ಇದು ನನ್ನ ಕೊನೆ ಚುನಾವಣೆ, ವರುಣ ಕ್ಷೇತ್ರದ ಜನ ಕೈಬಿಡುವುದಿಲ್ಲ: ಸಿದ್ದರಾಮಯ್ಯ
ಮೈಸೂರು, ಮೇ, 06: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಹೈವೋಲ್ಟೇಜ್ ಕ್ಷೇತ್ರವಾದ ವರುಣ ಕಣದಲ್ಲಿ ಇಂದು ಸಿದ್ದರಾಮಯ್ಯ ಅವರು ಪ್ರಚಾರ ಮಾಡಿದರು. ಇದೇ ವೇಳೆ ಮಾತನಾಡಿದ ಅವರು, ವರುಣ ಕ್ಷೇತ್ರದ ಜನತೆ ಯಾವತ್ತೂ ಜಾತಿ ಆಧಾರದಲ್ಲಿ ಮತದಾನ ಮಾಡಿಲ್ಲ. ನಾನು ಸ್ಪರ್ಧಿಸಿದ ಚುನಾವಣೆಗಳಲ್ಲಿ ಅಧಿಕ ಮತಗಳ ಅಂತರಲ್ಲಿ ಗೆಲ್ಲಿಸಿದ್ದಾರೆ. ನನ್ನ ರಾಜಕೀಯ ಜೀವನದ ಕಡೇ ಚುನಾವಣೆಯನ್ನು ವರುಣದಿಂದಲೇ ಎದುರಿಸುತ್ತಿದ್ದೇನೆ. ಹಾಗಾಗಿ ಈ ಬಾರಿಯೂ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹಿಂದಿನ ಲಿತಾಂಶಗಳೇ ಕ್ಷೇತ್ರದ ಜನತೆ ಜಾತಿವಾದಿಗಳಲ್ಲ ಎಂಬುದನ್ನು ಸಾರಿ ಹೇಳುತ್ತದೆ. ಆದರೆ ವರುಣ ಕ್ಷೇತ್ರದಲ್ಲಿ ಬಿಜೆಪಿಯವರು ಜಾತಿಗಳ ನಡುವೆ ಸಂಘರ್ಷ ಸೃಷ್ಟಿಸುತ್ತಿದ್ದಾರೆ. ಆ ಎಲ್ಲಾ ಷಡ್ಯಂತ್ರಗಳನ್ನ ಮೆಟ್ಟಿನಿಂತು ಕ್ಷೇತ್ರದ ಜನ ನನ್ನನ್ನು ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ಎರಡು ದಿನಗಳು ನಾನು ಕ್ಷೇತ್ರ ಸಂಚಾರ ಮಾಡಿ ಮತಯಾಚಿಸಿದ ಸಂದರ್ಭದಲ್ಲಿ ಜನರ ಉತ್ಸಾಹ, ಪ್ರತಿಕ್ರಿಯಿಸುವ ರೀತಿಯನ್ನು ಗಮನಿಸಿದರೆ, ನಾನು ಮೊದಲಿಗಿಂತಲೂ ಹೆಚ್ಚಿನ ಬಹುಮತದಿಂದ ಗೆಲ್ಲುವ ವಿಶ್ವಾಸ ಇದೆ ಎಂದರು.
ಹಾಗೆಯೆ ನಾನು ಬಾದಾಮಿ ಕ್ಷೇತ್ರದ ಹಾಲಿ ಶಾಸಕನಾಗಿದ್ದೇನೆ. ಇದೇ ಕ್ಷೇತ್ರದಿಂದ ಸ್ಪರ್ಧಿಸಿದಲ್ಲಿ ಸಂಚಾರಕ್ಕೆ ಧಕ್ಕೆಯಾಗುತ್ತದೆ. ಹಾಗಾಗಿ ಪದೇ ಪದೆ ಬಾದಾಮಿಗೆ ಬರಲು ಆಗುವುದಿಲ್ಲ. ನನಗೆ ಮತ ನೀಡಿದ ಜನತೆಯ ಸಮಸ್ಯೆಗೆ ಕೂಡಲೇ ಸ್ಪಂದಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಎಲ್ಲರೂ ವರುಣದಿಂದ ನಿಂತುಕೊಳ್ಳಿ ಎಂದು ಒತ್ತಾಯಿಸಿದರು.
ಅಲ್ಲದೆ ಕ್ಷೇತ್ರದ ಹಾಲಿ ಶಾಸಕ ನನ್ನ ಮಗ ಯತೀಂದ್ರ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಮನವಿಗೆ ಬೆಲೆ ಕೊಟ್ಟು ಹಾಗೂ ಕ್ಷೇತ್ರದ ಜನತೆ ನನ್ನ ಕೈಬಿಡುವುದಿಲ್ಲ ಎಂಬ ಅಚಲವಾದ ನಂಬಿಕೆಯಿಂದ ವರುಣದಿಂದಲೇ ಸ್ಪರ್ಧಿಸಿದ್ದೇನೆ ಎಂದರು.
ಮೋದಿಯಿಂದ ರಾಜ್ಯ ಬಿಜೆಪಿಗೆ ಲಾಭ ಇಲ್ಲ
ಬಿಜೆಪಿಯವರು ಮತ ಕೇಳುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ಅದಕ್ಕಾಗಿ ತಾವು ನೇರವಾಗಿ ಮತ ಕೇಳದೇ ಮೋದಿಯವರನ್ನು ಕರೆತರುತ್ತಿದ್ದಾರೆ. ಅದರಲ್ಲಿಯೂ ಹಳೆ ಮೈಸೂರು ಭಾಗವನ್ನು ಗುರಿಯಾಗಿಸಿಕೊಂಡು ಅವರು ಪ್ರಚಾರ ಸಭೆಗಳನ್ನು ಆಯೋಜಿಸುತ್ತಿದ್ದಾರೆ. ಆದರೆ ಮೋದಿ ಅವರಿಂದ ರಾಜ್ಯದಲ್ಲಿ ಬಿಜೆಪಿಗೆ ಯಾವುದೇ ಲಾಭ ಆಗುವುದಿಲ್ಲ. ಏಕೆಂದರೆ ಜನ ಸ್ಥಳೀಯ ವಿಚಾರಗಳನ್ನು ಮುಂದಿಟ್ಟುಕೊಂಡು ಚರ್ಚೆ ಮಾಡುತ್ತಾರೆ ಎಂದರು.
ಮೋದಿ ರೋಡ್ ಶೋ ವಿರುದ್ಧ ಎಚ್‌ಡಿಕೆ ಗುಡುಗು
ಮತ್ತೊಂದೆಡೆ ಹನೂರಿನಲ್ಲಿ ಇಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಚಾರ ನಡೆಸಿದರು. ಈ ವೇಳೆ ಬೆಂಗಳೂರಿನ ಮೋದಿ ರೋಡ್ ಶೋ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ಮೋದಿ ಅವರು ಯಾವ ಪುರುಷಾರ್ಥಕ್ಕೆ ರೋಡ್ ಶೋ ಮಾಡುತ್ತಿದ್ದಾರೆ. ಜನರಿಗೆ ತೊಂದರೆ ಕೊಟ್ಟು ರೋಡ್ ಶೋ ಮಾಡುತ್ತಿದ್ದಾರೆ. ಇದರಿಂದ ದುಡಿಯುವ ಜನ ಬೀದಿ ಪಾಲಾಗುತ್ತಿದ್ದಾರೆ ಎಂದು ಗುಡುಗಿದರು.
ಅಲ್ಲದೆ ನಾಳೆ ನೀಟ್ ಪರೀಕ್ಷೆ ಬರೆಯುವ ಮಕ್ಕಳ ಮೇಲೆ ಪ್ರಧಾನಿ ಅವರ ರೋಡ್ ಶೋ ಪರಿಣಾಮ ಬೀರುತ್ತದೆ. ಮನೆ ಬಾಗಿಲು ತೆಗೆಯಬೇಡಿ, ಓಣಿಯಲ್ಲಿ ಓಡಾಡಬೇಡಿ ಅಂತಾರೆ. ಹಾಗಿದರೆ ರೋಡ್ ಶೋ ಯಾಕೆ ಮಾಡುತ್ತೀರಾ? ಯಾರೋ ಕೆಲವರನ್ನು ತುಂಬಿಕೊಬಂದು ನಿಲ್ಲಿಸಿ ಮೋದಿ ಮೋದಿ ಎಂದು ಕೂಗಿಸಿಕೊಂಡು ಹೋಗುತ್ತಾರೆ. ಇದರಿಂದ ಜನರಿಗೆ ತೊಂದರೆಯೇ ಹೊರತು ಬಿಜೆಪಿಗೆ ಲಾಭ ಇಲ್ಲ ಎಂದರು.
ಇನ್ನು ರಾಜ್ಯದಲ್ಲಿ ಕಳೆದ ಎರಡು ತಿಂಗಳಿನಿಂದ ಬರುತ್ತಿರುವ ಸಮೀಕ್ಷೆಗಳು ಕೃತಕವಾಗಿವೆ. ರಾಷ್ಟ್ರೀಯ ಪಕ್ಷಗಳು ಹಣ ಕೊಟ್ಟು ಜನರ ಭಾವನೆಗಳನ್ನು ಕದಡುವ ಕೆಲಸವನ್ನು ಮಾಡುತ್ತಿವೆ. ಈ ಸಮೀಕ್ಷೆಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಇವು ರಾಷ್ಟ್ರೀಯ ಪಕ್ಷಗಳ ಹಣಕ್ಕೋಸ್ಕರ ಮಾಡಿರುವ ಸಮೀಕ್ಷೆಗಳಾಗಿವೆ. ಇವೆಲ್ಲ ಈ ಬಾರಿ ಉಲ್ಟಾ ಹೊಡೆಯುತ್ತವೆ. ಯಾವುದೇ ರಾಷ್ಟ್ರೀಯ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗುವುದಿಲ್ಲ. ಹಾಗೆಯೇ ಸಮೀಕ್ಷೆಗಳಲ್ಲಿ ಜೆಡಿಎಸ್‌ಗೆ ಕಡಿಮೆ ಸ್ಥಾನ ಕೊಟ್ಟಿರುವವರು ಆನಂದಪಡಲಿ.












Click it and Unblock the Notifications