Mysuru Dasara: ಮಹಿಳಾ ಮತ್ತು ಮಕ್ಕಳ ದಸರಾಗೆ ಚಾಲನೆ; ಮನಸೆಳೆದ ಚಿಣ್ಣರ ವೇಷಭೂಷಣ
ಮೈಸೂರು ದಸರಾ ಮಹೋತ್ಸವ 2024 ರ ಪ್ರಯುಕ್ತ ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಮಕ್ಕಳ ದಸರಾ ಕಲಾಥಾನ್ ಕಾರ್ಯಕ್ರಮಕ್ಕೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ. ಮಹದೇವಪ್ಪ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಾವಿರಾರು ಮಕ್ಕಳು ವಿವಿಧ ವೇಷಭೂಷಣಗಳೊಂದಿಗೆ ಭಾಗವಹಿಸಿದ್ದು, ನೋಡುಗರ ಮನಸೂರೆಗೊಂಡಿತು.
ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ದೇವರಾಜ ಅರಸು ರಸ್ತೆ ಮಾರ್ಗದಲ್ಲಿ ಮಹಾರಾಜ ಸರ್ಕಾರಿ ಪ್ರೌಢಶಾಲೆವರೆಗೆ ಮಕ್ಕಳಿಗಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಶಾಲಾ ಮಕ್ಕಳು ವಿವಿಧ ಬಗೆಯ ಸಾಂಸ್ಕೃತಿಕ, ಜಾನಪದ, ಮಹನೀಯರ ವೇಷ ಭೂಷಣ ಹೆಜ್ಜೆ ಹಾಕಿದ್ದು, ನೋಡಗರ ಮನಸೂರೆಗೊಂಡಿತು.

ರಾಜಕುಮಾರ ವೇಷ ಭೂಷಣ, ಚಾಮುಂಡಿ, ದುರ್ಗಿ ಹಾಡಿಗೆ ನೃತ್ಯ ಮಾಡಿ ಸಂಭ್ರಮಿಸಿದರು. ಹುಲಿ ಕುಣಿತ, ಗೊಂಬೆ ಕುಣಿತ, ಯಕ್ಷಗಾನ, ಜನಪದ ನೃತ್ಯ, ಕಂಸಾಳೆ, ಡೊಳ್ಳು ಕುಣಿತ,ಗಾಯನ ಹೀಗೆ ನಾನಾ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದರು. ಶಾಲಾ ಮಕ್ಕಳು ನಾಡಿನ ಕಲೆ ಸಂಸ್ಕೃತಿ ಸಾರುವ ವೇಶ ಭೂಷಣಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿದರು.
ಮಕ್ಕಳ ದಸರಾ ಕಾರ್ಯಕ್ರಮಕ್ಕೆ ಸರ್ಕಾರಿ ಪ್ರಾಥಮಿಕ ಶಾಲೆ ಶಿವರಾಂಪುರ, ಪ್ರೌಢಶಾಲೆ ಕೆ.ಆರ್. ನಗರ, ಸೇಂಟ್ ಜೋಸೆಫ್ ಹುಣಸೂರು, ಸರ್ಕಾರಿ ಪ್ರೌಢಶಾಲೆ ಮೈಸೂರು ಉತ್ತರ ಸೇರಿದಂತೆ ಜಿಲ್ಲೆಯ ನಾನಾ ಭಾಗಗಳಿಂದ ಸ್ವರ್ಧೆಯಲ್ಲಿ ಭಾಗವಹಿಸಲು ಮಕ್ಕಳು ಆಗಮಿಸಿದ್ದರು.
ಮಹಿಳಾ ದಸರೆಗೆ ಚಾಲನೆ
ದಸರಾ ಅಂಗವಾಗಿ ಜೆ.ಕೆ. ಗ್ರೌಂಡ್ಸ್‌ನಲ್ಲಿ ಮಹಿಳಾ ದಸರಾ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಜಗತ್ತಿನಲ್ಲಿ ಅತೀ ಹೆಚ್ಚು ಮೂಢನಂಬಿಕೆಗೆ ಒಳಗಾಗುತ್ತಿರುವವರೇ ಹೆಣ್ಣು ಮಕ್ಕಳು. ಮಹಿಳೆಯರು ಮೂಢನಂಬಿಕೆಗೆ ಒಳಗಾಗದೆ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಲಹೆ ನೀಡಿದರು.

ಸಾವಿರಾರು ಸಂಖ್ಯೆಯ ಮಹಿಳೆಯರು ಆಗಮಿಸಿ ಮಹಿಳಾ ಹಬ್ಬಕ್ಕೆ ಕಳೆ ತಂದಿರುವುದು ಸಂತಸವಾಗಿದೆ. ಮಹಿಳೆಯರು ಯಾರ ಮೇಲೂ ಅವಲಂಬಿತರಾಗದೆ ಸರ್ಕಾರದ ಯೋಜನೆಗಳು ಹಾಗೂ ಕಡ್ಡಾಯ ಶಿಕ್ಷಣದ ಮೂಲಕ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ಕೊಟ್ಟರು.
ಮೂಢನಂಬಿಕೆಗೆ ಹೆಣ್ಣುಮಕ್ಕಳು ಬಲಿಯಾಗಬಾರದೆಂದರೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಹಿಂದೂ ಬಿಲ್‌ಕೋಡ್ ಅನ್ನು ತಿಳಿದುಕೊಳ್ಳಬೇಕು. ಮಹಿಳೆಯರು ಮಾಟ-ಮಂತ್ರ, ಯಂತ್ರ-ತoತ್ರ, ಶಾಸ್ತ್ರಗಳ ಮೊರೆ ಹೋಗುವುದನ್ನು ಬಿಟ್ಟು, ಸಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಮುಂದೆ ಬಂದು ಸ್ವಾವಲಂಬನೆ ಜೀವನ ನಡೆಸಬೇಕು ಎಂದರು.
ಮಹಿಳೆಯರ ಶಿಕ್ಷಣಕ್ಕಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ. 17ನೇ ಶತಮಾನದಲ್ಲಿ ಬಸವಣ್ಣನವರು ಲಿಂಗ ತಾರತಮ್ಯದ ವಿರುದ್ಧ ಹೋರಾಡಿ ಸ್ವಂತ ಮನೆ ಬಿಟ್ಟು ಹೊರ ನಡೆದ ರೀತಿಯಾಗಿ ಮಹಿಳೆಯರ ಸಮಾನತೆಗಾಗಿ ತಮ್ಮ ಕಾನೂನು ಮಂತ್ರಿ ಪದವಿಯನ್ನೇ ತ್ಯಾಗ ಮಾಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಈ ಸಮಯದಲ್ಲಿ ನೆನಪು ಮಾಡಿಕೊಳ್ಳಬೇಕು ಎಂದರು.












Click it and Unblock the Notifications