ಮುಡುಕುತೊರೆ ಭಕ್ತರಿಂದ ಯುಗಾದಿ ಹಬ್ಬಕ್ಕೆ ಶ್ರೀಶೈಲ ಪರ್ವತ ಪರಿಷೆ!
ಮುಡುಕುತೊರೆ ಭಕ್ತರಿಂದ ಯುಗಾದಿಗೆ ಶ್ರೀಶೈಲ ಪರ್ವತ ಪರಿಷೆ ಮಾಡುತ್ತಾರೆ. ಮೈಸೂರು ಜಿಲ್ಲೆಯಲ್ಲಿರುವ ಮುಡುಕುತೊರೆಗೂ ಆಂಧ್ರದಲ್ಲಿನ ಶ್ರೀಶೈಲಕ್ಕೂ ಎತ್ತಣದ ಸಂಬಂಧ ಎನ್ನುವುದನ್ನು ಹೇಳುವ ಮುನ್ನ ಎರಡು ಕ್ಷೇತ್ರಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳ ಬೇಕಾಗುತ್
ಮೈಸೂರು, ಮಾರ್ಚ್ 23: ಎಲ್ಲೆಡೆ ಯುಗಾದಿ ಹಬ್ಬವನ್ನು ಸಂಭ್ರಮಿಸಿದ್ದು, ಜಿಲ್ಲೆಯ ತಿ.ನರಸೀಪುರ ತಾಲೂಕಿನ ಮುಡುಕುತೊರೆಯ ಮಲ್ಲಿಕಾರ್ಜುನಸ್ವಾಮಿಯ ಭಕ್ತರು ಶ್ರೀಶೈಲ ಪರ್ವತ ಪರಿಷೆ ಹೊರಟು ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ನಂದಿಕೊಟಕೂರು ತಾಲೂಕಿನ ಕೃಷ್ಣಾ ನದಿತಟದ ಶ್ರೀಶೈಲದಲ್ಲಿ ನೆಲೆನಿಂತಿರುವ ಮಲ್ಲಿಕಾರ್ಜುನ ಭ್ರಮರಾಂಬೆಯರಿಗೆ ಪೂಜೆ ಸಲ್ಲಿಸಿ ವೃತ ತ್ಯಜಿಸುತ್ತಾರೆ.
ಇದು ಅಚ್ಚರಿಯಾಗಬಹುದು ಎಲ್ಲಿಯ ಮುಡುಕುತೊರೆ? ಎಲ್ಲಿಯ ಶ್ರೀಶೈಲ? ಇದೆರಡರ ಸಂಬಂಧವೇನು ಎಂಬುದರ ಬಗ್ಗೆಯೂ ಪ್ರಶ್ನೆಗಳು ಮೂಡಬಹುದು. ಆದರೆ ಮೈಸೂರು ಜಿಲ್ಲೆಯಲ್ಲಿರುವ ಮುಡುಕುತೊರೆಗೂ ಆಂಧ್ರದಲ್ಲಿನ ಶ್ರೀಶೈಲಕ್ಕೂ ಎತ್ತಣದ ಸಂಬಂಧ ಎನ್ನುವುದನ್ನು ಹೇಳುವ ಮುನ್ನ ಎರಡು ಕ್ಷೇತ್ರಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳ ಬೇಕಾಗುತ್ತದೆ.

ಪುರಾಣ ಪ್ರಸಿದ್ಧ ಶೈವ ಕ್ಷೇತ್ರವಾಗಿರುವ ಶ್ರೀಶೈಲವು ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ನಂದಿಕೊಟಕೂರು ತಾಲೂಕಿನಲ್ಲಿ ಹಬ್ಬಿರುವ ನಲ್ಲಮಲೈ ಪರ್ವತ ಶ್ರೇಣಿಯಲ್ಲಿ, ದಟ್ಟ ಕಾನನದ ನಡುವಿನ ಕೃಷ್ಣಾನದಿಯ ದಕ್ಷಿಣ ಭಾಗದಲ್ಲಿದೆ. ಶ್ರೀಮಲ್ಲಿಕಾರ್ಜುನ ಮತ್ತು ಭ್ರಮರಾಂಬೆಯರು ಈ ಕ್ಷೇತ್ರದ ಅಧಿದೇವತೆಗಳಾಗಿದ್ದು, ಕ್ಷೇತ್ರವನ್ನು ಪಾತಾಳಗಂಗೆ ಎಂದು ಕರೆಯಲಾಗಿದೆ.
ಇಲ್ಲಿರುವ ಮಲ್ಲಿಕಾರ್ಜುನ ಭ್ರಮರಾಂಭ ದೇಗುಲಗಳು ಪ್ರಸಿದ್ಧಿಯನ್ನು ಹೊಂದಿದ್ದು, ಕೃಷ್ಣಾ ನದಿಯಲ್ಲಿ ಸ್ನಾನ ಮಾಡಿ ಮಲ್ಲಿಕಾರ್ಜುನ ಮತ್ತು ಭ್ರಮರಾಂಭೆಯನ್ನು ಪೂಜಿಸಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.
ಶ್ರೀಶೈಲ ಪರ್ವತ ಪರಿಷೆಗೆ ಬಸವನ ಆಯ್ಕೆ
ಇಂತಹ ಪವಿತ್ರಕ್ಷೇತ್ರಕ್ಕೆ ಮುಡುಕುತೊರೆಯಿಂದ ಬಸವನೊಂದಿಗೆ ಕಾಲ್ನಡಿಗೆಯಲ್ಲಿ ಭಕ್ತರು ತೆರಳಿ ಯುಗಾದಿಯಂದು ಕೃಷ್ಣಾನದಿಯಲ್ಲಿ ಸ್ನಾನ ಮಾಡಿ ವೃತ ಮಾಡುತ್ತಾರೆ ಎಂದರೆ ಅಚ್ಚರಿಯಾಗುತ್ತದೆ. ಈ ಶ್ರೀಶೈಲ ಪರ್ವತ ಪರಿಷೆ ಆಚರಣೆ ಇವತ್ತು ನಿನ್ನೆಯದಲ್ಲ. ಬಹಳಷ್ಟು ವರ್ಷಗಳ ಹಿಂದಿನದಾಗಿದೆ. ಮುಡುಕುತೊರೆಯ ಮಲ್ಲಿಕಾರ್ಜುನಸ್ವಾಮಿಯನ್ನು ಭಕ್ತಿಯಿಂದ ಪ್ರಾರ್ಥಿಸಿ ಭಕ್ತರು ಹೊರಡುವುದು ವಿಶೇಷವಾಗಿದೆ. ಹೊರಡುವ ಮುನ್ನ ಸುತ್ತಮುತ್ತಲಿನ ಹಳ್ಳಿಗಳ ಬಸವಗಳನ್ನು ಸ್ನಾನ ಮಾಡಿಸಿ ಸಿಂಗಾರಗೊಳಿಸಿ ದೇವರ ಸನ್ನಿಧಿಗೆ ತಂದು ನಿಲ್ಲಿಸಲಾಗುತ್ತದೆ.

ಭ್ರಮರಾಂಬ ಉತ್ಸವ ಮೂರ್ತಿಯ ಮಾಲಾ ಮಂಟಪದಲ್ಲಿ ಬಳಿ ನಿಲ್ಲಿಸಲಾಗುತ್ತದೆ. ತಮಟೆ ಹೊಡೆದಾಗ ಮೊದಲು ಹೋಗಿ ಉತ್ಸವ ಮೂರ್ತಿಯ ಮುಂದೆ ನಿಲ್ಲುವ ಬಸವ ಆಯ್ಕೆಯಾಗುತ್ತದೆ. ಬಳಿಕ ಜಾತಿಯ ಭೇದ ಭಾವವಿಲ್ಲದೆ ಭಕ್ತರು ದೇವರಿಗೆ ಪೂಜೆ ಸಲ್ಲಿಸಿ ಅಭಿಷೇಕ ಮಾಡಿ ಯಾವುದೇ ವಿಘ್ನ ಬಾರದಂತೆ ಬೇಡಿಕೊಳ್ಳುತ್ತಾರೆ.
ಆ ನಂತರ ಪಾದರ ಕಲ್ಲನ್ನು ಕಣ್ಣಿಗೆ ಒತ್ತಿಕೊಂಡು ಹೊರಡುತ್ತಾರೆ. ಇದನ್ನು ಶ್ರೀಶೈಲ ಪರ್ವತ ಪರಿಷೆ ಎಂದು ಕರೆಯಲಾಗುತ್ತದೆ. ಶಿವರಾತ್ರಿ ಸಮಯದಲ್ಲಿ ಕಾಲ್ನಡಿಗೆಯಲ್ಲಿ ಹೊರಡುತ್ತಾರೆ. ಮದ್ದೂರು, ಚನ್ನಪಟ್ಟಣ, ಬೆಂಗಳೂರು ನಂದ್ಯಾಲ ಮೂಲಕ ಶ್ರೀಶೈಲಕ್ಕೆ ತೆರಳುತ್ತಾರೆ. ಸುಮಾರು ಒಂದು ತಿಂಗಳ ಕಾಲ ನಡೆದು ಶ್ರೀಶೈಲ ಸೇರುತ್ತಾರೆ.
ಶ್ರೀಶೈಲದಲ್ಲಿ ಮೈಸೂರಮ್ಮನ ಪರಿಷೆ
ಬಸವನೊಂದಿಗೆ ಶ್ರೀಶೈಲ ತಲುಪಿದ ಬಳಿಕ ಅಲ್ಲಿ ಕೃಷ್ಣಾ ನದಿಯಲ್ಲಿ ಸ್ನಾನ ಮಾಡಿ ಶ್ರೀಶೈಲದ ಭ್ರಮರಾಂಬ ಮತ್ತು ಮಲ್ಲಿಕಾರ್ಜುನ ಸ್ವಾಮಿಗೆ ಅಭಿಷೇಕ, ಪೂಜೆ ಮಾಡಿಸಿ ವಸ್ತ್ರ ಕಾಣಿಕೆ ಅರ್ಪಿಸಿ ಅಲ್ಲಿ ಬಸವನ ಮೈತೊಳೆದು ವಸ್ತ್ರಾಭರಣಗಳಿಂದ ಅಲಂಕರಿಸಲಾಗುತ್ತದೆ. (ಈ ರೀತಿಯಲ್ಲಿ ನಡೆಯುವ ಧಾರ್ಮಿಕ ಕಾರ್ಯಗಳನ್ನು ಶ್ರೀಶೈಲದ ಜನ ಮೈಸೂರಮ್ಮನ ಪರಿಷೆ ಎಂದು ಕರೆಯುತ್ತಾರೆ.)

ಪರಿಷೆಗೆ ತೆರಳಿದ ಭಕ್ತರಿಗೆ ಶ್ರೀಶೈಲದ ದೇವಾಲಯದಲ್ಲಿ ಪಾಗು, ಕಲ್ಲುಸಕ್ಕರೆ, ಹಣ್ಣು, ತಾಂಬೂಲ ನೀಡಿ ಗೌರವಿಸಲಾಗುತ್ತದೆ. ಇದೇ ಸಂದರ್ಭ ಪರಿಷೆ ಹೋದವರು ತಾವು ಆಹಾರ ಸೇವನೆ ವಿಚಾರದಲ್ಲಿ ಮೊದಲೇ ಮಾಡಿಕೊಂಡಿದ್ದ ಮೆಣಸಿನ ಕಾಯಿ ಅಥವಾ ಏಲಕ್ಕಿ ವೃತವನ್ನು ತ್ಯಜಿಸುತ್ತಾರೆ.
ಅಲ್ಲಿಂದ ಮತ್ತೆ ಹೊರಟು ಸುಮಾರು ಒಂದು ತಿಂಗಳ ಅವಧಿಯಲ್ಲಿ ಮುಡುಕುತೊರೆಗೆ ಬಂದು ಸೇರುತ್ತಾರೆ. ಆದರೆ ಯುಗಾದಿ ಹಬ್ಬಕ್ಕೆ ಶ್ರೀಶೈಲಕ್ಕೆ ತೆರಳಿ ಪೂಜೆ ಸಲ್ಲಿಸುವುದು ನಿಜವಾಗಿಯೂ ವಿಶೇಷವೇ. ಪುರಾಣ ಕಥೆಯ ಪ್ರಕಾರ ಪಾರ್ವತಿಯು ಶಿವನ ವಾಹನ ಬಸವನ ಮೇಲೆ ತನ್ನ ತವರು ಮನೆಯಾದ ಶ್ರೀಶೈಲಕ್ಕೆ ಹೋಗಿ ಬರುತ್ತಿದ್ದಳೆಂದೂ ಆ ನಂಬಿಕೆಯ ಮೇಲೆ ಇಂದಿಗೂ ನಡೆಯುತ್ತದೆ. ಶ್ರೀಶೈಲದ ಪರ್ವತ ಪರಿಷೆ ಯಾವಾಗ ಆರಂಭವಾಯಿತೆಂಬುವುದು ತಿಳಿದು ಬರುವುದಿಲ್ಲವಾದರೂ ಚಿಕ್ಕದೇವರಾಜರು ತನಗೆ ಮಲ್ಲಿಕಾರ್ಜುನನ ಕೃಪೆಯಿಂದ ಒಳ್ಳೆಯದಾದ ಹಿನ್ನಲೆಯಲ್ಲಿ ಪರಿಷೆ ಮಾಡಿಸಿದ್ದರೆಂದು ಹೇಳಲಾಗುತ್ತದೆ.
ಪರಿಷೆಗೆ ಹೋದವರು ಮರಳಿದಾಗ ಜಾತ್ರೆ
ಶ್ರೀಶೈಲದ ಪರ್ವತ ಪರಿಷೆಗೆ ಹೋದವರು ಮರಳಿದ ಬಳಿಕ ತಮ್ಮ ಯಾತ್ರೆ ಯಶಸ್ವಿಯಾದುದಕ್ಕೆ ಮುಡುಕುತೊರೆಯ ಮಲ್ಲಿಕಾರ್ಜುನ ಸ್ವಾಮಿಗೆ ಧಾರ್ಮಿಕ ಕೈಂಕರ್ಯಗಳನ್ನು ನಡೆಸಲಾಗುತ್ತದೆ. ಈ ಸಂದರ್ಭ ಭಕ್ತಸಾಗರ ನೆರೆಯುತ್ತದೆ ಇದನ್ನು ಚಿಕ್ಕ ಜಾತ್ರೆ ಎಂದು ಕರೆಯುತ್ತಾರೆ. ಇನ್ನು ಮುಡುಕುತೊರೆ ಕ್ಷೇತ್ರವು ಮೈಸೂರು ಜಿಲ್ಲೆಯ ತಾಲೂಕು ಕೇಂದ್ರಗಳಲ್ಲೊಂದಾದ ತಿ.ನರಸೀಪುರದಿಂದ 19 ಕಿ.ಮೀ ದೂರದಲ್ಲಿದೆ.
ಕಾವೇರಿ ನದಿ ಪಶ್ಚಿಮದಿಂದ ಉತ್ತರ ದಿಕ್ಕಿನತ್ತ ಹರಿದು, ಪೂರ್ವಕ್ಕೆ ಮುರಿದು ದಕ್ಷಿಣಕ್ಕೆ ಪ್ರವೇಶಿಸಿದ್ದರಿಂದ ಮುಡುಕುತೊರೆ ಎಂಬ ಹೆಸರು ಬಂದಿರಬಹುದೆಂದು ಹೇಳಲಾಗುತ್ತಿದೆ. ಇನ್ನು ಇಲ್ಲಿನ ಸೋಮಗಿರಿ ಬೆಟ್ಟದ ಮೇಲಿನ ಐತಿಹಾಸಿಕ ಮಲ್ಲಿಕಾರ್ಜುನ ದೇಗುಲದ ಆಧಿದೈವ ಮಲ್ಲಿಕಾರ್ಜುನ ಲಿಂಗವೂ ಕೂಡ ತಲಕಾಡು ಪಂಚಲಿಂಗದೊಂದಿಗೆ ಸೇರಿರುವುದು ಮತ್ತೊಂದು ವಿಶೇಷತೆ.












Click it and Unblock the Notifications