ನನಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಲು ಸಿದ್ದರಾಮಯ್ಯನವರೇ ಕಾರಣ: ಮಾಜಿ ಶಾಸಕ ವಾಸು ಅಸಮಾಧಾನ
ಮೈಸೂರು, ಏಪ್ರಿಲ್, 16: ರಾಜ್ಯದಲ್ಲಿ ವಿಧಾನಸಭೆ ಚುನಾವಣಾ ಕಾವು ದನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದ್ದು, ಇದೀಗ ಟಿಕೆಟ್ ಸಿಗದವರು ಬಂಡಾಯ ಎದ್ದಿದ್ದಾರೆ. ಕೆಲವರು ಪಕ್ಷಕ್ಕೆ ರಾಜೀನಾಮೆ ನೀಡಿ ಬೇರೊಂದು ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ. ಹಾಗೆಯೆ ಚಾಮರಾಜ ಕ್ಷೇತ್ರದಿಂದ ಟಿಕೆಟ್ ಸಿಗದಿದ್ದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯನವರೇ ಕಾರಣ ಎಂದು ಮಾಜಿ ಶಾಸಕ ವಾಸು ಮೈಸೂರಿನಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ನನಗೆ ಸಿದ್ದರಾಮಯ್ಯನವರು ಟಿಕೆಟ್ ಸಿಗದಂತೆ ಮಾಡಿದ್ದಾರೆ. ನಾನು ನೇರವಾಗಿ ಮಾತನಾಡುತ್ತಿದ್ದೆ. ತಪ್ಪುಗಳನ್ನು ಪ್ರಶ್ನೆ ಮಾಡುತ್ತಿದ್ದೆ. ಕೆಲವು ವಿಚಾರಗಳನ್ನೂ ಖಂಡಿಸಿದ್ದೇನೆ. ಹೀಗಾಗಿ ನನಗೆ ಟಿಕೆಟ್ ತಪ್ಪಿಸಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಕಳೆದ ಬಾರಿ ನಾನು ಸೋಲಲು ಸಿದ್ದರಾಮಯ್ಯನವರೇ ಕಾರಣ. ಆಗ ಪಕ್ಷ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಇಲ್ಲಿ ಯಾವುದೇ ಮಾನದಂಡ ಬರಲಿಲ್ಲ. ಸಿದ್ದರಾಮಯ್ಯನವರ ಹಗೆತನಕ್ಕೆ ಅನೇಕರು ಬಲಿಯಾಗಿದ್ದಾರೆ. ನಾನು ಸೋತಿದ್ದೆ ನಿಜ, ಸಿದ್ದರಾಮಯ್ಯನವರು ಸಿಎಂ ಆಗಿಯೇ ಸೋತಿಲ್ಲವೇ? ಸಿಇಸಿ ಕಮಿಟಿಯಲ್ಲಿ ವೀರಪ್ಪ ಮೊಯ್ಲಿ ಒಬ್ಬರೇ ಇದ್ದರು. ಎಲ್ಲರೂ ನನ್ನ ಪರ ಕೆಲಸ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯ ಎರಡು ಕಡೆ ಟಿಕೆಟ್ ಕೇಳಿರಲಿಲ್ಲವೇ? ಆಗ ಒಂದು ಕಡೆ ಟಿಕೆಟ್ ಕೈ ತಪ್ಪಿಲ್ಲವೇ ಎಂದು ಪ್ರಶ್ನಿಸುವ ಮೂಲಕ ಕಿಡಿಕಾರಿದರು.
ಟಿಕೆಟ್ ಕೈ ತಪ್ಪಿದ್ದಕ್ಕೆ ಬೇಸರ ಇಲ್ಲ
ಸೋತಾಗಲೂ ನಾನು ಕುಗ್ಗಿಲ್ಲ. ನನಗಿದ್ದ ವಿಜನ್ ಈಡೇರಿಸಲು ಆಗಲಿಲ್ಲ ಅನ್ನುವ ಬೇಸರ ಇದೆ. ಹಲವು ದಿನಗಳಿಂದ ಟಿಕೆಟ್ ಬಗ್ಗೆ ವಾದ-ವಿವಾದಗಳು ನಡೆಯುತ್ತಾ ಇದ್ದವು. 45 ವರ್ಷಗಳ ರಾಜಕಾರಣದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇದ್ದರೆ ನಾನು ನಿವೃತ್ತಿಗೂ ರೆಡಿ, ದಂಡ ಕಟ್ಟಲೂ ತಯಾರಿದ್ದೇನೆ. ಕುಟುಂಬಕ್ಕಾಗಲಿ, ಪ್ರತ್ಯಕ್ಷ, ಪರೋಕ್ಷವಾಗಿ ಆಗಲಿ, ಸಾರ್ವಜನಿಕ, ಸರ್ಕಾರದ ಪ್ರಾಪರ್ಟಿಯನ್ನು ಅನಧಿಕೃತ ಮಾಡಿದ್ದರೆ ನಾನು ರಾಜೀನಾಮೆಗೆ ಸಿದ್ಧನಿದ್ದೇನೆ ಎಂದರು.
ನನಗೆ ತೃಪ್ತಿ ಇದೆ, ಎಲ್ಲಾ ಕ್ಷೇತ್ರಗಳಲ್ಲೂ ಕೆಲಸ ಮಾಡಿದ್ದೇನೆ. ಟಿಕೆಟ್ ತಪ್ಪಿಸಿದ್ದವರಿಗೆ ದೇವರು ಸನ್ಮಾರ್ಗ ಕೊಡಲಿ. ಈವರೆಗೆ ಅವಕಾಶ ಕೊಟ್ಟ ಪಕ್ಷವನ್ನು ದೂರುವುದಿಲ್ಲ. ನನಗೆ ಬಹಳ ಒತ್ತಡ ಇದೆ. ನಮ್ಮ ಪಕ್ಷಕ್ಕೆ ಬನ್ನಿ ಅಂತಾ ಹಲವರು ಕರೆಯುತ್ತಿದ್ದಾರೆ. ಎರಡು ದಿನಗಳಲ್ಲಿ ಈ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದರು.
ಅಲ್ಲದೆ ಪಕ್ಷ ಬಿಡುವುದರಿಂದ ನನಗೆ ಸಪೋರ್ಟ್ ಮಾಡಿದವರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಆದ್ದರಿಂದ ನಾನು ಪಕ್ಷ ಬಿಡುವುದಿಲ್ಲ. ಪಕ್ಷದಲ್ಲಿ ಇದ್ದುಕೊಂಡು ಅನ್ಯಾಯ ಮಾಡಿದವರನ್ನು ಖಂಡಿಸುತ್ತೇನೆ. ಟಿಕೆಟ್ ತಪ್ಪಿಸುವುದರಿಂದ ನನ್ನ ವಾಯ್ಸ್ ನಿಯಂತ್ರಣ ಮಾಡಲು ಸಾಧ್ಯವಿಲ್ಲ ಎಂದರು.
ನಾನು ಪಕ್ಷ ಬಿಟ್ಟು ಹೋಗುವುದಿಲ್ಲ
2013 ರಲ್ಲಿ ಏನೂ ಸಮಸ್ಯೆ ಇಲ್ಲದೆ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದರು. 2014ರಲ್ಲಿ ಎಂಪಿ ಚುನಾವಣೆಯಲ್ಲಿ, ಮತ್ತು 2018ರಲ್ಲಿ ಸೋತೆವು. ಆದರೆ, ಈ ಹೊಣೆಯನ್ನು ಅಂದಿನ ಮುಖ್ಯಮಂತ್ರಿಗಳು ಹೊರಬೇಕಿತ್ತು.
ನಾಯಕರ ತಪ್ಪನ್ನ ಪ್ರಶ್ನಿಸಿದ್ದೇ ನಾನು ಮಾಡಿದ್ದ ತಪ್ಪಾಯ್ತು. ನೇರವಾಗಿ ಪಕ್ಷದ ಬೆಳವಣಿಗೆ ಬಗ್ಗೆ ಹೇಳಿದ್ದೇನೆ. ಇದೇ ಕಾರಣಕ್ಕೆ ಟಿಕೆಟ್ ಮಿಸ್ ಆಗಿದೆ. ಹುಲಿ ಬಾಯಲ್ಲಿ ಮಗು ಸಿಕ್ಕಿದಂತಾಗಿದೆ. ಹೀಗಾಗಿ ಮಗುವನ್ನು ಸೂಕ್ಷ್ಮವಾಗಿ ಬಿಡಿಸಿಕೊಳ್ಳಬೇಕು ಎಂದರು.












Click it and Unblock the Notifications