ಸಿದ್ದರಾಮಯ್ಯ-ಡಿಕೆಶಿ ನಾನೊಂದು ತೀರಾ..ನೀನೊಂದು ತೀರಾ-ಸಚಿವ ಸುಧಾಕರ್
ಮೈಸೂರು, ಅಕ್ಟೋಬರ್ 27: ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಒಬ್ಬರು ಉತ್ತರಕ್ಕಿದ್ದಾರೆ, ಒಬ್ಬರು ದಕ್ಷಿಣಕ್ಕಿದ್ದಾರೆ. ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಾನೊಂದು ತೀರಾ..ನೀನೊಂದು ತೀರಾ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ಬಹುವಚನ ಎನ್ನುವುದು ಗೊತ್ತೇ ಇಲ್ಲ. ಅವರು ಎಲ್ಲರನ್ನೂ ಏಕವಚನದಲ್ಲಿಯೇ ಮಾತನಾಡಿಸುತ್ತಾರೆ. ಅವರು ಎಲ್ಲಾ ಕಲಿತಿದ್ದಾರೆ ಆದರೆ ಬಹುವಚನ ಒಂದು ಕಲಿತಿಲ್ಲ. ಅವರು ಹಿರಿಯರು ಅವರ ಬಗ್ಗೆ ನಾನು ಮಾತನಾಡಿಲ್ಲ ಎಂದು ಹೇಳಿದರು.
ಕೆಲವು ಜಿಲ್ಲೆಗಳಲ್ಲಿ ಕಾಂಗ್ರೆಸ್ ಹಾಗೂ ಜನತಾ ದಳವನ್ನು ನಾವು ಸಮರ್ಥವಾಗಿ ಎದುರಿಸುತ್ತಿದ್ದೇವೆ. ಅದರ ಬಗ್ಗೆ ಅವರಿಗೆ ಅರಿವಿದೆ. ಹೀಗಾಗಿ ಇತರ ಪಕ್ಷದ ನಾಯಕರು ನಮ್ಮನ್ನು ಟಾರ್ಗೆಟ್ ಮಾಡುತ್ತಾರೆ. ಅವರು ನನ್ನ ಬಗ್ಗೆ ಚಿಂತೆ ಮಾಡುತ್ತಾರೆ ಎಂದರು.

ಎಚ್. ವಿಶ್ವನಾಥ್ ಪಕ್ಷ ಬಿಟ್ಟು ಹೋಗುವ ಸಾಧ್ಯತೆ ಇಲ್ಲ
ನಮ್ಮ ಪಕ್ಷದಿಂದ ಯಾರೂ ಕೂಡ ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಎಚ್. ವಿಶ್ವನಾಥ್ ಅವರು ನಮ್ಮ ತಂಡದವರಲ್ಲ. ಅವರು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದವರು. ಅವರು ಕೂಡ ಬೇರೆ ಪಕ್ಷಕ್ಕೆ ಹೋಗಲ್ಲ. ಅವರು ಕೂಡ ಅನೇಕ ವಿಷಯಗಳನ್ನು ಪ್ರಸ್ತಾಪ ಮಾಡಿ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಸೋತರೂ ಕೂಡ ಅವರನ್ನು ಪಕ್ಷ ಎಂಎಲ್‌ಸಿ ಮಾಡಿದ್ದಾರೆ. ಅವರು ಕೂಡ ಪಕ್ಷ ಬಿಟ್ಟು ಹೋಗುವ ಸಾಧ್ಯತೆ ಇಲ್ಲ ಎಂದರು.

ಜನ ಎಲ್ಲವನ್ನೂ ಗಮನಿಸುತ್ತಾರೆ
ಚುನಾವಣೆ ಸಮಯದಲ್ಲಿ, ಚುನಾವಣೆ ಹೊಸ್ತಿಲಿನಲ್ಲಿ ಯಾತ್ರೆಗಳು ಪಾದಯಾತ್ರೆಗಳು ಸಾಮಾನ್ಯ. ಎಲ್ಲರಿಗೂ ಕೂಡ ಈ ಸಮಯದಲ್ಲಿ ಜನರು ನೆನಪಾಗುತ್ತಾರೆ. ಸಮಸ್ಯೆಗಳು ನೆನಪಾಗುತ್ತದೆ. ಚುನಾವಣೆಗರ ಆರು ತಿಂಗಳು ಇರುವಾಗ ಯಾತ್ರೆಗಳು ಆರಂಭವಾಗುತ್ತದೆ. ಜನ ಎಲ್ಲವನ್ನೂ ಗಮನಿಸುತ್ತಾರೆ. ಯಾರು ಕೊರೊನಾದಂತಹ ಸಮಯದಲ್ಲಿ ದಿಟ್ಟವಾಗಿ ಎದುರಿಸಿದ್ದಾರೆ. ಅದಾದ ಮೇಲೆ ಆರ್ಥಿಕ ಪುನಃಶ್ಚೇತನಕ್ಕೆ ಯಾವುದೆಲ್ಲಾ ಕ್ರಮಕೈಗೊಂಡಿದ್ದಾರೆ ಎಲ್ಲವನ್ನೂ ಜನರು ಗಮನಿಸುತ್ತಾರೆ ಎಂದು ಹೇಳಿದರು.

ಅಂತಿಮ ನಿರ್ಣಯ ಜನಸಾಮಾನ್ಯರು ಮಾಡುತ್ತಾರೆ
ಸರ್ಕಾರ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದ್ದಾರಾ ಇಲ್ಲವಾ..? ನೀರಾವರಿ ಸೌಲಭ್ಯ ಕ್ಷೇತ್ರಕ್ಕೆ ಆದ್ಯತೆ ಕೊಟ್ಟಿದ್ದಾರಾ ಇಲ್ಲವಾ..? ಪ್ರತಿಯೊಂದು ಅಂಶವನ್ನು ಕೂಡ ಜನರು ಗಮನಿಸುತ್ತಾರೆ. ಜನ ಸಾಮಾನ್ಯರು ನಮ್ಮೆಲ್ಲರಿಗಿಂತ ಬಹಳ ಬುದ್ಧಿವಂತರು. ಅವರು ಯಾರು ಏನು ಕೆಲಸ ಮಾಡುತ್ತಿದ್ದಾರೆ ಎನ್ನುವುದನ್ನು ಗಮನಿಸುತ್ತಾರೆ. ಅಂತಿಮವಾಗಿ ಅವರು ಯಾವ ನಿರ್ಣಯ ತೆಗೆದುಕೊಳ್ಳಬೇಕು ಅಂತಹ ತೀರ್ಮಾನವನ್ನು ಜನಸಾಮಾನ್ಯರು ಮಾಡುತ್ತಾರೆ ಎಂದರು.

ಮಾಸ್ಕ್ ಕಡ್ಡಾಯದ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ
ಇನ್ನು ಓಮಿಕ್ರಾನ್ ರೂಪಾಂತರ ಹೊಸ ತಳಿ ಮಹಾರಾಷ್ಟ್ರದಲ್ಲಿ ಪತ್ತೆ ಆಗಿದೆ. ಕರ್ನಾಟಕದಲ್ಲಿ ಯಾವುದೇ ಆತಂಕವಿಲ್ಲ, ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ. ಮಾಸ್ಕ್ ಕಡ್ಡಾಯದ ಬಗ್ಗೆ ಇನ್ನೂ ಯಾವುದೇ ನಿರ್ಧಾರವಾಗಿಲ್ಲ. ಮಹಾರಾಷ್ಟ್ರದಲ್ಲಿ ಒಂದು ಪ್ರಕರಣ ಪತ್ತೆಯಾಗಿದ್ದು, ಅಮೆರಿಕಾದಲ್ಲಿ ಈ ಪ್ರಕರಣ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಗಳಿಗೆ ಮಾರ್ಗಸೂಚಿ ನೀಡಲಾಗಿದೆ ಎಂದು ಓಮಿಕ್ರಾನ್ ರೂಪಾಂತರ ಹೊಸ ತಳಿ ಆತಂಕದ ಬಗ್ಗೆ ಆರೋಗ್ಯ ಸಚಿವ ಕೆ.ಸುಧಾಕರ್ ಸ್ಪಷ್ಟನೆ ನೀಡಿದರು.












Click it and Unblock the Notifications