Kabini: ಕಬಿನಿ ಹಿನ್ನೀರಿನಲ್ಲಿ ಪಳೆಯುಳಿಕೆ ಪತ್ತೆ: ಜನ ಭಯಪಡುತ್ತಿರುವುದೇಕೆ?
ಮೈಸೂರು, ಮೇ 05: ಕಳೆದೊಂದು ದಶಕದಲ್ಲಿ ಮೂರು ಬಾರಿ ಕಬಿನಿ ಜಲಾಶಯದ ನೀರಿನ ಮಟ್ಟ ಪಾತಾಳಕ್ಕೆ ಕುಸಿದಿದ್ದು, ಜಲಾಶಯದಲ್ಲಿ ಹುದುಗಿ ಹೋದ ಪಳೆಯುಳಿಕೆ ಹೊರಪ್ರಪಂಚಕ್ಕೆ ಕಾಣುವಂತಾಗಿದೆ. ಇದು ಈ ಬಾರಿಯ ಬರದ ಭೀಕರತೆಯನ್ನು ಎತ್ತಿ ತೋರಿಸುತ್ತಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಹೇಗಪ್ಪಾ ಎಂಬ ಭಯ ಜನವಲಯದಲ್ಲಿ ಶುರುವಾಗಿದೆ.
ಸಾಮಾನ್ಯವಾಗಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಬಹುಬೇಗ ಭರ್ತಿಯಾಗುತ್ತಿದ್ದ ಕಬಿನಿ ಜಲಾಶಯದಲ್ಲಿ ಬೇಸಿಗೆಯಲ್ಲಿಯೂ ನೀರು ತುಂಬಿರುತ್ತಿತ್ತು. ಆದರೆ ಈ ಬಾರಿ ಬರದ ಭೀಕರತೆಯಿಂದ ಜಲಾಶಯದಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕುಸಿತ ಕಾಣುತ್ತಿದ್ದು, 60 ಅಡಿಗೆ ತಲುಪಿದೆ. ಹೀಗಾಗಿ ಕಬಿನಿ ನೀರನ್ನು ನಂಬಿದವರು ಬಾಯಿ ಬಾಯಿ ಬಡಿದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದುವರೆಗೆ ಭರ್ತಿಯಾಗಿದ್ದ ಜಲಾಶಯವನ್ನು ನೋಡಲು ಬರುತ್ತಿದ್ದ ಪ್ರವಾಸಿಗರು ಖಾಲಿಯಾದ ಜಲಾಶಯವನ್ನು ವೀಕ್ಷಿಸಲು ಮುಂದಾಗುತ್ತಿದ್ದಾರೆ. ಕಾರಣ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ದೇಗುಲ ಸೇರಿದಂತೆ ಇನ್ನಿತರ ಪಳೆಯುಳಿಕೆಗಳು ಕಾಣಸಿಗುತ್ತಿದ್ದು, ಇವುಗಳತ್ತ ಅಚ್ಚರಿಯ ನೋಟ ಬೀರುತ್ತಿದ್ದಾರೆ. ಅಷ್ಟೇ ಅಲ್ಲದೆ ಬರಿದಾದ ಜಲಾಶಯದ ಹಿನ್ನೀರಿನ ದೃಶ್ಯ ಎಲ್ಲೋ ಒಂದು ಕಡೆ ಮನಸ್ಸಿಗೆ ನೋವುಂಟು ಮಾಡುತ್ತಿದೆ. ಆತಂಕವನ್ನು ಹುಟ್ಟು ಹಾಕುತ್ತಿದೆ.
ನೀರಿಲ್ಲದೆ ಬೋರಲಾದ ಕಬಿನಿ
ಕಳೆದ ಆರು ವರ್ಷಗಳಿಂದ ಉತ್ತಮ ಮಳೆಯಾಗುತ್ತಿದ್ದುದರಿಂದ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರನ್ನು ಹರಿಯಲು ಬಿಟ್ಟಿದ್ದರಿಂದ ಪ್ರವಾಹ ಸೃಷ್ಠಿಯಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಆದರೂ ಅದರ ನಡುವೆ ಜಲಾಶಯದಿಂದ ನದಿಗೆ ಹರಿಯುವ ನೀರನ್ನು ನೋಡಲು ಜನ ಮುಗಿಬೀಳುತ್ತಿದ್ದರು. ಆದರೆ ಕಳೆದ ವರ್ಷ ಮುಂಗಾರು ಕೈಕೊಟ್ಟ ಕಾರಣ ಈ ಬಾರಿ ಜಲಾಶಯ ನೀರಿಲ್ಲದೆ ಬೋರಲಾಗಿದೆ.
ಇಂತಹದೊಂದು ಪರಿಸ್ಥಿತಿ ಕಳೆದೊಂದು ದಶಕದಲ್ಲಿ ಮೂರು ಬಾರಿ ನಿರ್ಮಾಣವಾಗಿದೆ. 2013ರಲ್ಲಿ ವರುಣ ಅವಕೃಪೆ ತೋರಿದ್ದ ವೇಳೆ ಕಬಿನಿ ಜಲಾಶಯದ ನೀರು ಖಾಲಿಯಾಗಿತ್ತು. ನೀರು ಖಾಲಿಯಾಗುತ್ತಿದ್ದಂತೆಯೇ ಜಲಾಶಯದ ಒಡಲಾಳದಲ್ಲಿದ್ದ ಹುದುಗಿ ಹೋಗಿದ್ದ ಮಾಂಕಾಳಮ್ಮ ಮತ್ತು ಭವಾನಿಶಂಕರ ದೇವಾಲಯಗಳು ಪ್ರತ್ಯಕ್ಷವಾಗಿದ್ದವು. ಇದಾದ ಬಳಿಕ 2016ರಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದಾಗ ಇಂತಹದ್ದೇ ದೃಶ್ಯಗಳು ಗೋಚರಿಸಿದ್ದವು.

ಜಲಾಶಯದಿಂದ ಎದ್ದು ಬಂದ ದೇಗುಲ
ಇದೀಗ ಮತ್ತೆ 2024ರಲ್ಲಿ ಕಬಿನಿ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ನೀರಿನಲ್ಲಿ ಮುಳುಗಡೆಯಾಗಿದ್ದ ಪಳೆಯುಳಿಕೆಗಳು ಹೊರಬರಲಾರಂಭಿಸಿದ್ದು, ಜಲಾಶಯದೊಳಗೆ ಹುದುಗಿ ಹೋದ ಗ್ರಾಮವೊಂದರ ಕಥೆಯನ್ನು ತೆರೆದಿಡುತ್ತಿದೆ. ಅಷ್ಟೇ ಅಲ್ಲದೆ ಇತಿಹಾಸ ಸೇರಿದ ಊರನ್ನು ಮತ್ತೆ ನೆನಪಿಸುತ್ತಿದೆ. ನೀರಿನಲ್ಲಿ ಮುಳುಗಿ ಹೋದ ದೇವಾಲಯದ ಪೈಕಿ ಮಾಂಕಾಳಮ್ಮ ದೇಗುಲವು ಒಂದಾಗಿದ್ದು, ಇದು ವೈಷ್ಣವ ದೇವತೆಯಾಗಿದ್ದು, ಕೇರಳದಿಂದ ಬಂದು ಕಿತ್ತೂರಿನಲ್ಲಿ ನೆಲೆಸಿದಳು ಎಂದು ಹೇಳಲಾಗುತ್ತಿದೆ.
ಪರಿವಾರ ನಾಯಕರ ಆರಾಧ್ಯ ದೇವತೆಯಾಗಿರುವ ಮಾಂಕಾಳಮ್ಮನಿಗೆ ನಿರ್ಮಿಸಿದ ದೇಗುಲವು ಸಪ್ತಮಾತ್ರಿಕೆಯರಾದ ಅಕ್ಕ ತಂಗಿಯರ ದೇವಾಲಯವಾಗಿದೆ. ಈ ದೇವಾಲಯದಲ್ಲಿ ಗಣಪತಿ, ಭೈರವ ದೇವರಿದ್ದು, ಈ ದೇವಾಲಯದ ಏಳು ಗದ್ದುಗೆಗಳನ್ನು ಏಳು ಹೆಡೆಯ ಸರ್ಪಾಕೃತಿಯಲ್ಲಿ ನಿರ್ಮಿಸಲಾಗಿತ್ತು. ದೇಗುಲ ನೀರಿನಲ್ಲಿ ಮುಳುಗಿದ್ದರಿಂದ ಈ ದೇವಾಲಯದ ಪುನರ್ ನಿರ್ಮಾಣ ಅಣೆಕಟ್ಟೆಯ ಹತ್ತಿರದಲ್ಲಿರುವ ಬಸಾಪುರದಲ್ಲಿ ಮಾಡಲಾಗಿದೆ.
ಶ್ರೀಮಂತವಾಗಿದ್ದ ಊರು ಮುಳುಗಡೆ
ನೀರಿನಲ್ಲಿ ಮುಳುಗಡೆಯಾಗಿರುವ ದೇವಾಲಯ ಇರುವ ಸ್ಥಳ ಮೊದಲು ಕೀರ್ತಿಪುರ ಎಂದು ಹೆಸರುವಾಸಿಯಾಗಿತ್ತು. ರಾಜರ ಆಳ್ವಿಕೆಯಲ್ಲಿ ಇಲ್ಲಿ ದೇವಾಲಯ ನಿರ್ಮಾಣ ಮಾಡಲಾಗಿದ್ದು, ಈ ದೇವಾಲಯದಲ್ಲಿ ಈಶ್ವರಲಿಂಗ, ಬಸವ, ಶೃಂಗಿ ನಾಗದೇವತೆಗನ್ನು ಪ್ರತಿಷ್ಠಾಪಿಸಲಾಗಿತ್ತು. ಜಲಾಶಯ ನಿರ್ಮಾಣವಾದ ಬಳಿಕ ಇದೆಲ್ಲವು ಮುಳುಗಡೆಯಾಗಿತ್ತು. ಈ ದೇವಸ್ಥಾನದಲ್ಲಿರುವ ಮೂರ್ತಿಗಳು ಭಿನ್ನವಾಗಿರುವುದರಿಂದ ಪೂಜೆಗೆ ಅರ್ಹವಲ್ಲ. ಆದ್ದರಿಂದ ಈ ದೇವಸ್ಥಾನವನ್ನು ಅಣೆಕಟ್ಟೆಯಿಂದ ತೆರವುಗೊಳಿಸಿಲ್ಲ ಹೀಗಾಗಿ ಅಲ್ಲಿಯೇ ಉಳಿದು ಹೋಗಿದೆ.

ಕಿತ್ತೂರು ಗ್ರಾಮದ ಇತಿಹಾಸವನ್ನು ತಿರುವಿ ಹಾಕಿದರೆ ಆ ಕಾಲದಲ್ಲಿ ಕಿತ್ತೂರು ವೈಭವದಿಂದ ಕೂಡಿದ ಸಂಪದ್ಭರಿತ ಗ್ರಾಮವಾಗಿತ್ತಂತೆ. ಇಲ್ಲಿನ ಸಾಮಂತರು ಹತ್ತೂರು ಕೊಟ್ಟರೂ ಕಿತ್ತೂರು ಕೊಡುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಶ್ರೀಮಂತ ಗ್ರಾಮವಾಗಿರುವಂತೆ ನೋಡಿಕೊಂಡಿದ್ದರಂತೆ. ಕಿತ್ತೂರು ಕ್ರಮೇಣ ಮೈಸೂರಿನ ಯದುವಂಶಸ್ಥರ ಆಳ್ವಿಕೆಗೆ ಒಳಪಟ್ಟಿತ್ತು. ಜಲಾಶಯ ನಿರ್ಮಾಣವಾದ ಬಳಿಕ ಎಲ್ಲವೂ ನೀರಲ್ಲಿ ಮುಳುಗಿ ಹೋಯಿತು.
ನೀರು ಇನ್ನಷ್ಟು ಪಾತಾಳಕ್ಕಿಳಿಯುವ ಭಯ
ಕಬಿನಿ ಜಲಾಶಯ ಭರ್ತಿಯಾದಾಗ ಅದರೊಳಗೆ ಹುದುಗಿ ಹೋದ ಪಳೆಯುಳಿಕೆಯಾಗಲೀ, ಅದರ ಹಿಂದಿನ ಇತಿಹಾಸಗಳಾಗಲೀ ನೆನಪಿಗೆ ಬರುವುದೇ ಇಲ್ಲ. ಆದರೆ ಬರ ಕಾಣಿಸಿಕೊಂಡು ಜಲಾಶಯದ ನೀರು ಪಾತಾಳ ಸೇರಿದಾಗ ಅಲ್ಲಿದ್ದ ದೇಗುಲ ಸೇರಿದಂತೆ ಪಳೆಯುಳಿಕೆ ಹೊರಕ್ಕೆ ಬರುತ್ತವೆ. ಮತ್ತು ಇತಿಹಾಸದ ಕಥೆಗಳನ್ನು ಹೇಳುತ್ತವೆ.
ಮೊದಲೆಲ್ಲ ನೀರು ಕಡಿಮೆಯಾಗಿ ದೇಗುಲ ಸೇರಿದಂತೆ ಇನ್ನಿತರ ಪಳೆಯುಳಿಕೆಗಳು ಕಾಣಿಸುತ್ತಿದ್ದವಾದರೂ ನಂತರ ಮಳೆ ಬರುತ್ತಿದ್ದರಿಂದ ಜಲಾಶಯ ಭರ್ತಿಯಾಗಿ ಮೊದಲಿನಂತೆ ಆಗುತ್ತಿತ್ತು. ಆದರೆ ಈ ಬಾರಿ ಇದುವರೆಗೆ ಮಳೆ ಸುರಿಯದ ಕಾರಣದಿಂದ ಮುಂದೇನಾಗುತ್ತದೆಯೋ ಎಂಬ ಭಯ ಶುರುವಾಗಿದೆ. ಮುಂಗಾರು ಮಳೆ ಆರಂಭಕ್ಕೆ ಇನ್ನೂ ಒಂದು ತಿಂಗಳಷ್ಟು ಬಾಕಿ ಇರುವುದರಿಂದ ಅಲ್ಲಿ ತನಕ ನೀರು ಇನ್ನಷ್ಟು ಪಾತಾಳ ಸೇರುವ ಸಾಧ್ಯತೆ ಇರುವುದರಿಂದ ಮುಂದೇನಾಗುತ್ತೋ ಎಂಬ ಭಯವಂತು ಇದ್ದೇ ಇದೆ.












Click it and Unblock the Notifications