MUDA Scam: ಲೋಕಾಯುಕ್ತ ವಿಚಾರಣೆಗೆ ಹಾಜರಾದ ಮಾಜಿ ಸಚಿವ ಎಸ್.ಎ ರಾಮದಾಸ್
ಮೈಸೂರು, ಜನವರಿ 03: ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿನ ನಿವೇಶನ ಹಂಚಿಕೆ ಹಗರಣ ಸದ್ಯಕ್ಕೆ ಇತ್ಯರ್ಥವಾಗುವಂತೆ ಕಾಣುತ್ತಿಲ್ಲ. ಜಾರಿ ನಿರ್ದೇಶನಾಲಯ ಮತ್ತು ಲೋಕಾಯುಕ್ತ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಹಗರಣಕ್ಕೆ ಸಂಬಂಧಪಟ್ಟ ಹಾಗೂ ಹಗರಣದಲ್ಲಿ ಕೇಳಿ ಬಂದ ಎಲ್ಲಾ ಜನಪ್ರತಿನಿಧಿಗಳನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಮುಡಾದ 50-50 ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಲೋಕಾಯುಕ್ತ ಅಧಿಕಾರಿಗಳು ಮತ್ತೊಮ್ಮೆ ತನಿಖೆ ಚುರುಕುಗೊಳಿಸಿದ್ದು, ಈ ಹಿನ್ನೆಲೆಯಲ್ಲಿ ಮಾಜಿ ಶಾಸಕರಾದ ಎಸ್.ಎ. ರಾಮದಾಸ್ ಹಾಗೂ ಎಲ್. ನಾಗೇಂದ್ರ ಅವರು ವಿಚಾರಣೆಗೆ ಹಾಜರಾಗಿದ್ದಾರೆ. ಇಬ್ಬರು ಮಾಜಿ ಶಾಸಕರು ಲೋಕಾಯುಕ್ತ ಅಧಿಕಾರಿಗಳ ವಿಚಾರಣೆ ಎದುರಿಸಿದ್ದಾರೆ.

ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ಗುರುವಾರ ನಡೆದ ತನಿಖೆಗೆ ಹಾಜರಾದ ಮಾಜಿ ಸಚಿವ ಎಸ್.ಎ. ರಾಮದಾಸ್, ಅಂದಾಜು 2 ಗಂಟೆಗೂ ಹೆಚ್ಚು ಕಾಲ ವಿಚಾರಣೆ ಎದುರಿಸಿದರು. ರಾಮದಾಸ್ ಅವರು ಕೆ.ಆರ್. ಕ್ಷೇತ್ರದ ಶಾಸಕರಾಗಿದ್ದ ಅವಧಿಯಲ್ಲಿ ಮುಡಾ ಸದಸ್ಯರಾಗಿದ್ದ ಹಿನ್ನೆಲೆಯಲ್ಲಿ 50:50 ನಿವೇಶನ ಹಂಚಿಕೆ ಹಗರಣದ ವಿಚಾರಣೆ ಎದುರಿಸಿದರು. ವಿಚಾರಣೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ನಾನು ಮುಡಾ ವಿಚಾರವಾಗಿ ಹಿಂದೆಯೂ ಕಾಮೆಂಟ್ ಮಾಡಿಲ್ಲ ಮತ್ತು ಈಗಲೂ ಮಾಡುವುದಿಲ್ಲ ಎಂದು ಯಾವುದೇ ಹೇಳಿಕೆ ನೀಡದೆ ಸ್ಥಳದಿಂದ ನಿರ್ಗಮಿಸಿದರು.
ಇನ್ನು ಮಾಜಿ ಸಚಿವ ರಾಮದಾಸ್ ಅವರಂತೆ ಮಾಜಿ ಶಾಸಕ ಎಲ್. ನಾಗೇಂದ್ರ ಕೂಡ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿ ವಿಚಾರಣೆ ಎದುರಿಸಿದರು. ಮುಡಾ ಅಧ್ಯಕ್ಷರಾಗಿದ್ದ ಎಲ್. ನಾಗೇಂದ್ರ ಅವರು, ಚಾಮರಾಜ ಕ್ಷೇತ್ರದ ಶಾಸಕರಾಗಿದ್ದ ವೇಳೆ ಸದಸ್ಯರಾಗಿದ್ದರು. ಹೀಗಾಗಿ ಲೋಕಾಯುಕ್ತ ವಿಚಾರಣೆಗೆ ಹಾಜರಾಗುವಂತೆ ನಾಗೇಂದ್ರ ಅವರಿಗೆ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಅವರು ಕೂಡ ವಿಚಾರಣೆ ಎದುರಿಸಿದರು.

ಮಾಜಿ ಸಚಿವ ರಾಮದಾಸ್-ಮಾಜಿ ಶಾಸಕ ಎಲ್. ನಾಗೇಂದ್ರ ಮುಖಾಮುಖಿ ಭೇಟಿ
ಈ ನಡುವೆ ಲೋಕಾಯುಕ್ತ ವಿಚಾರಣೆಗೆ ಹಾಜರಾಗಿದ್ದ ರಾಮದಾಸ್ ಹಾಗೂ ನಾಗೇಂದ್ರ ಅವರು ಬಹುದಿನಗಳ ಬಳಿಕ ಮುಖಾಮುಖಿಯಾದರು. ನಾಗೇಂದ್ರ ಲೋಕಾಯುಕ್ತ ಕಚೇರಿ ಪ್ರವೇಶಿಸುತ್ತಿದ್ದಂತೆ, ವಿಚಾರಣೆ ಮುಗಿಸಿಕೊಂಡು ರಾಮದಾಸ್ ವಿಚಾರಣೆ ಮುಗಿಸಿ ಕಚೇರಿಯಿಂದ ಹೊರ ಬರುತ್ತಿದ್ದರು. ಈ ವೇಳೆ ಬಹುದಿನಗಳ ಬಳಿಕ ಭೇಟಿಯಾದ ಇಬ್ಬರು ಮುಖಂಡರು ಕೆಲಕಾಲ ಲೋಕಾಯುಕ್ತ ಕಚೇರಿಯಲ್ಲಿ ನಿಂತಲ್ಲಿಯೇ ಮಾತುಕತೆ ನಡೆಸಿದರು.












Click it and Unblock the Notifications