ಮೋದಿ ಮತ್ತೆ ಪಿಎಂ ಆದರೆ ರಾಜಕೀಯ ಬಿಟ್ಟು ಹೋಗ್ತೀನಿ: ಎಚ್ ಡಿ ರೇವಣ್ಣ
ಮೈಸೂರು, ಏಪ್ರಿಲ್ 11: ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾದರೆ ನಾನು ರಾಜಕೀಯ ಬಿಟ್ಟು ಹೋಗುತ್ತೇನೆ ಎಂದು ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಹೇಳಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ 6, 7 ಮತ್ತು 8 ಅದೃಷ್ಟದ ಸಂಖ್ಯೆಗಳು. ಬೇಕಾದರೆ ಇದನ್ನು ಡೈರಿಯಲ್ಲಿ ಬರೆದು ಇಟ್ಕೊಳ್ಳಿ. 18 ಲಕ್ಕಿ ನಂಬರ್. ಹೀಗಾಗಿ ಮೊದಲ ಹಂತದ ಚುನಾವಣೆಯಲ್ಲಿ ನಮ್ಮ 14 ಅಭ್ಯರ್ಥಿಗಳೇ ಗೆಲ್ಲುತ್ತಾರೆ. ಮೋದಿ ಮತ್ತೆ ಪ್ರಧಾನಿಯಾದರೆ ನಾನು ರಾಜಕೀಯ ಬಿಟ್ಟು ಹೋಗ್ತೀನಿ ಎಂದರು.
6,8 22 ಕೂಡ ಅದೃಷ್ಟದ ಸಂಖ್ಯೆಗಳು. 18 ಅಂದರೆ 1+8=9. 9 ಬಹಳ ಅದೃಷ್ಟದ ಸಂಖ್ಯೆ. ಕಳೆದ 2018ರಲ್ಲಿ ವಿಧಾನಸಭೆ ಚುನಾವಣೆ ನಡೆದಾಗ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು.

ಲೋಕಸಭೆಗೂ ಈ ಬಾರಿ 18ನೇ ತಾರೀಕಿನಂದು ಮತದಾನ ನಡೆಯಲಿದೆ. ಹೀಗಾಗಿ ಮೊದಲ ಹಂತದಲ್ಲಿನ ಚುನಾವಣೆಯಲ್ಲಿ ನಮ್ಮ ಮೈತ್ರಿ ಪಕ್ಷದ ಎಲ್ಲ 14 ಅಭ್ಯರ್ಥಿಗಳೂ ಗೆಲ್ಲುತ್ತಾರೆ. ರಾಜ್ಯದಲ್ಲಿ ಅಚ್ಚರಿಯ ಫಲಿತಾಂಶ ಬರುತ್ತದೆ. ಮೈತ್ರಿ ಅಭ್ಯರ್ಥಿಗಳು 22 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸುತ್ತಾರೆ. ಬಿಜೆಪಿಯವರು ವಿರೋಧ ವ್ಯಕ್ತಪಡಿಸಿದ್ದರೂ 6,8ರ ತಾರೀಕಿನಂದೇ ಕುಮಾರಸ್ವಾಮಿ ಬಜೆಟ್ ಮಂಡನೆ ಮಾಡಿದ್ದರು ಎಂದು ರೇವಣ್ಣ ಹೇಳಿದರು.
ಹಳ್ಳಿ ಕಡೆ ಹೋದಾಗ ಜನರು ನಿಂಬೆಹಣ್ಣುಗಳನ್ನು ಕೊಡುತ್ತಾರೆ. ಅವರು ಕೊಟ್ಟಿದ್ದನ್ನು ಬಿಸಾಕೋಕೆ ಆಗುತ್ತಾ? ಈಶ್ವರಪ್ಪ ಮತ್ತು ಯಡಿಯೂರಪ್ಪ ಅವರಿಗೂ ಒಂದೊಂದು ನಿಂಬೆಹಣ್ಣುಗಳನ್ನು ಕೊಡುತ್ತೇನೆ. ಪಾಪ ಅವರಿಗೂ ಯಾರೂ ಮಾಟ ಮಂತ್ರ ಮಾಡಿಸದೆ ಇರಲಿ ಎಂದು ವ್ಯಂಗ್ಯವಾಗಿ ಹೇಳಿದರು.
ಅಂಬರೀಷ್ ಅವರ ಬಗ್ಗೆ ನನಗೆ ಗೌರವ ಇದೆ. ಅವರ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಮನೆಗೆ ಬಂದಿದ್ದರೂ ಅವರು ಅದನ್ನು ತೆಗೆದುಕೊಂಡಿರಲಿಲ್ಲ. ಅವರಿಗೆ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ಬಗ್ಗೆ ವಿಶ್ವಾಸ ಇರಲಿಲ್ಲ ಎಂದರು.












Click it and Unblock the Notifications