KRS Dam Water level today: 104 ಅಡಿ ದಾಟಿದ ಬೆಂಗಳೂರು, ಮೈಸೂರು, ಮಂಡ್ಯ ಜೀವನಾಡಿ
ಮೈಸೂರು, ಜುಲೈ, 26: ಭಾರೀ ಮಳೆ ಹಿನ್ನೆಲೇ ಈಗಾಗಲೇ ರಾಜ್ಯದ ಬಹುತೇಕ ಜಲಾಶಯಗಳ ನೀರಿನ ಮಟ್ಟ ಹೆಚ್ಚಾಗುತ್ತಲೇ ಇದೆ. ಹಾಗೆಯೇ ಮೈಸೂರು, ಮಂಡ್ಯ ಹಾಗೂ ಬೆಂಗಳೂರಿನ ಜೀವನಾಡಿಯಾಗಿರುವ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಇದೀಗ 104 ಅಡಿ ದಾಟಿದ್ದು, ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದಂತಾಗಿದೆ.
ಕೊಡಗು, ಕೇರಳದ ವೈನಾಡಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಕೆಆರ್‌ಎಸ್ ಜಲಾಶಯದಲ್ಲಿ 12 ಅಡಿ ನೀರು ಕೇವಲ ಮೂರು ದಿನದಲ್ಲಿ ತುಂಬಿದೆ. ಕಳೆದ ವರ್ಷ ಜೂನ್‌ನಲ್ಲೇ 100 ಅಡಿ ತಲುಪುತ್ತಿದ್ದ ಕನ್ನಂಬಾಡಿ ಕಟ್ಟೆ ಈ ವರ್ಷ ಜುಲೈ ಮೂರನೇ ವಾರಾಂತ್ಯದಲ್ಲಿ 100 ಅಡಿ ದಾಟಿದೆ. ತಡವಾಗಿಯಾದರೂ ನೀರಿನ ಮಟ್ಟ ಹೆಚ್ಚಾಗಿರುವುದರಿಂದ ಇಲ್ಲಿನ ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ರೈತರ ಮುಖದಲ್ಲಿ ಮಂದಹಾಸ
ಕಾವೇರಿ ಕೊಳ್ಳದ ಭಾಗದ ರೈತರು ಮಳೆಯಿಲ್ಲದೆ ಪರಿತಪಿಸುವಂತಾಗಿತ್ತು. ಬೆಳೆಗಳು ನೀರಿಲ್ಲದೆ ಒಣಗುತ್ತಿದ್ದವು. ನದಿ, ಕಾಲುವೆ ಭಣಗುಡುತ್ತಿದ್ದವು. ಆದ್ದರಿಂದ ಕಾಲುವೆಗಳಿಗೆ ನೀರು ಹರಿಸುವಂತೆ ರೈತರು ಒತ್ತಾಯಿಸಿದ್ದರು. ಮೇ 29ರಂದು ಕೆಆರ್‌ಎಸ್ ನೀರಿನ ಮಟ್ಟ 79.72 ಅಡಿಗೆ ಕುಸಿದಿತ್ತು. ಹೀಗಾಗಿ ಹಾಸನದ ಹೇಮಾವತಿ ಜಲಾಶಯದಿಂದ ಕನ್ನಂಬಾಡಿ ಕಟ್ಟೆಗೆ ನೀರು ಹರಿಸಿ, ಒಂದು ವಾರಗಳ ಕಾಲ ನೀರು ಕೊಡಲಾಗಿತ್ತು. ಇದರಿಂದ ಮತ್ತೆ ಜೂನ್ 24ರಂದು 77.67 ಅಡಿಗೆ ಕುಸಿದಿತ್ತು. ಹಾಗಾಗಿ ಸರ್ಕಾರ ಕುಡಿಯುವ ನೀರಿಗೆ ಆದ್ಯತೆ ನೀಡುವಂತೆ ಆದೇಶ ನೀಡಿತ್ತು.
ಜಲಾಶಯಕ್ಕೆ ಹರಿದುಬಂದ ನೀರು
ಈ ಬಾರಿ ಮುಂಗಾರು ಕ್ಷೀಣಿಸಿದ್ದರಿಂದ ವಾಡಿಕೆಯಂತೆ ಮಳೆ ಆಗಿರಲಿಲ್ಲ. ಈ ಮಧ್ಯೆ ಜುಲೈ 2ನೇ ವಾರದಲ್ಲಿ ಕೊಡಗು, ಹಾಸನ ಹಾಗೂ ವೈನಾಡು ಪ್ರದೇಶದಲ್ಲಿ ಮಳೆ ಪ್ರಮಾಣ ಸುಧಾರಿಸಿದ್ದರಿಂದ ಜಲಾಶಯಕ್ಕೆ ಸ್ವಲ್ಪಮಟ್ಟಿಗೆ ನೀರು ಹರಿದುಬಂತು. ಜುಲೈ 20ರ ವೇಳೆ ಜಲಾಶಯದ ನೀರಿನ ಮಟ್ಟವು 90.25 ಅಡಿಗೆ ಏರಿಕೆಯಾಗಿತ್ತು. ಇದೀಗ ಜುಲೈ 26ರಂದು ಬೆಳಗ್ಗೆ ವೇಳೆಗೆ ನೂರಡಿ ದಾಟಿದೆ.
ಜುಲೈನಲ್ಲಿ ಒಳಹರಿವಿನ ಪ್ರಮಾಣ ಹೆಚ್ಚಳ
ಜುಲೈ 22ರಂದು 7914 ಕ್ಯೂಸೆಕ್ ಇದ್ದ ಒಳ ಹರಿವಿನ ಪ್ರಮಾಣ ಹೊಂದಿದ್ದ ಜಲಾಶಯಕ್ಕೆ ಮಂಗಳವಾರ ಮಧ್ಯಾಹ್ನ 49,801ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕೇವಲ ಆರು ದಿನಗಳಲ್ಲಿ ಕಟ್ಟೆಗೆ 6.722 ಟಿಎಂಸಿ ಅಡಿ ನೀರು ಹರಿದುಬಂದಿದ್ದು, ನೀರಿನ ಮಟ್ಟವು ಬರೋಬ್ಬರಿ ಹತ್ತು ಅಡಿಯಷ್ಟು ಏರಿಕೆಯಾಗಿದೆ. ಇದೇ ಪ್ರಮಾಣದಲ್ಲಿ ಕೊಡಗು, ವೈನಾಡಿನಲ್ಲಿ ಮಳೆಯಾಗಿ ನೀರು ಹರಿದು ಬಂದರೆ 15ರಿಂದ 20 ದಿನಗಳಲ್ಲಿ ಕಟ್ಟೆ ಭರ್ತಿಯಾಗಲಿದೆ.
ಕಬಿನಿ ಭರ್ತಿಗೆ ಕೆಲವೇ ಅಡಿಗಳು ಮಾತ್ರ ಬಾಕಿ
ಕೇರಳದ ವೈನಾಡಿನಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಕಬಿನಿ ಜಲಾಶಯಕ್ಕೂ ಒಳಹರಿವು ಹೆಚ್ಚಿದೆ. 2284 ಅಡಿ ಸಾಮರ್ಥ್ಯ ಜಲಾಶಯದಲ್ಲಿ ಇದೀಗ 2281 ಅಡಿ ತುಂಬಿದೆ. 26,873 ಕ್ಯೂಸೆಕ್ ಒಳ ಹರಿವು ಇದೆ. ಇದರಿಂದ ರೈತರ ಬೆಳೆಗಳಿಗೆ ಯಾವುದೆ ತೊಂದರೆ ಆಗದಂತಾಗಿದೆ. ಜೊತೆಗೆ ಕುಡಿಯಲು ಸಮಸ್ಯೆ ನಿವಾರಣೆ ಆದಂತಾಗಿದೆ.












Click it and Unblock the Notifications