By Election: ಮೂರೂ ಕ್ಷೇತ್ರಗಳಲ್ಲಿ ಎನ್‌ಡಿಎ ಸೋಲು; ವಿಶ್ವನಾಥ್ ಅಚ್ಚರಿಯ ಹೇಳಿಕೆ
ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳು ಸೋತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸುತ್ತಿದ್ದಾರೆ. ಉಪ ಚುನಾವಣೆ ಫಲಿತಾಶಂದ ಬಗ್ಗೆ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದು, ಗೆದ್ದವರು ಹೆಚ್ಚು ಸಂಭ್ರಮ ಪಡುವ ಅಗತ್ಯವಿಲ್ಲ, ಸೋತವರು ಹೆಚ್ಚು ಚಿಂತೆ ಮಾಡುವ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆ ಫಲಿತಾಂಶ ಸಿದ್ದರಾಮಯ್ಯ ಸರ್ಕಾರದ ಆಡಳಿತ ಮೆಚ್ಚಿ ಜನ ಕೊಟ್ಟಿರುವ ತೀರ್ಮಾನವಲ್ಲ. ಈ ತೀರ್ಪಿನಿಂದ ಹಗರಣಗಳು ಏನು ಮುಚ್ಚಿಹೋಗುವುದಿಲ್ಲ. ಗೆದ್ದವರು ಹೆಚ್ಚು ಬೀಗುವ ಅಗತ್ಯವೂ ಇಲ್ಲ, ಹಣ, ಹೆಂಡ, ಶಿಫಾರಸ್ಸು ಇಂತಹ ವಿಚಾರಗಳ ಮೇಲೆ ಚುನಾವಣೆ ನಡೆಯುವುದು, ಈ ಚುನಾವಣೆ ಕೂಡ ಅದೇ ರೀತಿ ನಡೆದಿದೆ ಎಂದು ಹೇಳಿದರು.

ಮುಡಾ ಹಗರಣ ಮೈಸೂರು ಜಿಲ್ಲೆಯ ವ್ಯಾಪ್ತಿಯದು. ಅದು ಚನ್ನಪಟ್ಟಣದಲ್ಲಿ ವರ್ಕ್ ಆಗುತ್ತೆ ಅಂದುಕೊಳ್ಳುವುದು ಬೇಡ. ಸಿದ್ದರಾಮಯ್ಯ ಸರ್ಕಾರಕ್ಕೆ ಜನಕೊಟ್ಟ ತೀರ್ಪು ಇದಲ್ಲ. ಉಪಚುನಾವಣೆಗಳು ಯಾವ ರೀತಿ ನಡೆದಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಹಗರಣದ ಆರೋಪ ಹೊತ್ತವರು ಈ ತೀರ್ಪಿನಿಂದ ಖುಷಿ ಪಡುವ ಅಗತ್ಯ ಇಲ್ಲ ಎಂದರು.
ತಪ್ಪು ತಿದ್ದಿಕೊಳ್ಳಲು ಅವಕಾಶ
ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಸೋತಿದ್ದಾರೆ. ಪ್ರಜಾ ಪ್ರಭುತ್ವದಲ್ಲಿ ಇದೆಲ್ಲಾ ಸಾಮಾನ್ಯ, ಎಲ್ಲಾ ಬೂತ್‌ನಲ್ಲಿ ವೋಟ್ ಒತ್ತಿಕೊಂಡು ಹಾಕಿಸಿಕೊಳ್ಳಲು ಆಗುತ್ತದಾ? ಬಿಜೆಪಿ ಮತ್ತು ಜೆಡಿಎಸ್ ನಾಯಕರು ಒಟ್ಟಾಗಿ ಕೆಲಸ ಮಾಡಿದರು, ಆದರೆ ಅದು ಫಲ ಕೊಟ್ಟಿಲ್ಲ ಎಂದು ಹೇಳಿದರು.
ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆ
ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆ ಎಂದು ವಿಶ್ವನಾಥ್ ಒಪ್ಪಿಕೊಂಡಿದ್ದಾರೆ. ಬಿಜೆಪಿಯಲ್ಲಿ ಸದ್ಯ ನಾಲ್ಕು ಗುಂಪುಗಳಿದೆ ಅನ್ನುವುದ ಸತ್ಯ, ಜನ ಬಿಜೆಪಿಗೆ ಮತ್ತೆ ಮತ್ತೆ ಅವಕಾಶ ಕೊಡುತ್ತಿದ್ದಾರೆ, ಇದು ತಪ್ಪು ತಿದ್ದಿಕೊಳ್ಳಲು ಉತ್ತಮ ಅವಕಾಶವಾಗಿತ್ತು ಆದರೆ ಅವರು ಅದನ್ನು ಮಾಡಲಿಲ್ಲ ಎಂದು ಹೇಳಿದ್ದಾರೆ.
ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಮಾತನಾಡಿ, ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲ್ಲುವ ವಿಶ್ವಾಸ ಇತ್ತು. ಗ್ರೌಂಡ್ ರಿಯಾಲಿಟಿ ಕೂಡ ನಮ್ಮ ಅಭ್ಯರ್ಥಿ ಪರ ಇತ್ತು. ಆದರೆ ಫಲಿತಾಂಶ ನಮ್ಮ ಪರವಾಗಿ ಬಂದಿಲ್ಲ. ಈ ಫಲಿತಾಂಶದ ಬಗ್ಗೆ ಆತ್ಮವಾಲೋಕನದ ಅಗತ್ಯ ಇದೆ. ಉಪಚುನಾವಣೆಗಳು ಯಾವಾಗಲೂ ಆಡಳಿತ ಪಕ್ಷದ ಪರವಾಗಿಯೇ ಇರುತ್ತದೆ. ಇದು ಕೂಡ ಅದೇ ರೀತಿ ಆಗಿದೆ ಎಂದರು.
ಯಾವ್ಯಾವ ಅಂಶಗಳು ಉಪಚುನಾವಣೆಯಲ್ಲಿ ಪರಿಣಾಮ ಬೀರಿದೆ ಎಂಬುದನ್ನು ಪಕ್ಷದ ಸಭೆಯಲ್ಲಿ ತೀರ್ಮಾನ ಚರ್ಚೆ ಮಾಡುತ್ತೇವೆ. ಇದು ನಮಗೆ ಅನಿರೀಕ್ಷಿತವಾದ ಫಲಿತಾಂಶ ಎಂದು ಬೇಸರ ವ್ಯಕ್ತಪಡಿಸಿದರು.












Click it and Unblock the Notifications