ಮೈಸೂರಿನಲ್ಲಿ 2 ಬೈಕಿಗೆ ಡಿಕ್ಕಿ ಹೊಡೆದ KSRTC ಬಸ್: ಇಬ್ಬರು ದುರ್ಮರಣ
Recommended Video

ಮೈಸೂರು, ಜೂನ್ 25: ಕೆಎಸ್ ಆರ್‍ಟಿಸಿ ಬಸ್‍ವೊಂದು ಎರಡು ಬೈಕ್ ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಕೆ.ಆರ್.ನಗರ ತಾಲೂಕಿನ ಭೇರ್ಯ ಸಮೀಪದ ಹಾಸನ-ಮೈಸೂರು ಹೆದ್ದಾರಿಯ ಚಿಕ್ಕವಡ್ಡರಗುಡಿ ಗ್ರಾಮದಲ್ಲಿ ನಡೆದ ಈ ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೆ.ಆರ್.ನಗರ ತಾಲೂಕಿನ ಗಂಧನಹಳ್ಳಿ ಗ್ರಾಮದ ಮಧು (40) ಹಾಗೂ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಹಾರೋಹಳ್ಳಿ ಗ್ರಾಮದ ರೇವಣ್ಣ ಅವರ ಪತ್ನಿ ಪದ್ಮಮ್ಮ(60) ಮೃತ ದುರ್ದೈವಿಗಳು. ಮೃತ ಮಧು ಅವರ ಪತ್ನಿ ಗ್ರಾ.ಪಂ.ಸದಸ್ಯೆ ಮಂಜುಳಾ (32) ಹಾಗೂ ಪದ್ಮಮ್ಮನ ಮಗ ನವೀನ್ (26) ತೀವ್ರವಾಗಿ ಗಾಯಗೊಂಡು ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತ ಮಧು ತನ್ನ ಪತ್ನಿಯೊಂದಿಗೆ ಭೇರ್ಯದಿಂದ ಗಂಧನಹಳ್ಳಿ ಗ್ರಾಮಕ್ಕೆ ಬೈಕ್ ನಲ್ಲಿ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಹಾಸನ ಡಿಪೋಗೆ ಸೇರಿದ ಕೆ.ಎಸ್.ಆರ್.ಟಿ.ಸಿ ಬಸ್ ಹಾಸನ ಕಡೆಯಿಂದ ಮೈಸೂರಿಗೆ ಹೋಗುವಾಗ ಬೈಕ್ ಸವಾರರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ನಂತರ (ಕೆ.ಆರ್.ನಗರ ಕಡೆಯಿಂದ) ಎದರುಗಡೆಯಿಂದ ಇನ್ನೊಂದು ಬೈಕ್ ನಲ್ಲಿ ಬರುತ್ತಿದ್ದ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಹಾರೋಹಳ್ಳಿ ಗ್ರಾಮದ ನವೀನ ಮತ್ತು ಅವರ ತಾಯಿ ಪದ್ಮಮ್ಮ ಅವರಿಗೆ ಡಿಕ್ಕಿ ಹೊಡೆದಿದೆ. ನವೀನ್ ತಮ್ಮ ಲಗ್ನಪತ್ರಿಕೆ ಹಂಚಲು ಚಿಕ್ಕವಡ್ಡರಗುಡಿ ಗ್ರಾಮದ ಸಂಬಂಧಿಕರ ಮನೆಗೆ ಹೋಗುತ್ತಿದ್ದರು. ಘಟನೆಯಿಂದಾಗಿ ಗಂಧನಹಳ್ಳಿ ಗ್ರಾಮದ ಮಧು ಹಾಗೂ ಪದ್ಮಮ್ಮ ಮೃತಪಟ್ಟಿದ್ದಾರೆ. ಮಂಜುಳಾ ಮತ್ತು ಮದುವೆ ಗಂಡು ನವೀನ ತೀವ್ರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತ ನಡೆದ ಸುದ್ದಿ ತಿಳಿದ ಕೂಡಲೇ ಮೃತ ಮಧು ಸಂಬಂಧಿಕರು ಹಾಗೂ ಗಂಧನಹಳ್ಳಿ ಗ್ರಾಮಸ್ಥರು ಸ್ಥಳದಲ್ಲಿ ಕೆಲವು ಸಮಯ ಪ್ರತಿಭಟನೆ ನಡೆಸಿದರು. ಇದರಿಂದ ಹಾಸನ-ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯುಂಟಾಯಿತು. ಘಟನೆ ಬಳಿಕ ಬಸ್ಸನ್ನು ಸ್ಥಳದಲ್ಲಿಯೇ ಬಿಟ್ಟು ಬಸ್ ಚಾಲಕ ಮತ್ತು ನಿರ್ವಾಹಕ ಪರಾರಿಯಾಗಿದ್ದಾರೆ. ಈ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈ ಕೊಂಡಿದ್ದಾರೆ.












Click it and Unblock the Notifications