ಆ 11, 12ಕ್ಕೆ ಚುಂಚನಕಟ್ಟೆ ಜಲಪಾತೋತ್ಸವದಲ್ಲಿ ಸುದೀಪ್, ನಿಖಿಲ್
ಮೈಸೂರು, ಆಗಸ್ಟ್ 10 : ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಮಳೆಗಾಲದ ಪ್ರವಾಸೋದ್ಯಮಕ್ಕೆ (ಮಾನ್ಸೂನ್ ಟೂರಿಸಂ) ಈ ಬಾರಿ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಚುಂಚನಕಟ್ಟೆ ಜಲಪಾತವೂ ಸೇರ್ಪಡೆಗೊಂಡಿದೆ.
ಕ್ಷೇತ್ರದ ಶಾಸಕರೂ ಆಗಿರುವ ಸಾ.ರಾ.ಮಹೇಶ್ ಪ್ರವಾಸೋದ್ಯಮ ಸಚಿವರೂ ಆಗಿರುವುದರಿಂದ ಸಾಕಷ್ಟು ಮುತುವರ್ಜಿ ವಹಿಸಿ, ಕಾರ್ಯಕ್ರಮ ರೂಪಿಸಿದ್ದಾರೆ. ಮೈಸೂರಿನಿಂದ ಕೇವಲ 56 ಕಿ.ಮೀ., ಕೆ.ಆರ್.ನಗರದಿಂದ 14 ಕಿ.ಮೀ. ದೂರದಲ್ಲಿರುವ ಈ ಸ್ಥಳದಲ್ಲಿ ಕಾವೇರಿ ನದಿಯು 20 ಮೀಟರ್ ಎತ್ತರದಿಂದ ಧುಮ್ಮಿಕ್ಕುತ್ತದೆ.
ಮಳೆಗಾಲದಲ್ಲಿ ರಭಸವಾಗಿ ಧುಮ್ಮಿಕ್ಕುವ ಕಾವೇರಿ ಮೈನವಿರೇಳಿಸುತ್ತದೆ. ಆದ್ದರಿಂದ ಈ ಜಾಗವನ್ನು ಮತ್ತಷ್ಟು ಪ್ರಚಾರ ಮಾಡಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.

ಆಗಸ್ಟ್ 11 (ಶನಿವಾರ) ಮತ್ತು 12 (ಭಾನುವಾರ) ಜಲಪಾತೋತ್ಸವ ನಡೆಯಲಿದೆ.
ಈ ಬಾರಿ ನಡೆಯುವ ಅದ್ಧೂರಿ ಜಲಪಾತೋತ್ಸವ ಕಾರ್ಯಕ್ರಮಕ್ಕೆ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ವೇದಿಕೆಯನ್ನು ಸಜ್ಜುಗೊಳಿಸಿದ್ದಾರೆ. ಇನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಬೃಹತ್ ವೇದಿಕೆಯನ್ನು ಸಿದ್ಧಪಡಿಸಿದ್ದಾರೆ.
ಸತತ ಎರಡು ದಿನಗಳ ಕಾಲ ನಡೆಯುವ ಜಲಪಾತೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮಗ ನಿಖಿಲ್, ಚಲನಚಿತ್ರನಟ ಸುದೀಪ್ ಹಾಗೂ ಹಿನ್ನೆಲೆ ಗಾಯಕ ಅರ್ಜುನ್ ಜನ್ಯ, ಹಾಸ್ಯನಟ ಚಿಕ್ಕಣ್ಣ ಸೇರಿದಂತೆ ಪ್ರಮುಖ ಕಲಾವಿದರು ಭಾಗವಹಿಸಲಿದ್ದಾರೆ. 20 ಸಾವಿರ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದೆ.
ಈ ಬಾರಿಯ ಜಲಪಾತೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ, ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್, ಶಾಸಕರಾದ ಎಚ್.ವಿಶ್ವನಾಥ್, ಕೆ.ಮಹದೇವ್, ಮರಿತಿಬ್ಬೇಗೌಡ ಭಾಗವಹಿಸಲಿದ್ದಾರೆ
ಫ್ಯಾಷನ್ ಷೋ, ಸಾಕ್ಷ್ಯಚಿತ್ರ ಪ್ರದರ್ಶನದ ಜತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ನದಿಗೆ ಬಣ್ಣ ಬಣ್ಣದ ಬೆಳಕಿನ ವ್ಯವಸ್ಥೆ, ಜಿಪ್ ಲೈನ್ ಅಳವಡಿಕೆಯಾಗಲಿದೆ. ಇದಾದ ನಂತರ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಗಗನಚುಕ್ಕಿ, ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲದ ಭರ ಚುಕ್ಕಿಯಲ್ಲೂ ಉತ್ಸವ ನಡೆಯಲಿದೆ.












Click it and Unblock the Notifications