Loksabha election 2024: ಮೈಸೂರು-ಕೊಡಗು ಕ್ಷೇತ್ರಕ್ಕೆ ಸಾರಾ ಮಹೇಶ್ ಅಭ್ಯರ್ಥಿ?: ಎಚ್‌ಡಿಕೆ ಲೆಕ್ಕಾಚಾರವೇನು?
ಮೈಸೂರು, ನವೆಂಬರ್, 08: 2024ರ ಲೋಕಸಭಾ ಚುನಾವಣೆಗೆ ಕೇವಲ 6 ತಿಂಗಳು ಬಾಕಿಯಿದೆ. ಈ ಹಿನ್ನೆಲೆ ಈಗಿನಿಂದಲೇ ರಾಜ್ಯದಲ್ಲಿ ಮೂರು ರಾಜಕೀಯ ಪಕ್ಷಗಳು ತೆರೆಮರೆಯ ಕಸರತ್ತು ನಡೆಸುತ್ತಿವೆ. ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಪರಿಣಾಮ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಯಾರ ಪಾಲಾಗುತ್ತದೆ ಎಂಬ ಕುತೂಹಲವೂ ಹಲವರಲ್ಲಿ ಮೂಡಿರುತ್ತದೆ. ಹಾಗಾದರೆ ಈ ಕ್ಷೇತ್ರದಲ್ಲಿ ಯಾವ ರೀತಿ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಗಮನಿಸಿ.
ಮೈಸೂರಿನಲ್ಲಿ ವಿಧಾನಸಭಾ ಚುನಾವಣೆ ಟಿಕೆಟ್ ವಂಚಿತರಾದ ಮಾಜಿ ಶಾಸಕರು ಹಾಗೂ ಸೋತ ನಾಯಕರು ಹಾಗೂ ಪಕ್ಷದ ಪ್ರಮುಖ ನಾಯಕರು ಲೋಕಸಭಾ ಚುನಾವಣೆ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಈಗಾಗಲೇ ಹಲವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಆಸೆಯನ್ನು ಬಹಿರಂಗವಾಗಿಯೇ ವ್ಯಕ್ತಪಡಿಸುವ ಮೂಲಕ ಟಿಕೆಟ್‌ಗೆ ಟವೆಲ್ ಹಾಕಿದ್ದಾರೆ.

ಮೈಸೂರು-ಕೊಡಗು ಟಿಕೆಟ್ ಯಾರಿಗೆ?
ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಕನಿಷ್ಠ ನಾಲ್ಕು ಕ್ಷೇತ್ರ ತನಗೆ ನೀಡುವಂತೆ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ಹೈಕಮಾಂಡ್‌ಗೆ ಕೋರಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಇದರಲ್ಲಿ ಮೈಸೂರು-ಕೊಡಗು ಕ್ಷೇತ್ರವೂ ಒಂದು. ಇಲ್ಲಿ ಕುಮಾರಸ್ವಾಮಿ ತಮ್ಮ ಆಪ್ತ ಸಾರಾ ಮಹೇಶ್ ಅವರಿಗೆ ಟಿಕೆಟ್ ಕೊಡಿಸುವ ಉಮೇದುವಿನಲ್ಲಿದ್ದಾರೆ. ಜಿ.ಟಿ.ದೇವೇಗೌಡ ಕೂಡ ಇದಕ್ಕೆ ಒತ್ತಾಸೆಯಾಗಿ ನಿಂತಿರುವುದರಿಂದ ಸಾರಾ ಅವರಿಗೆ ಟಿಕೆಟ್ ಸಿಗುತ್ತದೆಯೇ ಎಂಬ ಕುತೂಹಲ ಮೂಡಿದೆ.
ಪ್ರತಾಪ್ ಸಿಂಹ ಒಪ್ಪುತ್ತಾರಾ?
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ಹೊಸಬರಿಗೆ ಮಣೆ ಹಾಕಿತ್ತು. ಹಳಬರಿಗೆ ಕೋಕ್ ನೀಡಿತ್ತು. ಹಾಗಾಗಿ ಈ ಬಾರಿ ಮೈತ್ರಿ ಇರುವುದರಿಂದ ಬಿಜೆಪಿ ನಡೆ ಕುತೂಹಲ ಮೂಡಿಸಿದೆ. ಪ್ರತಾಪ್ ಸಿಂಹ ಈಗಾಗಲೇ ಎರಡು ಬಾರಿ ನಿರಾಯಾಸವಾಗಿ ಗೆದ್ದು ಮತ್ತೊಮ್ಮೆ ಅವಕಾಶ ಪಡೆದು ಹ್ಯಾಟ್ರಿಕ್ ಗೆಲುವು ಪಡೆಯುವ ವಿಶ್ವಾಸದಲ್ಲಿದ್ದಾರೆ. ಆದರೆ, ಮೈತ್ರಿ ಪ್ರತಾಪ್ ಸಿಂಹ ಅವರಿಗೆ ಮಗ್ಗುಲ ಮುಳ್ಳಾಗುತ್ತದೆಯೇ ಕಾದುನೋಡಬೇಕಿದೆ.

ಸಾರಾ ಮಹೇಶ್ ಆಗ್ತಾರ ಅಭ್ಯರ್ಥಿ?
ವಿಧಾನಸಭೆ ಚುನಾವಣೆಯಲ್ಲಿ ಡಿ.ರವಿಶಂಕರ್ ವಿರುದ್ಧ ಸೋತಿರುವ ಸಾರಾ ಮಹೇಶ್ ಸದ್ಯ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ರಾಜಕೀಯದಿಂದ ದೂರಾಗಿದ್ದಾರೆ. ಇತ್ತ ಸಂಸದ ಪ್ರತಾಪ್ ಸಿಂಹ ವಿರುದ್ಧ ಬಿಜೆಪಿಯ ಪ್ರಭಾವಿ ಗುಂಪು ನಿಂತಿದೆ. ಮಹಿಷ ದಸರಾ ಸಮಯದಲ್ಲಿ ಇದು ಜಗಜ್ಜಾಹೀರಾವಾಗಿದೆ. ಅಲ್ಲದೆ ಸಾರಾ ಮಹೇಶ್ ಈ ಹಿಂದೆ ಪ್ರವಾಸೋದ್ಯಮ ಸಚಿವರಾಗಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ ಅನುಭವವಿದೆ. ಹಾಗಾಗಿ ಸಾರಾ ಗೆಲವು ಸುಲಭ ಎನ್ನುವುದು ಜೆಡಿಎಸ್ ಲೆಕ್ಕಾಚಾರ.
"ನನಗೆ ರಾಜಕೀಯವಾಗಲಿ ಚುನಾವಣೆಯಾಗಲಿ ಅನಿವಾರ್ಯ ಅಲ್ಲ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕಾರ್ಯಕ್ರಮದಲ್ಲಿ ಒತ್ತಾಯಪಡಿಸುತ್ತಿದ್ದಾರೆ. ಆದರೆ ನಾನು ಯಾವುದೆ ತೀರ್ಮಾನ ಕೈಗೊಂಡಿಲ್ಲ. ಪಕ್ಷದ ನಿರ್ಧಾರ ಏನಿದೆ ಗೊತ್ತಿಲ್ಲ. ಪಕ್ಷದ ಅಭಿಪ್ರಾಯ ಪಡೆದು ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ" ಎಂದು ಸಾರಾ ಮಹೇಶ್ ತಿಳಿಸಿದ್ದಾರೆ.
ಪ್ರತಾಪ್ ಸಿಂಹಗೆ ವಿರೋಧಿ ಅಲೆ
ಕೊಡಗಿನ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಹೀನಾಯವಾಗಿ ಸೋತಿದೆ. ಹಾಗಾಗಿ ಕೆ.ಜಿ.ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್, ಟಿಕೆಟ್ ವಂಚಿತ ಎಸ್.ಎ.ರಾಮದಾಸ್, ಪ್ರತಾಪ್ ಸಿಂಹ ವಿರುದ್ದ ತಿರುಗಿಬಿದ್ದಿದ್ದಾರೆ ಎನ್ನಲಾಗಿದೆ. ಇತ್ತ ಜಿ.ಟಿ.ದೇವೇಗೌಡ ಹಾಗೂ ಅವರ ಮಗ ಜಿ.ಡಿ.ಹರೀಶ್ ಗೌಡ ಚಾಮುಂಡೇಶ್ವರಿ ಹಾಗೂ ಹುಣಸೂರು ಕ್ಷೇತ್ರದಲ್ಲಿ ಗೆದ್ದಿರುವುದರಿಂದ ಸಾರಾ ಅವರಿಗೆ ಸಹಕಾರ ನೀಡುತ್ತಾರೆ ಎನ್ನಲಾಗಿದೆ. ಆದರೆ, ಸಾರಾ ಮಹೇಶ್‌ಗೆ ಟಿಕೆಟ್ ಸಿಕ್ಕರಷ್ಟೇ ಈ ಕುತೂಹಲಕ್ಕೆ ತೆರೆ ಬೀಳಲಿದೆ.












Click it and Unblock the Notifications