ಕಾಂಗ್ರೆಸ್ ಮುಖ ನೋಡಿ ಅಲ್ಲ, ಗ್ಯಾರಂಟಿ ಕಾರ್ಡ್ ನೋಡಿ ಮತ ಹಾಕಿದ್ದಾರೆ; ಸಂಸದ ಪ್ರತಾಪ್ ಸಿಂಹ
2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನ ಗೆದ್ದು, ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿದೆ. ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ 5 ಗ್ಯಾರಂಟಿ ಯೋಜನೆಗಳೊಂದಿಗೆ ಹಲವು ಭರವಸೆಗಳನ್ನು ನೀಡಿತ್ತು. ಆದರೆ ಸರ್ಕಾರ ಅಸ್ತಿತ್ವಕ್ಕೆ ಒಂದು ವಾರ ಕಳೆದರೂ ಇನ್ನೂ ಯಾವುದು ಜಾರಿಗೆ ಬಂದಿಲ್ಲ.
ಇದೇ ವೇಳೆ ರಾಜ್ಯದಲ್ಲಿ ವಿದ್ಯುತ್ ಬಿಲ್, ಮಹಿಳೆಯರು ಬಸ್ ಟಿಕೆಟ್ ತೆಗೆದುಕೊಳ್ಳಲು ನಿರಾಕರಿಸುತ್ತಿದ್ದು, ಸಿಬ್ಬಂದಿಗಳ ಜೊತೆ ಜಗಳಗಳು ನಡೆಯುತ್ತಿವೆ. ಕಾಂಗ್ರೆಸ್ ಸರ್ಕಾರ ಬಂದಿದೆ, ನಾವು ಕರೆಂಟ್ ಬಿಲ್ ಕಟ್ಟಲ್ಲ, ಬಸ್ ಟಿಕೆಟ್ ತೆಗೆದುಕೊಳ್ಳುವುದಿಲ್ಲ ಎನ್ನುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಇದೇ ವೇಳೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮಾತನಾಡಿ, "ಜೂನ್ 1ರಂದಿ 200 ಯೂನಿಟ್ ಒಳಗೆ ಕರೆಂಟ್ ಬಿಲ್ ಬಂದರೆ ಕಟ್ಟಬೇಡಿ, 200 ಯೂನಿಟ್ ಮೇಲೆ ಎಷ್ಟು ಹೆಚ್ಚುವರಿ ಬಳಸುತ್ತೀರೋ ಅದಕ್ಕೆ ಮಾತ್ರ ಬಿಲ್ ಕಟ್ಟಿ," ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಗುರುವಾರ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರತಾಪ್ ಸಿಂಹ, ಕಾಂಗ್ರೆಸ್ ಮುಖ ನೋಡಿ ಯಾರು ವೋಟ್ ಹಾಕಿಲ್ಲ. ಗ್ಯಾರಂಟಿ ಕಾರ್ಡ್ ನೋಡಿ ಮತ ಹಾಕಿದ್ದಾರೆ. ನಾವು ಸೋತಿದ್ದೇವೆ, ಸತ್ತಿಲ್ಲ. ಕೊಟ್ಟ ಭರವಸೆ ಈಡೇರಿಸಿ. ಜೂನ್ 1ರ ವರೆಗೆ ಕಾಯುತ್ತೇನೆ. ಗ್ಯಾರಂಟಿಗಳಿಗೆ ಷರತ್ತು ಹಾಕಿದರೆ, ಜೂನ್ 1ರಿಂದ ರಾಜ್ಯಾದಂತ್ಯ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ರಾಜಸ್ಥಾನದಲ್ಲಿ ಈವರೆಗೆ ಯೋಜನೆಗಳು ಜಾರಿಯಾಗಿಲ್ಲ
"ರಾಜಸ್ಥಾನದಲ್ಲಿ ಕಾಂಗ್ರೆಸ್ ಇದೇ ರೀತಿಯ ಭರವಸೆ ನೀಡಿ ಅಧಿಕಾರಕ್ಕೆ ಬಂತು. ಆದರೆ, ಅಲ್ಲಿ ಈವರೆಗೆ ಯೋಜನೆಗಳು ಜಾರಿಯಾಗಿಲ್ಲ. ಸಿದ್ದರಾಮಯ್ಯ ಅಥವಾ ನಾನು ಆರ್ಥಿಕ ತಜ್ಞರಲ್ಲ. ಸಿಎಂ ಕುರ್ಚಿ ಅನ್ನುವುದು ಯಾರ ಸ್ವತ್ತೂ ಅಲ್ಲ. ಆದರೆ, ಪೊಲೀಸ್ ವ್ಯವಸ್ಥೆ ಶಾಶ್ವತವಾಗಿ ಇರುತ್ತದೆ," ಎಂದು ಪ್ರತಾಪ್ ಸಿಂಹ ಹರಿಹಾಯ್ದರು.
"ವಿಧಾನಸೌಧದಲ್ಲಿ ಕುಳಿತು ಪೊಲೀಸ್ ಅಧಿಕಾರಿಗಳಿಗೆ, ಇಲಾಖೆಗೆ ಧಮ್ಕಿ ಹಾಕುತ್ತಿದ್ದೀರಾ? ಮೊದಲು ಅದನ್ನು ನಿಲ್ಲಿಸಿ. ಫೆಬ್ರವರಿಯಲ್ಲಿ ಅಶ್ವಥ್ ನಾರಾಯಣ ನೀಡಿದ್ದ ಹೇಳಿಕೆಗೆ ಈಗ ಧಮ್ಕಿ ಹಾಕಿ ಎಫ್ಐಆರ್ ಹಾಕಿಸಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಮೈಸೂರಿನ ಅಭಿವೃದ್ಧಿಗಾಗಿ ನಾನು ಯಾರ ಕಾಲು ಬೇಕಾದರೂ ಹಿಡಿಯುತ್ತೇನೆ. ಮೈಸೂರು ಮತ್ತು ಕೊಡಗು ಜಿಲ್ಲೆಗಳ ಅಭಿವೃದ್ಧಿಗಾಗಿ ಕೈಕಾಲು ಹಿಡಿದು ಅಂಗಲಾಚುತ್ತೇನೆ. ಚುನಾವಣೆ ಬಂದಾಗ ರಾಜಕಾರಣ ಮಾಡೋಣ. ಉಳಿದ ಸಮಯದಲ್ಲಿ ಅಭಿವೃದ್ಧಿ ರಾಜಕಾರಣ ಮಾಡೋಣ," ಎಂದು ಪ್ರತಾಪ್ ಸಿಂಹ ತಿಳಿಸಿದರು.
ಈ ಕುರಿತು ಸಿಎಂ ಸಿದ್ದರಾಮಯ್ಯ ಅವರನ್ನೂ ಭೇಟಿ ಮಾಡುತ್ತೇನೆ. ಅಭಿವೃದ್ಧಿ ಪರ ಇರುವವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿ. ಅಭಿವೃದ್ಧಿ ವಿಚಾರದಲ್ಲಿ ನಾನು ಸಿಎಂ ಮನೆಗೆ ಹೋಗುತ್ತೇನೆ ಎಂದರು.
"ಇನ್ನು ವಿಧಾನಸಭಾ ಚುನಾವಣಾ ಫಲಿತಾಂಶವು ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಲ್ಲ. ದೇಶಕ್ಕೆ ಎಂತಹ ನಾಯಕ ಬೇಕು ಎಂಬುದು ಕನ್ನಡಿಗರಿಗೆ ಗೊತ್ತಿದೆ. ಗ್ಯಾರಂಟಿ ಕಾರ್ಡ್ ವಿಚಾರದಲ್ಲಿ ಬಿಜೆಪಿ ಎಚ್ಚೆತ್ತುಕೊಳ್ಳಬೇಕಿತ್ತು. ಅಂದೇ ಎಚ್ಚೆತ್ತುಕೊಂಡಿದ್ದರೆ, ಬಿಜೆಪಿಗೆ ಇವತ್ತು ಈ ಸ್ಥಿತಿ ಬರುತ್ತಿರಲಿಲ್ಲ," ಎಂದು ಸಂಸದ ಪ್ರತಾಪ್ ಸಿಂಹ ಅಭಿಪ್ರಾಯಪಟ್ಟರು.
"ಗ್ಯಾರಂಟಿ ಸ್ಕೀಂ ಪರ ನಾನಿದ್ದೇನೆ. ಆದಾಯದ ಆಧಾರದ ಮೇಲೆ ಖರ್ಚು ಮಾಡಬೇಕು ಎಂಬ ನಿಯಮ ವಿಧಾನಸಭೆಯಲ್ಲಿದೆ. ವಿತ್ತಿಯ ಹೊಣೆಗಾರಿಕೆ ಬಿಲ್ ಕರ್ನಾಟಕದಲ್ಲಿ ಪಾಸ್ ಆಗಿದೆ. ಮುಂದಿನ ತಲೆಮಾರನ್ನು ಅಪಾಯಕ್ಕೆ ತಳ್ಳಬೇಡಿ. ಗ್ಯಾರಂಟಿ ಕಾರ್ಡ್‌ನಲ್ಲಿ ಷರತ್ತು ಅನ್ವಯ ಎಂದು ಎಲ್ಲಿಯೂ ಹಾಕಿಲ್ಲ. ಎಲ್ಲಾ ಮನೆಯ ಯಜಮಾನಿಗೆ 2 ಸಾವಿರ ಕೊಡಬೇಕು. ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕೊಡಬೇಕು," ಎಂದು ಪ್ರತಾಪ್ ಸಿಂಹ ಆಗ್ರಹಿಸಿದರು.












Click it and Unblock the Notifications