ಮೈಸೂರು ದಸರಾ: ಸೆ.30 ರ ಪ್ರಮುಖ ಕಾರ್ಯಕ್ರಮಗಳ ವಿವರ
ಮೈಸೂರು, ಸೆಪ್ಟೆಂಬರ್ 30: ಕಳೆದ 10 ದಿನಗಳಿಂದ ಸಾಂಸ್ಕೃತಿಕ ನಗರಿಯಲ್ಲಿ ಮೇಳೈಸಿದ್ದ ನವರಾತ್ರಿ ವೈಭವಕ್ಕೆ ಇಂದು(ಸೆ.30) ತೆರೆ ಬೀಳಲಿದ್ದು, ವೈಭವದ ಜಂಬೂ ಸವಾರಿ ಮೆರವಣಿಗೆಗೆ ಸಾಂಸ್ಕೃತಿಕ ನಗರಿ ಸಜ್ಜಾಗಿದೆ.
ಇಂದು ಮಧ್ಯಾಹ್ನ 2.15ಕ್ಕೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದ ಬಳಿಯಿರುವ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದಿಪೂಜೆ ಮಾಡುವ ಮೂಲಕ ಸ್ತಬ್ಧಚಿತ್ರ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಬಳಿಕ 4.45ಕ್ಕೆ ಸಲ್ಲುವ ಶುಭ ಕುಂಭಲಗ್ನದಲ್ಲಿ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ.

ಸತತ ಆರು 6 ಬಾರಿಗೆ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಕ್ಯಾಪ್ಟನ್ ಅರ್ಜುನ ಹೊರಲಿದ್ದಾನೆ. ಮೆರವಣಿಗೆಯಲ್ಲಿ ವಿವಿಧ ಜಿಲ್ಲೆಗಳ 40 ಸ್ತಬ್ಧಚಿತ್ರಗಳು ಭಾಗವಹಿಸಲಿದ್ದು, 2000ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಜಂಬೂ ಸವಾರಿ ಸಾಗುವ ರಸ್ತೆ ಸೇರಿದಂತೆ ನಗರದೆಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ರಾಜ್ಯ, ಹೊರರಾಜ್ಯ, ದೇಶ, ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದೆ.
ಮಳೆಯ ಆತಂಕ:
ಕಳೆದ ಮೂರ್ನಾಲ್ಕು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಜಂಬೂ ಸವಾರಿಗೆ ಅಡ್ಡಿಯಾಗುವ ಆತಂಕವೂ ಇದೆ. ವಿಶ್ವವಿಖ್ಯಾತ ಜಂಬೂ ಸವಾರಿಯನ್ನು ಕಣ್ತುಂಬಿಕೊಳ್ಳಲು. ಲಕ್ಷಾಂತರ ಪ್ರವಾಸಿಗರು ಆಗಮಿಸಲಿದ್ದು, ವರುಣ ದೇವನಿಗೆ ಇದೊಂದು ದಿನ ಬಿಡುವು ನೀಡು ಎಂದು ಪ್ರಾರ್ಥಿಸುವ ಸ್ಥಿತಿ ಬಂದಿದೆ.
ಕಳೆದ ಬಾರಿಯೂ ಜಂಬೂ ಸವಾರಿಯಂದು ಮಳೆರಾಯನ ಆಗಮನವಾಗಿತ್ತು. ಆದರೂ ಎತ್ತಲೂ ಕದಲದೆ ಮಳೆಯಲ್ಲೇ ಜಂಬೂ ಸವಾರಿ ವೀಕ್ಷಿಸಿದ್ದರು. ಈ ಬಾರಿಯೂ ಮಳೆರಾಯನ ಆಗಮನವಾಗುವ ಸಾಧ್ಯತೆ ಇದೆ.
ಅರಮನೆಯಲ್ಲಿ ಮೇಳೈಸಿದ ಸಂಭ್ರಮ:
ನವರಾತ್ರಿ ಸಂಭ್ರಮಕ್ಕೆ ತೆರೆ ಎಳೆಯುವ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಅರಮನೆಯಲ್ಲಿ ಸಂಭ್ರಮ ಮೇಳೈಸಿದೆ. ಯುವರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅರಮನೆ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ. ಪಟ್ಟದ ಕತ್ತಿಗೆ ಪೂಜೆ ಸಲ್ಲಿಸುವ ಮೂಲಕ ರೋಚಕ ವಜ್ರಮುಷ್ಠಿ ಕಾಳಗಕ್ಕೆ ಚಾಲನೆ ನೀಡಲಿದ್ದಾರೆ. ಅಲ್ಲದೆ ಅರಮನೆ ದೇವಸ್ಥಾನಗಳಿಗೆ ಪೂಜೆ ಸಲ್ಲಿಸಿ, ಬಳಿಕ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆಯನ್ನೂ ಮಾಡಲಿದ್ದಾರೆ. ಸಂಜೆ ಬನ್ನಿಮಂಟಪ ಮೈದಾನದಲ್ಲಿ ಅತ್ಯಾಕರ್ಷಕ ಪಂಜಿನ ಕವಾಯತು ನಡೆಯಲಿದೆ












Click it and Unblock the Notifications