ಟಿ.ನರಸೀಪುರ: ಡಾ.ರೇವಣ್ಣ ನಾಮಪತ್ರ ಸಲ್ಲಿಕೆ, ದೀನ ದಲಿತರಿಗೆ ನೀವು ಮಾಡಿದ್ದೇನು?: ಕಾಂಗ್ರೆಸ್‌ಗೆ ಬೊಮ್ಮಾಯಿ ಪ್ರಶ್ನೆ
ಮೈಸೂರು, ಏಪ್ರಿಲ್ 17: ಮೈಸೂರು ಜಿಲ್ಲೆಯ ಟಿ.ನರಸೀಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಡಾ.ರೇವಣ್ಣನವರು ಸೋಮವಾರ ಮಧ್ಯಾಹ್ನ ನಾಮಪತ್ರ ಸಲ್ಲಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ವಿ. ಸೋಮಣ್ಣನವರು ಹಾಗೂ ಮತ್ತಿತರರು ರೇವಣ್ಣನವರಿಗೆ ಸಾಥ್ ನೀಡಿದರು. ಇದಕ್ಕೂ ಮೊದಲು ವಿ.ಸೋಮಣ್ಣನವರು ವರುಣಾದಿಂದ ನಾಮಪತ್ರ ಸಲ್ಲಿಸಿದರು.

ಇಬ್ಬರು ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನ್ನಭಾಗ್ಯ, ಭ್ರಷ್ಟಾಚಾರ, ದೀನ ದಲಿತರಿಗೆ ಆರೇಳು ದಶಕದಿಂದಲೂ ಆಡಳಿತ ಮಾಡಿದರೂ ಅಭಿವೃದ್ಧಿ ಮಾಡಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ಮೈಸೂರು ಜಿಲ್ಲೆಯ ವರುಣಾ ಹಾಗೂ ಟಿ.ನರಸೀಪುರ ಕ್ಷೇತ್ರದಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ವೇಳೆ ಸಹಸ್ರಾರು ಜನರ ಸೇರಿದ್ದರು. ಬಿಜೆಪಿಯಿಂದ ಇವೆರಡು ಕ್ಷೇತ್ರಗಳು ಇಂದು ಮನೆ ಮಾತಾಗಿವೆ ಎಂದು ಅವರು ಹೇಳಿದರು.
ರಾಜ್ಯದ ದೀನ ದಲಿತರಿಂದ ಅಧಿಕಾರದ -ಪದವಿ ಪಡೆದ ಕಾಂಗ್ರೆಸ್ ತನ್ನ ಅವಧಿಯಲ್ಲಿ ಕಾಂಗ್ರೆಸ್ ಸುಮಾರು ಏಳು ದಶಕ ಆಡಳಿತ ನಡೆಸಿದೆ. ಹಿಂದುಳಿದವರು ಇಂದಿಗೂ ಅದೇ ಸ್ಥಿತಿಯಲ್ಲಿಯೇ ಇದ್ದಾರೆ. ಕಾಂಗ್ರೆಸ್ ಅವರಿಗೆ ಅನ್ಯಾಯ ಮಾಡಿದೆ. ಈ ಸಮುದಾಯಗಳು ಅಭಿವೃದ್ಧಿಯಾಗಬೇಕು. ಅವರಿಗೆ ಸಾಮಾಜಿಕ ನ್ಯಾಯ ಸಿಗಬೇಕು ಎಂಬ ಕಾಂಗ್ರೆಸ್ ಹೇಳಿಕೆ ಕೇವಲ ಭಾಷಣಕ್ಕೆ ಸಿಮೀತವಾಗಿತ್ತು ಎಂದು ದೂರಿದರು.

ಕಾಂಗ್ರೆಸ್ ದೀನ ದಲಿತರಿಗೆ ಕೊಟ್ಟಿದ್ದು ಏನು?
ಭಾಷಣದಿಂದ ನ್ಯಾಯ ಸಿಗುವುದಿಲ್ಲ. ಹೇಳಿದ್ದನ್ನು ಮಾಡಲು ರಾಜಕೀಯ ಇಚ್ಛಾಶಕ್ತಿ ಬೇಕು. ಅದು ಬಿಜೆಪಿ ಪಕ್ಷದಲ್ಲಿದೆ. ಇಷ್ಟು ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ದೀನ ದಲಿತರಿಗೆ ಕೊಟ್ಟಿದ್ದು ಏನು?. ಮುರುಕಲು ಗುಡಿಸಲು, ಮಕ್ಕಳಿಗೆ ಬಟ್ಟೆ, ಶಿಕ್ಷಣ ಕೊಡಲು ಅವರಿಂದಾಗಲಿಲ್ಲ. ಅಷ್ಟು ವರ್ಷ ಬಿಜೆಪಿ ಆಡಳಿತ ಮಾಡಿದ್ದರೆ ಗುಡಿಸಲು ಗುಡಿಲಸಾಗಿಯೇ ಉಳಿಯುತ್ತಿರಲಿಲ್ಲ. ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತಿತ್ತು. ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿರುತ್ತಿತ್ತು ಎಂದು ಬೊಮ್ಮಾಯಿ ಟೀಕಿಸಿದರು.
ಕಾಂಗ್ರೆಸ್‌ನ ಸಿದ್ದರಾಮಯ್ಯನವರು ಅಧಿಕಾರದಲ್ಲಿದ್ದಾಗ ಅನ್ನಭಾಗ್ಯ ಯೋಜನೆಗೆ 30 ರೂಪಾಯಿ ಕೇಂದ್ರ ಬಿಜೆಪಿ ಸರ್ಕಾರವೇ ನೀಡಿದೆ. ಮೂರು ರೂಪಾಯಿ ರಾಜ್ಯ ಸರ್ಕಾರ ನೀಡಿದೆ. ಆದರೆ ಪಡಿತರ ಅಕ್ಕಿ ಗೋಧಿಯ ಮೇಲೆ ಫೋಟೋ ಮಾತ್ರ ಕಾಂಗ್ರೆಸ್‌ನ ಸಿದ್ದರಾಮಯ್ಯನವರದ್ದು. ಇದನ್ನು ತಮ್ಮ (ಕಾಂಗ್ರೆಸ್) ಅನ್ನಭಾಗ್ಯ ಎಂದು ಹೇಳುತ್ತಾರೆ ಎಂದು ಬೊಮ್ಮಾಯಿ ಗುಡುಗಿದರು.
ಚುನಾವಣೆ ವೇಳೆ 2 ಕೆ.ಜಿ. ಅಕ್ಕಿ ಹೆಚ್ಚಿಸಿದ್ದ ಕಾಂಗ್ರೆಸ್
10 ಕೇಜಿ ಅಕ್ಕಿ ಕೊಡುತ್ತಿದ್ದಾಗ ಕಾಂಗ್ರೆಸ್ ಅಧಿಕಾರಕ್ಕೆ ಬಂದೆ ಮೇಲೆ ಅದನ್ನು 5 ಕೆ.ಜಿಗೆ ಇಳಿಸಿತು. ಬಳಿಕ ಚುನಾವಣೆ ಸಮೀಪಿಸುತ್ತಿದ್ದಂತೆ ಅದನ್ನು ಮತ್ತೆ ಎರಡು ಕೆ.ಜಿ (5+2) ಹೆಚ್ಚು ಕೊಡುವುದಾಗಿ ಹೇಳಿದರು. ಅನ್ನಭಾಗ್ಯ ಬಡವರಿಗೆ ದೌರ್ಭಾಗ್ಯವಾಗಿ, ಶ್ರೀಮಂತರಿಗೆ ಸೌಭಾಗ್ಯವಾಗುತ್ತಿದೆ ಎಂದು ಅವರು ಹೇಳಿದರು.
ಬಿಜೆಪಿ ವಿರುದ್ಧ 40 ಪರ್ಸೆಂಟ್ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್‌ನ ಅವಧಿಯಲ್ಲಿ ನೀರಾವರಿ, ಸಣ್ಣ ನೀರಾವರಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ವಿವಿಧ ಇಲಾಖೆಗಳಲ್ಲಿ ಕಾಂಗ್ರೆಸ್‌ನಿಂದ ಭ್ರಷ್ಟಾಚಾರ ನಡೆದಿದೆ. ಅದನ್ನು ಮರೆಮಾಚಿ ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದರು.












Click it and Unblock the Notifications