆಗೆ ರಂಗಾಯಣದಲ್ಲಿ ರಂಗೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.












Click it and Unblock the Notifications