ಲೋಕಸಭಾ ಚುನಾವಣೆ: ಮೈಸೂರು-ಕೊಡಗಿನ ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿ ಅಂತಿಮ..!
ಮೈಸೂರು, ನವೆಂಬರ್ 07: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕೊಡಗು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಬಯಸುವ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದ್ದು, ಸದ್ಯ 14 ಮಂದಿ ನಾಯಕರು ಟಿಕೆಟ್‌ಗಾಗಿ ಪೈಪೋಟಿಗಿಳಿದಿರುವುದು ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ.
ವಿಧಾನಸಭೆಯಲ್ಲಿ ಪ್ರಚಂಡ ಬಹುಮತ ಸಾಧಿಸಿದ ಬಳಿಕ ಅದರಲ್ಲೂ ಕೊಡಗು ಮತ್ತು ಮೈಸೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆದ್ದಿದೆ. ಬಿಜೆಪಿಯ ಭದ್ರಕೋಟೆ ಕೊಡಗಿನಲ್ಲಿಯೇ ಕಾಂಗ್ರೆಸ್ ಜಯಭೇರಿ ಬಾರಿಸಿರುವುದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸುಲಭವಾಗಿ ಗೆಲುವು ಸಾಧಿಸಬಹುದು ಎಂಬ ಆತ್ಮವಿಶ್ವಾಸವನ್ನು ಕಾಂಗ್ರೆಸ್ ನಾಯಕರಲ್ಲಿ ಹುಟ್ಟು ಹಾಕಿದ್ದು, ಹೀಗಾಗಿಯೇ ಸ್ಪರ್ಧೆಗಾಗಿ ಪೈಪೋಟಿ ಹೆಚ್ಚುವಂತೆ ಮಾಡಿದೆ.

ವಿಧಾನಸಭಾ ಚುನಾವಣೆ ಕಳೆಯುತ್ತಿದ್ದಂತೆಯೇ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದತ್ತ ಕಾಂಗ್ರೆಸ್‌ನ ಹಲವು ನಾಯಕರು ಕಣ್ಣಿಟ್ಟಿದ್ದು, ಬೇರೆ ಬೇರೆ ರೀತಿಯಲ್ಲಿ ತಮ್ಮ ಆಕಾಂಕ್ಷೆಯನ್ನು ಹೊರಹಾಕಿದ್ದರು. ಇದೀಗ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆಯೇ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಹೀಗಾಗಿ ಆಕಾಂಕ್ಷಿಗಳ ನಡುವೆ ಅರ್ಹರನ್ನು ಹೇಗೆ ಆಯ್ಕೆ ಮಾಡಬಹುದು ಎಂಬುದೇ ಕುತೂಹಲ ಸೃಷ್ಟಿಸಿದೆ.
14 ಮಂದಿ ಆಕಾಂಕ್ಷಿಗಳ ಪಟ್ಟಿ ಅಂತಿಮ
ಆಕಾಂಕ್ಷಿಗಳ ಸಂಖ್ಯೆ ಜಾಸ್ತಿಯಿದ್ದರೂ ಅವರ ಪೈಕಿ ಹಾಲಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಮಾಜಿ ಶಾಸಕ ವಾಸು, ಎಂ.ಕೆ.ಸೋಮಶೇಖರ್, ಕೆಪಿಸಿಸಿ ವಕ್ತಾರ ಲಕ್ಷ್ಮಣ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಮುಖಂಡರಾದ ಜೆ.ಜೆ.ಆನಂದ್, ಡಾ.ಸುಶ್ರುತ್, ವರುಣ ಮಹೇಶ್, ಹಿರಿಯ ವಕೀಲ ಚಂದ್ರಮೌಳಿ ಸೇರಿ 14 ಮಂದಿಯನ್ನು ಸಚಿವ ಬೈರತಿ ಸುರೇಶ್ ನೇತೃತ್ವದಲ್ಲಿ ಆಯ್ಕೆ ಮಾಡಲಾಗಿದೆ.
ಈ ಪಟ್ಟಿಯನ್ನು ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಆಯ್ಕೆ ಸಮಿತಿಯ ಸಿಎಲ್ ಪಿ ಸಭೆಯಲ್ಲಿಟ್ಟು ಬಳಿಕ ಒಮ್ಮತದ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಈ ನಡುವೆ ಪಕ್ಷದ ಮುಖಂಡರು, ಕಾರ್ಯಕರ್ತರು ಶೀಘ್ರ ಅಭ್ಯರ್ಥಿಯನ್ನು ಘೋಷಿಸಬೇಕು ಎಂಬ ಒತ್ತಾಯ ಮಾಡುತ್ತಿದ್ದು, ಸದ್ಯ ಯಾರೇ ಅಭ್ಯರ್ಥಿ ಆದರೂ ಅವರ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸಬೇಕೆಂಬ ತೀರ್ಮಾನ ಮಾಡಲಾಗಿದೆ.

ಶೀಘ್ರ ಅಭ್ಯರ್ಥಿ ಘೋಷಿಸಲು ಸಲಹೆ
2014 ಮತ್ತು 2019ರ ಲೋಕಸಭಾ ಚುನಾವಣೆಯನ್ನು ಗಮನಿಸಿದರೆ ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಜೆಡಿಎಸ್ ಮತ್ತು ಕಾಂಗ್ರೆಸ್ ನಿಂದ ಸಾಧ್ಯವಾಗಿರಲಿಲ್ಲ. ಹೀಗಾಗಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರ ಗೆಲುವು ಸುಲಭವಾಗಿತ್ತು. ಆದರೆ ಈ ಬಾರಿ ಕಾಂಗ್ರೆಸ್ ನಲ್ಲಿ ಗೆಲುವಿನ ಹುಮ್ಮಸ್ಸು ಕಂಡು ಬಂದಿದ್ದು ಹಾಲಿ ಸಂಸದ ಪ್ರತಾಪ್ ಸಿಂಹ ಅವರನ್ನು ಸೋಲಿಸಲೇ ಬೇಕೆಂಬ ತೀರ್ಮಾನಕ್ಕೆ ಕೈನಾಯಕರು ಬಂದಂತಿದೆ.
ಕ್ಷೇತ್ರದಲ್ಲಿ ಆಕಾಂಕ್ಷಿಗಳು ಹೆಚ್ಚಿದಂತೆಲ್ಲ ಪಕ್ಷಕ್ಕೆ ಸಮಸ್ಯೆಗಳೇ ಹೆಚ್ಚಾಗುವ ಸಾಧ್ಯತೆಯಿದೆ. ಏಕೆಂದರೆ ಎಲ್ಲ ಆಕಾಂಕ್ಷಿಗಳು ಒಮ್ಮತಕ್ಕೆ ಬಂದರೆ ತೊಂದರೆ ಆಗದು. ಒಂದು ವೇಳೆ ಬಂಡಾಯವೆದ್ದರೆ ಅದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಹೀಗಾಗಿ ಈಗಲೇ ಪಕ್ಷದಿಂದ ಅಭ್ಯರ್ಥಿಯನ್ನು ಘೋಷಣೆ ಮಾಡಿ, ಒಂದು ವೇಳೆ ಅಸಮಾಧಾನವೇರ್ಪಟ್ಟರೂ ಅದನ್ನು ಸರಿಪಡಿಸಿಕೊಳ್ಳಲು ಸಮಯವಿರುತ್ತದೆ. ಬದಲಿಗೆ ತಡವಾಗಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ ಅದರಿಂದ ಸಮಸ್ಯೆ ಹೆಚ್ಚಾಗಬಹುದು ಎಂಬುದು ಕಾಂಗ್ರೆಸ್ ನಾಯಕರ ಅಭಿಪ್ರಾಯವಾಗಿದೆ. ಹೀಗಾಗಿಯೇ ಬಹು ಬೇಗ ಅಭ್ಯರ್ಥಿಗಳನ್ನು ಘೋಷಿಸಿ ಎಂಬ ಒತ್ತಾಯಗಳು ಪಕ್ಷದೊಳಗೆ ಕೇಳಿ ಬರುತ್ತಿವೆ.
ಯಾರಾಗಲಿದ್ದಾರೆ ಒಮ್ಮತದ 'ಕೈ' ಅಭ್ಯರ್ಥಿ
ಚುನಾವಣೆಗೆ ಆರೇಳು ತಿಂಗಳು ಇರುವಾಗಲೇ ಕಾಂಗ್ರೆಸ್ ಚುನಾವಣಾ ಅಖಾಡಕ್ಕಿಳಿದಿದ್ದು, ಅಭ್ಯರ್ಥಿ ಯಾರು ಎನ್ನುವುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ನ್ನು ಗೆಲ್ಲಿಸಬೇಕೆನ್ನುವುದು ಪಕ್ಷದ ನಿಲುವಾಗಿದೆ. ಇಲ್ಲಿ ಗೆಲ್ಲಲೇ ಬೇಕಾಗಿದೆ. ಇದು ಸಿಎಂ ಸಿದ್ದರಾಮಯ್ಯ ಅವರ ತವರು ಆಗಿರುವುದರಿಂದ ಗೆಲುವು ಅವರ ಪಾಲಿಗೆ ಪ್ರತಿಷ್ಠೆಯಾಗಿದೆ. ಸದ್ಯ ಆಕಾಂಕ್ಷಿಗಳ ದಂಡೇ ದೊಡ್ಡದಾಗಿರುವಾಗ ಒಮ್ಮತದ ಅಭ್ಯರ್ಥಿಯನ್ನು ಹೇಗೆ ಆಯ್ಕೆ ಮಾಡುತ್ತಾರೆ ಎಂಬುದೇ ಸದ್ಯ ನಮ್ಮ ಮುಂದಿರುವ ಕುತೂಹಲವಾಗಿದೆ.












Click it and Unblock the Notifications