ಹುಣಸೂರಿನ ಬರಿದಾದ ಕೆರೆಗಳಿಗೆ ಕೊನೆಗೂ ನೀರು ಬಂತು!
ಮೈಸೂರು, ಆಸಗ್ಟ್ 31: ಕಳೆದ ಕೆಲ ವರ್ಷಗಳಿಂದ ನೀರು ಕಾಣದೆ ಬರಿದಾದ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಕೆರೆ ಇದೀಗ ತುಂಬಿದ್ದು, ರೈತರು ಸಂಭ್ರಮ ಪಡುತ್ತಾ ಬಾಗಿನ ಅರ್ಪಿಸಿದ್ದಾರೆ.
ಈ ಹಿಂದೆ ಮಳೆ ಸುರಿಯದ ಕಾರಣ ಕೆರೆ ತುಂಬಿರಲಿಲ್ಲ. ಇದರಿಂದ ಇದೇ ಕೆರೆಯನ್ನು ನಂಬಿದ್ದ ರೈತರು ಕಂಗಾಲಾಗಿದ್ದರು. ಕಳೆದ ವರ್ಷ ಹಾರಂಗಿ ಜಲಾಶಯದಿಂದ ನಾಲೆ ಮೂಲಕ ನೀರು ತುಂಬಿಸುವ ಕೆಲಸವಾಗಿತ್ತಾದರೂ ಪ್ರಯೋಜನವಾಗಿರಲಿಲ್ಲ.

ಈ ಕೆರೆಗಳಿಂದ ಕೆಲವು ರೈತರು ವ್ಯವಸಾಯ ಮಾಡುತ್ತಾರೆಯಾದರೂ ಬಟ್ಟೆ ಒಗೆಯಲು ಜಾನುವಾರುಗಳಿಗೆ ನೀರು ಕುಡಿಯಲು ಉಪಯೋಗಿಸಲಾಗುತ್ತಿದೆ. ಬರದ ಹಿನ್ನಲೆಯಲ್ಲಿ ಅಲ್ಪಸ್ವಲ್ಪ ನೀರಿತ್ತಾದರೂ ಅದು ಬತ್ತಿ ಬರಡಾಗಿತ್ತು.
ಮಳೆ ಬಂದು ನೀರು ತುಂಬಿ ಹರಿದರೂ ನದಿಯಿಂದ ನೀರನ್ನು ಕೆರೆಗೆ ತುಂಬಿಸುವ ಕಾರ್ಯ ನಡೆದಿರಲಿಲ್ಲ. ಹೀಗಾಗಿ ಅಂತರ್ಜಲ ಕುಸಿತ ಕಂಡಿತ್ತು. ಈ ಬಾರಿ ಸರ್ಕಾರ ಜಲಾಶಯಗಳಿಂದ ನಾಲೆಗಳ ಮೂಲಕ ಕೆರೆ ಕಟ್ಟೆಗಳಿಗೆ ನೀರು ತುಂಬಿಸಲು ಮುಂದಾಗಿದ್ದು, ಇದರಿಂದಾಗಿ ಹಿರೀಕ್ಯಾತನಹಳ್ಳಿ ಗ್ರಾಪಂ ವ್ಯಾಪ್ತಿಯ ಬರಡಾದ ಮರೂರು ಕೆರೆ, ಕುಂತಿಕೆರೆ, ಗರಿಕೆ ಕೆರೆ, ಹಿರೀಕ್ಯಾತನಹಳ್ಳಿ ಕೆರೆಗಳಲ್ಲಿ ನೀರು ತುಂಬಿದ್ದು, ಈ ವ್ಯಾಪ್ತಿಯ ರೈತರು ಸಂಭ್ರಮ ಪಡುವಂತಾಗಿದೆ.
ಬಹಳಷ್ಟು ವರ್ಷಗಳಿಂದ ಬರಡಾಗಿದ್ದ ಕೆರೆಯನ್ನು ನೋಡಿ ನೊಂದಿದ್ದ ಜನರ ಮುಖದಲ್ಲಿ ಇದೀಗ ಮಂದಹಾಸ ಮಿನುಗುತ್ತಿದೆ. ಇದೇ ಖುಷಿಯಲ್ಲಿ ರೈತರು ತುಂಬಿದ ಕೆರೆಗಳಿಗೆ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸುತ್ತಿದ್ದಾರೆ.












Click it and Unblock the Notifications