ಕಬಿನಿ ಜಲಾಶಯದಲ್ಲಿ ಚಿರತೆ ಮೃತದೇಹ ಪತ್ತೆ
ಮೈಸೂರು, ಆಗಸ್ಟ್ 05 : ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯದ ಹಿನ್ನೀರಿನಲ್ಲಿ ಚಿರತೆ ಮೃತದೇಹ ಪತ್ತೆಯಾಗಿತ್ತು. ಕಳೆದ ವಾರ ಹುಲಿಯ ಮೃತದೇಹ ಪತ್ತೆಯಾಗಿತ್ತು.
ಸುಮಾರು ಐದು ವರ್ಷ ಪ್ರಾಯದ ಚಿರತೆ ಕಳೆದ ನಾಲ್ಕೈದು ದಿನಗಳ ಹಿಂದೆಯೇ ಸಾವನ್ನಪ್ಪಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ. ನೀರು ಕುಡಿಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿರಬಹುದಾ? ಎಂಬ ಪ್ರಶ್ನೆಯೂ ಕಾಡುತ್ತಿದೆ.
ಚಿರತೆ ಎಲ್ಲಿ ನೀರಿಗೆ ಬಿದ್ದಿದೆ ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ. ಮೃತದೇಹ ನೀರಿನಲ್ಲಿ ತೇಲಿಕೊಂಡು ಬಂದು ಜಲಾಶಯದ ಮುಖ್ಯ ದ್ವಾರದ ಬಳಿ ಕಾಣಿಸಿದೆ. ಸ್ಥಳೀಯರು ಇದನ್ನು ಗಮನಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ವಿಷಯ ತಿಳಿದು ಸ್ಥಳಕ್ಕೆ ಡಿಎಫ್‍ಓ ಹನುಮಂತರಾಜು, ಎಸಿಎಫ್ ಪರಮೇಶ್ವರ್, ಆರ್‍ಎಫ್‍ಒ ಸಂದೀಪ್ ಭೇಟಿ ನೀಡಿ ಚಿರತೆಯ ಮೃತದೇಹವನ್ನು ಪರಿಶೀಲಿಸಿ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನಡೆಸಿದ್ದಾರೆ.
ಹುಲಿ ಶವ ಪತ್ತೆ : ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಅಂತರಸಂತೆ ವನ್ಯ ಜೀವಿ ವಲಯದ ಕಾಡಂಚಿನ ಎನ್. ಬೆಳತ್ತೂರು ಗ್ರಾಮದ ಹಳೆ ಕಾರಾಪುರ ರಸ್ತೆಯ ಬಳಿ ಕಬಿನಿ ಹಿನ್ನೀರಿನಲ್ಲಿ ಹುಲಿಯ ಶವ ಕಳೆದ ವಾರ ಪತ್ತೆಯಾಗಿತ್ತು.
ಸುಮಾರು ನಾಲ್ಕೂವರೆ ವರ್ಷ ಪ್ರಾಯದ ಹೆಣ್ಣು ಹುಲಿ ಎರಡು ದಿನಗಳ ಹಿಂದೆ ಮೃತ ಪಟ್ಟಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದರು.












Click it and Unblock the Notifications