Kabini Dam: ಇಂದು ಜಲಾಶಯದ ಒಳಹರಿವು ಹೆಚ್ಚಳ, 5000 ಕ್ಯೂಸೆಕ್ ದಾಟುವ ಸಂಭವ, ವಿವರ
ಮೈಸೂರು, ಜುಲೈ 03: ಕರ್ನಾಟಕದಲ್ಲಿ ತಕ್ಕಮಟ್ಟಿಗೆ ಮಳೆ ಕಡಿಮೆ ಆದರೂ ಸಹ ಕೇರಳ, ಗಡಿ ಭಾಗದ ಅರಣ್ಯ ಪ್ರದೇಶಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣದಿಂದಾಗಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ಪ್ರಮಾಣ ಏರಿಕೆ ಆಗುತ್ತಿದೆ. ಕೇರಳ ಮೂಲದಲ್ಲಿ ಹುಟ್ಟವ ಕಪಿಲಾ ನದಿಯಲ್ಲಿ ಹೆಚ್ಚು ನೀರು ಸಂಗ್ರಹವಾಗುತ್ತಿದ್ದು, ಇದರಿಂದ ಕಬಿನಿ ಜಲಾಶಯದಲ್ಲಿ ಒಳಹರಿವು ಏರಿಕೆ ಆಗಿದೆ.
ಮೈಸೂರು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಧಾರಾಕಾರ ಮಳೆ ಆಗಿದೆ. ಪರಿಣಾಮ ಕಾವೇರಿ ನದಿಯ ಉಪನದಿಗಳಲ್ಲಿ ಒಂದಾಗಿರುವ ಕಪಿಲಾ ನದಿಯು ತುಂಬಿ ಹರಿಯುತ್ತಿದೆ. ಇದರಿಂದಾಗಿ ಮೈಸೂರು ಜಿಲ್ಲೆಯಲ್ಲಿರುವ ಕಬಿನಿ ಜಲಾಶಯದ ಒಳಹರಿವು ಇಂದು ಬುಧವಾರಕ್ಕೆ (ಜುಲೈ 03) ಬರೋಬ್ಬರಿ 9807 ಕ್ಯೂಸೆಕ್ ಇದೆ ಎಂದು ಕರ್ನಾಟಕ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಕಬಿನಿ ಜಲಾಶಯದ ಒಟ್ಟು ಸಾಮರ್ಥ್ಯದ ಪೈಕಿ (19.52 ಟಿಎಂಸಿ) ಈವರೆಗಿನ ನೀರು ಸಂಗ್ರಹಣೆ ಒಟ್ಟು ಶೇಕಡಾ 85.96 ರಷ್ಟಿದೆ. ಅಡಿ ಲೆಕ್ಕದಲ್ಲಿ ನೋಡುವುದಾದರೆ ಒಟ್ಟು 2284 ಅಡಿ ಇರುವ ಜಲಾಶಯದಲ್ಲಿ ಸದ್ಯಕ್ಕೆ 2279.54 ಅಡಿ ನೀರಿನ ಸಂಗ್ರಹ ಇದೆ.
ಆಣೆಕಟ್ಟಿನಿಂದ ಬುಧವಾರ ಕೇವಲ 2917 ಕ್ಯೂಸೆಕ್ ನೀರನ್ನು ಮಾತ್ರವೇ ನದಿ ಇನ್ನಿತರ ಮೂಲಗಳಿಗೆ ಹರಿ ಬಿಡಲಾಗುತ್ತಿದೆ. ಇದರಿಂದಾಗಿ ಸಂಗ್ರಹ ಹೆಚ್ಚಾಗುತ್ತಿದ್ದು, ಹೊರ ಹರಿವು ಕಡಿಮೆ ಇದೆ. ನೀರನ್ನು ಹೆಚ್ಚು ಹೆಚ್ಚು ಸಂಗ್ರಹಿಸಿಟ್ಟುಕೊಳ್ಳಾಗುತ್ತಿದೆ. ಮುಂದಿನ ಮಳೆಗಾಲದವರೆಗೂ ಸಂಗ್ರಹಿಸಿಟ್ಟುಕೊಳ್ಳುವ ಯೋಚನೆ ಇದಾಗಿದೆ.
ಒಳಹರಿವು 5000 ಕ್ಯೂಸೆಕ್ ದಾಟಲಿದೆ
ಸದ್ಯ ಕಾವೇರಿ ಜಲಾನಯನ, ಕೇರಳ ಗಡಿ ಅರಣ್ಯ ಪ್ರದೇಶ ಹಾಗೂ ಕಬಿನಿ ಜಲಾಶಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ 24 ಗಂಟೆಗಳಲ್ಲಿ 10 ಮಿಲಿ ಮೀಟರ್ ಮಳೆ ದಾಖಲಾಗಿದೆ. ಸದ್ಯ ರಾಜ್ಯದಲ್ಲಿ ಮಳೆ ಕಡಿಮೆ ಆಗಿದ್ದು, ಕರಾವಳಿ ಜಿಲ್ಲೆಗಳಲ್ಲಿ ಮಾತ್ರವೇ ಉತ್ತಮ ಮಳೆ ಬರುವ ಮುನ್ಸೂಚನೆ ಇದೆ. ಮೆಲನಾಡು ಹಾಗೂ ಒಳನಾಡು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗುವ ಸಂಭವವಿದೆ.

ಕೇರಳದ ವಯನಾಡು ವ್ಯಾಪ್ತಿಯಲ್ಲಿ ಬುಧವಾರ ಬೆಳಗ್ಗೆ ಕೊನೆಗೊಂಡಂತೆ ಹಿಂದಿನ 24 ಗಂಟೆಯಲ್ಲಿ ಬರೋಬ್ಬರಿ 69 ಮಿಮೀ ದಾಖಲಾಗಿದೆ. ಇದರಿಂದ ಮುಂದಿನ ಎರಡೇ ದಿನಗಳಲ್ಲಿ ಕಬಿನಿ ಆಣೆಕಟ್ಟಿನಲ್ಲಿ 5000 ಕ್ಯೂಸೆಕ್‌ಗಿಂತ ಹೆಚ್ಚಿನ ನಿರಂತರ ಒಳಹರಿವು ಕಂಡು ಬರುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣೆ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಅಂದಾಜಿಸಿದೆ.












Click it and Unblock the Notifications