ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ: ಮತದಾನದ ಅವಧಿ 1 ಗಂಟೆ ವಿಸ್ತರಣೆ
ಮೈಸೂರು, ಜೂ.11: ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನದ ಅವಧಿ 1 ಗಂಟೆ ವಿಸ್ತರಣೆ ಮಾಡಲಾಗಿದೆ ಎಂದು ಪ್ರಾದೇಶಿಕ ಆಯುಕ್ತ ಡಾ ಜಿ. ಸಿ. ಪ್ರಕಾಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ 1,41,961 ಮಂದಿ ಪದವೀಧರ ಮತದಾರರಿದ್ದಾರೆ. ಈ ಪೈಕಿ 82,505 ಪುರುಷರು, 59,432 ಮಹಿಳೆಯರು, 24 ಇತರೆ ಮತದಾರರಿದ್ದಾರೆ. ಬರುವ ಸೋಮವಾರ ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಮತದಾನ ಮಾಡಲು ಒಂದು ಗಂಟೆ ಅವಧಿಯನ್ನು ವಿಸ್ತರಿಸಲಾಗಿದೆ. ಯಾರೂ ಮತದಾನದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಅವಧಿ ವಿಸ್ತರಣೆ ಮಾಡಲಾಯಿತು.
ಅರ್ಹ ಮತದಾರರು ರಾಜ್ಯದ ಯಾವುದೇ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಕೂಡ ಮತದಾನ ಮಾಡಲು ಅನುಕೂಲವಾಗುವಂತೆ ರಜೆ ನೀಡುವಂತೆ ಆದೇಶಿಸಲಾಗಿದೆ ಎಂದರು.

ಬಹಿರಂಗ ಪ್ರಚಾರ ಇಂದು ಸಂಜೆ 5 ಗಂಟೆಗೆ ಅಂತ್ಯವಾಗಲಿದೆ. ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಸೇರಿದಂತೆ ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಟ್ಟು 150 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ: ಕಣದಲ್ಲಿ19 ಮಂದಿ
ದಕ್ಷಿಣ ಪದವೀಧರ ಕ್ಷೇತ್ರದಿಂದ ರಾಜ್ಯ ವಿಧಾನಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಸ್ಥಿತಿ ಇದು. ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಜಿಲ್ಲೆಗಳನ್ನೊಳಗೊಂಡ ಈ ಕ್ಷೇತ್ರದಲ್ಲಿ 19 ಮಂದಿ ಕಣದಲ್ಲಿದ್ದಾರೆ. ಬಿಜೆಪಿಯ ಮೈ.ವಿ.ರವಿಶಂಕರ್, ಜೆಡಿಎಸ್ ಎಚ್.ಕೆ.ರಾಮು, ಕಾಂಗ್ರೆಸ್ ಮಧು ಜಿ.ಮಾದೇಗೌಡ ಹಾಗೂ ರೈತಸಂಘ, ದಲಿತ ಸಂಘರ್ಷ ಸಮಿತಿಗಳು, ಪ್ರಗತಿಪರ ಸಂಘಟನೆಗಳು, ಆಮ್ ಆದ್ಮಿ ಪಕ್ಷದ ಬೆಂಬಲಿತ ಅಭ್ಯರ್ಥಿ ಪ್ರಸನ್ನ ಎನ್.ಗೌಡ ಅವರ ನಡುವೆಯೇ ಸೆಣಸಾಟ ಏರ್ಪಟ್ಟಿದೆ. ರಾಮು, ಮಧು ಜಿ.ಮಾದೇಗೌಡ, ಪ್ರಸನ್ನ ಎನ್.ಗೌಡ ಮೂವರು ಒಕ್ಕಲಿಗ ಸಮಾಜದವರು. ರವಿಶಂಕರ್ ಬ್ರಾಹ್ಮಣ ಸಮಾಜಕ್ಕೆ ಸೇರಿದ್ದಾರೆ. ಮಾಜಿ ಶಾಸಕ ವಾಟಾಳ್ ನಾಗರಾಜ್, ಎಸ್ ಡಿಪಿಐ ರಫತ್ ಉಲ್ಲಾಖಾನ್, ಆರ್ ಪಿಐ ಪಕ್ಷದಿಂದ ಎನ್.ವೀರಭದ್ರಸ್ವಾಮಿ, ಪಕ್ಷೇತರ ಅಭ್ಯರ್ಥಿ ವಿನಯ್ ಕಣದಲ್ಲಿದ್ದಾರೆ. ಬಿಎಸ್ ಪಿಯು ಡಾ.ಬಿ.ಎಚ್.ಚನ್ನಕೇಶವಮೂರ್ತಿ ಅವರಿಗೆ ಸಕಾಲದಲ್ಲಿ ಬಿ.ಫಾರಂ ಸಿಗದೆ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ.

ಮೂರು ಪಕ್ಷಗಳು ಹರಸಾಹಸ
ದಕ್ಷಿಣ ಪದವೀಧರ ಕ್ಷೇತ್ರವನ್ನು ಗೆಲ್ಲಲು ಮೂರು ಪಕ್ಷಗಳು ಹರಸಾಹಸಪಡುತ್ತಿವೆ. ವಿಧಾನಸಭಾ ಚುನಾವಣೆ ಮೇಲೆ ಕಣ್ಣಿರಿಸಿರುವುದರಿಂದ ಕ್ಷೇತ್ರ ಪ್ರತಿನಿಧಿಸುತ್ತಿರುವ ಜೆಡಿಎಸ್ ಶ್ರೀಕಂಠೇಗೌಡ ಸ್ಪರ್ಧಿಸುತ್ತಿಲ್ಲ. ಕಳೆದ ಬಾರಿ ಕಡಿಮೆ ಮತಗಳ ಅಂತರದಿಂದ ಸೋತಿರುವ ರವಿಶಂಕರ್ ಬಿಜೆಪಿಯಲ್ಲಿ ಮತ್ತೆ ಕಣಕ್ಕಿಳಿದಿದ್ದಾರೆ. ಮಾದೇಗೌಡರ ಪುತ್ರ ಮಧು ಜಿ.ಮಾದೇಗೌಡರಿಗೆ ಕಾಂಗ್ರೆಸ್ ಅವಕಾಶ ಕಲ್ಪಿಸಿದೆ. ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಹೆಚ್.ಕೆ.ರಾಮು ಮೇಲೆ ಜೆಡಿಎಸ್ ವಿಶ್ವಾಸ ಇರಿಸಿದೆ.ಈ ಚುನಾವಣೆಯ ವಿಶೇಷ ಎಂದರೆ ಹಲವು ಸಂಘಟನೆಗಳು ಒಂದುಗೂಡಿ ಸರ್ವಸಮ್ಮತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರುವುದು. ರೈತಸಂಘ, ದಲಿತ ಸಂಘರ್ಷ ಸಮಿತಿ, ಪ್ರಗತಿಪರ ಸಂಘಟನೆಗಳು ಸೇರಿದಂತೆ ಹಲವು ಸಂಸ್ಥೆಗಳು ಪ್ರಸನ್ನ ಗೌಡ ಅವರನ್ನು ಕಣಕ್ಕಿಳಿಸಿದೆ. ಇದೊಂದು ಹೊಸ ಪ್ರಯೋಗವಾಗಿದ್ದು, ಯಾವ ರೀತಿಯ ಪರಿಣಾಮ ಬೀರಲಿದೆ ಎನ್ನುವುದು ಕುತೂಹಲ ಮೂಡಿಸಿದೆ. ಈ ಮೂಲಕ ಪ್ರಸನ್ನ ಗೌಡ ಪ್ರಮುಖ ರಾಜಕೀಯ ಪಕ್ಷಗಳಿಗೆ ಸವಾಲು ಹಾಕಿದ್ದಾರೆ.












Click it and Unblock the Notifications