ಮೈಸೂರಿನಲ್ಲಿ ಮೊಬೈಲ್ ಫೀವರ್ ಕ್ಲಿನಿಕ್ ಆಗಿ ಬದಲಾದ ಬಸ್
ಮೈಸೂರು, ಏಪ್ರಿಲ್ 25: ಕೊರೊನಾ ವೈರಸ್ ಪರೀಕ್ಷೆಯನ್ನು ಸುಲಭವಾಗಿಸುವ ನಿಟ್ಟಿನಲ್ಲಿ ಮೈಸೂರು ಜಿಲ್ಲಾಡಳಿತ ಈಗಾಗಲೇ ಮೈಸೂರು ನಗರದಲ್ಲಿ ಸುಮಾರು ಹತ್ತು ಕಡೆ ಫೀವರ್ ಕ್ಲಿನಿಕ್ ಗಳನ್ನು ಪ್ರಾರಂಭಿಸಿದೆ.
Recommended Video
ಇದೀಗ ಫಿವರ್ ಕ್ಲಿನಿಕ್ ಗಳ ಮೂಲಕ ಹೆಚ್ಚು ಜನರನ್ನು ಪರೀಕ್ಷಿಸಲು ಅನುಕೂಲವಾಗುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಮೈಸೂರು ಗ್ರಾಮಾಂತರ ವಿಭಾಗದಿಂದ ಪ್ರಯಾಣಿಕರ ಬಸ್ ಅನ್ನು ಮೊಬೈಲ್ ಫೀವರ್ ಕ್ಲಿನಿಕ್ ಬಸ್ ಆಗಿ ಪರಿವರ್ತಿಸಲಾಗಿದ್ದು, ಇಂದು ಈ ಸೇವೆಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, "ವೈದ್ಯಾಧಿಕಾರಿಗಳಿಗಾಗಿ ಬಸ್ ನಲ್ಲಿ ಟೇಬಲ್, ಖುರ್ಚಿ ಮತ್ತು ಫ್ಯಾನ್ ವ್ಯವಸ್ಥೆ ಮಾಡಲಾಗಿದೆ. ರೋಗಿಗಳು ಕುಳಿತುಕೊಳ್ಳಲು ಪ್ರತ್ಯೇಕ ಅಸನದ ವ್ಯವಸ್ಥೆ ಇದೆ. ರೋಗಿಗಳ ತಪಾಸಣೆಗಾಗಿ ಹಾಸಿಗೆ, ಫ್ಯಾನ್ ವ್ಯವಸ್ಥೆ ಇದೆ. ಔಷಧಿ ಇಡಲು ಔಷಧಿ ಬಾಕ್ಸ್ ವ್ಯವಸ್ಥೆ ಮಾಡಲಾಗಿದೆ. ಕೈ ತೊಳೆಯಲು ಸ್ಯಾನಿಟೈಸರ್, ಸೋಪ್ ಆಯಿಲ್, ಪ್ರತ್ಯೇಕ ನೀರಿನ ಸೌಲಭ್ಯವನ್ನು ಬಸ್ಸಿನಲ್ಲಿ ಅಳವಡಿಸಲಾಗಿದೆ. ಆಸ್ಪತ್ರೆ ಇಲ್ಲದ ಗ್ರಾಮಗಳಿಗೆ ತೆರಳಿ ಆರೋಗ್ಯ ತಪಾಸಣೆ ನಡೆಸಲು ಸಂಚಾರಿ ಫೀವರ್ ಕ್ಲಿನಿಕ್ ಬಳಕೆಗೆ ತೀರ್ಮಾನ" ಎಂದು ಮಾಹಿತಿ ನೀಡಿದರು.

"ಕೊರೊನಾ ಪರೀಕ್ಷೆಗಾಗಿ ಬಸ್ಸನ್ನು ಆಧುನಿಕ ಮೊಬೈಲ್ ಫೀವರ್ ಕ್ಲಿನಿಕ್ ರೀತಿಯಲ್ಲಿ ಪರಿವರ್ತಿಸಲಾಗಿದೆ. ಕೊರೊನಾ ಪರೀಕ್ಷೆಯಲ್ಲೂ ಮೈಸೂರು ಟಾಪ್ ಆಗಿದೆ. ಬೇರೆ ಕಡೆಗೆ ಹೋಲಿಸಿದರೆ ನಮ್ಮಲ್ಲಿ ಅತಿಹೆಚ್ಚು ಪರೀಕ್ಷೆಗಳು ನಡೆಯುತ್ತಿವೆ. ಹೆಚ್ಚು ಪರೀಕ್ಷೆ ನಡೆದಷ್ಟೂ ಹೆಚ್ಚು ಅನುಕೂಲ ಆಗುತ್ತೆ. ಜುಬಿಲಿಯೆಂಟ್ ಕಾರ್ಖಾನೆಗೆ ಸಂಬಂಧಪಟ್ಟ ಟೆಸ್ಟಿಂಗ್ ಮುಗಿದಿದೆ. ಕಾರ್ಮಿಕರ ಕುಟುಂಬಸ್ಥರೂ ನಮ್ಮನ್ನು ಟೆಸ್ಟ್ ಮಾಡಿ ಅಂತ ಕೇಳಿಕೊಂಡಿದ್ದರು. ಅವರನ್ನೂ ಟೆಸ್ಟ್ ಮಾಡುತ್ತಿದ್ದೇವೆ. ಮೈಸೂರಿನಲ್ಲಿ ಈಗ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ" ಎಂದರು.
"ನಿನ್ನೆ ಒಬ್ಬರು ಡಿಸ್ಚಾರ್ಜ್ ಆಗಿದ್ದಾರೆ. ಇಂದು ಮತ್ತಷ್ಟು ಜನ ಡಿಸ್ಚಾರ್ಜ್ ಆಗುತ್ತಾರೆ. ಹೊಸದಾಗಿ ಪಾಸಿಟಿವ್ ಕೇಸ್‌ಗಳು ಬರುತ್ತಿಲ್ಲ. ಇನ್ನು ಲಾಕ್‌ಡೌನ್ ಸಡಿಲಿಕೆ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿದ್ದೇವೆ. ಸರ್ಕಾರದ ನಿರ್ದೇಶನ ಏನು ಬರುತ್ತೋ ಅದನ್ನು ಜಾರಿ ಮಾಡುತ್ತೇವೆ" ಎಂದು ತಿಳಿಸಿದರು.












Click it and Unblock the Notifications