Kabini Reservoir: ಕಬಿನಿ ಜಲಾಶಯದೊಳಗಿರುವ ರಹಸ್ಯಗಳ ಬಗ್ಗೆ ನಿಮಗೆಷ್ಟು ಗೊತ್ತು?, ಇಲ್ಲಿದೆ ವಿವರ
ಮೈಸೂರು, ಜುಲೈ, 11: ಮುಂಗಾರು ಚುರುಕಾದ ಹಿನ್ನೆಲೆ ರಾಜ್ಯದ ಬಹುತೇಕ ಜಲಾಶಯಗಳಿಗೆ ಜೀವಬಂದಂತಾಗಿದೆ. ಹಾಗೆಯೇ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯದ ನೀರಿನ ಮಟ್ಟ ಕೊಂಚ ಏರಿಕೆಯಂದಂತಾಗಿದೆ. ಒಂದು ವೇಳೆ ಕೇರಳದ ವೈನಾಡು ವಾಪ್ತಿಯಲ್ಲಿ ಮಳೆ ಬಾರದೆ ಹೋಗಿದ್ದರೆ, ಜಲಾಶಯದ ನೀರಿನ ಮಟ್ಟ ತೀರ ಕಡಿಮೆಯಾಗಿ ಜಲಾಶಯದೊಳಗೆ ಹುದುಗಿದ್ದ ಅಚ್ಚರಿಗಳು ತೆರೆದುಕೊಳ್ಳುತ್ತಿದ್ದವೇನೋ?
ಸಾಮಾನ್ಯವಾಗಿ ನೀರಿನಿಂದ ತುಂಬಿ ತುಳುಕುವ ಜಲಾಶಯಗಳನ್ನು ನಾವೆಲ್ಲರೂ ನೋಡುತ್ತಾ ಇರುತ್ತೇವೆ. ಆದರೆ ಕೆಲವೊಮ್ಮೆ ಮಳೆಯ ಕೊರತೆಯಿಂದ ಹರಿದು ಬರುವ ನೀರಿನ ಪ್ರಮಾಣ ಕಡಿಮೆಯಾಗಿ ಜಲಾಶಯ ಖಾಲಿಯಾಗುತ್ತಾ ಹೋಗುತ್ತಿದ್ದಂತೆಯೇ ಜಲಾಶಯ ತನ್ನೊಡಲಲ್ಲಿ ಹುದುಗಿಟ್ಟ ರಹಸ್ಯವನ್ನು ಹೊರಹಾಕಿ ಬಿಡುತ್ತದೆ. ಈ ವೇಳೆ ಕಂಡು ಬರುವ ದೃಶ್ಯಗಳು ಕೆಲವೊಮ್ಮೆ ರೋಮಾಂಚನಕಾರಿ ಆಗಿರುತ್ತವೆ.

ಕೆಆತರ್‌ಎಸ್ ಜಲಾಶಯದಲ್ಲಿ ನೀರು ಕಡಿಮೆಯಾಗುತ್ತಿದ್ದಂತೆಯೇ ಕಾಣ ಸಿಗುವ ವೇಣುಗೋಪಾಲ ಸ್ವಾಮಿ ದೇವಸ್ಥಾನ, ಇನ್ನಿತರ ಪಳೆಯುಳಿಕೆಗಳು ನಮ್ಮ ಗಮನಸೆಳೆಯುತ್ತವೆ. ಹಾಗೆಯೇ ಕಬಿನಿ ಜಲಾಶಯದ ಒಡಲಲ್ಲೂ ಊರುಗಳು, ದೇಗುಲಗಳು ಹುದುಗಿ ಹೋಗಿವೆ. ಅದು ಜಲಾಶಯ ಸಂಪೂರ್ಣ ಖಾಲಿಯಾದಾಗ ಗೋಚರಿಸುತ್ತದೆ. ಆ ರೀತಿ ಆಗದಿರಲಿ ಎಂಬುದನ್ನು ಬಯಸುತ್ತಾರೆ. ಜಲಾಶಯಗಳು ತುಂಬಿ ತುಳುಕುತ್ತಿದ್ದರೆ ನಾಡಿಗೆ ಶ್ರೇಯಸ್ಸು.
ಜಲಾಶಯಲ್ಲಿ ಹುದುಗಿ ಹೋದ ಊರು ಯಾವುದು?
ಹಾಗೆನೋಡಿದರೆ ಕಬಿನಿ ಜಲಾಶಯ ಹಲವು ಬಾರಿ ನೀರಿನ ಕೊರತೆ ಅನುಭವಿಸಿದೆ. ಬೇಸಿಗೆಯಲ್ಲಿ ಜಲಾಶಯದಲ್ಲಿ ನೀರು ಖಾಲಿಯಾದರೂ ಜೂನ್ ವೇಳೆಗೆಲ್ಲ ಕೇರಳದಲ್ಲಿ ಮುಂಗಾರು ಚುರುಕಾಗುವುದರಿಂದ ವೈನಾಡು ವ್ಯಾಪ್ತಿಯಲ್ಲಿ ಮಳೆ ಸುರಿದು ಜಲಾಶಯಕ್ಕೆ ನೀರು ಹರಿದು ಬರುವುದರಿಂದ ಬಹುಬೇಗ ಜಲಾಶಯ ಭರ್ತಿಯಾಗುತ್ತದೆ. ಅದರಲ್ಲೂ ಕಳೆದ ಐದು ವರ್ಷಗಳಲ್ಲಿ ಪ್ರವಾಹೋಪಾದಿಯಲ್ಲಿ ನೀರು ಹರಿದುಬಂದಿದೆ. ಅಷ್ಟೇ ಅಲ್ಲದೆ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರಗೆ ಬಿಟ್ಟಿದ್ದರಿಂದ ತಗ್ಗು ಪ್ರದೇಶದಲ್ಲಿ ಪ್ರವಾಹ ಏರ್ಪಟ್ಟಿತ್ತು.
ಕಬಿನಿ ಜಲಾಶಯಕ್ಕೆ ಪ್ರವಾಹೋಪಾದಿಯಲ್ಲಿ ನೀರು ಹರಿದು ಬರುವುದು ಪ್ರತಿವರ್ಷವೂ ನಡೆಯುತ್ತದೆ. ಆದರೆ ಕೆಲವು ವರ್ಷಗಳ ಹಿಂದೆ ಅಂದರೆ 2013 ಮತ್ತು 2016ರಲ್ಲಿ ಮಳೆ ಕೊರತೆಯಿಂದಾಗಿ ಜಲಾಶಯದಲ್ಲಿ ನೀರು ಸಂಪೂರ್ಣ ಖಾಲಿಯಾಗಿತ್ತು. ಈ ವೇಳೆ ಹಿನ್ನೀರಿನಲ್ಲಿ ಕಂಡು ಬಂದಿದ್ದ ದೃಶ್ಯಗಳು ಅಚ್ಚರಿಯನ್ನುಂಟು ಮಾಡಿದ್ದವು.
ಅದರಲ್ಲೂ 2013ರಲ್ಲಿ ಮಾಂಕಾಳಮ್ಮ ಮತ್ತು ಭವಾನಿಶಂಕರ ದೇವಾಲಯಗಳು ಪ್ರತ್ಯಕ್ಷವಾಗಿದ್ದವು. ಈ ದೇಗುಲವಿದ್ದ ಊರು ಮತ್ತು ದೇವಾಲಯಗಳ ಬಗ್ಗೆ ಹೇಳುವುದಾದರೆ ಇಲ್ಲಿದ್ದ ಊರು ಕಿತ್ತೂರು ಎಂದು. ಇಲ್ಲಿರುವ ಮಾಂಕಾಳಮ್ಮ ದೇವಿಯು ವೈಷ್ಣವ ದೇವತೆಯಾಗಿದ್ದು, ಕೇರಳದಿಂದ ಬಂದು ಕಿತ್ತೂರಿನಲ್ಲಿ ನೆಲೆಸಿದಳು ಎಂದು ಹೇಳಲಾಗಿದೆ.
ಜಲಾಶಯದಲ್ಲಿದೆ ಹಳೆ ಕುರುಹುಗಳು
ಮೊದಲು ಈ ಊರು ಕೀರ್ತಿಪುರವಾಗಿತ್ತಂತೆ. ನಂತರ ಇದು ಕಿತ್ತೂರು ಆಯಿತೆಂಬ ಮಾತುಗಳಿವೆ. ಅಂದಿನ ಕಾಲದಲ್ಲಿ ಕಿತ್ತೂರು ಸಂಪದ್ಭರಿತ ಗ್ರಾಮವಾಗಿತ್ತಂತೆ. ಇಲ್ಲಿನ ಸಾಮಂತರು ಹತ್ತೂರು ಕೊಟ್ಟರೂ ಕಿತ್ತೂರು ಕೊಡುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಶ್ರೀಮಂತ ಗ್ರಾಮವಾಗಿತ್ತು. ನಂತರ ಕಿತ್ತೂರು ಮೈಸೂರಿನ ಯದುವಂಶಸ್ಥರ ಆಳ್ವಿಕೆಗೆ ಒಳಪಟ್ಟಿತ್ತು. ಇಲ್ಲಿರುವ ದೇಗುಲಗಳನ್ನು ಆಗಿನ ರಾಜರ ಕಾಲದಲ್ಲಿ ನಿರ್ಮಿಸಲಾಗಿದೆ.
ಇಲ್ಲಿ ಮಾಂಕಾಳಮ್ಮ ಮತ್ತು ಭವಾನಿಶಂಕರ ಸೇರಿದಂತೆ ಸಪ್ತಮಾತ್ರಿಕೆಯರಾದ ಅಕ್ಕ, ತಂಗಿಯರ ದೇವಾಲಯವಾಗಿದೆ. ಈ ದೇವಾಲಯದಲ್ಲಿ ಗಣಪತಿ, ಭೈರವ ದೇವರಿದ್ದು, ಈ ಏಳು ಗದ್ದುಗೆಗಳನ್ನು ಏಳು ಹೆಡೆಯ ಸರ್ಪಾಕೃತಿಯಲ್ಲಿ ನಿರ್ಮಿಸಲಾಗಿತ್ತು. ಈ ದೇವಿ ಪರಿವಾರ ನಾಯಕರ ಆರಾಧ್ಯ ದೇವತೆಯಾಗಿದ್ದು, ಜಲಾಶಯ ನಿರ್ಮಾಣದ ವೇಳೆ ಈ ದೇವಾಲಯದ ಪುನರ್‌ನಿರ್ಮಾಣ ಅಣೆಕಟ್ಟೆಯ ಹತ್ತಿರದಲ್ಲಿರುವ ಬಸಾಪುರದಲ್ಲಿ ಮಾಡಲಾಗಿದೆ.
ಇನ್ನು ಮಾಂಕಾಳಮ್ಮ ದೇವಸ್ಥಾನದಿಂದ ಸ್ವಲ್ಪ ಮುಂದೆ ಸಾಗಿದರೆ ಅಲ್ಲಿ ಭವಾನಿ ಶಂಕರ ದೇವಾಲಯವಿದೆ. ದೇವಾಲಯ ತೆರವು ವೇಳೆ ಈಶ್ವರ ಲಿಂಗ, ಬಸವ, ಶೃಂಗಿ ನಾಗದೇವತೆಗಳ ಮೂರ್ತಿ ಭಿನ್ನವಾಗಿವೆ. ಆದ್ದರಿಂದ ಪೂಜೆಗೆ ಅರ್ಹವಲ್ಲ ಎಂದು ಅವುಗಳನ್ನು ಅಲ್ಲಿಯೇ ಬಿಡಲಾಗಿದೆ. ಅವು ಈಗ ಜಲಾಶಯದಲ್ಲಿ ಮುಳುಗಡೆಯಾಗಿದ್ದು, ನೀರು ಸಂಪೂರ್ಣ ಇಳಿಕೆಯಾದಾಗ ಮಾತ್ರ ದರ್ಶನ ನೀಡುತ್ತವೆ.
ಜಲಾಶಯ ಭರ್ತಿಯಾಗಿದ್ದರಷ್ಟೇ ಚೆಲುವು
ಸಾಮಾನ್ಯವಾಗಿ ಕಬಿನಿ ಜಲಾಶಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ತುಂಬಿದ ಜಲಾಶಯ ಹಾಗೂ ಅದರಾಚೆಗೆ ನಿಸರ್ಗ ಸುಂದರ ಹಿನ್ನೀರಿನ ನೋಟವಷ್ಟೆ ಕಾಣಿಸುತ್ತದೆ. ಆದರೆ ಅದರೊಳಗೆ ಮುಳುಗಿ ಹೋದ ಊರುಗಳು ಮತ್ತು ಅದರ ಇತಿಹಾಸ ಗೊತ್ತೇ ಆಗುವುದಿಲ್ಲ. ಅವು ನೀರು ಕಡಿಮೆಯಾಗಿ ಯಾವತ್ತಾದರೂ ಕಾಣಿಸಿಕೊಂಡಾಗ ಮಾತ್ರ ಒಂದಷ್ಟು ಸುದ್ದಿಯಾಗುತ್ತವೆ. ಅದು ಏನೇ ಇರಲಿ ಜಲಾಶಯ ಭರ್ತಿಯಾಗಿ ನಳನಳಿಸುತ್ತಿದ್ದರೆ ಮಾತ್ರ ಚೆಂದ. ಅಷ್ಟೇ ಅಲ್ಲದೆ ನಾಡಿಗೆ ಸಮೃದ್ಧಿಯೂ ಹೌದು. ಅದು ಹಾಗೆ ಇರಬೇಕಾದರೆ ವರುಣ ಕೃಷೆ ತೋರಬೇಕಷ್ಟೆ.












Click it and Unblock the Notifications