Dalit vs Siddaramaiah: ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ದಲಿತ ಯುವಕರ ಆಕ್ರೋಶ; ವಿಡಿಯೋ
2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ದಿನಾಂಕ ಸಮೀಪಿಸುತ್ತಿದ್ದಂತೆಯೇ ರಾಜ್ಯದಲ್ಲಿ ಪ್ರಚಾರದ ಭರಾಟೆ ಜೋರಾಗಿ ನಡೆಯುತ್ತಿದೆ. ಮತದಾರದ ಓಲೈಕೆಗೆ ಮುಂದಾಗಿರುವ ಅಭ್ಯರ್ಥಿಗಳು ಚುನಾವಣೆ ಗೆಲ್ಲಲು ಹಲವು ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ.
SC community voters of Varuna ask tough questions -
— BJP Karnataka (@BJP4Karnataka) April 24, 2023
1. Why have you left SCs of Varuna deprived of jobs?
2. Why don’t you allow SC youth to come near you while campaigning?@siddaramaiah, will you answer these questions? Can you?#AntiDalitCongress #CongressGuaranteePakka420 pic.twitter.com/YF1r380WdV
ಇದೇ ವೇಳೆ, ರಾಜ್ಯದಲ್ಲಿ ಹೈ-ವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿರುವ ವರುಣಾ ಕ್ಷೇತ್ರದಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ ಪ್ರಾರಂಭವಾಗಿದೆ. ಕಾಂಗ್ರೆಸ್‌ನಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಿದ್ದರೆ, ಬಿಜೆಪಿಯಿಂದ ವಿ. ಸೋಮಣ್ಣ ಸವಾಲು ಒಡ್ಡಿದ್ದಾರೆ. ಇನ್ನು ಜೆಡಿಎಸ್‌ನಿಂದ ಭಾರತಿ ಶಂಕರ್ ಪೈಪೋಟಿ ನಿಡುತ್ತಿದ್ದಾರೆ.

ವರುಣಾ ಕ್ಷೇತ್ರಕ್ಕೆ ವಿ. ಸೋಮಣ್ಣ ಎಂಟ್ರಿಯಿಂದ ಮಾಜಿ ಸಿಎಂ ಸಿದ್ದರಾಮಯ್ಯಗೆ ಸೋಲಿನ ಭೀತಿ ಎದುರಾಗಿದೆ. ನಾಮಪತ್ರ ಸಲ್ಲಿಕೆಗೆ ಮಾತ್ರ ಕ್ಷೇತ್ರಕ್ಕೆ ಬರುತ್ತೇನೆ. ಉಳಿದೆಲ್ಲವನ್ನು ಯತೀಂದ್ರ ನೋಡಿಕೊಳ್ಳುತ್ತಾನೆ ಎಂದಿದ್ದ ಸಿದ್ದರಾಮಯ್ಯ, ಎರಡೇ ದಿನಕ್ಕೆ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದರು.
ಇದೀಗ ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ವಿರುದ್ಧ ದಲಿತ ಯುವಕರು ಸಿಡಿದೆದ್ದಿದ್ದಾರೆ. ಕ್ಷೇತ್ರದ ತುಂಬಲ ಗ್ರಾಮದ ಯುವಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಸಿದ್ದರಾಮಯ್ಯ ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಹೆಚ್ಚು ಕಡೆ ತಮ್ಮ ಜನಾಂಗದ ಪಿಡಿಓಗಳನ್ನು ನೇಮಿಸಿಕೊಂಡಿದ್ದಾರೆ ಎಂದು ಯುವಕರ ಗುಂಪು ತಿರುಗಿ ಬಿದ್ದಿದೆ.
ಕಸಬಾ ಹೋಬಳಿಯಲ್ಲಿ ಸಿದ್ದರಾಮಯ್ಯ ಸಾಧನೆ ಬಗ್ಗೆ ಯುವಕರು ಪ್ರಶ್ನೆ ಮಾಡಿದ್ದು, "ನಾವು ಕಳೆದ 20-25 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇವೆ. ಕ್ಷೇತ್ರದಲ್ಲಿ ಒಂದು ಫ್ಯಾಕ್ಟರಿ, ಒಂದು ಟೋಲ್ ಮತ್ತು ಒಂದು ಕೆಇಬಿ ಆಗೈತೆ. ಸಿದ್ದರಾಮಯ್ಯ ಜಾತಿ ರಾಜಕಾರಣದಿಂದ ದಲಿತ ಯುವಕರಿಗೆ ಎಲ್ಲಿಯೂ ಕೆಲಸ ನೀಡಿಲ್ಲ. ಯಾಕೇ ದಲಿತರಲ್ಲಿ ಶಿಕ್ಷಣವಂತರು ಇಲ್ಲವೇ, ಒಬ್ಬ ದಲಿತರಿಗೂ ಕೆಲಸ ಯಾಕೆ ಕೊಡ್ಸಿಲ್ಲ," ಎಂದು ಪ್ರಶ್ನಿಸಿದ್ದಾರೆ.

"ದಲಿತರಿಗೆ ಮಾನವೀಯತೆ ತೋರಿಸೋದು ಯಾವಾಗ? ಬರೀ ಚುನಾವಣೆ ಬಂದಾಗ ದಲಿತರತ್ರ ಬರ್ತಾರೆ. ದಲಿತರು ಮುಖ್ಯಮಂತ್ರಿ ಆಗಲು ಅವಕಾಶ ಯಾಕೆ ನೀಡ್ತಿಲ್ಲ. ದಲಿತ ಸಿಎಂ ಅಂತಾ ಬರೀ ನೆಪಮಾತ್ರಕ್ಕೆ ಹೇಳುತ್ತಾರೆ. ದಲಿತ ವೋಟ್ ಪಡೆದು ತಾವೇ ಅಧಿಕಾರ ಅನುಭಿಸುತ್ತಾರೆ," ಎಂದು ಆಕ್ರೋಶ ಹೊರಹಾಕಿದರು.
"ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಜೊತೆಯಲ್ಲಿದ್ದ ಕಾರ್ಯಕರ್ತರಿಗೆ ಮೊದಲು ಒಂದು ಗುಂಟೆ ಜಾಗ ಇರಲಿಲ್ಲ. ಈಗ ಹತ್ತತ್ತು ಎಕರೆ ಜಮೀನು ಮಾಡಿಕೊಂಡಿದ್ದಾರೆ, ಕೋಟಿ ಕೋಟಿ ಹಣ ಮಾಡ್ಕೊಂಡಿದ್ದಾರೆ. ಸಮಾನ್ಯ ಕಾರ್ಯಕರ್ತರಿಗಾಗಲಿ, ದಲಿತರಿಗಾಗಲಿ ಏನೊಂದು ಕೆಲಸ ಮಾಡಿಲ್ಲ. ಯುವಕರನ್ನು ಕಡೆಗಣಿಸಿ ತಮ್ಮ ಜೊತೆ ಇರುವವರನ್ನು ಬೆಳೆಸುತ್ತಿದ್ದಾರೆ," ಎಂದು ನೋವು ತೋಡಿಕೊಂಡರು.
ಸಿದ್ದರಾಮಯ್ಯ ಅಹಿಂದ ನಾಯಕನಲ್ಲ
ವರುಣಾ ಕ್ಷೇತ್ರದ ಪ್ರತಿಯೊಂದು ಪಂಚಾಯಿತಿಯಲ್ಲಿ ತಮ್ಮದೇ ಸಮುದಾಯದವರನ್ನು ನೇಮಿಸಿಕೊಂಡಿರುವ ಸಿದ್ದರಾಮಯ್ಯ ಕುರುಬ ಸಮುದಾಯದವರಿಗೆ ಮಾತ್ರ ಕೆಲಸ ಮಾಡಿಕೊಟ್ಟಿದ್ದಾರೆ. ದಲಿತರಿಗೆ ಯಾವುದೇ ಅವಕಾಶ ಕೊಟ್ಟಿಲ್ಲ. ಅಹಿಂದ ಅನ್ನೋದು ಅವರ ಹೇಳಿಕೆಯಲ್ಲಿ ಮಾತ್ರ ಇದೆ. ಕುರುಬು ಸಮುದಾಯದ ಹೊರತು ಬೇರೆ ಯಾರಿಗೂ ಕೆಲಸಗಳನ್ನು ಮಾಡಿಕೊಡಲ್ಲ. ಸಿದ್ದರಾಮಯ್ಯ ಅಹಿಂದ ನಾಯಕನೆಂಬುದೆಲ್ಲ ಸುಳ್ಳು ಎಂದು ಯುವಕರು ಆರೋಪಿಸಿದ್ದಾರೆ.
ನಮ್ಮನ್ನ ಹತ್ರಕ್ಕೂ ಬಿಟ್ಕೊಳ್ಳಲ್ಲ
2013 ಮತ್ತು 2018ರಲ್ಲಿದ್ದ ಸಿದ್ದರಾಮಯ್ಯ ಬೇರೆ. ಈಗಿರುವ ಸಿದ್ದರಾಮಯ್ಯನೇ ಬೇರೆ. ಲಿಂಗಾಯತ, ದಲಿತ, ಉಪ್ಪಾರರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಲ್ಲ. ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತರಾಗುತ್ತಿದ್ದಾರೆ. ನಮಗೆ ಬದಲಾವಣೆ ಬೇಕಿದ್ದು, ಬಿಜೆಪಿ ಅಭ್ಯರ್ಥಿಯಾಗಿರುವ ವಿ.ಸೋಮಣ್ಣ ಅವರನ್ನು ಬೆಂಬಲಿಸುತ್ತೇವೆ. ಈ ಬಾರಿ ಚುನಾವಣೆಯಲ್ಲಿ ಸೋಮಣ್ಣ ಗೆಲ್ಲುತ್ತಾರೆ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ನಾಮಪತ್ರ ವಾಪಸ್ ಪ್ರಕ್ರಿಯೆ ಕೊನೆಗೊಂಡಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications