Karnataka elections 2023: ವರುಣದಲ್ಲಿ ಕಾರ್ಯಕರ್ತರೇ ನನ್ನನ್ನು ಗೆಲ್ಲಿಸುತ್ತಾರೆ: ವಿ.ಸೋಮಣ್ಣ
ಮೈಸೂರು, ಏಪ್ರಿಲ್, 13: ಬಿಜೆಪಿ ಎರಡನೇ ಪಟ್ಟಿ ಘೋಷಣೆ ಆಗುತ್ತಿದ್ದಂತೆ ಇತ್ತ ವಿಧಾನಸಭೆ ಚುನಾವಣಾ ಕಾವು ಮತ್ತಷ್ಟು ಹೆಚ್ಚಾಗತೊಡಗಿದೆ. ಹಾಗೆಯೇ ಗುರುವಾರ (ಏಪ್ರಿಲ್ 13) ವರುಣ ಕ್ಷೇತ್ರದ ಅಭ್ಯರ್ಥಿ ವಿ.ಸೋಮಣ್ಣ ಮೈಸೂರಿಗೆ ಭೇಟಿ ನೀಡಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದರು.
ಮೊದಲಿಗೆ ವಿ.ಸೋಮಣ್ಣ ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು. ನಂತರ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿ ಆಶೀರ್ವಾದ ಪಡೆದುಕೊಂಡರು. ಹಾಗೆಯೇ ಸಂಜೆ ನಂಜನಗೂಡು ನಂಜುಂಡೇಶ್ವರ ದರ್ಶನ ಪಡೆಯಲಿದ್ದಾರೆ.

ನಾನು ಕ್ಷೇತ್ರದಲ್ಲಿ ಕೇವಲ ನೆಪ ಮಾತ್ರ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಕ್ಷೇತ್ರದಲ್ಲಿ ಕೇವಲ ನೆಪ ಮಾತ್ರ. ನನ್ನ ಕಾರ್ಯಕರ್ತರು, ಮುಖಂಡರೇ ನನ್ನ ದೊಡ್ಡ ಶಕ್ತಿ ಆಗಿದ್ದಾರೆ. ಇಲ್ಲಿ ಯಾವ ಮುಖಂಡರು, ಚಿಕ್ಕವರು ದೊಡ್ಡವರು ಇಲ್ಲ. ಇಲ್ಲಿ ಎಲ್ಲರೂ ಸೇರಿ ನನ್ನನ್ನು ಗೆಲ್ಲಿಸುತ್ತಾರೆ ಎಂಬ ನಂಬಿಕೆ ಇದೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂತಹ ನಾಯಕರಾದರೂ ಅವರು ಕೂಡ ನನ್ನಂತೆ ಒಬ್ಬ ಅಭ್ಯರ್ಥಿ ಅಷ್ಟೇ. ನಾನು ಹಾಗೂ ಸಿದ್ದರಾಮಯ್ಯ ಒಂದೇ ಗರಡಿಯಲ್ಲಿ ಪಳಗಿದವರು. ಪ್ರಚಾರಕ್ಕೆ ಯಾರು ಬರುತ್ತಾರೆ, ಯಾರು ಬರುವುದಿಲ್ಲ ಎಂಬ ಚರ್ಚೆ ಅನಗತ್ಯ. ಎಲ್ಲರೂ ಸೇರಿಯೇ ನನ್ನನ್ನು ವರುಣಾ ಕ್ಷೇತ್ರದಲ್ಲಿ ಗೆಲ್ಲಿಸುತ್ತಾರೆ ಎಂದು ತಿಳಿಸಿದರು.
ನಾನು ಇಲ್ಲಿ ಶಾಶ್ವತ ಅಲ್ಲ
ನನಗೆ 75 ವರ್ಷವಾದ ಮೇಲೆ ಬಿಜೆಪಿಯಲ್ಲಿ ಯಾವ ಸ್ಥಾನ ಸಿಗುತ್ತದೆ ಎಂಬುದು ನನಗೆ ಗೊತ್ತು. ನಾನು ಇಲ್ಲಿ ಶಾಶ್ವತ ಅಲ್ಲ. ಹಾಗೆಂದು ಇದು ನನ್ನ ಕೊನೆಯ ಚುನಾವಣೆ ಅಥವಾ ರಾಜಕೀಯ ನಿವೃತ್ತಿ ಅಲ್ಲ. ನಮ್ಮ ಪಕ್ಷದ ನಿಯಮಗಳಂತೆ ನಡೆದುಕೊಳ್ಳುತ್ತೇನೆ. ಪಕ್ಷದೊಳಗೆ ಯಾರಾದರೂ ಇಲ್ಲ ಸಲ್ಲದ್ದನ್ನು ಮಾತಾಡುತ್ತಾರೆ. ಅದನ್ನು ದೊಡ್ಡ ವಿಚಾರವಾಗಿ ಬಿಂಬಿಸುವ ಅಗತ್ಯವಿಲ್ಲ ಎಂದರು.

ಗೋವಿಂದರಾಜನಗರದಲ್ಲಿ ಟಿಕೆಟ್ ಸಿಗುವ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, ಗೋವಿಂದರಾಜನಗರ ಟಿಕೆಟ್ ವಿಚಾರ ಸಂಜೆಯೊಳಗೆ ಬಗೆಹರಿಯುತ್ತದೆ. ಅಲ್ಲಿಮ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ಅಲ್ಲದೇ ವರುಣದಲ್ಲಿ ಶುಕ್ರವಾರದಿಂದ ಪ್ರಚಾರ ಆರಂಭಿಸುತ್ತೇನೆ ಎಂದು ಸೋಮಣ್ಣ ಹೇಳಿದರು.
ವಿ.ಸೋಮಣ್ಣನವರನ್ನು ಕಟ್ಟಿಹಾಕಲು "ಕೈ" ರಣತಂತ್ರ
ಹಾಗೆಯೇ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ, ಬಿಜೆಪಿ ಬಿಡುಗಡೆ ಮಾಡಿದ ಮೊದಲನೇ ಪಟ್ಟಿಯಲ್ಲೇ ಸೋಮಣ್ಣ ಅವರಿಗೆ ಎರಡು ಕ್ಷೇತ್ರಗಳ ಹೊಣೆಯನ್ನು ಹೊರಿಸಲಾಗಿದೆ. ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ ಪ್ರತಿಷ್ಟೆ ಪಣಕ್ಕಿಡಲು ತೆರಳುತ್ತಿರುವ ವಸತಿ ಸಚಿವ ವಿ.ಸೋಮಣ್ಣ ಅವರನ್ನು ಕಟ್ಟಿಹಾಕಲು ಕಾಂಗ್ರೆಸ್ ರಣತಂತ್ರ ಹೆಣೆಯುತ್ತಿದ್ದು, ವರುಣಕ್ಕೆ ಹೆಚ್ಚು ತೆರಳದಂತೆ ಚಕ್ರವ್ಯೂಹ ಹೆಣೆಯುತ್ತಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಬಲ ಸ್ಪರ್ಧೆ ಮಾಡಲು ಬಿಜೆಪಿ ಸೋಮಣ್ಣಗೆ ಟಿಕೆಟ್ ಕೊಟ್ಟಿದೆ. ಆದರೆ, ವರುಣಗೆ ಸೋಮಣ್ಣ ಹೋಗಲಾರದೇ ಚಾಮರಾಜನಗರದಲ್ಲೇ ಕಟ್ಟಿಹಾಕಲು ಕಾಂಗ್ರೆಸ್ ಮುಂದಾಗಿದ್ದು, ಇದಕ್ಕೇ ಬಿಜೆಪಿ ಬಂಡಾಯವೇ ಬಂಡವಾಳವಾಗಿದೆ. ಸೋಮಣ್ಣಗೆ ಚಾಮರಾಜನಗರದ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಭಿನ್ನಮತ ಸ್ಪೋಟವಾಗಿದೆ.
ಟಿಕೆಟ್ ವಂಚಿತ ನಾಗಶ್ರೀ ಪ್ರತಾಪ್ ಅವರ ಬೆಂಬಲಿಗರು ಈಗಾಗಲೇ ಕೆರಳಿ ಕೆಂಡವಾಗಿದ್ದು, ಸಾಲುಸಾಲು ಸಭೆ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಕೆಆರ್‌ಐಡಿಎಲ್ ಅಧ್ಯಕ್ಷ ರುದ್ರೇಶ್ ಬಹಿರಂಗವಾಗಿಯೇ ಸೋಮಣ್ಣ ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಲದೇ ಸೋಮಣ್ಣನವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೇಳಿಕೇಳಿ ಚಾಮರಾಜನಗರ ಹಾಗೂ ವರುಣದಲ್ಲಿ ಲಿಂಗಾಯತ ಪ್ರಾಬಲ್ಯ ಇದ್ದು, ಸೋಮಣ್ಣ ಅವರು ಲಿಂಗಾಯತ ನಾಯಕರನ್ನು ತುಳಿಯುತ್ತಿದ್ದಾರೆ. ಯಡಿಯೂರಪ್ಪ ಬಗ್ಗೆ ಇಲ್ಲಸಲ್ಲದ ಮಾತು ಆಡುತ್ತಾರೆ ಎಂಬ ರುದ್ರೇಶ್ ಆರೋಪ ಈಗಾಗಾಲೇ ಸಮುದಾಯದ ಜನರಲ್ಲಿ ಕಿಚ್ಚು ಹೊತ್ತಿಸಿದೆ.












Click it and Unblock the Notifications